ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋ ದೇಶಗಳ ಆತಿಥ್ಯದಲ್ಲಿ 2026ರ ಫಿಫಾ ಫುಟ್‌ಬಾಲ್ ವಿಶ್ವಕಪ್ ಹಬ್ಬಕ್ಕೆ ನಾಳೆಯಿಂದ (ಜೂನ್ 11) ಅದ್ಧೂರಿ ಚಾಲನೆ ದೊರೆಯಲಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ 48 ತಂಡಗಳು ಪಾಲ್ಗೊಳ್ಳುತ್ತಿರುವ ಈ ಮಹೋನ್ನತ ಟೂರ್ನಿಯು ಜಗತ್ತಿನಾದ್ಯಂತ ಇರುವ ಕೋಟ್ಯಂತರ ಕ್ರೀಡಾಭಿಮಾನಿಗಳಲ್ಲಿ ಭಾರಿ ರೋಮಾಂಚನ ಮೂಡಿಸಿದೆ. ಹಲವು ಬಲಿಷ್ಠ ತಂಡಗಳು ಫುಟ್‌ಬಾಲ್‌ನ ಅತಿದೊಡ್ಡ ಕಿರೀಟಕ್ಕಾಗಿ ಸೆಣಸಾಡಲು ಸಜ್ಜಾಗಿ ನಿಂತಿವೆ.
ಈ ಬಾರಿಯ ವಿಶ್ವಕಪ್ ಇಬ್ಬರು ಸಾರ್ವಕಾಲಿಕ ಶ್ರೇಷ್ಠ ಆಟಗಾರರಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಹಾಗೂ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಪಾಲಿಗೆ ಅತ್ಯಂತ ಭಾವುಕ ಟೂರ್ನಿಯಾಗಲಿದೆ. ಕ್ರಮವಾಗಿ 38 ಮತ್ತು 41 ವರ್ಷ ವಯಸ್ಸಿನ ಈ ಇಬ್ಬರೂ ದಿಗ್ಗಜರು ತಮ್ಮ ವೃತ್ತಿಜೀವನದ ದಾಖಲೆಯ ಆರನೇ ವಿಶ್ವಕಪ್ ಆಡುತ್ತಿದ್ದಾರೆ. ಕಳೆದ ಬಾರಿ ಚಾಂಪಿಯನ್ ಆಗಿದ್ದ ಮೆಸ್ಸಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ತವಕದಲ್ಲಿದ್ದರೆ, ರೊನಾಲ್ಡೊ ತಮ್ಮ ಚೊಚ್ಚಲ ವಿಶ್ವಕಪ್ ಟ್ರೋಫಿ ಗೆಲ್ಲುವ ಕನಸಿನಲ್ಲಿದ್ದಾರೆ.
ಫ್ರಾನ್ಸ್ ತಂಡದ ನಾಯಕ, ಕಳೆದ ವಿಶ್ವಕಪ್‌ನ ಗೋಲ್ಡನ್ ಬೂಟ್ ವಿಜೇತ ಕೈಲಿಯನ್ ಎಂಬಾಪೆ ಈ ಟೂರ್ನಿಯ ಪ್ರಮುಖ ಆಕರ್ಷಣೆ. ಫ್ರಾನ್ಸ್ ಪರ ಅತಿ ಹೆಚ್ಚು ಗೋಲು ಬಾರಿಸಿದ ದಾಖಲೆ ಬರೆಯುವ ಹೊಸ್ತಿಲಲ್ಲಿರುವ ಅವರು, ಈ ಬಾರಿಯೂ ಎದುರಾಳಿಗಳಿಗೆ ಸಿಂಹಸ್ವಪ್ನವಾಗಲಿದ್ದಾರೆ. ಅದೇ ರೀತಿ, ಬ್ರೆಜಿಲ್ ತಂಡವು ವಿನ್ಸಿಯಸ್ ಜೂನಿಯರ್ ಅವರ ವೇಗ ಮತ್ತು ಕೌಶಲ್ಯದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದು, ಹಿರಿಯ ಆಟಗಾರ ನೇಮರ್ ಜೂನಿಯರ್ ಅವರ ಉಪಸ್ಥಿತಿ ತಂಡಕ್ಕೆ ಆನೆಬಲ ತಂದಿದೆ.
