ಅಣ್ವಸ್ತ್ರ ಸಂಬಂಧದ ಇಂದಿನ ಆತಂಕದ ಮೂಲವಿರುವುದು ಇಸ್ರಯೇಲಿನ ಕಿಡಿಗೇಡಿತನದ ನಡೆಯಲ್ಲಿ. ಆದರೆ ಬುಧ್ಯರು, ತಮ್ಮ ಬರಹದಲ್ಲಿ, ಇದು ಯಾವುದೂ ತಮಗೆ ತಿಳಿಯದು ಎಂಬಂತೆ ನಟಿಸುತ್ತ, ಇಸ್ರಯೇಲಿನ ನೀಚತನಕ್ಕೆ ಪ್ರತಿಯಾಗಿ ಇರಾನ್ ಹಮ್ಮಿಕೊಳ್ಳಲು ಪ್ರಯತ್ನಿಸುತ್ತ ಬಂದಿರುವ ಅಣ್ವಸ್ತ್ರ ತಯಾರಿಯ ಕುಂಟುಕುಂಟು ನಡೆಯೇ ಅತ್ಯಂತ ಆತಂಕಕಾರಿ ಆದದ್ದು ಎಂಬಂತೆ ಬಣ್ಣಿಸಿದ್ದಾರೆ. ಅದು ಎಚ್ಚರದ ವಿವೇಕಯುತವಾದ ಬರಹವಲ್ಲ. ಉತ್ತರಿಸಿದ್ದಾರೆ ಕವಿ-ನಾಟಕಕಾರ ರಘುನಂದನ...
ಕನ್ನಡದ ಅತಿಪ್ರಮುಖ ದೈನಿಕವಾದ ‘ಪ್ರಜಾವಾಣಿ’ಯಲ್ಲಿ ಕಳೆದ ಕೆಲವು ವರ್ಷಗಳಿಂದ ಸುಧೀಂದ್ರ ಬುಧ್ಯ ಎಂಬುವರ ‘ಸೀಮೋಲ್ಲಂಘನ’ ಎಂಬ ಅಂಕಣವೊಂದು ಪ್ರಕಟವಾಗುತ್ತ ಬಂದಿದೆ. ಅವರ ಬರಹಗಳನ್ನು ತುಸು ಎಚ್ಚರದಿಂದ ಆಗೀಗಲಾದರೂ ಓದುತ್ತ ಬಂದವರಿಗೆ ಅವರ ಒಲವು ಯಾವುದರತ್ತ, ಅವರು ಯಾವುದನ್ನು ಮರೆಮಾಚಿ ತಿಪ್ಪೆ ಸಾರಿಸುತ್ತಾರೆ, ಯಾವುದನ್ನು ಎಷ್ಟು, ಹುಸಿಯೇ ಆದ, ಜಾಣತನದಿಂದ ಮುನ್ನೆಲೆಗೆ ತರುತ್ತಾರೆ ಅನ್ನುವುದು ಒಂದಷ್ಟು ಗೊತ್ತಿರುತ್ತದೆ. ಇದೀಗ, ನಿನ್ನೆ, ಅಕ್ಟೋಬರ್ ನಾಲ್ಕರಂದು ಅವರು ಪ್ರಕಟಿಸಿದ ಬರಹಕ್ಕೆ ಕೊಂಡಿ ಇದು: https://www.prajavani.net/columns/seemoollanghana/iran-israel-war-prolonged-middle-eastern-conflict-2993086. ಆ ಬರಹಕ್ಕೆ ಪ್ರತಿಯಾಗಿ ಬರೆದ ಲೇಖನ ಇದು.
ಸುಧೀಂದ್ರ ಬುಧ್ಯ ಅವರು ತಮ್ಮ ‘ಸೀಮೋಲ್ಲಂಘನ’ ಅಂಕಣದಲ್ಲಿ ಈಗ ಪಶ್ಚಿಮ ಏಷಿಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಹಿಂಸಾಚಾರದ ಮೂಲಕಾರಣ ಮತ್ತು ಖಳನಾಯಕತ್ವ ಪ್ಯಾಲೆಸ್ತೀನ್‍ನ ಗಾಜಾ಼ ಪ್ರದೇಶದ ಹಮಾಸ್ ಸಂಘಟನೆಯದ್ದು, ಮತ್ತು ಇರಾನ್ ದೇಶದ್ದು ಹಾಗೂ ಅದು ಬೆಂಬಲಿಸುವ, ಲೆಬನಾನ್ ದೇಶದ, ಹಿಜ್ಬುಲ್ಲಾಹ್ ಸಂಘಟನೆಯದ್ದು ಎಂಬ ಭಾವನೆ ಬರುವಂತೆ ಅಲ್ಲಿನ ಆಗುಹೋಗುಗಳನ್ನು ಚಿತ್ರಿಸಿದ್ದಾರೆ. ಆದರೆ, ಸಮಸ್ಯೆಯ ಮೂಲ ಇರುವುದು ಲಕ್ಷಾಂತರ ಜನರು ಅನೇಕ ಶತಮಾನಗಳಿಂದ ವಾಸವಿದ್ದ, ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರೇ ಬಹುಸಂಖ್ಯೆಯಲ್ಲಿದ್ದ, ಪ್ಯಾಲೆಸ್ತೀನ್ ದೇಶ-ಪ್ರದೇಶದ ಜನತೆಯನ್ನು 1917ರಿಂದ ಮೊದಲುಗೊಂಡು ಅಮೆರಿಕಾ ಮತ್ತು ಯೂರೋಪಿನ ದೇಶಗಳವರು ಹಾಗೂ ಯಹೂದ್ಯರ ಮೂಲಭೂತವಾದೀ ಜ಼ಯೊನಿಸ್ಟ್ ಸಿದ್ಧಾಂತದ ಅನುಯಾಯಿಗಳು ಅನಾಮತ್ತು ಒಕ್ಕಲೆಬ್ಬಿಸಿ ಅವರ ಜಾಗದಲ್ಲಿ ಯಹೂದ್ಯರನ್ನು ತಂದು ನೆಲೆಯೂರಿಸಲು ಹೊರಟದ್ದರಿಂದ. 1948ರಲ್ಲಿ ಅದು ಬಹುದೊಡ್ಡ ಪ್ರಮಾಣದಲ್ಲಿ ಮತ್ತು ನಿರ್ಣಾಯಕವಾಗಿ ನಡೆಯಿತು; ಪ್ಯಾಲೆಸ್ತೀನೀಯರ ಮೇಲೆ ಅಪಾರ ಭಯಾನಕವಾದ ಹಿಂಸಾಚಾರವಾಯಿತು. ಅದನ್ನು ಅಲ್-ನಕ್ಬಾ (ಪ್ಯಾಲೆಸ್ತೀನೀಯರ ಮೇಲೆರಗಿದ ಮಹಾಪ್ರಳಯ) ಎಂದೇ ಗುರುತಿಸಲಾಗಿದೆ. ನಾಲ್ಕು ಭಾಗಗಳಿರುವ ಈ ಸಾಕ್ಷ್ಯಚಿತ್ರ ನೋಡಿ: https://www.youtube.com/watch?v=H7FML0wzJ6A.
ಅಲ್ಲಿಂದ ಈಚೆಗೆ, ಎಪ್ಪತ್ತಾರು ವರ್ಷಗಳ ಕಾಲ, ಇಸ್ರಯೇಲ್ ದೇಶವು ಪಾಶ್ಚಾತ್ಯ ದೇಶಗಳ ಕುಮ್ಮಕ್ಕಿನೊಂದಿಗೆ ಪ್ಯಾಲೆಸ್ತೀನೀಯರ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತಲೇ ಬಂದಿದೆ. ಇಸ್ರಯೇಲಿನ ನಿಜವಾದ ಆತ್ಮಸಾಕ್ಷಿ, ಅದರ ಅತ್ಯಂತ ಸತ್ಯನಿಷ್ಠುರ ಪತ್ರಕರ್ತ ಗಿಡಿಯನ್ ಲೆವಿ ಅವರ ಮಾತು: https://www.youtube.com/watch?v=3EtNFXL_ykg ಹಾಗೂ https://www.youtube.com/watch?v=DGO3eBxQX7Q ಹಾಗೂ https://www.youtube.com/watch?v=SyzVNm4GnW0.
ಅದರಿಂದಾಗಿ, ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಜನರು ತಮ್ಮ ನೆಲದಲ್ಲೇ ನಿರಾಶ್ರಿತರಾಗಿ ಒತ್ತೊತ್ತಾಗಿ ನೆಲೆಸಿರುವ ಗಾಜಾ಼ ಪ್ರದೇಶವು ಜಗತ್ತಿನ ಅತಿದೊಡ್ಡ ‘ಬಯಲು ಸೆರೆಮನೆ’ ಎಂದೇ ಕರೆಯಿಸಿಕೊಳ್ಳುತ್ತ ಬಂದಿದೆ. ಅಷ್ಟೇ ಜನ ಪ್ಯಾಲೆಸ್ತೀನಿಯರಿರುವ ಪಡುದಂಡೆ (ವೆಸ್ಟ್ ಬ್ಯಾಂಕ್) ಎಂಬ ಪ್ರದೇಶವು ಕೂಡ ತನ್ನ ಜನರ ಮೇಲೆ ಇಸ್ರಯೇಲಿನ ಸೈನ್ಯ ಮತ್ತು ಜ಼ಯೊನಿಸ್ಟರು ನಡೆಸುತ್ತಿರುವ ನಿರಂತರ ಹಿಂಸಾಚಾರದಿಂದಾಗಿ, ಅವರು ನಡೆಸುತ್ತ ಬಂದಿರುವ ಅತಿಕ್ರೂರ ಒತ್ತುವರಿಯಿಂದಾಗಿ ನಲುಗುತ್ತ ಬಂದಿದೆ. ಕ್ರೌರ್ಯದಲ್ಲಿ, 1990ಕ್ಕೆ ಮುಂಚಿನ ದಕ್ಷಿಣ ಆಫ್ರಿಕಾದ ವರ್ತನೆಯನ್ನೂ ಮೀರಿಸುವಂತೆ ಇರುತ್ತ ಬಂದಿದೆ ಇಸ್ರಯೇಲ್‍ನ ಜ಼ಯೊನಿಸ್ಟರ ವರ್ಣಭೇದ ನೀತಿಯ ನಡೆ.
