ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ತೀವ್ರತರವಾದ ಮೆದುಳಿನ ರಕ್ತಸ್ರಾವವಾಗಿದೆ, ಅವರು ಕೋಮಾಗೆ ಜಾರಿದ್ದಾರೆ ಮತ್ತು ಸಾವನ್ನಪ್ಪಿದ್ದಾರೆ ಎಂಬ ವದಂತಿಗಳಿಗೆ ಕೊನೆಗೂ ತೆರೆಬಿದ್ದಿದೆ. ನಾಯಕ ಕಿಮ್ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿರುವ ಹೊಸ ಫೋಟೋಗಳನ್ನು ಉತ್ತರ ಕೊರಿಯಾದ ಸರ್ಕಾರಿ ಮಾಧ್ಯಮವಾದ ‘ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ’ (KCNA) ಹಾಗೂ ‘ಎನ್‌ಕೆ ನ್ಯೂಸ್’ ಬಿಡುಗಡೆ ಮಾಡಿದೆ. ಈ ಮೂಲಕ ಅವರು ಜೀವಂತವಾಗಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂಬುದನ್ನು ಖಚಿತಪಡಿಸಿವೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣವಾದ ಎಕ್ಸ್ (X) ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಕಿಮ್ ಜಾಂಗ್ ಉನ್ ಅವರ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಕ್ಷೀಣಿಸಿದೆ ಎಂಬ ಸುದ್ದಿಗಳು ವೈರಲ್ ಆಗಿದ್ದವು.
ಅಮೆರಿಕದಲ್ಲಿ ನೆಲೆಸಿರುವ ಚೀನಾ ಸರ್ಕಾರದ ವಿರುದ್ಧ ಹೋರಾಡುತ್ತಿರುವ ವಾಂಜುನ್ ಕ್ಸೀ ಎಂಬುವರು ಮಾಡಿದ್ದ ಪೋಸ್ಟ್ ಒಂದರಲ್ಲಿ, “ಕಿಮ್ ಜಾಂಗ್ ಉನ್ ಅವರಿಗೆ ತೀವ್ರ ಪ್ರಮಾಣದ ಮೆದುಳಿನ ರಕ್ತಸ್ರಾವ ಸಂಭವಿಸಿದೆ. ಉತ್ತರ ಕೊರಿಯಾದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲದ ಕಾರಣ ಅವರನ್ನು ತಕ್ಷಣವೇ ಚೀನಾದ ಬೀಜಿಂಗ್‌ನಲ್ಲಿರುವ ‘ಪೆಕಿಂಗ್ ಯೂನಿಯನ್ ಮೆಡಿಕಲ್ ಕಾಲೇಜ್ ಆಸ್ಪತ್ರೆ’ಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೋಮಾಗೆ ಜಾರಿ ಕೊನೆಯುಸಿರೆಳೆದಿದ್ದಾರೆ” ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಮಚಾಡೊಗೆ ನೊಬೆಲ್ ಶಾಂತಿ ಪ್ರಶಸ್ತಿ; ತನ್ನ ಅರ್ಥವನ್ನೇ ಕಳೆದುಕೊಂಡ ‘ಶಾಂತಿ’
ಅಷ್ಟೇ ಅಲ್ಲದೆ, ಚೀನಾ ಸರ್ಕಾರ ಉತ್ತರ ಕೊರಿಯಾಕ್ಕೆ 9,000 ಸೇನಾ ತುಕಡಿಗಳನ್ನು ರವಾನಿಸಿದೆ ಎಂಬ ಗಂಭೀರ ಆಪಾದನೆಗಳನ್ನೂ ಮಾಡಲಾಗಿತ್ತು. ಈ ವರದಿಗೆ ಯಾವುದೇ ಅಧಿಕೃತ ಸಾಕ್ಷ್ಯಾಧಾರಗಳಿಲ್ಲದಿದ್ದರೂ, ಜಾಗತಿಕ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕಿತ್ತು.
