ಇರಾನ್ ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ ಮಾಡಿದ್ದ ಬೆನ್ನಲ್ಲೇ, ಇರಾನ್ ಪ್ರತಿದಾಳಿ ಮಾಡಿದೆ. ಕತಾರ್‌ನ ದೋಹಾದಲ್ಲಿರುವ ಅಮೆರಿಕದ ಅಲ್ ಉದೈದ್ ವಾಯುನೆಲೆ ಮೇಲೆ ಇರಾನ್ ಆರು ಕ್ಷಿಪಣಿಗಳನ್ನು ಉಡಾಯಿಸಿದೆ. ಇರಾನ್ ದಾಳಿ ಮಾಡಿರುವ ಅಲ್ ಉದೈದ್ ನೆಲೆಯಿಂದಲೇ ಇರಾನ್ ಮೇಲೆ ಅಮೆರಿಕ ವೈಮಾನಿಕ ದಾಳಿ ಮಾಡಿತ್ತು ಎಂದು ಇರಾನ್ ಆರೋಪಿಸಿದೆ. ದಾಳಿಯ ಬೆನ್ನಲ್ಲೇ ಕತಾರ್ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದೆ.
ಶನಿವಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದಂತೆ ಇರಾನ್‌ನ ಪರಮಾಣು ಸೌಲಭ್ಯಗಳಾದ ಫೋರ್ಡೋ, ನಟಾಂಜ್, ಮತ್ತು ಎಸ್ಫಾಹಾನ್ ಮೇಲೆ ಅಮೆರಿಕ ಸೇನೆಯು ದಾಳಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಅಲ್ ಉದೈದ್ ಅಮೆರಿಕ ವಾಯು ನೆಲೆ ಮೇಲೆ ದಾಳಿ ಮಾಡಿರುವುದಾಗಿ ಇರಾನ್ ದೃಢಪಡಿಸಿದೆ.
ರಾಯಿಟರ್ಸ್ ವರದಿಯ ಪ್ರಕಾರ, ಕ್ಷಿಪಣಿಗಳನ್ನು ‘ಆಪರೇಷನ್ ಬಶಾರತ್ ಅಲ್-ಫತ್’ ಅಡಿಯಲ್ಲಿ ಉಡಾಯಿಸಲಾಗಿದೆ. ಕತಾರ್‌ನ ದೋಹಾದ ಮೇಲೆ ಕ್ಷಿಪಣಿ ದಾಳಿ ನಡೆಯುತ್ತಿರುವ ದೃಶ್ಯಗಳುಳ್ಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಕತಾರ್‌ನಲ್ಲಿ ಅಲ್ ಉದೇದ್ ವಾಯುನೆಲೆಯು ಮಧ್ಯ ಪ್ರಚ್ಯದಲ್ಲಿ ಯುಎಸ್ ಸೇನಾ ಕಾರ್ಯಾಚರಣೆಗೆ ಪ್ರಮುಖ ಕೇಂದ್ರವಾಗಿದೆ. ಇದರ ಜೊತೆಗೆ ಮಧ್ಯಪ್ರಾಚ್ಯದ ಅತಿದೊಡ್ಡ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಕತಾರ್ ಏರ್‌ವೇಸ್‌ಗೂ ಕೇಂದ್ರವಾಗಿದೆ.
ತನ್ನ ಪ್ರದೇಶದ ಮೇಲೆ ಇರಾನ್ ಮಾಡಿರುವ ದಾಳಿಯನ್ನು ಕತಾರ್ ಖಂಡಿಸಿದೆ. ಈದಾಳಿಯು ಸಹೋದರ ರಾಷ್ಟ್ರ ಕತಾರ್ ಮೇಲಿನ ದಾಳಿಯಲ್ಲ. ಇದು ಅಮೆರಿಕ ವಿರುದ್ಧದ ಮತ್ತು ಅಮೆರಿಕ ವಾಯುನೆಲೆಯ ಮೇಲಿನ ದಾಳಿ ಎಂದು ಇರಾನ್ ಸ್ಪಷ್ಟಪಡಿಸಿದೆ.
ವಾಯುಪ್ರದೇಶ ಮುಚ್ಚುವಿಕೆಯು ಮುಂಜಾಗರೂಕತೆ ಮತ್ತು ತಾತ್ಕಾಲಿಕ ಕ್ರಮವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.