ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂಬ ಆರೋಪವನ್ನು ಪಾಕ್ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ನಿರಾಕರಿಸಿದ್ದಾರೆ. ಆ ಭಯೋತ್ಪಾದಕ ದಾಳಿಯ ಕುರಿತು ಅಂತಾರಾಷ್ಟ್ರೀಯ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಪಾತ್ರವಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಯಾವುದೇ ತನಿಖೆಗೆ ಪಾಕಿಸ್ತಾನ ಸಹಕರಿಸಲು ಸಿದ್ಧವಿದೆ ಎಂದು ಅವರು ನ್ಯೂಯಾರ್ಕ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
“ಭಾರತವು ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆಂದು ದೂಷಿಸುತ್ತಿದೆ. ಭದ್ರತಾ ಸಂಸ್ಥೆಗಳು 2008ರ ಮುಂಬೈ ದಾಳಿಗೆ ಕಾರಣವಾದ ಲಷ್ಕರ್-ಎ-ತೈಬಾ ಸಂಘಟನೆಯ ಮೇಲೆ ಆರೋಪ ಮಾಡಿವೆ. ಆದರೆ, ಲಷ್ಕರ್-ಎ-ತೈಬಾ ಕತೆ ಮುಗಿದುಹೋಗಿದೆ. ಪಹಲ್ಗಾಮ್‌ನಲ್ಲಿನ ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ” ಎಂದಿದ್ದಾರೆ.
“ಭಾರತದ ಆರೋಪಕ್ಕೆ ಯಾವುದೇ ಪುರಾವೆಗಳಿಲ್ಲ. ಯಾವುದೇ ತನಿಖೆ ನಡೆದಿಲ್ಲ. ಪುರಾವೆಯಿಲ್ಲದೆ, ತನಿಖೆ ನಡೆಸದೆ ಪಾಕಿಸ್ತಾನವನ್ನು ಶಿಕ್ಷಿಸಲು ಭಾರತ ಯತ್ನಿಸುತ್ತಿದೆ. ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದರಿಂದ ಪಾಕಿಸ್ತಾನಕ್ಕೆ ಯಾವುದೇ ಲಾಭವಿಲ್ಲ. ಭಾರತವು ಈ ಘಟನೆಯನ್ನು ರಾಜಕೀಯ ಲಾಭ ಪಡೆಯಲು ಮತ್ತು ಸಿಂಧು ನದಿ ಒಪ್ಪಂದದಿಂದ ಹಿಂದೆ ಸರಿಯುವುದನ್ನು ಸಮರ್ಥಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ” ಎಂದು ಅವರು ಆರೋಪಿಸಿದ್ದಾರೆ.
“ಸಂಘರ್ಷವು ಭುಗಿಲೆದ್ದರೆ ಕಾಶ್ಮೀರ ಪ್ರದೇಶಕ್ಕೆ ವಿಪತ್ತು ಉಂಟಾಗಬಹುದು. ಆದ್ದರಿಂದ ನಾವು ಈ ಸಂಘರ್ಷ ಭುಗಿಲೆದ್ದಂತೆ ಭಾವಿಸುವುದಿಲ್ಲ. ಪಾಕಿಸ್ತಾನದ ಅಧಿಕಾರಿಗಳು ವಿವಾದವನ್ನು ಪರಿಹರಿಸಲು ಅಮೆರಿಕವನ್ನು ಮಧ್ಯಸ್ಥಿಕೆ ವಹಿಸುವಂತೆ ಕೇಳಿಕೊಂಡಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಲಷ್ಕರ್-ಎ-ತೈಬಾ ನಿಷ್ಕ್ರಿಯವಾಗಿದೆ. ಅದು ಪಾಕಿಸ್ತಾನದಲ್ಲಿ ಯಾವುದೇ ಕಾರ್ಯಾಚರಣೆ ನಡೆಸಿರುವ ಅಥವಾ ಉಪಸ್ಥಿತಿ ಹೊಂದಿರುವ ಯಾವುದೇ ಉದಾಹರಣೆಗಳಿಲ್ಲ. ಲಷ್ಕರ್-ಎ-ತೈಬಾ ಕತೆ ಮುಗಿದಿದೆ. ಅವರಿಗೆ ಪಾಕಿಸ್ತಾನದಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಅದರ ಕೆಲವು ಸದಸ್ಯರು ಗೃಹಬಂಧನ ಅಥವಾ ಬಂಧನದಲ್ಲಿದ್ದಾರೆ” ಎಂದು ಆಸಿಫ್ ಹೇಳಿದ್ದಾರೆ.