ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಕಡೆಗೆ ಗಮನ ಹರಿಸಿದೆ. ಈ ಬೆಳವಣಿಗೆಯು ಭಾರತದ ರಾಜಕೀಯ ವಲಯದಲ್ಲಿ, ವಿಶೇಷವಾಗಿ ಮೋದಿ ಭಕ್ತರಲ್ಲಿ ಚೀನಾ ಕುರಿತ ದೃಷ್ಟಿಕೋನ ಬದಲಾಗಿದೆ. ಮೋದಿ ಭಕ್ತರು ಚೀನಾ ಭಜನೆಯಲ್ಲಿ ನಿರತರಾಗಿದ್ದಾರೆ.
ರಷ್ಯಾ ಜೊತೆ ತೈಲ ಮತ್ತು ಶಸ್ತ್ರಾಸ್ತ್ರ ವ್ಯಾಪಾರ ಸಂಬಂಧ ಹೊಂದಿರುವ ಕಾರಣಕ್ಕಾಗಿ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬರೋಬ್ಬರಿ 50% ತೆರಿಗೆ ವಿಧಿಸಿದ್ದಾರೆ. ಇದರಲ್ಲಿ, 25% ತೆರಿಗೆಯಾಗಿದ್ದಾರೆ, ಉಳಿದ 25% ದಂಡದ ತೆರಿಗೆ ಎಂದು ಟ್ರಂಪ್ ಆಗಸ್ಟ್ 6ರಂದು ಹೇಳಿಕೊಂಡಿದ್ದಾರೆ. ಪರಿಣಾಮವಾಗಿ, ಭಾರತದ ಸರಕುಗಳಿಗೆ ಅಮೆರಿಕದಲ್ಲಿ 50% ಆಮದು ಸುಂಕ ವಿಧಿಸಲಾಗುತ್ತಿದೆ. ಇದು, ಭಾರತದ ಮೇಲೆ ಆರ್ಥಿಕ ಹೊರೆಯನ್ನು ಸೃಷ್ಟಿಸಿದೆ.
ಭಾರತವು ಅಮೆರಿಕವನ್ನು ತನ್ನ ಅತಿದೊಡ್ಡ ಖರೀದಿದಾರ ಮಾರುಕಟ್ಟೆಯಾಗಿ ನೋಡುತ್ತಲೇ ಬಂದಿದೆ. ಭಾರತದ ಒಟ್ಟು ರಫ್ತಿನಲ್ಲಿ 18% ಸರಕುಗಳ ಅಮೆರಿಕ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತವೆ. ಅಮೆರಿಕ ಮಾರುಕಟ್ಟೆಯು ಭಾರತದ ಜಿಡಿಪಿಗೆ 2.2% ಕೊಡುಗೆ ನೀಡುತ್ತಿದೆ. ಈಗ 50% ಸುಂಕದಿಂದಾಗಿ, ಭಾರತದ ಆರ್ಥಿಕತೆಯ ಮೇಲೆ 0.2ರಿಂದ 0.4% ಜಿಡಿಪಿ ಕಡಿತವಾಗುವ ಸಾಧ್ಯತೆ ಇದೆ. ವಿಶೇಷವಾಗಿ, ಜವಳಿ, ಚರ್ಮ, ರಾಸಾಯನಿಕಗಳು ಹಾಗೂ ಕಡಲ ಆಹಾರ (ಸೀ-ಫುಡ್) ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಈ ತೆರಿಗೆ ಹೇರಿಕೆಯನ್ನು ಭಾರತವು ‘ಅನ್ಯಾಯ, ಅನಗತ್ಯ ಹಾಗೂ ಅಸಮಂಜಸ’ ಎಂದು ಟೀಕಿಸಿದೆ. ರಷ್ಯಾದಿಂದ ಯುರೋಪಿಯನ್ ಒಕ್ಕೂಟ ಮತ್ತು ಚೀನಾದಂತಹ ಇತರ ದೇಶಗಳೂ ತೈಲ ಆಮದು ಮಾಡಿಕೊಳ್ಳುತ್ತಿವೆ. ಆದರೆ, ಆ ಯಾವುದೇ ರಾಷ್ಟ್ರಗಳ ಮೇಲೆ ಇಂತಹ ಕಠಿಣ ತೆರಿಗೆ ವಿಧಿಸಲಾಗಿಲ್ಲ. ಭಾರತದ ಮೇಲೆ ಮಾತ್ರವೇ ತೆರಿಗೆ ಹೊರೆ ಹೇರಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಅಮೆರಿಕ ಭಾರೀ ಮೊತ್ತದ ತೆರಿಗೆ ಹೇರಿದ ಬೆನ್ನಲ್ಲೇ, ಭಾರತವು ಚೀನಾದೊಂದಿಗೆ ಆರ್ಥಿಕ ಸಂಬಂಧಗಳನ್ನು ಗಟ್ಟಿಗೊಳಿಸುವ ಕಡೆಗೆ ಗಮನ ಹರಿಸಿದೆ. ಈ ಬೆಳವಣಿಗೆಯು ಭಾರತದ ರಾಜಕೀಯ ವಲಯದಲ್ಲಿ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಭಕ್ತರಲ್ಲಿ ಚೀನಾದ ಕುರಿತಾದ ದೃಷ್ಟಿಕೋನದಲ್ಲಿ ಬದಲಾವಣೆಯನ್ನು ತಂದಿದೆ. ಮೋದಿ ಭಕ್ತರು ಚೀನಾವನ್ನು ಶ್ಲಾಘಿಸಲು ಶುರುವಿಟ್ಟಿದ್ದಾರೆ.
