ಜಾಗತಿಕ ತಾಪಮಾನ ಏರಿಕೆಯು 1.5 ಡಿಗ್ರಿ ಸೆಲ್ಸಿಯಸ್ ಮಿತಿಯನ್ನು ಮೀರುವುದು ಖಚಿತವಾಗಿದ್ದು, ಅಪಾಯ ತಡೆಯಲು ‘ಏರಿಕೆ, ಉತ್ತುಂಗ ಮತ್ತು ಇಳಿಕೆ’ಯ ಹೊಸ ಮಾರ್ಗಸೂಚಿಯನ್ನು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಬಿಡುಗಡೆ ಮಾಡಿದೆ. ಪ್ರಸ್ತುತ ನೀತಿಗಳಂತೆ 2100ರ ವೇಳೆಗೆ ತಾಪಮಾನ 2.6 ಡಿಗ್ರಿ ತಲುಪಲಿದ್ದು, ಉಷ್ಣಾಂಶವನ್ನು ಕನಿಷ್ಠ ಮಟ್ಟದಲ್ಲಿ ಕಾಯ್ದುಕೊಂಡು ಶತಮಾನದ ಅಂತ್ಯಕ್ಕೆ ಮತ್ತೆ 1.5 ಡಿಗ್ರಿಗಿಂತ ಕೆಳಕ್ಕೆ ತರುವುದು ಈಗಿರುವ ಏಕೈಕ ಅತ್ಯುತ್ತಮ ಆಯ್ಕೆಯಾಗಿದೆ ಎಂದು ವರದಿ ಎಚ್ಚರಿಸಿದೆ.
ತಾಪಮಾನ ಮಿತಿ ಮೀರಿದರೆ ಸಮುದ್ರ ಮಟ್ಟ ಏರಿಕೆ, 2100ರ ವೇಳೆಗೆ ಶೇ 25ರಷ್ಟು ಹಿಮನದಿಗಳ (ಗ್ಲೇಸಿಯರ್) ನಾಶ ಮತ್ತು 2050ರ ವೇಳೆಗೆ ಜಾಗತಿಕ ಆಹಾರ ಉತ್ಪಾದನೆಯಲ್ಲಿ ಶೇ 14ರಷ್ಟು ಕುಸಿತ ಉಂಟಾಗಲಿದೆ. ಪ್ರತಿ ಐದು ವರ್ಷಗಳ ಸತತ ಇಂಗಾಲ ಹೊರಸೂಸುವಿಕೆಯಿಂದ ಉಷ್ಣಾಂಶ 0.1 ಡಿಗ್ರಿ ಹೆಚ್ಚಲಿದ್ದು, ಇದನ್ನು ತಗ್ಗಿಸಲು ಬರೋಬ್ಬರಿ 220 ಬಿಲಿಯನ್ ಟನ್ ಇಂಗಾಲವನ್ನು ವಾತಾವರಣದಿಂದ ತೆಗೆದುಹಾಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಇಂಗಾಲ ಕಡಿತದ ಜೊತೆಗೆ ಅದನ್ನು ಹೀರಿಕೊಳ್ಳುವ ಮರಗಳನ್ನು ಬೆಳೆಸುವಂತಹ ಯೋಜನೆಗಳು ಸಮರೋಪಾದಿಯಲ್ಲಿ ಆಗಬೇಕಿದೆ. ಆದರೆ, ಅತಿ ಹೆಚ್ಚು ಇಂಗಾಲ ಹೊರಸೂಸುವ ಅಮೆರಿಕವು ಪ್ಯಾರಿಸ್ ಒಪ್ಪಂದದಿಂದ ಅಧಿಕೃತವಾಗಿ ಹೊರಬಂದಿರುವುದು ಜಾಗತಿಕ ಆತಂಕವನ್ನು ಹೆಚ್ಚಿಸಿದೆ. ಜೊತೆಗೆ, ಪಶ್ಚಿಮ ಏಷ್ಯಾದ ಸಂಘರ್ಷದಿಂದ ತೈಲ ಪೂರೈಕೆ ವ್ಯತ್ಯಯವಾಗಿರುವುದು, ಸರ್ಕಾರಗಳು ಮತ್ತೆ ಕಲ್ಲಿದ್ದಲಿನಂತಹ ಪಳೆಯುಳಿಕೆ ಇಂಧನಗಳತ್ತ ಮುಖಮಾಡುವ ಅಪಾಯವನ್ನು ತಂದೊಡ್ಡಿದೆ.
ಜಾಗತಿಕ ತಾಪಮಾನ ಏರಿಕೆಯಲ್ಲಿ 0.5 ಡಿಗ್ರಿಯಷ್ಟು ಪಾಲು ಹೊಂದಿರುವ ಮಿಥೇನ್ ಅನಿಲ ಕಡಿತಕ್ಕೆ ವಿಶ್ವಸಂಸ್ಥೆ ಇದೇ ಮೊದಲ ಬಾರಿಗೆ ತೀವ್ರ ಒತ್ತು ನೀಡಿದೆ. ಪಳೆಯುಳಿಕೆ ಇಂಧನ, ಜಾನುವಾರು ಮತ್ತು ತ್ಯಾಜ್ಯದಿಂದ ವರ್ಷಕ್ಕೆ 350-400 ದಶಲಕ್ಷ ಟನ್ ಮಿಥೇನ್ ಬಿಡುಗಡೆಯಾಗುತ್ತಿದೆ. ಜಾಗತಿಕ ಮಿಥೇನ್ ಒಪ್ಪಂದಕ್ಕೆ 155 ದೇಶಗಳು ಸಹಿ ಹಾಕಿದ್ದರೂ, ಭಾರತ ಮತ್ತು ಚೀನಾದಂತಹ ಪ್ರಮುಖ ದೇಶಗಳು ಇನ್ನೂ ಹೊರಗುಳಿದಿರುವುದು ಹವಾಮಾನ ಬದಲಾವಣೆ ತಡೆಗೆ ದೊಡ್ಡ ಸವಾಲಾಗಿದೆ.