ಇದನ್ನು ಓದಿದ್ದೀರಾ?: ಇಸ್ರೇಲ್ – ಇರಾನ್ ಯುದ್ಧ ಛಾಯೆ ಬಾಪುವಿನ ನಾಡಿನಿಂದ ಕಾಣುವುದು ಹೀಗೆ…
ನಾಟ್ಜೀ ಫ್ಯಾಶಿಸಮ್‍ಗೆ ತುತ್ತಾದ ಯಹೂದ್ಯರ ರಕ್ಷಕರು ತಾವು ಎಂದು ಹೇಳಿಕೊಳ್ಳುವ ಜ಼ಯೊನಿಸ್ಟರು ಮತ್ತು ಅವರ ಹಿಡಿತದಲ್ಲಿರುವ ಇಸ್ರಯೇಲ್‍ನ ಪ್ರಭುತ್ವದವರು ಈ ಎಪ್ಪತ್ತಾರು ವರ್ಷಗಳ ಕಾಲ ತಾವೇ ನಾಟ್ಜೀಗಳನ್ನು ಅನುಕರಿಸುತ್ತ ಬಂದಿದ್ದಾರೆ. ಇದೀಗ ಗಾಜಾ಼ ಮತ್ತು ಪಡುದಂಡೆ ಪ್ರದೇಶಗಳೆರಡೂ ಕೇವಲ ಸೆರೆಮನೆಗಳಲ್ಲ, ಮಹಾಯಾತನಾ ಶಿಬಿರಗಳೇ ಆಗಿಬಿಟ್ಟಿವೆ; ಗಾಜಾ಼ದ ಜನರು ನಿತ್ಯನಿರಂತರ ನರಮೇಧಕ್ಕೆ ಬಲಿಯಾಗುತ್ತಿದ್ದಾರೆ; ಇಪ್ಪತ್ತು ಲಕ್ಷ ಬದುಕುತ್ತಿದ್ದ ಆ ಪ್ರದೇಶ ಹೆಚ್ಚುಕಮ್ಮಿ ನೆಲಸಮವಾಗಿದೆ. ನೋಡಿ: https://www.newyorker.com/news/the-weekend-essay/in-the-shadow-of-the-holocaust.
ತಮ್ಮ ಮೇಲೆ ಆಗುತ್ತ ಬಂದಿರುವ ನಿರಂತರ ದಬ್ಬಾಳಿಕೆಗೆ ಶಾಂತಿಯುತವಾದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ಯಾಲೆಸ್ತೀನೀಯರು ಎಷ್ಟೋ ಸಲ ಪ್ರಯತ್ನಿಸಿದ್ದಾರೆ. ಅದು ಅವರು ನಡೆಸಿದ ಗಾಂಧೀವಾದೀ ಪ್ರಯತ್ನ ಎಂದೇ ಹೆಸರಾಗಿದೆ: https://www.972mag.com/where-is-palestines-gandhi-marching-in-gaza/ ಮತ್ತು https://www.amnesty.org/en/latest/campaigns/2018/10/gaza-great-march-of-return/ ಮತ್ತು https://rucforsk.ruc.dk/ws/portalfiles/portal/78571446/24248_136456_1_PB.pdf.
ಆದರೆ, ‘ನಾವೆಲ್ಲರೂ ಒಟ್ಟಿಗೇ, ಸಮಾನರಾಗಿ, ಒಂದೇ ನಾಡಿನವರಾಗಿ ಬಾಳೋಣ, ಇರೋಣ’ ಎಂಬ ಅವರ ವಿವೇಕದ ಮಾತನ್ನು ಇಸ್ರಯೇಲ್‍ನ ಆಳುವವರು ಮತ್ತೆ ಮತ್ತೆ ತಿರಸ್ಕರಿಸಿದ್ದಾರೆ. ‘ಹೋಗಲಿ. ಬೇಡ, ಇಬ್ಬರೂ ಎರಡು ಬೇರೆ ಬೇರೆ ದೇಶಗಳವರಾಗಿ ಇರೋಣ, ನೆರೆಹೊರೆಯವರಾಗಿ ಶಾಂತಿಯುತವಾಗಿ ಬಾಳೋಣ’ ಎನ್ನುತ್ತ ಪ್ಯಾಲೆಸ್ತೀನಿಯರು ನಡೆಸಿದ ರಾಜಿಯ ಪ್ರಯತ್ನವೂ ಸಫಲವಾಗಿಲ್ಲ. ಪ್ಯಾಲೆಸ್ತೀನೀಯರ ಅಲ್-ಫತಾಹ್ ಸಂಘಟನೆಯ ದೊಡ್ಡ ನಾಯಕ, ಭಾರತದ ಸ್ನೇಹಿತ ಹಾಗೂ ನೂರಕ್ಕೆ ನೂರು ಸೆಕ್ಯುಲರಿಸ್ಟ್ ಆಗಿದ್ದ ಯಾಸ್ಸರ್ ಅರಾಫತ್ ಆ ದಿಸೆಯಲ್ಲಿ ಮಾಡಿದ ಎಲ್ಲ ಪ್ರಯತ್ನವನ್ನೂ ಜ಼ಯೊನಿಸ್ಟರು ಬೇಕೆಂದೇ ಕೀಳುಗೈದು, ವಿಫಲಗೊಳಿಸಿದರು.
ಇಸ್ರಯೇಲ್‍ನ ಜ಼ಯೊನಿಸ್ಟರಿಗೆ ಬೇಕಾದ್ದು ಪರಿಹಾರವಲ್ಲ; ಬದಲಿಗೆ, ಪ್ಯಾಲೆಸ್ತೀನ್ ಮತ್ತು ಅದರ ಜನರ ಸರ್ವನಾಶ: https://www.reuters.com/world/middle-east/israeli-minister-says-no-such-thing-palestinian-people-2023-03-20/.
ಆದರೆ, ಬುಧ್ಯರ ಬರಹದಲ್ಲಿ ಪ್ಯಾಲೆಸ್ತೀನ್ ಎಂಬ ಮಾತು ಒಂದೇವೊಂದು ಸಲವೂ ಬರುವುದಿಲ್ಲ. ಇದು ವಸ್ತು-ಸತ್ಯನಿಷ್ಠತೆಯ ವಿಷಯದಲ್ಲಿ ಅವರಿಗಿರುವ ಬದ್ಧತೆಯನ್ನು ಕುರಿತು ಏನನ್ನು ಹೇಳುತ್ತದೆ?
ಹಮಾಸ್ ಸಂಘಟನೆಯ ಕೃತ್ಯಗಳು ಪೈಶಾಚಿಕ-ಭಯೋತ್ಪಾದಕವಾದುವು ಎನ್ನುವ ಬುಧ್ಯರಿಗೆ ಇಸ್ರಯೇಲ್ ಕಳೆದ ಮುಕ್ಕಾಲು ಶತಮಾನದಿಂದ ಎಸಗುತ್ತ ಬಂದಿರುವ ಕೃತ್ಯಗಳು ಅಕ್ಷರಶಃ ಸೈತಾನೀ ಆದುವು ಎಂದು ಅನ್ನಿಸುವುದೇ ಇಲ್ಲವೆಂದು ಕಾಣುತ್ತದೆ.
ಜ಼ಯೊನಿಸ್ಟರು ಅಲ್-ಫತಾಹ್ ಸಂಘಟನೆಯನ್ನೂ ಅರಾಫತ್ ಅವರನ್ನೂ ಬೇಕೆಂದೇ ದುರ್ಬಲಗೊಳಿಸಿದ್ದರಿಂದ ಹಮಾಸ್ ಹಾಗೂ ಹಿಜ್ಬುಲ್ಲಾ ಸಂಘಟನೆಗಳು ತಲೆಯೆತ್ತಿವೆ. ಕಳೆದ ವರ್ಷದ ಅಕ್ಟೋಬರ್ ಏಳರಂದು ಇಸ್ರಯೇಲ್‍ನ, ಒತ್ತುವರಿ, ತೋಟದ ಮನೆಗಳಿಗೆ ದಾಳಿಯಿಟ್ಟು ಹಮಾಸ್ ಮಾಡಿದ ಕೆಲಸಗಳನ್ನು ಬುದ್ಧಿ ಮತ್ತು ಅಂತಃಕರಣವಿರುವ ಯಾರೂ ಬೆಂಬಲಿಸುವುದಿಲ್ಲ. ಆದರೆ, ಅಂಥ ಬುಧ್ಯಂತಃಕರಣದವರು, ಪರಿಸ್ಥಿತಿ ಇಲ್ಲಿಯವರೆಗೆ ಬಂದದ್ದು ಹೇಗೆ ಎನ್ನುವುದನ್ನು ಕೂಡ ಯೋಚಿಸಬೇಕು, ತಿಳಿಯಬೇಕು. ಅಷ್ಟು ಮಾತ್ರವಲ್ಲ, ಅಂಥವರು, ಇಸ್ರಯೇಲ್‍ನ ಪ್ರಭುತ್ವ ಹಾಗೂ ಅಲ್ಲಿನ ಜ಼ಯೊನಿಸ್ಟರು, ಮತ್ತು ಅವರಿಗೆ ಬೆಂಬಲ ನೀಡುತ್ತ ಬಂದಿರುವ ಪಾಶ್ಚಾತ್ಯ ಬಂಡವಾಳಿಗ ದೇಶಗಳು, ಹಾಗೂ ಈ ಎಲ್ಲವನ್ನೂ ನೋಡುತ್ತ ಮಗುಂ ಆಗಿ ಉಳಿದಿರುವ ಜಗತ್ತಿನ ಬಹುತೇಕ ದೇಶಗಳು– ಇವುಗಳು ಮತ್ತು ಇಂಥವರ ನಡೆಯಿಂದಾಗಿ ಪರಿಸ್ಥಿತಿ ಬಂದು ತಲುಪುವುದು ಇಲ್ಲಿಗೇ ಎಂದು ಎಂದೋ ಕಂಡುಕೊಳ್ಳಬೇಕಿತ್ತು ಹಾಗೂ ಅದನ್ನು ತಡೆಗಟ್ಟಲು ತಮ್ಮ ಬುದ್ಧಿ ಮತ್ತು ಅಂತಃಕರಣಗಳನ್ನು ತೊಡಗಿಸಬೇಕಿತ್ತು. ಆದರೆ ಆತ್ಮಸಾಕ್ಷಿಯಿಲ್ಲದ ಲೋಕದಲ್ಲಿ ಇದೆಲ್ಲ ಬಂದು ತಲುಪುವುದು ಇಲ್ಲಿಗೇ.
