ಕಳೆದ ಕೆಲ ದಿನಗಳಿಂದ ಪಾಕಿಸ್ತಾನದ ಕೇಂದ್ರ ಹಾಗೂ ಉತ್ತರ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿಯುತ್ತಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿವರೆಗೆ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸುಮಾರು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಮೃತಪಟ್ಟವರಲ್ಲಿ ಮಕ್ಕಳೂ ಸೇರಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನ ನಿಯಂತ್ರಿತ ಕಾಶ್ಮೀರದಲ್ಲಿ ನಾಲ್ಕು ಮಹಿಳೆಯರು ಮತ್ತು ಒಬ್ಬ ಪುರುಷ ಹಾಗೂ ವಾಯುವ್ಯ ಖೈಬರ್ ಪಕ್ತೂನ್‌ಖ್ವಾ ಪ್ರಾಂತ್ಯದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಪಂಜಾಬ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆಂದು ಇತರ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಲಾಹೋರ್ ಮತ್ತು ಝೀಲಂನಲ್ಲಿ ತಲಾ 3 ಜನರು ಸಾವನ್ನಪ್ಪಿದ್ದಾರೆ. ಶೇಖಪುರ, ನಂಕಾನಾ ಸಾಹಿಬ್, ಅಟಾಕ್, ಮುಲ್ತಾನ್, ರಾಜನ್‌ಪುರ, ಹಫೀಜಾಬಾದ್, ಮಿಯಾನ್‌ವಾಲಿ, ಜಾಂಗ್, ಗುಜ್ರಾನ್‌ವಾಲಾ ಮತ್ತು ಲಯ್ಯದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಸಿಯಾಲ್‌ಕೋಟ್ ಮತ್ತು ಮುಜಫರ್‌ಗಢದಲ್ಲಿ ತಲಾ 2 ಸಾವುಗಳು ಸಂಭವಿಸಿವೆ ಎಂದು ವರದಿಗಳು ತಿಳಿಸಿವೆ.

ಬಿರುಗಾಳಿಯಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಸ್ತೆಗಳು ಸಂಪೂರ್ಣ ಜಲಾವೃತವಾಗಿವೆ. ಹಲವೆಡೆ ಕಟ್ಟಡಗಳು ಕುಸಿದುಬಿದ್ದಿದ್ದು, ಅವಶೇಷಗಳಡಿ ಶವಗಳು ಸಿಲುಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ರಸ್ತೆಗೆ ಅಡ್ಡಲಾಗಿ ಮರಗಳು ಉರುಳಿ ಬಿದ್ದಿದ್ದು, ಹಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ಶನಿವಾರದವರೆಗೆ ಬಿರುಗಾಳಿಯ ವಾತಾವರಣ ಮುಂದುವರಿಯುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿ ತಿಳಿಸಿದೆ.
ಇನ್ನು ಬಿರುಗಾಳಿಗೆ ಸಿಲುಕಿದ ಕರಾಚಿಯಿಂದ ಲಾಹೋರ್‌ಗೆ ಹೊರಟಿದ್ದ ಖಾಸಗಿ ವಿಮಾನ FL-842 ಲಾಹೋರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ತೀವ್ರ ಪ್ರಕ್ಷುಬ್ಧತೆ ಉಂಟಾಗಿ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಕುರಾನ್ ಪದ್ಯಗಳನ್ನು ಪಠಿಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅವರು ಸುರಕ್ಷಿತ ಲ್ಯಾಂಡಿಂಗ್‌ಗಾಗಿ ಅಳುತ್ತಾ ಪ್ರಾರ್ಥಿಸುತ್ತಿರುವುದು ವಿಡಿಯೋದಲ್ಲಿದೆ.

ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುನ್ಖ್ವಾ (ಕೆಪಿ) ಪ್ರಾಂತ್ಯದಲ್ಲಿ ಗುಡುಗು ಸಹಿತ ಮಳೆಗೆ ಇಂದೂ (ಮೇ.30) ಕೂಡ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಮಳೆ ಸಂಬಂಧಿತ ಘಟನೆಗಳಲ್ಲಿ ದೇಶಾದ್ಯಂತ ಸಾವನ್ನಪ್ಪಿದವರ ಸಂಖ್ಯೆ 26ಕ್ಕೆ ತಲುಪಿದೆ.
ಪಾಕಿಸ್ತಾನದ ಹವಾಮಾನ ಮಾದರಿಗಳಲ್ಲಿ ಅನಿಯಮಿತ ಬದಲಾವಣೆಗಳು ಕಂಡುಬಂದಿದ್ದು, ಇತ್ತೀಚಿನ ವರ್ಷಗಳಲ್ಲಿ ಆಗಾಗ್ಗೆ ಶಾಖೋತ್ಪನ್ನಗಳು, ಅಕಾಲಿಕ ಮಳೆ, ಬಿರುಗಾಳಿಗಳು, ಚಂಡಮಾರುತಗಳು ಮತ್ತು ಬರಗಾಲಗಳು ಉಂಟಾಗಿವೆ. ವಿಜ್ಞಾನಿಗಳು ಈ ಘಟನೆಗಳಿಗೆ ಮಾನವ ಚಾಲಿತ ಹವಾಮಾನ ಬದಲಾವಣೆಯೇ ಕಾರಣ ಎಂದು ಆರೋಪಿಸಿದ್ದಾರೆ.

2022ರಲ್ಲಿ ಮಾನವ ಚಾಲಿತ ಹವಾಮಾನ ಬದಲಾವಣೆಯಿಂದ ಉಂಟಾದ ವಿನಾಶಕಾರಿ ಪ್ರವಾಹಕ್ಕೆ 1,700ಕ್ಕೂ ಹೆಚ್ಚು ಪಾಕಿಸ್ತಾನಿಗಳು ಬಲಿಯಾಗಿದ್ದರು. 33 ಮಿಲಿಯನ್ ಜನರ ಮೇಲೆ ಪರಿಣಾಮ ಬೀರಿತ್ತು ಮತ್ತು ದೇಶಕ್ಕೆ 30 ಶತಕೋಟಿಗೂ ಹೆಚ್ಚು ಆರ್ಥಿಕ ನಷ್ಟವನ್ನುಂಟುಮಾಡಿತ್ತು. ಇದೀಗ ಮತ್ತದೇ ಪರಿಸ್ಥಿತಿ ನಿರ್ಮಾಣವಾಗುವ ಮುನ್ಸೂಚನೆ ಇದೆ.
ಇದನ್ನೂ ಓದಿ: ರಾಜ್ಯದಲ್ಲಿ ಮಳೆ ಅವಾಂತರ: ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೆ?
ಪಿಡಿಎಂಎ ತುರ್ತು ಕಾರ್ಯಾಚರಣೆ ಕೇಂದ್ರವು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆದರೆ 1700 ಗೆ ಕರೆ ಮಾಡಿ ವರದಿ ಮಾಡಲು ನಾಗರಿಕರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.