ಭಾರತದ ಸ್ವಾತಂತ್ರ್ಯಾ ನಂತರದಲ್ಲಿ ಭಾರತ ಮತ್ತು ಚೀನಾದ ನಡುವಿನ ಸಂಬಂಧಗಳು ಏರಿಳಿತಗಳನ್ನು ಕಂಡಿವೆ. 1962ರ ಭಾರತ-ಚೀನಾ ಯುದ್ಧ, 2020ರ ಗಲ್ವಾನ್ ಕಣಿವೆ ಸಂಘರ್ಷ ಹಾಗೂ ಆಗಾಗ್ಗೆ ಎದುರಾಗುವ ಗಡಿ ವಿವಾದಗಳು ಉಭಯ ರಾಷ್ಟ್ರಗಳ ನಡುವಿನ ಒಡಕಿಗೆ ಕಾರಣವಾಗಿವೆ. ಚೀನಾವು 2020ರಿಂದ ಈಚೆಗೆ ಸುಮಾರು 4,000 ಚ.ಕಿ.ಮೀ ಭಾರತೀಯ ಭೂಪ್ರದೇಶವನ್ನು ಅತಿಕ್ರಮಣ ಮಾಡಿ, ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, 2020ರಲ್ಲಿ ನಡೆದ ಘರ್ಷಣೆಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರವು 50 ಚೀನೀ ಆ್ಯಪ್‌ಗಳನ್ನು ಬ್ಯಾನ್ ಮಾಡಿತು. ಅದರ ಹೊರತಾಗಿ ಬೇರೆ ಏನನ್ನೂ ಮಾಡಲಿಲ್ಲ.
ಈ ಆರೋಪ, ಅತಿಕ್ರಮಣ, ಘರ್ಷಣೆಗಳ ನಡುವೆಯೂ ಭಾರತ-ಚೀನಾ ವ್ಯಾಪಾರ ಸಂಬಂಧ ಮುಂದುವರೆದಿದೆ. ಆರ್ಥಿಕ ಕ್ಷೇತ್ರದಲ್ಲಿ ಎರಡೂ ದೇಶಗಳು ಪರಸ್ಪರ ಪೂರಕವಾಗಿವೆ. ಚೀನಾವು ಭಾರತಕ್ಕೆ ಅತಿದೊಡ್ಡ ವ್ಯಾಪಾರ ಪಾಲುದಾರರಲ್ಲಿ ಒಂದಾಗಿದೆ. ಭಾರತವು ಚೀನಾದಿಂದ ಎಲೆಕ್ಟ್ರಾನಿಕ್ಸ್, ರಾಸಾಯನಿಕಗಳು ಹಾಗೂ ಯಂತ್ರೋಪಕರಣಗಳನ್ನು ಆಮದು ಮಾಡಿಕೊಳ್ಳುತ್ತದೆ.
ಆದಾಗ್ಯೂ, 2020ರ ಗಲ್ವಾನ್ ಘರ್ಷಣೆಯ ನಂತರ, ಭಾರತವು ಚೀನಾದಿಂದ ಆಮದು ಕಡಿಮೆ ಮಾಡಲು ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸಲು ಪ್ರಯತ್ನಿಸಿತು. ಆದರೆ, ವಾಸ್ತವದಲ್ಲಿ, ಚೀನಾ ಜೊತೆಗಿನ ಭಾರತದ ವ್ಯಾಪಾರ ಸಂಬಂಧವು ಇನ್ನೂ ಹೆಚ್ಚಾಗಿದೆ.
