ಅಲ್ಬೇನಿಯಾ ರಾಜಧಾನಿ ತಿರಾನಾದ ಬೀದಿಗಳಿಂದ ಜಾಗತಿಕ ರಾಜಧಾನಿಗಳವರೆಗೆ… ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಶಿಕ್ಷಣದ ಬಿಕ್ಕಟ್ಟಿನ ವಿರುದ್ಧ ಯುವ ಸಮೂಹ ಬೀದಿಗಿಳಿದಿದೆ. ಪ್ರಧಾನಿ ಎಡಿ ರಾಮಾ ಸರ್ಕಾರದ ವಿರುದ್ಧ ಅಲ್ಬೇನಿಯಾದಲ್ಲಿ ಭುಗಿಲೆದ್ದ ಜನಾಕ್ರೋಶ ರಕ್ತಸಿಕ್ತವಾಗುತ್ತಿದೆ. ಸುಪ್ರೀಂ ಕೋರ್ಟ್ ಮತ್ತು ಪಾರ್ಲಿಮೆಂಟ್ ಸುಟ್ಟುಹೋದಾಗ, ಅಲ್ಲಿ ಪ್ರಜಾಪ್ರಭುತ್ವ ಸತ್ತಿತೇ ಅಥವಾ ಹೊಸದೊಂದು ಕ್ರಾಂತಿಯ ಹುಟ್ಟಾಯಿತೇ?
ಅಲ್ಬೇನಿಯಾದ ರಾಜಧಾನಿ ತಿರಾನಾದಲ್ಲಿ ಭುಗಿಲೆದ್ದಿರುವ ತೀವ್ರ ಜನಾಕ್ರೋಶ ಮತ್ತು ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಗಳು ಇಡೀ ಯುರೋಪ್ ಹಾಗೂ ಜಾಗತಿಕವಾಗಿ ಗಮನ ಸೆಳೆದಿವೆ. ಆರಂಭದಲ್ಲಿ ಸಾಧಾರಣ ಬೇಡಿಕೆಗಳೊಂದಿಗೆ ಆರಂಭವಾದ ಈ ಚಳವಳಿಯು ದಿನ ಕಳೆದಂತೆ ಉಗ್ರ ಸ್ವರೂಪ ಪಡೆದುಕೊಂಡು, ದೇಶದ ಆಡಳಿತ ವ್ಯವಸ್ಥೆಯ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಪ್ರಧಾನಿ ಎಡಿ ರಾಮಾ (Edi Rama) ಅವರ ಸರ್ಕಾರದ ನೀತಿಗಳ ವಿರುದ್ಧ ಭುಗಿಲೆದ್ದಿರುವ ಈ ಅಸಮಾಧಾನವು ಕೇವಲ ಅಲ್ಬೇನಿಯಾಕ್ಕೆ ಮಾತ್ರ ಸೀಮಿತವಾಗಿಲ್ಲದೆ, ವಿಶ್ವದ ಹಲವು ರಾಷ್ಟ್ರಗಳಲ್ಲಿ ಯುವ ಸಮೂಹ ಧ್ವನಿಯೆತ್ತುತ್ತಿರುವ ಬೃಹತ್ ಅಲೆಯ ಮುಂದುವರಿದ ಭಾಗವಾಗಿದೆ.
