12 ವರ್ಷಗಳ ಹಿಂದೆ ಕಪ್ಪು ಮುಖದ ಚಿತ್ರ ಹಂಚಿಕೊಂಡು ವರ್ಣಭೇದ ಧೋರಣೆ ಮೆರೆದಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡದ ಹಾಲಿ ನಾಯಕಿ ಹೀದರ್ ನೈಟ್ ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) 1,000 ಪೌಂಡ್ (11 ಲಕ್ಷ ರೂ.) ದಂಡ ವಿಧಿಸಿದೆ. 2012ರಲ್ಲಿ ತಾವು ಎಸಗಿದ ತಪ್ಪನ್ನು ಅವರು ಒಪ್ಪಿಕೊಂಡಿದ್ದು, ಅವರಿಗೆ ದಂಡ ವಿಧಿಸಲಾಗಿದೆ.
2012ರಲ್ಲಿ ಇಂಗ್ಲೆಂಡ್‌ನ ಕೆಂಟ್‌ನಲ್ಲಿರುವ ಕ್ರಿಕೆಟ್ ಕ್ಲಬ್‌ನಲ್ಲಿ ನಡೆದಿದ್ದ ಫ್ಯಾನ್ಸಿ ಡ್ರೆಸ್ ಪಾರ್ಟಿಯಲ್ಲಿ ಹೀದರ್ ನೈಟ್ ಭಾಗವಹಿಸಿದ್ದರು. ಅಲ್ಲಿ, ಅವರು ತಮ್ಮ ಮುಖವನ್ನು ಕಪ್ಪಾಗಿ ‘ಮೇಕಪ್’ ಮಾಡಿಕೊಂಡು, ಕಾಣಿಸಿಕೊಂಡಿದ್ದರು. ಅಲ್ಲದೆ, ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಅಪಹಾಸ್ಯ ಮಾಡಿದ್ದರು.
ಅವರ ಹಂಚಿಕೊಂಡಿದ್ದ ಚಿತ್ರಗಳು ಜನಾಂಗೀಯತೆ, ವರ್ಣ ತಾರತಮ್ಯವನ್ನು ಉತ್ತೇಜಿಸುತ್ತವೆ. ಅಲ್ಲದೆ, ಒಂದು ಸಮುದಾಯದ ವಿರುದ್ಧ ಆಕ್ರಮಣಿಕಾರಿಯಾಗಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀದರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಅವರು ಕಪ್ಪು ಮುಖದ ಚಿತ್ರವನ್ನು ಹಂಚಿಕೊಂಡಿದ್ದದ್ದು, ಆಕ್ರಮಣಕಾರಿ ಎಂದು ಪರಿಗಣಿಸಿದ್ದ ಇಸಿಬಿ, “ಹೀದರ್ ಧೋರಣೆ ಇಸಿಬಿ ನಿರ್ದೇಶನ 3.3ಅನ್ನು ಉಲ್ಲಂಘಿಸಿದೆ. ಮಾತ್ರವಲ್ಲದೆ, ಅವರ ಧೋರಣೆಯು ಕ್ರಿಕೆಟ್‌ನ ಹಿತಾಸಕ್ತಿಗಳಿಗೆ ಪೂರ್ವಾಗ್ರಹ ಪೀಡಿತ, ಕ್ರಿಕೆಟ್ ಆಟ ಮತ್ತು ಆಟಗಾರರಿಗೆ ಅಪಖ್ಯಾತಿಯನ್ನು ತರುವಂತಹ ಕೃತ್ಯವಾಗಿದೆ” ಎಂದು ಹೇಳಿದೆ. 1,000 ಪೌಂಡ್ ದಂಡವಿಧಿಸಿದ್ದು, ಹೀದರ್‌ಗೆ ಎಚ್ಚರಿಕೆಯನ್ನೂ ನೀಡಿದೆ.
ತಮ್ಮ ತಪ್ಪಿನ ಬಗ್ಗೆ ಒಪ್ಪಿಕೊಂಡಿರುವ ಹೀದರ್, “2012ರಲ್ಲಿ ನಾನು ಎಸಗಿದ ತಪ್ಪಿಗೆ ನಿಜವಾಗಿಯೂ ವಿಷಾದಿಸುತ್ತೇನೆ. ನನ್ನಿಂದ ತಪ್ಪಾಗಿದೆ. ಆದರೆ, ಘಟನೆ ನಡೆದಾಗ ನನಗೆ ಯಾವುದೇ ಜನಾಂಗೀಯ ಅಥವಾ ತಾರತಮ್ಯ ಧೋರಣೆ ಮೆರೆಯುವ ಉದ್ದೇಶವಿರಲಿಲ್ಲ. ಆಗ ನಾನು 21 ವರ್ಷ ವಯಸ್ಸಿನವಳಾಗಿದ್ದೆ. ಈ ಬಗ್ಗೆ ನನಗೆ ಹೆಚ್ಚಿನ ಅರಿವು ಇರಲಿಲ್ಲ. ತಪ್ಪಿಗಾಗಿ ವಿಷಾಧಿಸುತ್ತೇನೆ. ನಾನು ಅಂದು ಮಾಡಿದ ತಪ್ಪನ್ನು ಈಗ ಸರಿಪಡಿಸಲು ಸಾಧ್ಯವಿಲ್ಲ.ಆದರೆ, ಇಂತಹ ಘಟನೆಗಳ ವಿರುದ್ಧ ಧ್ವನಿಯೆತ್ತಲು ನಾನು ಬದ್ಧನಾಗಿದ್ದೇನೆ” ಎಂದು ತಿಳಿಸಿದ್ದಾರೆ.
ಹೀದರ್ ಅವರು 2016ರಿಂದ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕಿಯಾಗಿದ್ದಾರೆ.