ಬುಧ್ಯ ಅವರು ಇದು ಯಾವುದನ್ನೂ ಲೆಕ್ಕಿಸದೆ, ಜಗತ್ತಿಗೆ ಇದೀಗ ಇರಾನಿನ ಪರಮಾಣು ಬಾಂಬಿನ ಯೋಜನೆಯೇ ಅತಿಮುಖ್ಯ ಅಪಾಯದ ವಿಷಯವಾಗಿದೆ ಎಂಬಂತೆ ತಮ್ಮ ಒಕ್ಕಣೆಯನ್ನು ಬೆಳೆಸಿದ್ದಾರೆ. ಪ್ರಜಾಸತ್ತೆಯಲ್ಲಿ ಶ್ರದ್ಧೆಯಿರುವವರು ಯಾರೂ ಖೊಮೇನಿಗಳ ಆಡಳಿತವು ಇರಾನಿನ ಜನರ ಮಾನವಹಕ್ಕುಗಳ ಹರಣ ಮಾಡಿರುವುದನ್ನು ಯಾವ ರೀತಿಯಲ್ಲಿಯೂ ಬೆಂಬಲಿಸಬಾರದು, ಅಲ್ಲಿ ನಿಜವಾದ ಪ್ರಜಾಸತ್ತೆ ನೆಲೆಸಬೇಕು ಎನ್ನುವುದನ್ನು ಎತ್ತಿಹಿಡಿಯುತ್ತಲೇ, ಒಂದು ಮಾತನ್ನು ಹೇಳಬೇಕು: ಭಾರತವೂ ಸೇರಿದಂತೆ, ಪ್ರಪಂಚದ ಯಾವ ದೇಶವೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರಕೂಡದು; ಅಷ್ಟು ಮಾತ್ರವಲ್ಲ, ಪರಮಾಣು ಇಂಧನದ ಉತ್ಪಾದನೆಯೇ ಋತಧರ್ಮವಿರೋಧಿ ಆದದ್ದು. ಈ ಮಾತಿನಲ್ಲಿರುವ ವಿವೇಕ ಬುಧ್ಯ ಅವರ ಬರಹದಲ್ಲಿ ಕಾಣದು.
ಇಸ್ರಯೇಲ್ ಮತ್ತು ಅದರ ಯಜಮಾನ ರಾಷ್ಟ್ರವಾದ ಅಮೆರಿಕಾ ಹಾಗೂ ಅದರ ದಾಯಾದಿ ರಾಷ್ಟ್ರಗಳಾದ ಬ್ರಿಟನ್ ಮತ್ತು ಫ್ರಾನ್ಸ್ ಹಾಗೂ ಇದೀಗ ಅದರ ಆಪ್ತ ಗೆಳೆತನ ಬೆಳೆಸಿರುವ ನಮ್ಮ ದೇಶ ಭಾರತ ಮತ್ತು ಚೀನಾ, ಉತ್ತರ ಕೊರಿಯಾ ಹಾಗೂ ಪಾಕಿಸ್ತಾನ– ಈ ಎಲ್ಲ ದೇಶಗಳು ಈಗಾಗಲೇ ಅಣ್ವಸ್ತ್ರಸಜ್ಜಿತ ದೇಶಗಳಾಗಿವೆ. ಅಮೆರಿಕಾ ಹಾಗೂ ಇಸ್ರಯೇಲ್ ಪ್ರಭುತ್ವಗಳಿಂದ ನಿತ್ಯ ಬೆದರಿಕೆ ಎದುರಿಸುತ್ತ ಬಂದಿರುವ ಇರಾನ್ ಈಚಿನ ಕೆಲವು ವರ್ಷಗಳಲ್ಲಷ್ಟೇ ತಾನೂ ಅಣ್ವಸ್ತ್ರಗಳನ್ನು ಹೊಂದಲು ಬೇಕಾದ ತಯಾರಿ ಮಾಡಿಕೊಳ್ಳುತ್ತಿದೆ. ಅದಕ್ಕೆ, ಸಹಜವಾಗಿಯೇ, ಅಮೆರಿಕಾ ಮುಂತಾದ ದೇಶಗಳಿಂದ ಹಲವು ಅಡೆತಡೆಗಳು ಬಂದೊದಗಿವೆ. ಆದರೆ ಆ ತಡೆ ಇಸ್ರಯೇಲಿಗೆ ಎಂದೂ ಬಂದಿಲ್ಲ! ಈ ವಿಷಯ ಬುಧ್ಯರಿಗೆ ಗೊತ್ತಿಲ್ಲವೆನ್ನಬೇಕೇ?