ಇದೀಗ, ಭಾರತದ ಸರಕುಗಳ ಮೇಲೆ ಟ್ರಂಪ್ 50% ಆಮದು ಸುಂಕ ವಿಧಿಸಿದ್ದರಿಂದ, ಭಾರತವು ತನ್ನ ಆರ್ಥಿಕ ತಂತ್ರವನ್ನು ಪುನರ್‌ವಿಮರ್ಶಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಚೀನಾಕ್ಕೆ ಏಳು ವರ್ಷಗಳ ನಂತರ ಮತ್ತೆ ಭೇಟಿ ನೀಡಲು ಯೋಜಿಸಿದ್ದಾರೆ. ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ, ಟ್ರಂಪ್ ಅವರ ತೆರಿಗೆ ನೀತಿಯನ್ನೂ ಚೀನಾ ಟೀಕಿಸಿದೆ. ಅಲ್ಲದೆ, ಭಾರತದ ಜೊತೆಗೆ ‘ಒಗ್ಗಟ್ಟಿನಿಂದ ನಿಲ್ಲುವ’ ಇಚ್ಛೆಯನ್ನು ವ್ಯಕ್ತಪಡಿಸಿದೆ. ಚೀನಾದ ರಾಯಭಾರ ಕಚೇರಿಯ ವಕ್ತಾರ ಯು ಜಿಂಗ್, “ಭಾರತ ಮತ್ತು ಚೀನಾವು ಜಾಗತಿಕ ದಕ್ಷಿಣದ ದೊಡ್ಡ ದೇಶಗಳಾಗಿ, ಒಟ್ಟಿಗೆ ಸವಾಲುಗಳನ್ನು ಎದುರಿಸಬೇಕು” ಎಂದು ಕರೆಕೊಟ್ಟಿದ್ದಾರೆ. ಈ ಸಂದರ್ಭದಲ್ಲಿಯೇ, ಮೋದಿ ಅವರ ಶಾಂಘೈ ಭೇಟಿಯು ಭಾರತ-ಚೀನಾ ಸಂಬಂಧಗಳಲ್ಲಿ ಪ್ರಮುಖ ವಿದ್ಯಮಾನವಾಗಿದೆ. ಇದು, ಭಾರತ-ಚೀನಾ ವ್ಯಾಪಾರ ಸಂಬಂಧ ಮತ್ತಷ್ಟು ವಿಸ್ತರಿಸುವ ಸಾಧ್ಯತೆಯನ್ನು ಸೂಚಿಸಿದೆ.
ಇದೆಲ್ಲದರ ನಡುವೆ, ಮೋದಿ ಭಕ್ತರು ತಮ್ಮ ವರಸೆಯನ್ನು ಬದಲಿಸಿಕೊಂಡಿದ್ದಾರೆ. ಇದುವರೆಗೆ, ಮೋದಿ ಭಕ್ತರು ಚೀನಾದ ಬಗ್ಗೆ ರಾಷ್ಟ್ರೀಯವಾದಿ ದೃಷ್ಟಿಕೋನವನ್ನು ಹೊಂದಿದ್ದರು. ಶತ್ರು ರಾಷ್ಟ್ರವಾಗಿ ನೋಡುತ್ತಿದ್ದರು. ಚೀನಾವನ್ನು ವಿರೋಧಿಸುತ್ತಿದ್ದರು. ಅದರಲ್ಲೂ, 2020ರ ಗಲ್ವಾನ್ ಘರ್ಷಣೆಯ ನಂತರ, ಚೀನಾ ಮೇಲಿನ ಸಿಟ್ಟು ಮತ್ತಷ್ಟು ಹೆಚ್ಚಾಗಿತ್ತು. ಆಗ, ಚೀನಾದ ವಿರುದ್ಧ ‘ಬಾಯ್‌ಕಾಟ್ ಚೀನಾ’ ಅಭಿಯಾನ ಮತ್ತು ‘ಆತ್ಮನಿರ್ಭರತೆ’ಯ ಕರೆಗಳು ಕೇಳಿಬಂದಿದ್ದವು.
