ಒಲಿಂಪಿಕ್ಸ್‌ | ಕುಸ್ತಿ ಪಂದ್ಯದಿಂದ ಫೋಗಟ್‌ ಹೊರಗುಳಿದಿರಬಹುದು, ಭಾರತೀಯರ ಪ್ರೀತಿಯಿಂದಲ್ಲ

Date:

Advertisements

ಒಲಿಂಪಿಕ್ಸ್ ಕುಸ್ತಿ ಪಂದ್ಯಾವಳಿಯಲ್ಲಿ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಅವರು ಫೈನಲ್ ಪ್ರವೇಶಿಸಿ, ಅಂತಿಮ ಕ್ಷಣದಲ್ಲಿ ತೂಕದ ಕಾರಣಕ್ಕೆ ಅನರ್ಹರಾಗಿದ್ದಾರೆ. ಅವರ ತೂಕದಲ್ಲಿ 50 ಕೆ.ಜಿಗಿಂತ 100 ಗ್ರಾಂ ಹೆಚ್ಚಾಗಿದ್ದ ಕಾರಣಕ್ಕಾಗಿ ಅವರನ್ನು ಫೈನಲ್‌ ಪಂದ್ಯದಲ್ಲಿ ಹೊರಗಿಡಲಾಗಿದೆ. ಕೊನೆ ಕ್ಷಣದಲ್ಲಿ ಪದಕ ಗೆಲ್ಲುವ ಅವಕಾಶ ಕಳೆದುಕೊಂಡಿದ್ದಾರೆ. ಆದಾಗ್ಯೂ, ಒಲಿಂಪಿಕ್ಸ್‌ನ 50 ಕೆ.ಜಿ ವಿಭಾಗದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಮಹಿಳಾ ಕುಸ್ತಿಪಟು ಎಂಬ ಖ್ಯಾತಿ ಗಳಿಸಿದ್ದಾರೆ. ಭಾರತದ ಹಿರಿಮೆಯ ಗರಿಯಾಗಿ ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲ, ಹೊಸ ಅಧ್ಯಾಯ ಬರೆದಿದ್ದಾರೆ.

ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ‘ವಿಶ್ವ ಐಕಾನ್’ ಆಗಿ ಮಿಂಚುವ ಕೆಲವು ತಿಂಗಳುಗಳ ಹಿಂದೆ, ಕೇಂದ್ರದ ಬಿಜೆಪಿ ಸರ್ಕಾರ ಅವರನ್ನು ದೆಹಲಿಯ ಬೀದಿಯಲ್ಲಿ ಸಾಕಷ್ಟು ಅವಮಾನಿಸಿತ್ತು. ಅವರನ್ನು ದೆಹಲಿಯ ಜಂತರ್-ಮಂತರ್‌ನಲ್ಲಿ ಪೊಲೀಸರು ಎಳೆದಾಡಿದ್ದರು. ಹಲ್ಲೆ-ದೌರ್ಜನ್ಯ ನಡೆಸಿದ್ದರು. ಅದೆಲ್ಲವನ್ನೂ ಮೆಟ್ಟಿ ನಿಂತ ಫೋಗಟ್, ಇದೀಗ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ತಮ್ಮನ್ನು ಅಪಮಾನಿಸಿದ್ದ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಬಿಜೆಪಿ, ಮೋದಿ ಭಕ್ತರಿಗೆ ಮುಟ್ಟಿನೋಡಿಕೊಳ್ಳುವಂತಹ ತಿರುಗೇಟು ಕೊಟ್ಟಿದ್ದಾರೆ. ಫೋಗಟ್ ಅವರು ಫೈನಲ್‌ ಪ್ರವೇಶಿಸಿದ್ದನ್ನು ಮಂಗಳವಾರ ಇಡೀ ದೇಶವೇ ಸಂಭ್ರಮಿಸಿತ್ತು. ಆದರೆ, ಪ್ರಧಾನಿ ಮೋದಿ ಮಾತ್ರ ತುಟಿಬಿಚ್ಚಿರಲಿಲ್ಲ. ಇದೀಗ, ಫೋಗಟ್ ಅವರು ಒಲಿಂಪಿಕ್ಸ್‌ ಪಂದ್ಯದಿಂದ ಹೊರಗುಳಿದ ಬಳಿಕ ‘ತೀರಾ ನೋವಾಯಿತು’ ಎಂದು ತಡವಾಗಿ ಮೊಸಳೆ ಕಣ್ಣೀರು ಸುರಿಸಿದ್ದಾರೆ.

