ಭಾರತ ಘೋಷಿತ ಭಯೋತ್ಪಾದಕ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಪ್ರಕರಣದಲ್ಲಿ ಇತ್ತೀಚಿಗೆ ಬಂಧಿಸಲಾಗಿರುವ ಮೂವರು ಭಾರತೀಯರ ವಿಷಯಕ್ಕೆ ಸಂಬಂಧಿಸಿದಂತೆ ಕೆನಡಾ ವಿರುದ್ಧ ಕಿಡಿಕಾರಿದ್ದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿಕೆಯನ್ನು ಕೆನಡಾ ಸಚಿವರು ಖಂಡಿಸಿದ್ದಾರೆ.
“ವಲಸಿಗರ ವಿಷಯದಲ್ಲಿ ನಾವು ದುರ್ಬಲರಲ್ಲ. ಭಾರತದ ವಿದೇಶಾಂಗ ಸಚಿವರು ಅವರ ಹೇಳಿಕೆ ಮಂಡಿಸಲು ಅರ್ಹರು. ಅವರ ಮನಸ್ಸಿನಲ್ಲಿರುವುದನ್ನು ಹೇಳಲು ನಾನು ಬಿಡುತ್ತೇನೆ. ಆದರೆ ಇದು ಸತ್ಯದಿಂದ ಕೂಡಿಲ್ಲ” ಎಂದು ಕೆನಡಾದ ವಲಸಿಗ ಸಚಿವ ಮಾರ್ಕ್ ಮಿಲ್ಲರ್ ತಿರುಗೇಟು ನೀಡಿದ್ದಾರೆ.
ದೇಶದಲ್ಲಿ ವಲಸಿಗರಿಗೆ ಸಂಘಟನಾತ್ಮಕ ಅಪರಾಧ ಕೈಗೊಳ್ಳಲು ಕೆನಡಾ ಅನುಮತಿಸುತ್ತದೆ ಎಂಬ ಜೈಶಂಕರ್ ಆರೋಪವನ್ನು ತಳ್ಳಿಹಾಕಿದ ಮಿಲ್ಲರ್, ಬಂಧಿತ ಮೂವರು ಆರೋಪಿಗಳ ಬಗ್ಗೆ ಕೆನಡಾ ಪೊಲೀಸರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಕ್ಕಳ ಬಗೆಗಿನ ಮಮಕಾರ ಮತ್ತು ಮೋದಿಯ ಸೋಗಲಾಡಿತನ
ಬಂಧಿತ ಮೂವರು ಭಾರತೀಯರು ಕೆನಡಾದಲ್ಲಿ ವಿದ್ಯಾರ್ಥಿ ವಿಸಾದಲ್ಲಿ ಆಗಮಿಸಿದ್ದರು ಎಂಬ ವರದಿಗಳ ಬಗ್ಗೆ ಮಿಲ್ಲರ್ ದೃಢಪಡಿಸಲಿಲ್ಲ.
ಇತ್ತೀಚಿಗಷ್ಟೆ ಕೆನಡಾ ವಿರುದ್ಧ ಮಾತನಾಡಿದ್ದ ಜೈಶಂಕರ್, ನವದೆಹಲಿಯ ಎಚ್ಚರಿಕೆಯ ನಡುವೆಯೂ ಭಾರತದಿಂದ ಆಗಮಿಸಿದ ಕೆಲವರಿಗೆ ಕೆನಡಾ ಸಂಘಟನಾತ್ಮಕ ಅಪರಾಧ ಕೈಗೊಳ್ಳಲು ಅನುಮತಿಸುತ್ತದೆ. ಪಾಕಿಸ್ತಾನ ಪರ ಒಲವಿರುವ ರಾಜಕೀಯ ಪ್ರಭಾವ ಹೊಂದಿರುವ ಕೆಲವರನ್ನು ಕೆನಡಾ ಸ್ವಾಗತಿಸುತ್ತಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಕೆನಡಾ ವಿರುದ್ಧ ಆರೋಪಿಸಿದ್ದರು.
ಖಲಿಸ್ತಾನಿ ಭಯೋತ್ಪಾದಕ ಹರ್‌ದೀಪ್ ಸಿಂಗ್ ನಿಜ್ಜರ್‌ನನ್ನು 2023ರ ಜೂನ್‌ನಲ್ಲಿ ಕೆನಡಾದ ಸರ್ರೆಯ ಗುರುದ್ವಾರದ ಹೊರಭಾಗದಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಭಾರತೀಯರನ್ನು ಕೆನಡಾ ಸರ್ಕಾರ ಬಂಧಿಸಿದೆ.
