ಯುರೋಪಿನ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಫ್ರಾನ್ಸ್‌ನಲ್ಲಿ ಜೀವನ ವೆಚ್ಚದ ಏರಿಕೆ, ಸಾರ್ವಜನಿಕ ಸೇವೆಗಳ ವೈಫಲ್ಯ ಮತ್ತು ಸರ್ಕಾರದ ನೀತಿಗಳನ್ನು ವಿರೋಧಿಸಿ ವಿದ್ಯಾರ್ಥಿಗಳು, ಕಾರ್ಮಿಕ ಸಂಘಟನೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿವೆ.
ದೇಶಾದ್ಯಂತ ವ್ಯಾಪಿಸಿರುವ ಈ ಗಲಭೆಗಳನ್ನು ನಿಯಂತ್ರಿಸಲು ಹೋದ ಭದ್ರತಾ ಪಡೆಗಳ ಮೇಲೆ ಉದ್ರಿಕ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಒಂದೇ ದಿನದಲ್ಲಿ ಸುಮಾರು 2,400ಕ್ಕೂ ಹೆಚ್ಚು (ಖಚಿತ ಸಂಖ್ಯೆ 2,397) ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ಕೆಲವೆಡೆ ಅಂಗಡಿ-ಮುಂಗಟ್ಟುಗಳನ್ನು ಲೂಟಿ ಮಾಡಿರುವ ಘಟನೆಗಳೂ ವರದಿಯಾಗಿವೆ. ಪ್ಯಾರಿಸ್ ಸೇರಿದಂತೆ ಪ್ರಮುಖ ನಗರಗಳಲ್ಲಿ ವಾಣಿಜ್ಯ ಮಳಿಗೆಗಳ ಗಾಜುಗಳನ್ನು ಒಡೆದು ವಸ್ತುಗಳನ್ನು ದೋಚಲಾಗಿದೆ.
ಇದನ್ನೂ ಓದಿ: ಅಲ್ಬೇನಿಯಾದಲ್ಲೇಕೆ ಜನಾಕ್ರೋಶ ಭುಗಿಲೆದ್ದಿದೆ? ಸುಪ್ರೀಂ ಕೋರ್ಟ್, ಪಾರ್ಲಿಮೆಂಟನ್ನು ಸುಟ್ಟದ್ದು ಸರಿಯೇ?
ಸಾರ್ವಜನಿಕ ಕಟ್ಟಡಗಳು, ವಾಹನಗಳು ಮತ್ತು ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಗಲಭೆಯಿಂದ ಉದ್ಯಮಗಳಿಗೆ ಮತ್ತು ವ್ಯಾಪಾರಸ್ಥರಿಗೆ ನೂರಾರು ಮಿಲಿಯನ್ ಯುರೊಗಳಷ್ಟು (ಅಂದಾಜು ಐದು ಸಾವಿರ ಕೋಟಿ ರೂಪಾಯಿ) ಅಪಾರ ನಷ್ಟ ಉಂಟಾಗಿದೆ.
ಗಲಭೆಕೋರರನ್ನು ನಿಯಂತ್ರಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಹೋದ ಸುಮಾರು 997 ಪೊಲೀಸರು ಹಾಗೂ ಗೆಂಡಾರ್ಮ್ (ಸೇನಾ ಪೊಲೀಸ್) ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಇವರಲ್ಲಿ 7 ಮಂದಿಯ ಸ್ಥಿತಿ ಗಂಭೀರವಾಗಿದೆ. ಅಲ್ಲದೆ, ಪೂರ್ವ ಫ್ರಾನ್ಸ್‌ನಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ 17 ವರ್ಷದ ಯುವತಿಯೊಬ್ಬರು ಕಣ್ಣನ್ನು ಕಳೆದುಕೊಂಡಿದ್ದರೆ, ಮತ್ತೊಬ್ಬ ಯುವಕ ತನ್ನ ಕೈಯನ್ನು ಕಳೆದುಕೊಂಡಿದ್ದಾನೆ.
ಪರಿಸ್ಥಿತಿ ಕೈಮೀರುತ್ತಿರುವುದರಿಂದ ಕಠಿಣ ಕ್ರಮಗಳಿಗೆ ಮುಂದಾಗಿರುವ ಫ್ರೆಂಚ್ ಸರ್ಕಾರವು, ಹಿಂಸಾಚಾರ ಪೀಡಿತ ಪ್ರಮುಖ ನಗರಗಳಲ್ಲಿ ಕರ್ಫ್ಯೂ ಜಾರಿಗೊಳಿಸಿದೆ. ಗಲಭೆ ನಡೆದ ಗಣರಾಜ್ಯ ಚೌಕ ಮತ್ತು ಪ್ರಮುಖ ವ್ಯಾಪಾರ ಕೇಂದ್ರಗಳ ಸುತ್ತಮುತ್ತ ರಾತ್ರಿ ವೇಳೆ ನಿರ್ಬಂಧ, ಸಂಚಾರ ನಿಷೇಧ ಹೇರಲಾಗಿದೆ. ಅಪ್ರಾಪ್ತ ವಯಸ್ಕರು ರಾತ್ರಿ ವೇಳೆಯಲ್ಲಿ ಒಂಟಿಯಾಗಿ ತಿರುಗಾಡುವುದರ ಮೇಲೆ ನಿಷೇಧ ಹೇರಲಾಗಿದ್ದು, ಕರ್ಫ್ಯೂ ಜಾರಿಯಲ್ಲಿದೆ.
ದೇಶದಲ್ಲಿ ಭುಗಿಲೆದ್ದಿರುವ ತೀವ್ರ ಅಶಾಂತಿಯ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳು ಮತ್ತು ಉನ್ನತ ಭದ್ರತಾ ಅಧಿಕಾರಿಗಳು ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡುವ ಸಾಧ್ಯತೆಯನ್ನೂ ತಳ್ಳಿಹಾಕಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಮತ್ತೊಂದೆಡೆ, ನೆರೆಹೊರೆಯ ಯುರೋಪಿಯನ್ ರಾಷ್ಟ್ರಗಳು ಫ್ರಾನ್ಸ್‌ಗೆ ಪ್ರಯಾಣಿಸುವ ತಮ್ಮ ನಾಗರಿಕರಿಗೆ ಎಚ್ಚರಿಕೆ ನೀಡಿ, ಪ್ರತಿಭಟನಾ ಸ್ಥಳಗಳಿಂದ ದೂರವಿರುವಂತೆ ಪ್ರಯಾಣ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಿವೆ.