ಅಂದಹಾಗೆ, 2023 ಏಪ್ರಿಲ್‌ನಲ್ಲಿ ಅಂದಿನ ಕುಸ್ತಿ ಫೆಡರೇಷನ್ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ತಮಗೆ ಲೈಂಗಿಕ ಕುರುಕುಳ ನೀಡುತ್ತಿದ್ದಾರೆಂದು ಮಹಿಳಾ ಕುಸ್ತಿಪಟುಗಳು ಆರೋಪಿಸಿದ್ದರು. ಬ್ರಿಜ್ ಭೂಷಣ್ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಬೇಕು. ಶಿಕ್ಷೆಗೆ ಗುರಿಪಡಿಸಬೇಕು. ತಮಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಏಪ್ರಿಲ್ 23ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದರು. ಹಲವು ವಾರಗಳ ಕಾಲ ನಡೆದ ಪ್ರತಿಭಟನೆಗೆ ವಿನೇಶ್ ಫೋಗಟ್, ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ನೇತೃತ್ವ ವಹಿಸಿದ್ದರು.

Advertisements

ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆ ಹಲವಾರು ಕ್ರೀಡಾಪಟುಗಳು, ಸಂಘಟನೆಗಳು ಸೇರಿದಂತೆ ಇಡೀ ನಾಗರಿಕ ಸಮಾಜ ಬೆಂಬಲ ವ್ಯಕ್ತಪಡಿಸಿತ್ತು. ದೇಶಾದ್ಯಂತ ಸಾವಿರಾರು ಪ್ರತಿಭಟನೆಗಳು ನಡೆದಿದ್ದವು. ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕುಸ್ತಿ ಕೋಚ್ ಮಹಾವೀರ್ ಸಿಂಗ್ ಫೋಗಟ್ ಅವರು ಸೇರಿದಂತೆ ಹಲವರು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಆದರೆ, ಮೋದಿ ಸರ್ಕಾರ ಮಾತ್ರ ಪ್ರತಿಭಟನಾನಿರತ ಮಹಿಳಾ ಕುಸ್ತಿಪಟುಗಳ ಅಳಲನ್ನು ಆಲಿಸಲಿಲ್ಲ. ಆರೋಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಯಾವುದೇ ಕ್ರಮವನ್ನೂ ಕೈಗೊಳ್ಳಲಿಲ್ಲ.

ಸರ್ಕಾರದ ನಡೆಯಿಂದ ಮತ್ತಷ್ಟು ನೊಂದ ಮಹಿಳಾ ಕುಸ್ತಿಪಟುಗಳು ಸಂಸತ್‌ ಎಡೆಗೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದರು. ಅವರ ಮೇಲೆ ದೆಹಲಿ ಪೊಲೀಸರ ಮೂಲಕ ಕೇಂದ್ರ ಸರ್ಕಾರ ದೌರ್ಜನ್ಯ ಎಸಗಿತು. ದೆಹಲಿಯ ಬೀದಿಗಳಲ್ಲಿ ಅವರನ್ನು ಎಳೆದಾಡಿತು. ಹಲ್ಲೆ ಮಾಡಿತು.

ಅಂತಿಮವಾಗಿ, ದೇಶಾದ್ಯಂತ ಹೊರಹೊಮ್ಮಿದ ತೀವ್ರ ಪ್ರತಿರೋಧಕ್ಕೆ ಮಣಿದ ಸರ್ಕಾರ, ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನದ ಬ್ರಿಜ್ ಭೂಷಣ್ ಅವರ ಕುಟುಂಬದ ಯಾವುದೇ ಸದಸ್ಯರು ಅಥವಾ ಸಹವರ್ತಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂಬುದು ಸೇರಿದಂತೆ ಕೆಲವು ಭರವಸೆಗಳನ್ನು ನೀಡಿತ್ತು. ಬಳಿಕ, ಕುಸ್ತಿಪಟುಗಳು ತಮ್ಮ ಹೋರಾಟವನ್ನು ಕೈಬಿಟಿದ್ದರು.