ನಮ್ಮ ದೇಶದಲ್ಲಂತೂ ವಾಜಪೇಯಿ ಸರಕಾರವು ತಾನು 1999ರಲ್ಲಿ ಅಧಿಕಾರಕ್ಕೆ ಬಂದ ಎರಡೇ ವಾರದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿ, ಭಾರತವು ಈಗ ಅಣ್ವಸ್ತ್ರಸಜ್ಜಿತವಾಗಿದೆ ಎಂದು ಸಾರಿಬಿಟ್ಟಿತು. ಅದಕ್ಕೆ ಸವಾಲಾಗಿ ಪಾಕಿಸ್ತಾನವು ಕೂಡ ಹಾಗೇ ಮಾಡಿತು. ಅದಕ್ಕೂ ಮೊದಲು, 1974ರಲ್ಲಿ, ಇಂದಿರಾ ಗಾಂಧಿ ಸರಕಾರವು ಅದೇ ಕೆಲಸವನ್ನು ಮಾಡಿತ್ತು; ಆದರೆ ತಾನು ಮಾಡಿದ್ದು ಅಣ್ವಸ್ತ್ರ ಪರೀಕ್ಷೆ ಆಗಿರಲಿಲ್ಲ, ಇಂಧನದ ಉತ್ಪಾದನೆಯ ಸಾಧ್ಯತೆಯನ್ನು ರುಜುಮಾಡಿಕೊಳ್ಳಲು ಹೊರಟ ಪರೀಕ್ಷೆ ಆಗಿತ್ತೆಂದು ಸಾಧಿಸಲು ಅದು ಪ್ರಯತ್ನಿಸಿತು. ಆಗ ಪಾಕಿಸ್ತಾನವು ಅಂದಿನಿಂದಲೇ ತಾನೂ ಅಣ್ವಸ್ತ್ರಶಕ್ತಿಯನ್ನು ಮೈಗೂಡಿಸಿಕೊಳ್ಳಹೊರಟಿತು. ಕೇಡಿಗೆ ಎದುರಾಗಿ ಕೇಡು ಹುಟ್ಟಬಾರದು ಎಂದಾದರೆ, 1948ರಲ್ಲಿ ಕಾಲವಾದ ಮೋಹನದಾಸನೇ ಎದ್ದುಬರಬೇಕೇನೋ…
ಇದೀಗ ನಾವು ಇಸ್ರಯೇಲ್ ಮತ್ತು ಇರಾನ್‍ಗಳ ಇಂದಿನ ನಡೆಯನ್ನು ನೋಡಬೇಕಾದ್ದು ಹಾಗೆಯೇ ಅಲ್ಲವೇ? ಅಣ್ವಸ್ತ್ರ ಸಂಬಂಧದ ಇಂದಿನ ಆತಂಕದ ಮೂಲವಿರುವುದು, ಈ ಉರಿಯನ್ನು ಹೊತ್ತಿಸಿದ್ದು ಇಸ್ರಯೇಲಿನ ಕಿಡಿಗೇಡಿತನವೇ ಸರಿ; ಅದರ, ಬೇರೆ, ಅತಿನೀಚತನದ ಲೆಕ್ಕವಿಲ್ಲದಷ್ಟು ನಡೆಗಳೇ ಸರಿ. ಆದರೆ ಬುಧ್ಯರು, ತಮ್ಮ ಬರಹದಲ್ಲಿ, ಇದು ಯಾವುದೂ ತಮಗೆ ತಿಳಿಯದು ಎಂಬಂತೆ ನಟಿಸುತ್ತ, ಇಸ್ರಯೇಲಿನ ನೀಚತನಕ್ಕೆ ಪ್ರತಿಯಾಗಿ ಇರಾನ್ ಹಮ್ಮಿಕೊಳ್ಳಲು ಪ್ರಯತ್ನಿಸುತ್ತ ಬಂದಿರುವ ಅಣ್ವಸ್ತ್ರ ತಯಾರಿಯ ಕುಂಟುಕುಂಟು ನಡೆಯೇ ಅತ್ಯಂತ ಆತಂಕಕಾರಿ ಆದದ್ದು ಎಂಬಂತೆ ಬಣ್ಣಿಸಿದ್ದಾರೆ.
ನೇತನ್ಯಾಹು ಸರಕಾರದ ಸೈತಾನೀ ನಡೆಗೆ ಇಸ್ರಯೇಲಿನ ಒಳಗೆಯೇ ಪ್ರತಿರೋಧವೆದ್ದಿದೆ; ಅಲ್ಲಿನ ಜನಸಾಮಾನ್ಯರು ದೊಡ್ಡ ಸಂಖ್ಯೆಯಲ್ಲಿ ಬೀದಿಗಿಳಿದು ಸರಕಾರದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ; ಪಾಶ್ಚಾತ್ಯ ದೇಶಗಳಲ್ಲಿ, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳೂ ಸೇರಿದಂತೆ ಲಕ್ಷಾಂತರ ಜನರು ಇಸ್ರಯೇಲ್‍ನ ನವನಾಟ್ಜೀ ನಡೆಯನ್ನು ಬೆಂಬಲಿಸುತ್ತಿರುವ ತಮ್ಮ ಸರಕಾರಗಳ ವಿರುದ್ಧ ತೀವ್ರವಾಗಿ ತಿರುಗಿಬಿದ್ದಿದ್ದಾರೆ. ನೋಡಿ: https://www.reuters.com/world/middle-east/thousands-israelis-join-anti-government-protests-calling-new-elections-2024-04-20/ ಮತ್ತು https://www.theguardian.com/us-news/2024/apr/15/us-protests-roads-blocked-israel-gaza-ceasefire ಮತ್ತು https://www.washingtonpost.com/nation/2024/04/26/columbia-protest-students-israel-gaza/ ಹಾಗೂ https://www.thehindu.com/opinion/lead/the-message-from-us-campuses-protesting-students/article68158257.ece.
