ಸಿರಿಯಾದ ಹಂಗಾಮಿ ಪ್ರಧಾನಿಯಾಗಿ ಮೊಹಮ್ಮದ್ ಅಲ್ ಬಶೀರ್ ಅವರನ್ನು ನೇಮಿಸಲಾಗಿದೆ. ಬಶೀರ್ ಅವರು 2025ರ ಮಾರ್ಚ್ 1ರವರೆಗೆ ಹಂಗಾಮಿ ಪ್ರಧಾನಿಯಾಗಿರಲಿದ್ದಾರೆ ಎಂದು ಸಿರಿಯಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.
ಅಲ್ ಬಶೀರ್ ಡಮಾಸ್ಕಸ್ನ ಸ್ವಾಧೀನಕ್ಕೆ ಪಡೆದಿರುವ ಹಯಾತ್ ತಹ್ರೀರ್ ಅಲ್-ಶಮ್ಸ್ನೊಂದಿಗೆ (ಎಚ್ಟಿಎಸ್) ನಿಕಟ ಸಂಬಂಧ ಹೊಂದಿದ್ದಾರೆ. ಸಿರಿಯನ್ ಸರ್ಕಾರವನ್ನು ಮುನ್ನಡೆಸುತ್ತಾರೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಸಿರಿಯಾ ಸರ್ಕಾರ ಪತನ: ಅಮೆರಿಕ – ಇಸ್ರೇಲ್ ದಾಹಕ್ಕೆ ಮತ್ತೊಂದು ರಾಷ್ಟ್ರ ಬಲಿಯಾಯಿತೆ?
ಬಶೀರ್ 1983ರಲ್ಲಿ ಇಡ್ಲಿಬ್ ಪ್ರಾಂತ್ಯದಲ್ಲಿರುವ ಜಬಲ್ ಅಲ್-ಜವಿಯಾದಲ್ಲಿ ಜನಿಸಿದರು. ಇದು ಇತ್ತೀಚೆಗೆ ಎಚ್ಟಿಎಸ್ ಮತ್ತು ಇತರೆ ಮಿತ್ರ ಪಕ್ಷಗಳಿಂದ ನಿಯಂತ್ರಿಸಲ್ಪಡುತ್ತಿರುವ ಪ್ರದೇಶವಾಗಿದೆ.
ಬಶೀರ್ ಅಲೆಪ್ಪೊ ವಿಶ್ವವಿದ್ಯಾನಿಲಯದಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದು, ಇಡ್ಲಿಬ್ ವಿಶ್ವವಿದ್ಯಾನಿಲಯದಲ್ಲಿ ಇಸ್ಲಾಮಿಕ್ ಮತ್ತು ಸಿವಿಲ್ ಕಾನೂನನ್ನು ಅಧ್ಯಯನ ಮಾಡಿದರು. ಈ ಹಿಂದೆ ಸಿರಿಯಾದ ರಾಜ್ಯ ಅನಿಲ ಕಂಪನಿಯಲ್ಲಿ ಕೆಲಸ ಮಾಡಿದ್ದರು ಎಂದು ವರದಿಯಾಗಿದೆ.
ಜನವರಿಯಿಂದ, ಅವರು ಬಂಡಾಯ ಆಡಳಿತದ ‘ಸಾಲ್ವೇಶನ್ ಗವರ್ನ್ಮೆಂಟ್’ (ಮುಕ್ತಿ ಸರ್ಕಾರ) ಎಂದು ಕರೆಯಲ್ಪಡುವ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಅಭಿವೃದ್ಧಿ ಸಚಿವರಾಗಿದ್ದರು.
ಇದನ್ನು ಓದಿದ್ದೀರಾ? ದೇಶ ತೊರೆದ ಸಿರಿಯಾ ಅಧ್ಯಕ್ಷ: ಅಸ್ಸಾದ್ ಕುಟುಂಬದ 50 ವರ್ಷಗಳ ಆಡಳಿತ ಅಂತ್ಯ
ಇತ್ತೀಚೆಗೆ ಸಿರಿಯಾ ಬಂಡುಕೋರರು ಸರ್ಕಾರ ಪತನಗೊಂಡಿದೆ ಎಂದು ಘೋಷಿಸಿದ್ದಾರೆ. ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಕುಟುಂಬ ಸಮೇತ ದೇಶ ತೊರೆದಿದ್ದು ಈ ಮೂಲಕ ಸಿರಿಯಾದಲ್ಲಿ ಅಸಾದ್ ಕುಟುಂಬದ 50 ವರ್ಷಗಳ ಆಡಳಿತ ಅಂತ್ಯವಾಗಿದೆ.
ಡಮಾಸ್ಕಸ್ ದಿಗ್ವಿಜಯ ಎಂಬ ಹೆಸರಿನಲ್ಲಿ ಸಿರಿಯಾ ಸರ್ಕಾರ ವಿರುದ್ಧ ಬಂಡಾಯ ಎದ್ದಿರುವ ಗುಂಪು “ಈಗ ದೇಶ ಸ್ವತಂತ್ರವಾಗಿದೆ. ಎಲ್ಲ ನಾಗರಿಕರು, ಬಂಡಾಯ ಹೋರಾಟಗಾರರು ಸ್ವತಂತ್ರ ಸಿರಿಯಾವನ್ನು ರಕ್ಷಿಸಿಕೊಳ್ಳೋಣ” ಎಂದು ಕರೆ ನೀಡಿದ್ದಾರೆ.
ಪದಚ್ಯುತ ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಮತ್ತು ಕುಟುಂಬವು ಮಾಸ್ಕೋಗೆ ಪಲಾಯನಗೊಂಡಿದೆ. ಅವರಿಗೆ ಆಶ್ರಯ ನೀಡಲಾಗಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿದೆ.
