ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ತಾರಕಕ್ಕೇರಿದೆ. ಇರಾನ್‌ನ ಡ್ರೋನ್ ದಾಳಿಗೆ ಅಮೆರಿಕದ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ ಎನ್ನಲಾಗಿದೆ. ಇದಾದ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕ ಪ್ರತಿದಾಳಿ ನಡೆಸಿದೆ. ಅಮೆರಿಕ ದಾಳಿಗೆ ಪ್ರತಿಯಾಗಿ ಇರಾನ್ ಬಹರೀನ್ ಮತ್ತು ಕುವೈತ್‌ನ ಅಮೆರಿಕ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ.
ಒಮಾನ್ ಕರಾವಳಿಯ ಬಳಿ ಗಸ್ತು ತಿರುಗುತ್ತಿದ್ದ ಅಮೆರಿಕ ಸೇನೆಯ ಅಪಾಚೆ ಹೆಲಿಕಾಪ್ಟರ್‌ಗೆ ಇರಾನಿನ ‘ಶಾಹೆದ್’ ಡ್ರೋನ್ ಡಿಕ್ಕಿ ಹೊಡೆದಿದ್ದರಿಂದ ಸಮುದ್ರಕ್ಕೆ ಪತನಗೊಂಡಿದೆ. ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರು ಪೈಲಟ್‌ಗಳನ್ನು ಅಮೆರಿಕ ನೌಕಪಡೆ ರಕ್ಷಿಸಿದೆ ಎಂದು ಅಮೆರಿಕೆ ಹೇಳಿದೆ. ಈ ದಾಳಿಗೆ ಪ್ರತಿಯಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ದಾಳಿಗೆ ಆದೇಶಿಸಿದ್ದಾರೆ.
ಇದನ್ನು ಓದಿದ್ದೀರಾ? ಇರಾನ್-ಅಮೆರಿಕ-ಇಸ್ರೇಲ್ ಯುದ್ಧ ಗೆದ್ದವರಾರು? ಲಾಭ ಪಡೆದವರಾರು?
ಟ್ರಂಪ್ ಆದೇಶದ ಬೆನ್ನಲ್ಲೇ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಇರಾನ್‌ನ ದಕ್ಷಿಣ ಕರಾವಳಿ ಮತ್ತು ಹಾರ್ಮುಜ್ ಜಲಸಂಧಿಯ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಸರಣಿ ವಾಯುದಾಳಿಗಳನ್ನು ನಡೆಸಿದೆ. ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ ಕೇಂದ್ರಗಳು ಮತ್ತು ನೆಲದ ನಿಯಂತ್ರಣ ಕೇಂದ್ರಗಳು ಸೇರಿದಂತೆ ಸುಮಾರು 20 ತಾಣಗಳನ್ನು ಗುರಿಯಾಗಿಸಿ ಅಮೆರಿಕ ಬಾಂಬ್ ದಾಳಿ ನಡೆಸಿದೆ.
ಇರಾನ್‌ನ ಕೇಶಮ್ ದ್ವೀಪ, ಬಂದರ್ ಅಬ್ಬಾಸ್ ಮತ್ತು ಸಿರಿಕ್ ಪ್ರಾಂತ್ಯಗಳಲ್ಲಿ ಭಾರಿ ಸ್ಫೋಟಗಳು ಸಂಭವಿಸಿವೆ ಎಂದು ಇರಾನಿನ ಮಾಧ್ಯಮಗಳು ಖಚಿತಪಡಿಸಿವೆ.
ಅಮೆರಿಕ ಪ್ರತಿದಾಳಿ ನಡೆಸುತ್ತಿದ್ದಂತೆ ಇರಾನ್ ಬಹರೀನ್ ಮತ್ತು ಕುವೈತ್‌ನ ಅಮೆರಿಕ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಮಾಡಿದೆ.
ಬಹರೀನ್‌ನಲ್ಲಿರುವ ಅಮೆರಿಕ ನೌಕಪಡೆಯ ಅತ್ಯಂತ ಪ್ರಮುಖವಾದ ‘ಫಿಫ್ತ್ ಫ್ಲೀಟ್’ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಇರಾನ್ ಆತ್ಮಹತ್ಯಾ ಡ್ರೋನ್‌ಗಳ (Shahed-136) ಮೂಲಕ ದಾಳಿ ನಡೆಸಿದೆ. ಬಹರೀನ್ ಮಾತ್ರವಲ್ಲದೆ, ಕುವೈತ್‌ನಲ್ಲಿರುವ ಅಮೆರಿಕದ ‘ಅಲಿ ಅಲ್ ಸಲೇಮ್’ ವಾಯುನೆಲೆ ಮತ್ತು ಜೋರ್ಡಾನ್‌ನಲ್ಲಿರುವ ಅಮೆರಿಕ ಪಡೆಗಳ ನೆಲೆಗಳ ಮೇಲೂ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ.
ಇನ್ನು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಪ್ರತಿಕ್ರಿಯಿಸಿ, “ನಮ್ಮ ದೇಶದ ಮೇಲೆ ದಾಳಿ ನಡೆದರೆ ನಾವು ಸುಮ್ಮನೆ ಬಿಡಲ್ಲ” ಎಂದು ಎಚ್ಚರಿಸಿದ್ದಾರೆ. ಅಲ್ಲದೆ ಹಾರ್ಮುಜ್ ಜಲಸಂಧಿಯಿಂದ ವಿದೇಶಿ ಪಡೆಗಳು ತಕ್ಷಣ ಹೊರನಡೆಯಬೇಕು. ಇಲ್ಲದಿದ್ದರೆ ಮತ್ತಷ್ಟು ಅಪಾಯ ಎದುರಿಸಬೇಕಾಗುತ್ತದೆ ಎಂದಿದ್ದಾರೆ.
2026ರ ಆರಂಭದಿಂದಲೂ ಉಭಯ ದೇಶಗಳ ನಡುವೆ ಯುದ್ಧ ನಡೆಯುತ್ತಿದ್ದು, ಇತ್ತೀಚೆಗೆ ಕದನ ವಿರಾಮದ ಮಾತುಕತೆಗಳು ನಡೆಯುತ್ತಿದ್ದವು. ಆದರೆ ಈಗ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ. ಈಗಾಗಲೇ ಈ ಯುದ್ಧದಿಂದಾಗಿ ಜಾಗತಿಕವಾಗಿ ತೈಲ ಪೂರೈಕೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ನಿರ್ಬಂಧವಿದ್ದು, ಜಾಗತಿಕ ಆರ್ಥಿಕತೆಗೆ ಪೆಟ್ಟು ಬಿದ್ದಿದೆ.





