ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕ ಸೇನೆಯ ಬ್ಲ್ಯಾಕ್‌ಹಾಕ್ ಹೆಲಿಕಾಪ್ಟರ್ ಮತ್ತು ಪ್ರಯಾಣಿಕ ವಿಮಾನದ ನಡುವೆ ಅಪಘಾತ ಸಂಭವಿಸಿದ್ದು, ಯಾವುದೇ ಪ್ರಯಾಣಿಕರು ಬದುಕುಳಿದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈವರೆಗೆ ಪೊಟೊಮ್ಯಾಕ್ ನದಿಯಿಂದ 28 ಮೃತದೇಹಗಳನ್ನು ಹೊರತೆಗೆಯಲಾಗಿದೆ.
“ಈ ಹಂತದಲ್ಲಿ ಯಾವುದೇ ಪ್ರಯಾಣಿಕರು ಬದುಕುಳಿದಿದ್ದಾರೆ ಎಂದು ನಾವು ನಂಬುವುದಿಲ್ಲ. ನಾವು ರಕ್ಷಣಾ ಕಾರ್ಯಚರಣೆಯನ್ನು ಮೃತದೇಹಗಳ ಪತ್ತೆ ಕಾರ್ಯಾಚರಣೆಯಾಗಿ ಬದಲಾಯಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ” ಎಂದು ವಾಷಿಂಗ್ಟನ್ ಅಗ್ನಿಶಾಮಕ ಮುಖ್ಯಸ್ಥ ಜಾನ್ ಡೊನ್ನೆಲ್ಲಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಖಜಕಿಸ್ತಾನ | 72 ಪ್ರಯಾಣಿಕರಿದ್ದ ವಿಮಾನ ಪತನ; ಬದುಕುಳಿದ 12 ಮಂದಿ
“ಸದ್ಯ 300 ಜನರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ನೀರಿನಲ್ಲಿ ಮಂಜುಗಡ್ಡೆ ಇದೆ. ತೀವ್ರ ಗಾಳಿಯ ನಡುವೆಯೂ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ” ಎಂದು ತಿಳಿಸಿದ್ದಾರೆ.
ಈವರೆಗೂ ಕೂಡಾ ಈ ಅಪಘಾತಕ್ಕೆ ಕಾರಣ ತಿಳಿದುಬಂದಿಲ್ಲ. ವಿಮಾನದಲ್ಲಿ ಹಲವು ಅಥ್ಲೇಟ್‌ಗಳು, ಕೋಚ್‌ಗಳು ಮತ್ತು ಅಧಿಕಾರಿಗಳು ಇದ್ದರು ಎಂದು ಹೇಳಲಾಗಿದೆ. ಮಿಲಿಟರಿ ಹೆಲಿಕಾಪ್ಟರ್‌ನಲ್ಲಿ ಮೂವರು ಯೋಧರಿದ್ದರು ಎಂದು ಅಮೆರಿಕ ಸೇನೆ ದೃಢಪಡಿಸಿದೆ. ಅಮೆರಿಕದ ವಿಮಾನದಲ್ಲಿ 60 ಪ್ರಯಾಣಿಕರು, ನಾಲ್ವರು ಸಿಬ್ಬಂದಿ ಇದ್ದರು ಎಂದು ಹೇಳಲಾಗಿದೆ.
1994ರ ವಿಶ್ವ ಜೋಡಿ ಪ್ರಶಸ್ತಿ ಗೆದ್ದ, ರಷ್ಯಾದ ದಂಪತಿಗಳಾದ ಎವ್ಗೆನಿಯಾ ಶಿಶ್ಕೋವಾ ಮತ್ತು ವಾಡಿಮ್ ನೌಮೋವ್ ಕೂಡಾ ವಿಮಾನದಲ್ಲಿದ್ದರು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