ಆದಾಗ್ಯೂ, ಬ್ರಿಜ್ ಭೂಷಣ್ ಅವರ ಆಪ್ತ ಸಂಜಯ್‌ ಸಿಂಗ್‌ ಅವರನ್ನು ಕುಸ್ತಿ ಫೆಡರೇಷನ್ ಅಧ್ಯಕ್ಷರನ್ನಾಗಿ ಸರ್ಕಾರ ಆಯ್ಕೆ ಮಾಡಿತು. ಕೇಂದ್ರದ ನಡೆಯ ವಿರುದ್ಧ ಸಿಡಿದ ಕುಸ್ತಿಪಟು ಸಾಕ್ಷಿ ಮಲಿಕ್, ”ನಾನು ಬದ್ಧತೆಯಿಂದ ಹೋರಾಡಿದೆ. ಆದರೆ, ಆರೋಪಿ ಬ್ರಿಜ್ ಭೂಷಣ್‌ ಅವರಂತಹ ವ್ಯಕ್ತಿ ಫೆಡರೇಷನ್‌ನ ಅಧ್ಯಕ್ಷನಾದರೆ, ನಾನು ಕುಸ್ತಿಯನ್ನು ಮುಂದುವರೆಸುವುದಿಲ್ಲ. ನಾನು ಕುಸ್ತಿಯನ್ನು ತ್ಯಜಿಸುತ್ತಿದ್ದೇನೆ” ಎಂದು ಕುಸ್ತಿಗೆ ವಿದಾಯ ಹೇಳಿದ್ದರು.

ಮೋದಿ ಸರ್ಕಾರ ತಮ್ಮ ಮೇಲೆ ಎಸಗಿದ ದೌರ್ಜನ್ಯ, ಅಪಮಾನಗಳನ್ನು ಮೆಟ್ಟಿ ವಿನೀಶ್ ಫೋಗಟ್ ಕುಸ್ತಿಯನ್ನು ಮುಂದುವರೆಸಿದ್ದರು. ಸರ್ಕಾರದಿಂದ ಸರಿಯಾದ ಬೆಂಬಲ ಸಿಗದ ಹೊರತಾಗಿಯೂ ಅವರು ತೀವ್ರ ಪರಿಶ್ರಮದೊಂದಿಗೆ ಅಭ್ಯಾಸದಲ್ಲಿ ನಿರತರಾಗಿದ್ದರು. ಒಲಿಂಪಿಕ್ಸ್‌ಗೂ ತೆರಳಿದ್ದರು. ಮಾತ್ರವಲ್ಲದೆ, ಪ್ರಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ 1 ಕುಸ್ತಿಪಟು ಎಂದೇ ಖ್ಯಾತಿ ಪಡೆದಿದ್ದ ಜಪಾನ್‌ನ ಯುಯಿ ಸುಸಾಕಿ ಅವರನ್ನು ಸೋಲಿಸುವ ಮೂಲಕ ಜಗತ್ತಿನ ಗಮನ ಸೆಳೆದಿದ್ದರು. ಕ್ವಾರ್ಟರ್‌ಫೈನಲ್, ಸೆಮಿಫೈನಲ್‌ಗಳನ್ನು ಗೆದ್ದು, ಫೈನಲ್ ತಲುಪಿಸಿದ್ದರು.

ಆದರೆ, ಭಾರತೀಯ ದುರದೃಷ್ಟವೆಂಬಂತೆ ಅವರು ಫೈನಲ್‌ ಪಂದ್ಯ ಆಡುವುದರಿಂದ ವಂಚಿತರಾಗಿದ್ದಾರೆ. ಆದಾಗ್ಯೂ, ಅವರು ಫೈನಲ್ ತಲುಪಿದಾಗ, ಇಡೀ ಭಾರತ ಆಕೆಯನ್ನು ಹಾಡಿ ಹೊಗಳಿತು. ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಕುಸ್ತಿಪಟುಗಳ ಹೋರಾಟದ ಸಮಯದಲ್ಲಿ ವಿನೇಶ್ ಫೋಗಟ್ ಅವರನ್ನು ನಿಂದಿಸಿದ್ದ, ಅವರ ವಿರುದ್ಧ ಅಪಪ್ರಚಾರ ಮಾಡಿದ್ದ ಬಿಜೆಪಿ ಮಂತ್ರಿಗಳು, ನಾಯಕರು ಕೂಡ ಫೋಗಟ್ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ಈಗ ಫೋಗಟ್ ಅವರಿಗೆ ಅಭಿನಂದಿಸಿದ ಬಿಜೆಪಿಗರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಕಾಲೆಳೆಯುತ್ತಿದ್ದಾರೆ.