ಅಲ್ಬೇನಿಯಾದಲ್ಲಿ ಈ ಅನಿರೀಕ್ಷಿತ ಮತ್ತು ತೀವ್ರ ಸ್ವರೂಪದ ಜನಾಕ್ರೋಶ ಭುಗಿಲೆದ್ದಿರುವುದರ ಹಿಂದೆ ಹಲವು ಗಂಭೀರ ಕಾರಣಗಳಿವೆ. ಮೂಲತಃ ಬೇಸಿಗೆಯ ಅವಧಿಯಲ್ಲಿ ಸಾಝಾನ್ ದ್ವೀಪದಲ್ಲಿ ವಿವಾದಾತ್ಮಕ ಐಷಾರಾಮಿ ರೆಸಾರ್ಟ್ ನಿರ್ಮಿಸುವ ಸರ್ಕಾರದ ಯೋಜನೆಗಳ ವಿರುದ್ಧ ಪರಿಸರವಾದಿಗಳು ಮತ್ತು ಸ್ಥಳೀಯರಿಂದ ಸಣ್ಣ ಮಟ್ಟದ ವಿರೋಧ ವ್ಯಕ್ತವಾಗಿತ್ತು. ಆದರೆ, ದಿನಗಳು ಕಳೆದಂತೆ ದೇಶದಲ್ಲಿ ವಿಪರೀತ ಏರಿಕೆಯಾದ ಜೀವನ ವೆಚ್ಚ, ಹಣದುಬ್ಬರ, ಉದ್ಯೋಗದ ಕೊರತೆ ಮತ್ತು ಕಳಪೆ ಮಟ್ಟದ ಉನ್ನತ ಶಿಕ್ಷಣ ವ್ಯವಸ್ಥೆಯು ಜನಸಾಮಾನ್ಯರನ್ನು ಬೀದಿಗಿಳಿಯುವಂತೆ ಮಾಡಿತು.
ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ – ಹೆದರಿದ ಮೋದಿ: ‘ಯುವಜನರ ಮೇಲೆ ದಾಳಿ ನಡೆಸಲು BJP-RSS ಪುಂಡರಿಗೆ ದೆಹಲಿ ಪೊಲೀಸರಿಂದಲೇ ಕುಮ್ಮಕ್ಕು’
ವಿಶೇಷವಾಗಿ ವಿದ್ಯಾರ್ಥಿಗಳು ಈ ಪ್ರತಿಭಟನೆಯ ಮುಂಚೂಣಿಗೆ ಬಂದ ನಂತರ ಚಳವಳಿಯ ಸ್ವರೂಪವೇ ಬದಲಾಯಿತು. ಅಲ್ಬೇನಿಯಾದಲ್ಲಿ ಪ್ರಧಾನಿ ಎಡಿ ರಾಮಾ ಅವರ ಸರ್ವಾಧಿಕಾರಿ ಧೋರಣೆ, ವ್ಯಾಪಕ ಭ್ರಷ್ಟಾಚಾರ ಮತ್ತು ಸರ್ಕಾರದ ದೃಢ ನಿರ್ಧಾರಗಳು ಯುವಜನತೆಯ ಭವಿಷ್ಯವನ್ನು ಕತ್ತಲೆಗೆ ನೂಕುತ್ತಿವೆ ಎಂಬ ಆಕ್ರೋಶ ಹೆಚ್ಚಾಯಿತು. ಶಾಂತಿಯುತವಾಗಿದ್ದ ಪ್ರತಿಭಟನೆಗಳು ಕ್ರಮೇಣ ಹಿಂಸಾರೂಪಕ್ಕೆ ತಿರುಗಿ, ಆಡಳಿತಾರೂಢ ಸೋಷಿಯಲಿಸ್ಟ್ ಪಕ್ಷದ ಕಚೇರಿಗಳು, ಸರ್ಕಾರದ ಪ್ರಮುಖ ಕಟ್ಟಡಗಳು ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳ ಮೇಲೆ ದಾಳಿಗಳು ನಡೆದವು. ತಿರಾನಾ ಸೇರಿದಂತೆ ವಿವಿಧ ನಗರಗಳಲ್ಲಿ ಪ್ರತಿಭಟನಾಕಾರರು ರಸ್ತೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರೆ, ಪೊಲೀಸರು ಗುಂಪನ್ನು ಚದುರಿಸಲು ಅಶ್ರುವಾಯು, ಜಲಫಿರಂಗಿ ಮತ್ತು ಸ್ಟನ್ ಗ್ರೆನೇಡ್ಗಳನ್ನು ಬಳಸಿದರು. ಈ ಸಂಘರ್ಷಗಳಲ್ಲಿ ನೂರಾರು ಮಂದಿ ಗಾಯಗೊಂಡಿದ್ದು, ದೊಡ್ಡ ಸಂಖ್ಯೆಯಲ್ಲಿ ಯುವಕರನ್ನು ಬಂಧಿಸಲಾಗಿದೆ.