ಇದನ್ನು ಓದಿದ್ದೀರಾ? ಫಿಫಾ 2026: ಜೂನ್ 11ರಿಂದ ದಿಗ್ಗಜರ ಹಣಾಹಣಿಯ ಜಾಗತಿಕ ಹಬ್ಬ
ಈ ಟೂರ್ನಿಯು ಹಲವು ಭರವಸೆಯ ಯುವ ಪ್ರತಿಭೆಗಳ ಚೊಚ್ಚಲ ಪ್ರವೇಶಕ್ಕೂ ಸಾಕ್ಷಿಯಾಗಲಿದೆ. ಇತ್ತೀಚೆಗಷ್ಟೇ ಯೂರೋ 2024 ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಪೇನ್‌ನ 18 ವರ್ಷದ ಯುವ ಆಟಗಾರ ಲ್ಯಾಮೈನ್ ಯಮಲ್ ಮೇಲೆ ಇಡೀ ಕ್ರೀಡಾಲೋಕದ ಕಣ್ಣಿದೆ. ಮತ್ತೊಂದೆಡೆ, ಮ್ಯಾಂಚೆಸ್ಟರ್ ಸಿಟಿ ಪರ ಗೋಲುಗಳ ಮಳೆಗರೆಯುವ ನಾರ್ವೆಯ ಸ್ಟ್ರೈಕರ್ ಅರ್ಲಿಂಗ್ ಹಾಲೆಂಡ್ ತಮ್ಮ ಚೊಚ್ಚಲ ವಿಶ್ವಕಪ್‌ನಲ್ಲಿ ಮಿಂಚಲು ಕಾತುರರಾಗಿದ್ದು, ಗೋಲುಗಳ ಸರದಾರನಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳಿವೆ.
ಇಂಗ್ಲೆಂಡ್ ತಂಡದ ಭರವಸೆಯಾಗಿರುವ ಹ್ಯಾರಿ ಕೇನ್, ಸತತ ಎರಡನೇ ಬಾರಿಗೆ ಗೋಲ್ಡನ್ ಬೂಟ್ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಇದಲ್ಲದೆ, ರಿಯಲ್ ಮ್ಯಾಡ್ರಿಡ್ ತಂಡದ ಮೂಲಕ ಗಮನ ಸೆಳೆದಿರುವ ಟರ್ಕಿಯ ಯುವ ಸನ್ಸೇಷನ್ ಅರ್ಡಾ ಗುಲರ್ ಮತ್ತು ಗಾಯಾಳು ಮೊಹಮ್ಮದ್ ಕುಡುಸ್ ಅನುಪಸ್ಥಿತಿಯಲ್ಲಿ ಘಾನಾ ತಂಡದ ಜವಾಬ್ದಾರಿ ಹೊತ್ತಿರುವ ಆಂಟೊನಿ ಸೆಮೆನ್ಯೊ ಕೂಡ ಈ ಬಾರಿಯ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ತಾರೆಗಳಾಗಿ ಹೊರಹೊಮ್ಮುವ ನಿರೀಕ್ಷೆಯಿದೆ.
2026ರ ವಿಶ್ವಕಪ್ ಕೇವಲ ದೇಶಗಳ ನಡುವಿನ ಹೋರಾಟವಾಗಿರದೆ, ತಲೆಮಾರುಗಳ ನಡುವಿನ ರೋಚಕ ಕದನವಾಗಿ ಮಾರ್ಪಟ್ಟಿದೆ. ಒಂದು ಕಡೆ ತಮ್ಮ ಅದ್ಭುತ ಕ್ರೀಡಾಬದುಕಿಗೆ ವಿದಾಯ ಹೇಳಲು ಸಜ್ಜಾಗಿರುವ ದಂತಕಥೆಗಳಿದ್ದರೆ, ಮತ್ತೊಂದೆಡೆ ಫುಟ್‌ಬಾಲ್ ಜಗತ್ತನ್ನು ಆಳಲು ಸಿದ್ಧರಾಗಿರುವ ಯುವ ತಾರೆಗಳಿದ್ದಾರೆ. ಮುಂದಿನ ಒಂದು ತಿಂಗಳ ಕಾಲ ಜಾಗತಿಕ ಕ್ರೀಡಾಭಿಮಾನಿಗಳಿಗೆ ಅತ್ಯುತ್ತಮ ಮನರಂಜನೆ ಮತ್ತು ಉಸಿರುಬಿಗಿಹಿಡಿಯುವ ಕ್ಷಣಗಳನ್ನು ಈ ಫಿಫಾ ಮಹಾಸಂಗ್ರಾಮ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.