”ವಿನೇಶ್ ಫೋಗಟ್ ಬರಿಯ ಸಂಕೇತವಲ್ಲ. ಎಚ್ಚರದ ಕಿಡಿ. ಆ ಕಿಡಿ ಎಲ್ಲರ ಎದೆಯಲ್ಲಿಯೂ ಬೆಳಕನ್ನು ಹಬ್ಬಿಸಲಿ. ಪ್ರತಿರೋಧ, ಛಲ ಮತ್ತು ಗೆಲ್ಲುವ ಮಹತ್ತರ ಆಕಾಂಕ್ಷೆ ಒಗ್ಗೂಡಿದರೆ ಅಲ್ಲಿ ಫೋಗಟ್ ಎಂಬ ಸ್ವಾಭಿಮಾನಿ ಮತ್ತು ಸಾಹಸಿ ಕಾಣಿಸಿಕೊಳ್ಳುತ್ತಾಳೆ. ಫೋಗಟ್ ಗೆಲುವು ಎಲ್ಲರ ಗೆಲುವು. ಫೋಗಟ್ ಗೆಲುವಿನ ಸರಣಿಯಿಂದ ನಾವು ಈ ಕ್ಷಣಕ್ಕೆ ಭಾವುಕರಾಗುವುದು ಮುಖ್ಯವಲ್ಲ. ಆಕೆ ಯಾವ ಕಾರಣಕ್ಕಾಗಿ ಹೋರಾಡಿದಳು ಎಂಬ ವಿಷಯ ಮುನ್ನೆಲೆಗೆ ಬರಲಿ” ಎಂದು ನೆಟ್ಟಿಗರು ಹೇಳಿದ್ದಾರೆ.

”ವಿನೀಶ್ ಫೋಗಟ್ ಒಲಿಂಪಿಕ್ಸ್ 50 kg ಕುಸ್ತಿ ಪಂದ್ಯದಲ್ಲಿ ಫೈನಲ್ ಪ್ರವೇಶಿಸಿದ್ದಾರೆ ಈ ಸಹೋದರಿ. ಇಂಥ ವಿಶ್ವಮಾನ್ಯ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಅವರು ನ್ಯಾಯ ಕೇಳಿದಾಗ ಅವರನ್ನು ಬೀದಿಗೆ ತಳ್ಳಿ, ಅವರನ್ನು ಕ್ರೂರವಾಗಿ ನಡೆಸಿಕೊಂಡ ನಮ್ಮ ವ್ಯವಸ್ಥೆಗೆ ಕುಸ್ತಿಪಟುಗಳ ಜಯದಲ್ಲಿ ಮೋದಿ ನೇತೃತ್ವದ ಸರ್ಕಾರ ಕ್ಕೆ ಯಾವುದೇ ಪಾಲಿಲ್ಲ” ಎಂದಿದ್ದರು.

ಇದೀಗ, ಫೋಗಟ್‌ ಅವರು ಸ್ಪರ್ಧೆಯಿಂದ ಹೊರಗುಳಿದಿದ್ದರೂ, ಅವರಿಗೆ ಭಾರತೀಯರು ಪ್ರೀತಿಯ ಮಳೆಯನ್ನೇ ಸುರಿಸುತ್ತಿದ್ದಾರೆ. ನೀವು ಸ್ಪರ್ಧೆಯಿಂದ ಹೊರಗುಳಿದಿರಬಹುದು, ನಮ್ಮ ಹೃದಯದಿಂದಲ್ಲ ಎಂದು ಸಂತೈಸುತ್ತಿದ್ದಾರೆ.