ಸುಪ್ರೀಂ ಕೋರ್ಟ್ ಮತ್ತು ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿ ಸುಟ್ಟದ್ದು ಸರಿಯೇ?
ಇನ್ನು ಪ್ರತಿಭಟನೆಯ ತೀವ್ರತೆಯು ಹೆಚ್ಚಾದಂತೆ “ಸುಪ್ರೀಂ ಕೋರ್ಟ್ ಮತ್ತು ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿ ಸುಟ್ಟದ್ದು ಸರಿಯೇ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರದ ಕಠಿಣ ಧೋರಣೆ ಮತ್ತು ಭ್ರಷ್ಟಾಚಾರದ ವಿರುದ್ಧ ಬೇಸತ್ತ ಕೆಲ ಉದ್ರೇಕಿತ ಯುವ ಗುಂಪುಗಳು, ಮುಖವಾಡ ಧರಿಸಿದ ಪ್ರತಿಭಟನಾಕಾರರು ಹಿಂಸಾಚಾರದ ಹಾದಿ ಹಿಡಿದು ಸಾರ್ವಜನಿಕ ಹಾಗೂ ಸರ್ಕಾರಿ ಸಂಸ್ಥೆಗಳ ಮೇಲೆ ದಾಳಿ ನಡೆಸಿರುವುದು ನಿಜ. ಪ್ರಧಾನಿ ಎಡಿ ರಾಮಾ ಮತ್ತು ಆಂತರಿಕ ಸಚಿವಾಲಯವು ಇದನ್ನು ತೀವ್ರವಾಗಿ ಖಂಡಿಸಿದ್ದು, ವಿರೋಧ ಪಕ್ಷಗಳು ಮತ್ತು ಕೆಲವು “ಬಾಹ್ಯ ವಿದೇಶಿ ಶಕ್ತಿಗಳು” ವಿದ್ಯಾರ್ಥಿಗಳ ಮುಗ್ದ ಅಸಮಾಧಾನವನ್ನು ದುರುಪಯೋಗಪಡಿಸಿಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿವೆ.
ಆದರೆ, ಅಲ್ಬೇನಿಯಾದ ಪ್ರತಿಭಟನಾ ನಿರತ ವಿದ್ಯಾರ್ಥಿ ಸಂಘಟನೆಗಳು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳು, “ಶಾಂತಿಯುತ ಮಾರ್ಗದಲ್ಲಿ ಮನವಿ ಮಾಡಿದಾಗ ಸರ್ಕಾರ ನಮ್ಮ ಧ್ವನಿಯನ್ನು ಅಲಕ್ಷಿಸಿತು. ಇದು ದಮನಕಾರಿ ನೀತಿ ಮತ್ತು ವ್ಯವಸ್ಥೆಯ ವೈಫಲ್ಯದ ವಿರುದ್ಧದ ಸಹಜ ಆಕ್ರೋಶದ ಸ್ಫೋಟವಷ್ಟೇ” ಎಂದು ಸಮರ್ಥಿಸಿಕೊಂಡಿವೆ. ಪ್ರಧಾನಿ ರಾಮಾ ಮಾತ್ರ ತಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟುಹಿಡಿದಿದ್ದು, ಈ ಬಿಕ್ಕಟ್ಟು ದೇಶದ ಯುರೋಪಿಯನ್ ಒಕ್ಕೂಟದ (EU) ಪ್ರವೇಶದ ಕನಸಿಗೆ ಹಿನ್ನಡೆಯುಂಟು ಮಾಡಲಿದೆ ಎಂದು ಎಚ್ಚರಿಸಿದ್ದಾರೆ.