ಈಗ, ಟ್ರಂಪ್ ಸುಂಕದ ಹೊಡೆತದಿಂದಾಗಿ, ಭಾರತವು ಚೀನಾ ಜೊತೆಗೆ ಸಂಬಂಧ ವಿಸ್ತರಿಸಲು ನೋಡುತ್ತಿದೆ. ಚೀನಾದ ಬೆಂಬಲವು ಭಾರತದ ಆರ್ಥಿಕ ಭದ್ರತೆಗೆ ನೆರವಾಗಬಹುದು. ಚೀನಾವು ಭಾರತಕ್ಕೆ ಕಡಿಮೆ ವೆಚ್ಚದಲ್ಲಿ ಕಚ್ಚಾವಸ್ತುಗಳು ಮತ್ತು ತಂತ್ರಜ್ಞಾನವನ್ನು ಒದಗಿಸಬಹುದು. ಅಂತೆಯೇ, ಭಾರತವು ತನ್ನ ಸರಕುಗಳನ್ನು ಚೀನಾ ಮಾರುಕಟ್ಟೆಗೆ ರಫ್ತು ಮಾಡಬಹುದು. ಇದು ಅಮೆರಿಕದ ಮಾರುಕಟ್ಟೆಯಿಂದ ಕಳೆದುಕೊಂಡ ಆದಾಯವನ್ನು ಸರಿದೂಗಿಸಲು ಸಹಾಯ ಮಾಡಬಹುದು ಎಂದು ಹೇಳಲಾಗುತ್ತಿದೆ.
ಹೀಗಾಗಿ, ಮೋದಿ ಭಕ್ತರಲ್ಲಿ ಚೀನಾ ಕುರಿತಾದ ನಿಲುವು/ಧೋರಣೆಗಳು ಧನಾತ್ಮಕ ದೃಷ್ಟಿಕೋನದಲ್ಲಿ ಬದಲಾಗುತ್ತಿರುವುದು ಕಂಡುಬಂದಿದೆ. ಮೋದಿ ಭಕ್ತರು; ಅಮೆರಿಕ ವಿರುದ್ಧ ಒಗ್ಗಟ್ಟಿನ ಅಗತ್ಯವಿದೆ. ಟ್ರಂಪ್ ತೆರಿಗೆಯಿಂದ ಭಾರತವು ಒಂಟಿಯಾಗಿದ್ದು, ಭಾರತದ ಪರವಾಗಿ ಚೀನಾ ಧ್ವನಿ ಎತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಚೀನಾ ಜೊತೆಗಿನ ಸಂಬಂಧ ಮುಖ್ಯವೆಂದು ಹೇಳುತ್ತಿದ್ದಾರೆ.
ಬಿಜೆಪಿಯ ಸಂಸದ ನಿಶಿಕಾಂತ್ ದುಬೇ, “140 ಕೋಟಿ ಭಾರತೀಯರು ಒಗ್ಗಟ್ಟಾಗಿ ಮೋದಿಯವರಿಗೆ ಬೆಂಬಲ ನೀಡಬೇಕು. ಟ್ರಂಪ್ ಅವರ ತೆರಿಗೆಯು ಭಾರತದ ವಿರುದ್ಧದ ದಾಳಿಯಾಗಿದೆ” ಎಂದು ಹೇಳಿದ್ದಾರೆ. ಅವರ ಹೇಳಿಕೆಯನ್ನು ಚೀನಾ ಜೊತೆಗಿನ ಸಂಬಂಧದಲ್ಲಿ ಸಕಾರಾತ್ಮಕವಾಗಿ ಚಿಂತನೆ ನಡೆಸಬೇಕೆನ್ನುವ ನಿಲುವನ್ನು ಸೂಚಿಸಿದೆ.
ಈ ಲೇಖನ ಓದಿದ್ದೀರಾ?: ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮತ ಕಳವು: ಚುನಾವಣಾ ಆಯೋಗವೇ ನೇರ ಬೆಂಬಲ ನೀಡಿತೆ?
