- ಗ್ರೀಸ್‌ನ ಪೆಲೊಪೊನೀಸ್ ದ್ವೀಪದ ಬಳಿ ದೋಣಿ ದುರಂತ
- ದುರಂತದ ವೇಳೆ 400-750 ಜನ ದೋಣಿಯಲ್ಲಿದ್ದರು ಎಂದು ಅಂದಾಜು
ಗ್ರೀಸ್‌ನಲ್ಲಿ ಸಂಭವಿಸಿದ ಭೀಕರ ದೋಣಿ ದುರಂತದಲ್ಲಿ ಸುಮಾರು 300 ತನ್ನ ದೇಶದ ಜನರು ಮೃತಪಟ್ಟ ಘಟನೆ ನಂತರ ಎಚ್ಚೆತ್ತಿರುವ ಪಾಕಿಸ್ತಾನ ಸರ್ಕಾರ 10 ಮಂದಿ ಮಾನವ ಕಳ್ಳಸಾಗಣೆಗಾರರನ್ನು ಬಂಧಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ಸೋಮವಾರ (ಜೂನ್ 19) ವರದಿ ಮಾಡಿವೆ.
ಪಾಕಿಸ್ತಾನದಿಂದ ಪ್ರತೀ ವರ್ಷ ಸಾವಿರಾರು ಯುವಕರು ಉತ್ತಮ ಜೀವನಕ್ಕಾಗಿ ಕೆಲಸ ಹುಡುಕಿಕೊಂಡು ಯುರೋಪಿಗೆ ಮಾನವ ಕಳ್ಳಸಾಗಣೆಗಾರರ ನೆರವಿನಿಂದ ಅಕ್ರಮವಾಗಿ ಪ್ರವೇಶಿಸಲು ದೋಣಿಗಳ ಮೂಲಕ ಅಪಾಯಕಾರಿ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ.
ಪಾಕಿಸ್ತಾನ ಯುವಕರು ಇಂತಹ ಒಂದು ಪ್ರಯತ್ನದಲ್ಲಿ ದುರಂತ ಅಂತ್ಯ ಕಂಡಿದ್ದರು. ಮಾನವ ಕಳ್ಳಸಾಗಣೆದಾರರ ನೆರವಿನಿಂದ ಯುವಕರನ್ನು ಬುಧವಾರ (ಜೂನ್ 14) ಹೊತ್ತೊಯ್ಯುತ್ತಿದ್ದ ದೋಣಿ ಗ್ರೀಸ್‌ನ ಪೆಲೊಪೊನೀಸ್ ದ್ವೀಪದ ಬಳಿ ಮುಳುಗಿದೆ. ಪರಿಣಾಮ ದೋಣಿಯಲ್ಲಿದ್ದ ಸುಮಾರು 300 ಮಂದಿ ಮೃತಪಟ್ಟಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಭೀಕರ ದುರಂತದ ಬೆನ್ನಲ್ಲೇ ಈ ಕುರಿತು ಕಠಿಣ ಕ್ರಮಕ್ಕೆ ಪಾಕಿಸ್ತಾನದ ಸರ್ಕಾರ ಮುಂದಾಗಿದ್ದು ಅಕ್ರಮ ಮಾನವ ಕಳ್ಳಸಾಗಣೆದಾರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದೆ.
ಅದರ ಭಾಗವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಒಂಬತ್ತು ಜನ ಅಕ್ರಮ ಕಳ್ಳಸಾಗಣೆದಾರರನ್ನು ಬಂಧಿಸಿದೆ. ಮತ್ತೊಬ್ಬ ಕಳ್ಳಸಾಗಣೆದಾರರನ್ನು ಗುಜರಾತ್ ಗಡಿಯಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಪಾಕ್ ಆಕ್ರಮಿತ ಕಾಶ್ಮೀರ ವಲಸಿಗರ ತಾಣವಾಗಿತ್ತು.
“ಮಾನವ ಕಳ್ಳಸಾಗಣೆಯ ಬಗ್ಗೆ ಬಂಧಿತರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ” ಎಂದು ಪಾಕ್ ಆಕ್ರಮಿತ ಕಾಶ್ಮೀರದ ಸ್ಥಳೀಯ ಅಧಿಕಾರಿ ಚೌಧರಿ ಶೌಕತ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಗೀತಾ ಪ್ರೆಸ್‍ಗೆ ಗಾಂಧಿ ಶಾಂತಿ ಪ್ರಶಸ್ತಿ ನೀಡುವುದು ಗೋಡ್ಸೆ, ಸಾವರ್ಕರ್‌ಗೆ ಪ್ರಶಸ್ತಿ ನೀಡಿದಂತೆ: ಕಾಂಗ್ರೆಸ್ ಟೀಕೆ
ದುರಂತದ ಸಂದರ್ಭದಲ್ಲಿ 400 ರಿಂದ 750 ಜನರು ದೋಣಿಯಲ್ಲಿದ್ದರು ಎಂದು ಅಂದಾಜಿಸಲಾಗಿದೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿವೆ.
ದೋಣಿ ದುರಂತದಲ್ಲಿ ಪಾಕಿಸ್ತಾನ ದೇಶದ 12 ಮಂದಿ ಬದುಕುಳಿದಿದ್ದಾರೆ. ಆದರೆ ದೋಣಿಯಲ್ಲಿ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ದೇಶದ ವಿದೇಶಾಂಗ ಸಚಿವಾಲಯ ಶನಿವಾರ (ಜೂನ್ 17) ತಿಳಿಸಿತ್ತು.