ಅಲ್ಬೇನಿಯಾದ ಈ ವಿದ್ಯಮಾನವು ಪ್ರತ್ಯೇಕವಾದದ್ದಲ್ಲ. ಜಾಗತಿಕ ಮಟ್ಟದಲ್ಲಿ ಗಮನಿಸಿದರೆ, ಇದೇ ರೀತಿಯ ಆರ್ಥಿಕ ಬಿಕ್ಕಟ್ಟು ಮತ್ತು ಯುವಜನತೆಯ ಆಕ್ರೋಶವು ಕೇವಲ ಅಲ್ಬೇನಿಯಾ ಮಾತ್ರವಲ್ಲದೆ ಜಗತ್ತಿನಾದ್ಯಂತ ಅಲೆಅಲೆಯಾಗಿ ಅಪ್ಪರಿಸಿದೆ. ಅಲ್ಬೇನಿಯಾ, ಫ್ರಾನ್ಸ್, ಇಟಲಿ, ಸ್ಪೇನ್, ಬೆಲ್ಜಿಯಂ, ಟ್ಯುನಿಷಿಯಾ, ಭಾರತ, ಅರ್ಜೆಂಟೀನಾ, ಪೋರ್ಚುಗಲ್, ಚಿಲಿ, ಮೆಕ್ಸಿಕೋ, ಈಕ್ವೆಡಾರ್ ಮತ್ತು ಕೊಸೊವೊ ಮುಂತಾದ ದೇಶಗಳಲ್ಲಿ ಭುಗಿಲೆದ್ದಿರುವ ಪ್ರತಿಭಟನೆಗಳ ಮೂಲ ಸ್ವರೂಪ ಬಹುತೇಕ ಒಂದೇ ಆಗಿದೆ. ಅಸಹನೀಯ ಬೆಲೆ ಏರಿಕೆ, ಕೈಗೆಟುಕದ ದುಬಾರಿ ಶಿಕ್ಷಣ, ವಸತಿ ಸಮಸ್ಯೆ, ನಿರುದ್ಯೋಗ ಮತ್ತು ಜೀವನ ನಿರ್ವಹಣೆಯ ಮುಗ್ಗಟ್ಟು ವಿಶ್ವದಾದ್ಯಂತ ಯುವ ಸಮೂಹವನ್ನು ರಸ್ತೆಗಿಳಿಯುವಂತೆ ಮಾಡಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಗ್ಯಾನೇಶ್ ರಕ್ಷಣೆಗಾಗಿ ಯುವತಿಯರನ್ನು ಪೀಡಿಸುವ ಕೀಚಕರಾಗುತ್ತಿದ್ದಾರೆಯೇ ದೆಹಲಿ ಪೊಲೀಸರು?
ಉದಾಹರಣೆಗೆ, ಫ್ರಾನ್ಸ್ ಮತ್ತು ಬೆಲ್ಜಿಯಂನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು, ಕಾರ್ಮಿಕರು ಸರ್ಕಾರದ ಕಠಿಣ ಆರ್ಥಿಕ ನೀತಿಗಳು ಹಾಗೂ ಭತ್ಯೆಗಳ ಕಡಿತದ ವಿರುದ್ಧ ಬೃಹತ್ ಮೆರವಣಿಗೆಗಳನ್ನು ನಡೆಸಿದ್ದಾರೆ. ಅದೇ ರೀತಿ ಇಟಲಿ ಮತ್ತು ಪೋರ್ಚುಗಲ್ನಲ್ಲಿ ವಸತಿ ದರ ಏರಿಕೆ ಹಾಗೂ ಹಣದುಬ್ಬರವನ್ನು ಖಂಡಿಸಿ ಯುವಕರು ಪ್ರತಿಭಟನೆ ನಡೆಸುತ್ತಿದ್ದರೆ, ಲ್ಯಾಟಿನ್ ಅಮೆರಿಕಾದ ಅರ್ಜೆಂಟೀನಾ, ಚಿಲಿ, ಮೆಕ್ಸಿಕೋ ಹಾಗೂ ಈಕ್ವೆಡಾರ್ ದೇಶಗಳಲ್ಲಿ ಸರ್ಕಾರದ ಆರ್ಥಿಕ ಸುಧಾರಣೆಗಳ ವೈಫಲ್ಯದ ವಿರುದ್ಧ ವಿದ್ಯಾರ್ಥಿ ಶಕ್ತಿ ದೊಡ್ಡ ಮಟ್ಟದಲ್ಲಿ ಸಂಘಟಿತವಾಗಿದೆ. ಆಫ್ರಿಕಾದ ಟ್ಯುನಿಷಿಯಾ ಮತ್ತು ಬಾಲ್ಕನ್ ಪ್ರದೇಶದ ಕೊಸೊವೊದಲ್ಲೂ ಇದೇ ರೀತಿಯ ಅಶಾಶ್ವತತೆಯ ವಾತಾವರಣ ನಿರ್ಮಾಣವಾಗಿದೆ. ಇವೆಲ್ಲ ರಾಷ್ಟ್ರಗಳ ಪೈಕಿ ಭಾರತದಲ್ಲಿ ಅತಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಶಾಂತಿಯಾಗಿ ಪ್ರತಿಭಟಿಸುವವರ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಲೇ ಇದೆ. ಹಲವು ಮಂದಿಯನ್ನು ಬಂಧಿಸಿ ಜೈಲಿಗಟ್ಟುತ್ತಿದೆ. ಒಂದು ರೀತಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಹೀಗೆ ಜಾಗತಿಕವಾಗಿ ಯುವಕರು ಒಂದೇ ರೀತಿಯ ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವುದನ್ನು ಇದು ಸ್ಪಷ್ಟಪಡಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ತಿರಾನಾದ ಬೀದಿಗಳಲ್ಲಿ ಮೊಳಗುತ್ತಿರುವ ಅಲ್ಬೇನಿಯನ್ ವಿದ್ಯಾರ್ಥಿಗಳ ಆಕ್ರೋಶದ ದ್ವನಿಯು ಕೇವಲ ಸ್ಥಳೀಯ ಸರ್ಕಾರದ ಬದಲಾವಣೆಗಷ್ಟೇ ಅಲ್ಲದೆ, ಜಾಗತಿಕವಾಗಿ ಮರುಕಳಿಸುತ್ತಿರುವ ಆರ್ಥಿಕ ಅಸಮಾನತೆ ಮತ್ತು ಯುವಜನತೆಯ ಅಪೇಕ್ಷೆಗಳ ಪ್ರತೀಕವಾಗಿದೆ. ಪ್ರಧಾನಿ ಎಡಿ ರಾಮಾ ಅವರು ವಿರೋಧ ಪಕ್ಷಗಳ ಮೇಲೆ ಅಥವಾ ಬಾಹ್ಯ ಶಕ್ತಿಗಳ ಮೇಲೆ ಗೂಬೆ ಕೂರಿಸುವುದಕ್ಕಿಂತ ಜನರ ಮೂಲಭೂತ ಬೇಡಿಕೆಗಳಿಗೆ ಸ್ಪಂದಿಸುವುದು ಅನಿವಾರ್ಯವಾಗಿದೆ.
ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿ ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾರದು ಎಂಬುದು ಎಷ್ಟೇ ನಿಜವೋ, ಅಷ್ಟೇ ಸತ್ಯವಾಗಿ ಯುವ ಸಮೂಹದ ಭವಿಷ್ಯದ ಅನಿಶ್ಚಿತತೆಯನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಲಿದೆ. ಭಾರತ ಸೇರಿದಂತೆ ಜಗತ್ತಿನ ನಾನಾ ಮೂಲೆಗಳಲ್ಲಿ ಮೊಳಗುತ್ತಿರುವ ಈ ವಿದ್ಯಾರ್ಥಿ ಚಳವಳಿಗಳು ಆಳುವ ಸರ್ಕಾರಗಳಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಮುಂಬರುವ ದಿನಗಳಲ್ಲಿ ಜಾಗತಿಕ ರಾಜಕಾರಣದ ದಿಕ್ಕನ್ನು ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.