”ವಿನೇಶ ಫೋಗಟ್‌ ಅವರಂತಹ ಶ್ರೇಷ್ಠ ಸಾಧಕಿಗೆ ಕ್ರೀಡಾರಂಗ ಅನ್ಯಾಯ ಮಾಡಿದೆ. ಹಲವಾರು ವರ್ಷಗಳ ಸಾಧನೆಯ, ತಪಸ್ಸಿನ ಫಲ ಕೇವಲ 100 ಗ್ರಾಂ ಹೆಚ್ಚು ತೂಕದ ಕಾರಣಕ್ಕೆ ಅನರ್ಹಗೊಳಿಸಿರುವುದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಅಟ್ಟಹಾಸದ ಮುಂದೆ ದಿಟ್ಟ ಹೆಣ್ಣು ಏನು ಮಾಡಲು ಸಾಧ್ಯ. ಸೂಕ್ತ ತನಿಖೆ ಮಾಡಲು ಸರ್ಕಾರ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ ಒತ್ತಾಯ ಮಾಡಬೇಕಿದೆ” ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

ಮಾತ್ರವಲ್ಲದೆ, ”100 ಗ್ರಾಂ ತೂಕ ಹೆಚ್ಚಿರುವ ಕಾರಣಕ್ಕೆ ಫೈನಲ್ ಪಂದ್ಯಕ್ಕೆ ವಿನೇಶ್ ಫೋಗಟ್ ಅನರ್ಹ ಮಾಡುವುದೇ. ಸಾಮಾನ್ಯವಾಗಿ ಪಂದ್ಯ ಶುರುವಾಗುವ ಕೆಲವೇ ನಿಮಿಷಗಳ ಮುಂಚೆ ಸ್ಪರ್ಧಿಗಳ ತೂಕವನ್ನು ಪರಿಶೀಲಿಸುವ ನಿಯಮವಿದೆ. ಪಂದ್ಯ ಶುರುವಾಗಬೇಕಿದ್ದದ್ದು ರಾತ್ರಿ 11 ಗಂಟೆ ಸುಮಾರಿಗೆ. ಹೀಗಿರುವಾಗ ವಿನೇಶ್ ಫೋಗಟ್ ಅವರಿಗೆ ಇನ್ನೂ ಕಾಲಾವಕಾಶ ಇದ್ದರೂ ಈಗಲೇ ತೂಕ ಪರಿಶೀಲನೆ ಮಾಡಿದ್ದು ಒಲಿಂಪಿಕ್ಸ್ ಒಳಗೆ ಏನೋ ಕುತಂತ್ರ ರಾಜಕೀಯ ನಡೆದಿದೆ ಎನ್ನುವ ಅನುಮಾನ ಹುಟ್ಟಿದೆ. ಇನ್ನೂ 10 ಗಂಟೆಯ ಕಾಲಾವಕಾಶ ಇರವಾಗ ಸ್ಪರ್ಧಿ 100 ಗ್ರಾಂ ತೂಕ ಇಳಿಸುವುದು ದೊಡ್ಡ ವಿಷಯವೇ ಅಲ್ಲ. ಭಾರತ ಸರ್ಕಾರ ನಿಜಕ್ಕೂ ನಮ್ಮ ದೇಶದ ಸ್ಪರ್ಧಾಳುಗಳ ಬಗ್ಗೆ ಕಾಳಜಿ ಇದ್ದದ್ದೇ ಹೌದಾದಲ್ಲಿ ಮಧ್ಯೆ ಪ್ರವೇಶಿಸಿ ಸಮಯ ಕೊಡುವಂತೆ ವಿನಂತಿ ಮಾಡಲಿ” ಎಂದು ಒತ್ತಾಯಿಸಿದ್ದಾರೆ.