ಸಾಮಾಜಿಕ ಜಾಲತಾಣಗಳ ಈ ಉಹಾಪೋಹಗಳಿಗೆ ಸವಾಲೆಸೆಯುವಂತೆ ಉತ್ತರ ಕೊರಿಯಾದ ಅಧಿಕೃತ ಮಾಧ್ಯಮಗಳು ಫೋಟೋಗಳನ್ನು ಹಂಚಿಕೊಂಡಿವೆ. ರಾಜಧಾನಿ ಪ್ಯಾಂಗ್ಯಾಂಗ್‌ನಲ್ಲಿ ನಡೆದ ಸ್ಥಳೀಯ ಉದ್ಯಮ ಮತ್ತು ಜವಳಿ ಪ್ರದರ್ಶನವೊಂದಕ್ಕೆ ಕಿಮ್ ಭೇಟಿ ನೀಡಿದ್ದಾರೆ. ವರದಿಗಳ ಪ್ರಕಾರ, ಕಿಮ್ ಅವರು ಪ್ರದರ್ಶನದಲ್ಲಿದ್ದ ಮಹಿಳೆಯರ ಉಡುಪುಗಳು, ಬೂಟುಗಳು ಮತ್ತು ಬಟ್ಟೆ ತಯಾರಿಕಾ ಸಾಮಗ್ರಿಗಳನ್ನು ವೀಕ್ಷಿಸುತ್ತಾ, ತಮ್ಮೊಂದಿಗೆ ಆಗಮಿಸಿದ ಹಿರಿಯ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡುತ್ತಿರುವುದು ಫೋಟೋಗಳಲ್ಲಿ ಗೋಚರಿಸಿದೆ.
ಕಿಮ್ ಜಾಂಗ್ ಉನ್ ಅವರು ಅಕ್ಟೋಬರ್ 11ರಂದು ಪ್ಯಾಂಗ್ಯಾಂಗ್‌ನ ರಕ್ಷಣಾ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ನಂತರ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಉತ್ತರ ಕೊರಿಯಾದಂತಹ ರಾಜಕೀಯ ವ್ಯವಸ್ಥೆಯಲ್ಲಿ ನಾಯಕರು ಕೆಲ ದಿನಗಳು ಸಾರ್ವಜನಿಕವಾಗಿ ಪ್ರತ್ಯಕ್ಷರಾಗದಿದ್ದರೆ, ಅವರ ಸಾವಿನ ವದಂತಿಗಳು ಹಬ್ಬುವುದು ಸಾಮಾನ್ಯ. ಈ ಹಿಂದೆಯೂ 2020ರಲ್ಲಿ ಅವರು ಕೆಲವು ವಾರಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದಾಗ, ಹೃದಯ ಶಸ್ತ್ರಚಿಕಿತ್ಸೆಯಿಂದ ಮೃತಪಟ್ಟಿದ್ದಾರೆ ಅಥವಾ ಕೋಮಾಗೆ ಜಾರಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.
ಕಿಮ್ ಜಾಂಗ್ ಉನ್ ಅವರ ದೈಹಿಕ ಆರೋಗ್ಯದ ಕುರಿತು ದಕ್ಷಿಣ ಕೊರಿಯಾದ ರಾಷ್ಟ್ರೀಯ ಗುಪ್ತಚರ ಸಂಸ್ಥೆ (NIS) ಇತ್ತೀಚೆಗೆ ಮಾಹಿತಿ ನೀಡಿದ್ದು, ಕಿಮ್ ಅವರು ಸುಮಾರು 170 ಸೆಂ.ಮೀ ಎತ್ತರವಿದ್ದು, 140 ಕೆಜಿಗೂ ಹೆಚ್ಚು ತೂಕ ಹೊಂದಿದ್ದಾರೆ. ಅವರ ತಂದೆ ಕಿಮ್ ಜಾಂಗ್ ಇಲ್ ಮತ್ತು ಅಜ್ಜ ಕಿಮ್ ಇಲ್ ಸಂಗ್ ಇಬ್ಬರೂ ಹೃದ್ರೋಗ ಹಾಗೂ ಅತಿಯಾದ ಧೂಮಪಾನದ ಸಮಸ್ಯೆ ಎದುರಿಸಿದ್ದರಿಂದ, ಕಿಮ್ ಜಾಂಗ್ ಉನ್ ಕೂಡ ಅಧಿಕ ರಕ್ತದೊತ್ತಡ ಮತ್ತು ಹೃದಯಸಂಬಂಧಿ ಕಾಯಿಲೆಗಳ ಅಪಾಯದಲ್ಲಿದ್ದಾರೆ ಎಂದು ಗುಪ್ತಚರ ಸಂಸ್ಥೆ ಅಂದಾಜಿಸಿದೆ. ಆದಾಗ್ಯೂ, ಪ್ರಸ್ತುತ ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದಾರೆ ಎನ್ನಲಾದ ವರದಿಗಳಿಗೆ ಯಾವುದೇ ಆಧಾರವಿಲ್ಲ ಎಂದು ಇಂಟೆಲಿಜೆನ್ಸ್ ಸ್ಪಷ್ಟಪಡಿಸಿದೆ.