ಜೊತೆಗೆ, ಅಮೆರಿಕಗೆ ಸರಕುಗಳನ್ನು ರಫ್ತು ಮಾಡುತ್ತಿದ್ದ ಭಾರತದ ರಫ್ತುದಾರರು ಮತ್ತು ಎಂಎಸ್‌ಎಂಇಗಳು ತೊಂದರೆಯಲ್ಲಿ ಸಿಲುಕಿವೆ. ಅಮೆರಿಕಗೆ ರಫ್ತನ್ನು ಕಡಿಮೆ ಮಾಡಿದೆ, ಉಳಿಯುವ ಹೆಚ್ಚುವರಿ ಸರಕನ್ನು ರಫ್ತು ಮಾಡಲು ಪರ್ಯಾಯ ಮಾರುಕಟ್ಟೆಯ ಅಗತ್ಯವಿದೆ. ಈ ಆರ್ಥಿಕ ಒತ್ತಡವನ್ನು ಪರಿಹರಿಸಿಕೊಳ್ಳಲು ಚೀನಾದೊಂದಿಗಿನ ವ್ಯಾಪಾರವನ್ನು ಗಟ್ಟಿಗೊಳಿಸುವುದು ಉತ್ತಮ ಪರಿಹಾರವೆಂದು ಬಿಜೆಪಿಗರು ಭಾವಿಸಿದ್ದಾರೆ. ಇದನ್ನು ಮೋದಿ ಬೆಂಬಲಿಗರು ಒಪ್ಪಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಭಕ್ತರು ಚೀನಾ ಕುರಿತಾಗಿ ಧನಾತ್ಮಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಬದಲಾವಣೆಯು ಭಾರತದ ಆರ್ಥಿಕ ಒತ್ತಡ ಮತ್ತು ಚೀನಾ ನೀಡಿದ ಬೆಂಬಲದಿಂದ ಪ್ರೇರಿತವಾಗಿದೆ.
ಆದರೆ, ಭಾರತ ಮತ್ತು ಚೀನಾ ನಡುವೆ ಸಾಕಷ್ಟು ವಿವಾದಗಳಿವೆ. ಬ್ರಹ್ಮಪುತ್ರ ನದಿಗೆ ಟಿಬೆಟ್‌ನಲ್ಲಿ ಬೃಹತ್ ಅಣೆಕಟ್ಟನ್ನು ಚೀನಾ ನಿರ್ಮಿಸುತ್ತಿದೆ. ಲಡಾಖ್‌ನ ಭೂಪ್ರದೇಶವನ್ನು ಅತಿಕ್ರಮಿಸಿಕೊಂಡಿದೆ. ಅರುಣಾಚಲ ಪ್ರದೇಶದ ಅಪ್ಪರ್ ಸುಬನ್ಸಿರಿ ಜಿಲ್ಲೆಯಲ್ಲಿರುವ ತ್ಸಾರಿ ಚು ನದಿಯ ದಡದಲ್ಲಿ ಚೀನಾ ಸುಮಾರು 101 ಮನೆಗಳಿರುವ ಹಳ್ಳಿಯನ್ನು ನಿರ್ಮಿಸಿದೆ. ಈ ಯಾವುದೇ ವಿವಾದಗಳು ಉಭಯ ರಾಷ್ಟ್ರಗಳ ನಡುವೆ ಬಗೆಹರಿದಿಲ್ಲ.
ಹೀಗಿರುವಾಗ, ಭಾರತ-ಚೀನಾ ನಡುವಿನ ಪ್ರಸ್ತುತ ಬೆಂಬಲ-ಸಂಬಂಧವು ತಾತ್ಕಾಲಿಕವಾಗಿರಬಹುದು. ಅಥವಾ ದೀರ್ಘಕಾಲೀನವಾಗಿ ಚೀನಾದ ಸಹಕಾರವು ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲೂಬಹುದು. ಅದು ತೊಂದರೆಗೆ ಸಿಲುಕಿದಾಗ ಎರಡು ರಾಷ್ಟ್ರಗಳ ನಡುವೆ ನಡೆಯುವ ರಾಜಕೀಯ-ಆರ್ಥಿಕ ಒಪ್ಪಂದಗಳು ಹಾಗು ಒಡನಾಟದ ಮೇಲೆ ಅವಲಂಬಿಸಿರುತ್ತದೆ. ಆದರೆ, ಇದಾವುದನ್ನೂ ಲೆಕ್ಕಿಸದ, ಗಮನಿಸದ, ಕೆಲವೇ ತಿಂಗಳುಗಳ ಹಿಂದೆ ಟ್ರಂಪ್ ಭಜನೆ ಮಾಡುತ್ತಿದ್ದ ಮೋದಿ ಭಕ್ತರು, ಈಗ ಚೀನಾ ಭಜನೆಯಲ್ಲಿ ನಿರತರಾಗಿದ್ದಾರೆ. ಒಂದಂತೂ ಸ್ಪಷ್ಟ: ಭಕ್ತರಿಗೆ ವ್ಯಕ್ತಿ ಮುಖ್ಯವೇ ಹೊರತು ದೇಶ ಮುಖ್ಯವಲ್ಲ. ಮೋದಿಗೆ ಅವರ ಆಪ್ತ ಅದಾನಿ-ಅಂಬಾನಿ ಮುಖ್ಯವೇ ಹೊರತು ದೇಶವಲ್ಲ.