ಪಾಕಿಸ್ತಾನದ ಸಂಸದೀಯ ಚುನಾವಣೆಯ ಫಲಿತಾಂಶ ಬಹುತೇಕ ಪ್ರಕಟವಾಗಿದ್ದು, ಅತಂತ್ರ ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ 54 ಸ್ಥಾನಗಳನ್ನು ಗೆದ್ದಿರುವ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ)ಯ ಬಿಲಾವಲ್ ಭುಟ್ಟೋ ಝರ್ದಾರಿ ಸದ್ಯ ಕಿಂಗ್ ಮೇಕರ್ ಆಗಿದ್ದಾರೆ.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 265 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಸರಳ ಬಹುಮತಕ್ಕೆ ರಾಜಕೀಯ ಪಕ್ಷಕ್ಕೆ 133 ಸ್ಥಾನಗಳ ಅಗತ್ಯವಿದೆ.
ಬಹುತೇಕ ಫಲಿತಾಂಶ ಪ್ರಕಟವಾಗಿದ್ದು, ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಕೆಲವು ಕ್ಷೇತ್ರಗಳ ಮರು ಮತಎಣಿಕೆ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಸದ್ಯದ ಫಲಿತಾಂಶದ ಪ್ರಕಾರ ಈ ಬಾರಿಯೂ ಪಾಕಿಸ್ತಾನದಲ್ಲಿ ಅತಂತ್ರ ಸಂಸತ್ತು ನಿರ್ಮಾಣವಾಗಿದೆ.
ಜೈಲಿನಲ್ಲಿರುವ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದ ಬೆಂಬಲಿಗರು 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಮುಸ್ಲಿಂ ಲೀಗ್ಗೆ 73 ಸ್ಥಾನಗಳು, ಬಿಲಾವಲ್ ಭುಟ್ಟೋ ಝರ್ದಾರಿ ನೇತೃತ್ವದ ಪಿಪಿಪಿ ಪಕ್ಷದ ಅಭ್ಯರ್ಥಿಗಳು 54 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ನವಾಜ್ ಷರೀಫ್ ಹಾಗೂ ಅವರ ಸಹೋದರ ಶೆಹಬಾಜ್ ಷರೀಫ್ ಅವರ ಪಕ್ಷ, ಪಾಕಿಸ್ತಾನ್ ಮುಸ್ಲಿಂ ಲೀಗ್ ಮತ್ತು ಬಿಲಾವಲ್ ಭುಟ್ಟೋ ಜರ್ದಾರಿ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸಮ್ಮಿಶ್ರ ಸರ್ಕಾರ ರಚಿಸಲು ಒಪ್ಪಿಕೊಂಡಿವೆ ಎಂದು ಜಿಯೋ ಟಿವಿ ಶನಿವಾರ ವರದಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದ ಬೆಂಬಲಿಗರು ಏನು ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಏತನ್ಮಧ್ಯೆ, ಮೇ 9 ರಂದು ಸೇನಾ ನೆಲೆಗಳ ಮೇಲಿನ ದಾಳಿಗೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಶನಿವಾರ ಜಾಮೀನು ನೀಡಲಾಗಿದೆ.
ಕಿಂಗ್ ಮೇಕರ್ ಆದ ಬಿಲಾವಲ್ ಭುಟ್ಟೋ
ಪಾಕಿಸ್ತಾನದ ಚುನಾವಣೆಯಲ್ಲಿ ಈಗ ನಂಬರ್ ಗೇಮ್ ಆರಂಭಗೊಂಡಿದ್ದು, ಬಿಲಾವಲ್ ಭುಟ್ಟೋ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಪಕ್ಷವೇ ನಿರ್ಣಾಯಕವಾಗಿದೆ. ಬಿಲಾವಲ್ ಭುಟ್ಟೋ ಬೆಂಬಲ ಪಡೆಯುವವರಿಗೆ ಮಾತ್ರವೇ ಸರ್ಕಾರ ರಚನೆ ಸಾಧ್ಯವಾಗಲಿದೆ. ಬಿಲಾವಲ್ ಭುಟ್ಟೋ ಅವರ ಬೆಂಬಲ ಪಡೆಯಲು ನವಾಜ್ ಷರೀಫ್ ಅವರು ತೀವ್ರ ಯತ್ನ ಮಾಡುತ್ತಿದ್ದಾರೆ.
ಜೈಲಿನಲ್ಲಿರುವ ಪಿಟಿಐ ನಾಯಕ ಇಮ್ರಾನ್ ಖಾನ್ ಬೆಂಬಲದಿಂದ ಸ್ವತಂತ್ರವಾಗಿ ಸ್ಪರ್ಧಿಸಿದ್ದವರು, ಸ್ಥಾನಗಳ ಗೆಲುವಿನ ಶತಕ ಬಾರಿಸಿ ನವಾಜ್ ಷರೀಫ್ ಪಕ್ಷಕ್ಕೆ ಸೆಡ್ಡು ಹೊಡೆದಿದ್ದಾರೆ. ಇಮ್ರಾನ್ ಖಾನ್ ಬೆಂಬಲಿಗರು ಅತಿಹೆಚ್ಚು ಸ್ಥಾನದಲ್ಲಿ ಗೆದ್ದಿರುವ ಸಂತೋಷ ಒಂದು ಕಡೆಯಾದರೆ, ನಾಯಕನಿಗೆ ಪಾಕಿಸ್ತಾನದ ಭಯೋತ್ಪದನಾ ವಿರೋಧಿ ನ್ಯಾಯಾಲಯವು ಜಾಮೀನು ನೀಡಿದೆ.
ಮೇ 9ರ ಗಲಭೆಗೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದು ಜನರ ಮತಗಳಿಗೆ ಸಿಕ್ಕ ಜಯ ಎಂದು ಅವರ ಬೆಂಬಲಿಗರು ಸಂಭ್ರಮ ಆಚರಿಸಿದ್ದಾರೆ.
ಇಮ್ರಾನ್ ಖಾನ್ ಜೊತೆಗೆ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 2023ರಲ್ಲಿ ನ್ಯಾಯಾಲಯ ಸೇನಾ ನೆಲೆಗಳ ಮೇಲೆ ನಡೆದ ದಾಳಿಗೆ ಸಂಬಂಧಿಸಿದ 12 ಪ್ರಕರಣಗಳಲ್ಲಿ ಇಮ್ರಾನ್ ಖಾನ್ ಹಾಗೂ ಮಹಮೂದ್ ಖುರೇಷಿ ಅವರಿಗೆ ಶಿಕ್ಷೆ ಪ್ರಕಟಿಸಿತ್ತು.