ಆದರೆ, ಈ ವಿಷಯದಲ್ಲಿ ಈ ಸದ್ಯ ನಮ್ಮ ದೇಶದ ಸರಕಾರದ ನಿಲುವೇನು, ನಮ್ಮ ಬಹುತೇಕ ದೇಶಬಾಂಧವರ ವರ್ತನೆ ಎಂಥದು ಎಂದು ನೋಡಿದರೆ, ತುಂಬ ನೋವಾಗುತ್ತದೆ, ದುಃಖವಾಗುತ್ತದೆ.
ನಮ್ಮ ದೇಶವು, ತನಗೆ ಸ್ವಾತಂತ್ರ್ಯ ಸಿಕ್ಕಂದಿನಿಂದ ತೀರ ಈಚಿನವರೆಗೆ, ದಕ್ಷಿಣ ಆಫ್ರಿಕಾದ ಕಪ್ಪುಜನರು ವರ್ಣಭೇದ ನೀತಿಯ ವಿರುದ್ಧ ನಡೆಸಿದ ಹೋರಾಟದೊಂದಿಗೆ, ಆ ಭೂಖಂಡದ ಬೇರೆ ಜನರ ನ್ಯಾಯಯುತ ಹೋರಾಟಗಳೊಂದಿಗೆ, 1960-70ರ ದಶಕದ ವಿಯತ್ನಾಮ್‍ನ ವಿಯತ್‍ಕಾಂಗ್ ಹೋರಾಟಗಾರರೊಂದಿಗೆ, 1970-71ರ ಬಾಂಗ್ಲಾದೇಶದ ಮುಕ್ತಿವಾಹಿನಿಯೊಂದಿಗೆ ನಿಂತಂತೆಯೇ, ಪ್ಯಾಲೆಸ್ತೀನೀಯರ ಪರವಾಗಿಯೂ ನಿಂತಿದೆ. ಆದರೆ 2014ರಿಂದ ಮೊದಲುಗೊಂಡು ಅದು ಇಸ್ರಯೇಲ್‍ನ ಪರಮಾಪ್ತ ದೇಶವಾಗಿಬಿಟ್ಟಿದೆ. ಆ ದೇಶದ ರಾಕ್ಷಸೀಯ ನಡೆಯನ್ನು ಕಂಡೂ, ಕಂಡಿಲ್ಲ ಎಂಬಂತೆ ನಟಿಸುತ್ತ ಬಾಯಿಮುಚ್ಚಿಕೊಂಡು ಕೂತಿದೆ. ವಿಶ್ವಗುರುಗಳು ತಾವು ಎಂದು ಕೊಚ್ಚಿಕೊಳ್ಳುವ ಇಂದಿನ ಭಾರತದ ಧುರೀಣರು ಸದ್ಧರ್ಮವನ್ನೂ ವಿಶ್ವಬಂಧುತ್ವವನ್ನೂ, ಅದು ಕಾಲಕಸ — ಕಾಲಕೆಳಗಿನ ಕಸ, ಹಳಸಲು ಗತಕಾಲದ ಕಸ — ಎಂಬಂತೆ ಕಾಣುತ್ತಿದ್ದಾರೆ.

ಹಿಂದೂತ್ವ ಫ್ಯಾಶಿಸಮ್ ತಾನು ಜ಼ಯೊನಿಸ್ಟ್ ಮೇಲಾಟದಲ್ಲಿ ತನ್ನ ಪಡಿನೆಳಲನ್ನೇ ಕಂಡಿದೆ; ಅವೆರಡಕ್ಕೂ ಕನ್ನಡಿ ಹಿಡಿದು ತೋರಿಸುತ್ತ, ಅವುಗಳೊಡನೆ ಸೇರಿ ಸೆಲ್ಫೀ ತೆಗೆದುಕೊಳ್ಳುತ್ತಿರುವ ಪಾಶ್ಚಾತ್ಯ ಮಿಲಿಟರಿ-ಬಂಡವಾಳವು ಕಣ್ಣುಮಿಟುಕಿಸಿ ನಗುತ್ತಿದೆ. ಇದು ನೋವಿನ ಸಂಗತಿ, ದುಃಖದ ಸಂಗತಿ.
