ತಾಂತ್ರಿಕ ದೋಷದಿಂದಾಗಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರ ತಂಡ ತೆರಳಬೇಕಿದ್ದ ಆಕ್ಸಿಯಮ್ ಮಿಷನ್ 4 ಬಾಹ್ಯಾಕಾಶ ಯಾನವನ್ನು ನಾಸಾ ಮತ್ತೊಮ್ಮೆ ಮುಂದೂಡಿದೆ. ಉಡಾವಣೆಗೂ ಮೊದಲು ನಡೆಸಿದ ಬೂಸ್ಟರ್ ತಪಾಸಣೆಯ ವೇಳೆ ದ್ರವ ಆಮ್ಲಜನಕ ಸೋರಿಕೆ ಕಾಣಿಸಿಕೊಂಡ ಪರಿಣಾಮ ಉಡಾವಣೆಯನ್ನು ಮುಂದೂಡಲಾಗಿದೆ.
ತಾಂತ್ರಿಕ ಸಮಸ್ಯೆಯಿಂದಾಗಿ ಉಡಾವಣೆಯನ್ನು ಮುಂದೂಡಲಾಗಿದೆ ಎಂದು ಸ್ಪೇಸ್ ಎಕ್ಸ್ ಖಾತೆಯಲ್ಲಿ ತಿಳಿಸಿದೆ. ಅದನ್ನು ಸರಿಪಡಿಸಲು ಕೆಲ ಸಮಯ ಬೇಕಾಗಿದ್ದು ಶೀಘ್ರದಲ್ಲೇ ಹೊಸ ದಿನಾಂಕವನ್ನು ಘೋಷಿಸಲಾಗುವುದು ಎಂದು ತಿಳಿಸಿದೆ. ಈ ವಿಚಾರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
‘ಪೋಸ್ಟ್-ಸ್ಟಾಟಿಕ್ ಫೈರ್ ಬೂಸ್ಟರ್ ಪರಿಶೀಲನೆಯ ಸಮಯದಲ್ಲಿ ಲಿಕ್ವಿಡ್ ಆಕ್ಸಿಜನ್ (LOx) ಸೋರಿಕೆಯಾಗಿರುವುದು ಕಂಡುಬಂದಿದೆ. ಫಾಲ್ಕನ್-9 ರಾಕೆಟ್‌ನಲ್ಲಿ ಸೋರಿಕೆಯನ್ನು ಸರಿಪಡಿಸಲು ಎಂಜಿನಿಯರ್‌ಗಳು ಹೆಚ್ಚಿನ ಸಮಯವನ್ನು ಕೋರಿದ್ದಾರೆ’ ಎಂದು ಸ್ಪೇಸ್ ತಿಳಿಸಿದೆ.
ಶುಕ್ಲಾ ಅವರ ತಂಡವು ಬುಧವಾರ ಸಂಜೆ 5.30ಕ್ಕೆ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶ ಯಾನಕ್ಕೆ ತೆರಳಬೇಕಿತ್ತು. ಆದರೆ ಅದನ್ನು ಮತ್ತೊಮ್ಮೆ ಮುಂದೂಡಲಾಗಿದೆ.