ಟೊಕಿಯೋ ಒಲಿಂಪಿಕ್ಸ್‌ ನಡೆದಾಗ ಮಹಿಳಾ ಕುಸ್ತಿಪಟುಗಳು ಸೇರಿದಂತೆ ಎಲ್ಲರನ್ನು ಕರೆದು ಔತಣ ಕೂಟ ನಡೆಸಿದ್ದ, ಫೋಟೋಗೆ ಪುಕ್ಕಟ್ಟೆ ಪೋಸು ಕೊಟ್ಟಿದ್ದ ಪ್ರಧಾನಿ ಮೋದಿ, ಇದೇ ಮಹಿಳಾ ಕುಸ್ತಿಪಟುಗಳು ಹೋರಾಟ ನಡೆಸುತ್ತಿದ್ದಾಗ ಅವರ ಅಳಲನ್ನು ಆಲಿಸಲಿಲ್ಲ. ಅವರನ್ನು ಭೇಟಿಯಾಗಿ ಸಂತೈಸಲಿಲ್ಲ. ಈ ಬಾರಿ ಒಲಿಂಪಿಕ್ಸ್‌ಗೆ ತೆರಳಲು ಮೋದಿ ಸರ್ಕಾರದಿಂದ ಹೆಚ್ಚಿನ ಬೆಂಬಲವೂ ದೊರೆತಿರಲಿಲ್ಲ. ಫೋಗಟ್ ಅವರು ಫೈನಲ್ ಪ್ರವೇಶಿಸಿದಾಗಲೂ, ಅಭಿನಂದನೆ ಸಲ್ಲಿಸಲಿಲ್ಲ.

ಈ ವರದಿ ಓದಿದ್ದೀರಾ?: ಭಾರತದ 124 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಬರೆದ ಮನು ಭಾಕರ್

ಇದೀಗ, ಮೊಸಳೆ ಕಣ್ಣೀರು ಹಾಕಿರುವ ಮೋದಿ, ”ಸ್ಪರ್ಧೆಯಲ್ಲಿ ನಿಮಗೆ ಹಿನ್ನೆಡೆಯಾಗಿರುವುದು ತುಂಬಾ ನೋವಿನ ಸಂಗತಿ. ಈ ಪದಗಳು ನಾನು ಅನುಭವಿಸುತ್ತಿರುವ ಹತಾಶೆಯನ್ನು ವ್ಯಕ್ತಪಡಿಸಬಹುದು. ಆದರೆ, ನೀವು ಈ ಸಂಕಷ್ಟದಿಂದ ಶೀಘ್ರವೇ ಹೊರಬರುತ್ತೀರಿ ಎಂಬುದನ್ನು ನಾನು ಬಲ್ಲೆ. ಸವಾಲುಗಳನ್ನು ಎದುರಿಸುವುದು ನಿಮ್ಮ ಸ್ವಭಾವವಾಗಿದೆ. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ” ಎಂದು ಹೇಳಿದ್ದಾರೆ.

ಏನೇ ಆಗಲಿ, ಮಂಗಳವಾರ ರಾತ್ರಿ, ತಮ್ಮ ತೂಕ 2 ಕೆ.ಜಿ ಹೆಚ್ಚಿದೆ ಎಂಬುದನ್ನು ಗಮನಿಸಿದ್ದ ಫೋಗಟ್, ರಾತ್ರಿ ಇಡೀ ‘ವರ್ಕ್‌ ಔಟ್‌’ ಮಾಡಿ, 1,900 ಗ್ರಾಂ ತೂಕ ಇಳಿಸಿದ್ದರು. ಇನ್ನೂ, ರಾತ್ರಿವರೆಗೆ ಸಮಯವಿತ್ತು. ಅವರಿಗೆ ಅವಕಾಶ ಕೊಟ್ಟಿದ್ದರೆ, ಅವರು 100 ಗ್ರಾಂ ತೂಕ ಕಡಿಮೆ ಮಾಡಿಕೊಳ್ಳುವುದು ದೊಡ್ಡ ಕೆಲಸವೇನೂ ಆಗಿರಲಿಲ್ಲ. ಆದರೆ, ಏಕಾಏಕಿ ಅವರನ್ನು ಹೊರದೂಡಲಾಗಿದೆ. ಫೋಗಟ್‌ ಕುಸ್ತಿ ಪಂದ್ಯದಿಂದ ಹೊರಗುಳಿದು ವಂಚನೆಗೊಳಗಾಗಿರಬಹುದು. ಆದರೆ ಅವರನ್ನು ಭಾರತವು ಪ್ರೀತಿಯಿಂದ ಅಪ್ಪಿಕೊಂಡಿದೆ. ಗೌರವದ ಗರಿ ಮುಡಿಸಿ ಮೆರೆಸಿದೆ. ಇದು ಅವರ ನಿಜವಾದ ಜಾಗತಿಕ ಗೆಲುವು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X