ಪಾಶ್ಚಾತ್ಯ ದೇಶಗಳ ಆಳುವವರು ತಮ್ಮ ಜನರ ಪ್ರತಿಭಟನೆಯ ಕೂಗಿಗೆ ಬೆಲೆ ಕೊಡದಿದ್ದರೂ, ಅವರು ಸಾರ್ವಜನಿಕವಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಸೇರಿ ಪ್ರತಿಭಟಿಸಲು ಅವಕಾಶವನ್ನಾದರೂ ಕೊಟ್ಟಿದ್ದಾರೆ: ಎಷ್ಟು ಬೇಕಾದರೂ ಬೊಬ್ಬೆ ಹೊಡಕೊಂಡು ಸಾಯಿರಿ, ಕೇಳೋವರು ಯಾರಿದ್ದಾರೆ – ಎಂಬ ಧೋರಣೆಯೊಂದಿಗೆ. ಆದರೆ ನಮ್ಮ ದೇಶದಲ್ಲಿ ಸಾರ್ವಜನಿಕ ಪ್ರತಿಭಟನೆಗೂ ಕಡಿವಾಣ ಹಾಕಲಾಗಿದೆ; ಜನರ ಬಾಯಿಯನ್ನು ಮುಚ್ಚಿಸಲಾಗಿದೆ. ಇದು ಇನ್ನೂ ನೋವಿನ ಸಂಗತಿ.
ಆದರೆ ಅಷ್ಟಾದರೂ, ನಮ್ಮ ಯುವಜನರು, ನಮ್ಮ ನಗರ-ಪಟ್ಟಣಗಳ ಅಕ್ಷರಬಲ್ಲ ಉದ್ಯೋಗಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಕನ್ನಡದ ಸಂದರ್ಭದಲ್ಲಿ, ಬಹುತೇಕ ಸಾಹಿತಿಗಳು, ಕಲಾವಿದರು (ಉಣ್ಣಲು ಎರಡಲ್ಲ ನಾಕಾರು ಹೊತ್ತು ಥರಥರಾವರಿ ಊಟ-ತಿನಿಸು ಇರುವವರು, ಎಲ್ಲರೂ) ತುಟಿಪಿಟಿಕ್ ಎನ್ನದೇ ಇದ್ದಾರೆ. ಇದು ಇನ್ನೂ ಇನ್ನೂ ನೋವು ಮತ್ತು ದುಃಖದ ಸಂಗತಿ:
ಸಂಜನಾ ವೆಡ್ಸ್ ಅವಿನಾಶ್, ಸಾಕ್ಷಿ ವೆಡ್ಸ್ ಅರವಿಂದ್
ಮಾಲತಿ ವೆಡ್ಸ್ ಮಾಧವ, ರಾಧಿಕಾ ವೆಡ್ಸ್ ಅನಂತ್…
ಎಂಕ ಕಾಲೇಜ್ ಧಮಾಕಾ, ನಾಣಿ ಕಾಲೇಜ್ ಆರ್ಟ್-ಫೆಸ್ಟ್
ಶೀನ ಕಾಲೇಜ್ ಫ್ರೀಕ್ಔಟ್… ಆತ್ಮವಂಚನೆಯ ಬ್ಯಾಂಡು
ಬಾರಿಸುತ್ತಲೇ ಇದೆ, ನರಸತ್ತವರ ಡ್ಯಾನ್ಸು ಡೆಂಡಣಿಸುತ್ತಲೇ ಇದೆ…

ರಘುನಂದನ
ಕವಿ, ನಾಟಕಕಾರ, ರಂಗನಿರ್ದೇಶಕ
ಬುದ್ಯ ಅವರದು ಅದ್ಭುತವಾದ ಲೇಖನವೇ ನಲ್ಲ. ಆ ಲೇಖನಕ್ಕೆ ಪ್ರತಿಕ್ರಿಯಿಸಿರುವ ಕಾರಣ ಇವರದ್ದು ಸಹ ಕಳಪೆ ಲೇಖನವೇ ಆಗಿದೆ.
ಅವರ ಲೇಖನದಲ್ಲಿ ಪ್ಯಾಲೆಸ್ ಟೈನ್ ಎಂಬ ಪದ ಎಷ್ಟು ಸಲ ಬಳಕೆಯಾಗಿದೆ ಎಂದು ಬೆದಕುವ ರಘುನಂದನರು ತಾವು ತಮ್ಮ ಲೇಖನದಲ್ಲಿ ಇಸ್ಲಾಮಿಕ್ ಭಯೋತ್ಪಾದನೆ ಎಂಬ ಪದವನ್ನು ಎಷ್ಟು ಬಾರಿ ಬಳಸಿದ್ದೇನೆ ಎಂದು ಕೇಳಿಕೊಳ್ಳಬೇಕಾಗಿದೆ.
ಪ್ಯಾಲೆಸ್ ಟೈನ್ ಸರ್ಕಾರ ಅಮಾಯಕವೇನಲ್ಲ ಅದೇ ರೀತಿ ಇಸ್ರೇಲ್ ಸಹ. ಇವರಿಬ್ಬರಲ್ಲಿ ಯಾರೊಬ್ಬರ ವಕಾಲತು ವಹಿಸಿ ಮಾತನಾಡಿದರೂ ನಾವು ಮೂರ್ಖರಾಗುತ್ತೇವೆ.
ಜಗತ್ತಿನ ಪ್ರಬಲ ಶಕ್ತಿಯನ್ನು ವಿರೋಧಿಸತಕ್ಕದ್ದು ಎಂಬ readymade ಸಿದ್ಧಾಂತವನ್ನು ಇರಿಸಿಕೊಂಡು ಬರೆದಿರುವ ಲೇಖನದಂತಿದೆ.