ಭಾರತದಲ್ಲಿ ಹೆಚ್ಚಿದ ಬಿಸಿಗಾಳಿ, ವಿಪರೀತ ಹವಾಮಾನ ಬದಲಾವಣೆ
ಜಾಗತಿಕ ತಾಪಮಾನ ಏರಿಕೆಯ ನೇರ ಪರಿಣಾಮಗಳು ಭಾರತ ಮತ್ತು ನೆರೆಯ ರಾಷ್ಟ್ರಗಳಲ್ಲಿ ಈಗಾಗಲೇ ವಿಪರೀತವಾಗಿ ಗೋಚರಿಸುತ್ತಿವೆ. ಇತ್ತೀಚೆಗೆ ಭಾರತದಾದ್ಯಂತ ದಾಖಲಾದ ಭೀಕರ ಬಿಸಿಗಾಳಿ (Extreme Heat) ಹಾಗೂ ತೀವ್ರತರಹದ ನೈಸರ್ಗಿಕ ವಿಕೋಪಗಳಿಗೆ ಹವಾಮಾನ ಬದಲಾವಣೆಯೇ ಪ್ರಮುಖ ಕಾರಣ ಎಂದು ವಿಶ್ವಸಂಸ್ಥೆಯ ಹವಾಮಾನ ವಿಭಾಗದ ಮುಖ್ಯಸ್ಥರು ಎಚ್ಚರಿಸಿದ್ದಾರೆ. ಮಿತಿಮೀರಿದ ಉಷ್ಣಾಂಶದಿಂದಾಗಿ ದೇಶದ ಜನಜೀವನ ಮತ್ತು ಕೃಷಿ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ತಾಪಮಾನ ಏರಿಕೆಯಿಂದಾಗಿ ಹಿಮಾಲಯದ ತಪ್ಪಲಿನಲ್ಲಿರುವ ಹಿಮನದಿಗಳು ಅತ್ಯಂತ ವೇಗವಾಗಿ ಕರಗುತ್ತಿದ್ದು, ಇದು ದಿಢೀರ್ ಪ್ರವಾಹಗಳಿಗೆ ಮುನ್ನುಡಿ ಬರೆದಿದೆ. ಇತ್ತೀಚೆಗೆ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಗಳು ಹಿಮನದಿಗಳ ಕರಗುವಿಕೆಯ ಅಪಾಯವನ್ನು ಜಗತ್ತಿನೆದುರು ತೆರೆದಿಟ್ಟಿವೆ. ನೈಸರ್ಗಿಕ ಸಮತೋಲನ ಕಳೆದುಕೊಳ್ಳುತ್ತಿರುವ ಕಾರಣದಿಂದಾಗಿ, ಭವಿಷ್ಯದಲ್ಲಿ ಕುಡಿಯುವ ನೀರಿನ ಅಭಾವ ಮತ್ತು ಪ್ರವಾಹದಂತಹ ದ್ವಿಮುಖ ಸಂಕಷ್ಟಗಳನ್ನು ದಕ್ಷಿಣ ಏಷ್ಯಾ ರಾಷ್ಟ್ರಗಳು ಎದುರಿಸಬೇಕಾಗುತ್ತದೆ.
ಪ್ರಸ್ತುತ ಏರುತ್ತಿರುವ ತಾಪಮಾನವನ್ನು ‘ಹೊಸ ಸಹಜ ಸ್ಥಿತಿ’ ಎಂದು ಒಪ್ಪಿಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ ನೀತಿ-ನಿಯಮಗಳನ್ನು ರೂಪಿಸುವುದರಿಂದ ಮಾತ್ರ ಜಗತ್ತನ್ನು ಉಳಿಸಲು ಸಾಧ್ಯವಿಲ್ಲ; ಬದಲಾಗಿ ತಕ್ಷಣದ, ಕಠಿಣ ಹಾಗೂ ಜಾಗತಿಕ ಮಟ್ಟದ ಸಂಘಟಿತ ಪ್ರಯತ್ನಗಳ ಅಗತ್ಯವಿದೆ. ಇಲ್ಲದಿದ್ದರೆ, ಈ ವರ್ಷದ ಬಿಸಿಗಾಳಿ, ಕಾಳ್ಗಿಚ್ಚು ಮತ್ತು ಪ್ರವಾಹಗಳು ಭವಿಷ್ಯದಲ್ಲಿ ಕಾದಿರುವ ಬೃಹತ್ ವಿನಾಶದ ಕೇವಲ ಒಂದು ಸಣ್ಣ ಮುನ್ಸೂಚನೆಯಾಗಿರಲಿವೆ.





