ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಬಂಡುಕೋರರು ಹೈಜಾಕ್ ಮಾಡಿದ್ದು, 100ಕ್ಕೂ ಹೆಚ್ಚು ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಕ್ವೆಟ್ಟಾದಿಂದ ಪೇಶಾವರಕ್ಕೆ ಜಾಫರ್ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಸುತ್ತಿತ್ತು. ಕ್ವೆಟ್ಟಾದ ಬಳಿಯ ಪನಿಯಾರ್ ರೈಲ್ವೇ ನಿಲ್ದಾಣದಲ್ಲಿ ಸಶಸ್ತ್ರಧಾರಿ ಬಂಡುಕೋರರ ಗುಂಪು ರೈಲನ್ನು ಹೈಜಾಕ್ ಮಾಡಿದೆ. ರೈಲಿನಲ್ಲಿ ಸುಮಾರು 450 ಮಂದಿ ಪ್ರಯಾಣಿಸುತ್ತಿದ್ದರು. ಅವರಲ್ಲಿ, 100ಕ್ಕೂ ಹೆಚ್ಚು ಮಂದಿಯನ್ನು ಅವರು ಒತ್ತಾಯಾಳುಗಳಾಗಿ ಇರಿಸಿಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿಯಾಗಿವೆ.
ರೈಲು ಸುರಂಗ ಮಾರ್ಗದಲ್ಲಿ ಹಾದುಹೋಗುವಾಗ ಬಂದೂಕುಧಾರಿಗಳು ರೈಲನ್ನು ಹತ್ತಿದ್ದು, ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಪನಿಯಾರ್ ನಿಲ್ದಾಣದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ರೈಲ್ವೇ ಲೋಕೋ ಪೈಲೆಟ್‌ಗೆ ಗಂಭೀರ ಗಾಯಗಳಾಗಿವೆ. ಹಲವು ಪ್ರಯಾಣಿಕರಿಗೂ ಗಾಯಗಳಾಗಿವೆ. ವೈದ್ಯಕೀಯ ತಂಡ ಸ್ಥಳಕ್ಕೆ ಧಾವಿಸಿದ್ದು, ಚಿಕಿತ್ಸೆ ನೀಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲನ್ನು ಹೈಜಾಕ್ ಮಾಡಿರುವುದಾಗಿ ‘ಬಲೂಚ್ ಲಿಬರೇಶನ್ ಆರ್ಮಿ’ ಹೊಣೆಹೊತ್ತುಕೊಂಡಿದೆ ಹೇಳಿಕೆ ಬಿಡುಗಡೆ ಮಾಡಿದೆ. “ನಮ್ಮ ವಶದಲ್ಲಿ 100 ಪಾಕಿಸ್ತಾನಿ ಪಡೆಗಳ ಸಿಬ್ಬಂದಿ ಇದ್ದಾರೆ” ಎಂದು ಹೇಳಿಕೊಂಡಿದೆ.
“ಮಹಿಳೆಯರು, ಮಕ್ಕಳು ಮತ್ತು ಸಾರ್ವಜನಿಕರನ್ನು ಬಿಡುಗಡೆ ಮಾಡಿದ್ದೇವೆ. ಪಾಕಿಸ್ತಾನಿ ಮಿಲಿಟರಿ, ಪೊಲೀಸ್, ಭಯೋತ್ಪಾದನಾ ನಿಗ್ರಹ ಪಡೆಗಳ ಏಜೆಂಟ್‌ಗಳು ಮತ್ತು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಸಿಬ್ಬಂದಿಗಳನ್ನು ಮಾತ್ರ ವಶದಲ್ಲಿ ಇಟ್ಟುಕೊಂಡಿದ್ದೇವೆ. ಸೇನಾ ಪಡೆಗಳು ಮಿಲಿಟರಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದರೆ, ಎಲ್ಲ ಒತ್ತೆಯಾಳುಗಳನ್ನು ಗಲ್ಲಿಗೇರಿಸುತ್ತೇವೆ” ಎಂದು ಬೆದರಿಕೆ ಹಾಕಿದೆ.
ಈ ವರದಿ ಓದಿದ್ದೀರಾ?: ‘ಸಾಬರ ಬಜೆಟ್’ ಎಂದವರಿಗೆ ನಮ್ಮ ಹಳ್ಳಿಗಳ ಆರ್ಥಿಕ ಚಲನಶೀಲತೆಯ ಅರ್ಥ ಗೊತ್ತಿದೆಯೇ?
‘ಬಲೂಚ್ ಲಿಬರೇಶನ್ ಆರ್ಮಿ’ ಗುಂಪು ದಕ್ಷಿಣ ಅಫ್ಘಾನಿಸ್ತಾನದಲ್ಲಿ ಸಕ್ರಿಯವಾಗಿದೆ. ಅಲ್ಲದೆ, ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಬೇರ್ಪಡಿಸಿ, ಸ್ವತಂತ್ರ ರಾಷ್ಟ್ರ ಮಾಡಬೇಕು ಎಂಬುದೇ ತಮ್ಮ ಗುರಿಯೆಂದು ಹೇಳಿಕೊಂಡಿದೆ.
ಬಲೂಚಿಸ್ತಾನ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ಅವರು, “ರೈಲನ್ನು ಹೈಜಾಕ್ ಮಾಡಿರುವ ಸ್ಥಳಕ್ಕೆ ಭದ್ರತಾ ಪಡೆಗಳು ಮತ್ತು ರಕ್ಷಣಾ ಪಡೆಗಳು ಪ್ರವೇಶಿಸುವುದು ಕಷ್ಟಕರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸರ್ಕಾರ ತುರ್ತು ಕ್ರಮಗಳನ್ನು ಸೂಚಿಸಿದೆ. ರಕ್ಷಣಾ ಕಾರ್ಯಕ್ಕೆ ಸರ್ಕಾರದ ಎಲ್ಲ ರಕ್ಷಣಾ ಸಂಸ್ಥೆಗಳನ್ನು ಸಜ್ಜುಗೊಳಿಸಲಾಗಿದೆ” ಎಂದು ಹೇಳಿದ್ದಾರೆ.