ಪ್ಯಾಲೆಸ್ತೀನ್ ಪರ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಭಾರತೀಯ ವಿದ್ಯಾರ್ಥಿನಿ ರಂಜನಿ ಶ್ರೀನಿವಾಸನ್ ಅವರ ವೀಸಾವನ್ನು ಅಮೆರಿಕ ರದ್ದುಗೊಳಿಸಿದೆ. ಇದಾದ ಕೆಲವು ದಿನಗಳ ನಂತರ, ರಂಜನಿ ಅವರು ಅಮೆರಿಕದಿಂದ ಸ್ವಯಂ ಗಡಿಪಾರು ಮಾಡಿಕೊಂಡಿದ್ದಾರೆ. ಭಾರತಕ್ಕೆ ಮರಳಿದ್ದಾರೆ.
ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ರಂಜನಿ ಶ್ರೀನಿವಾಸನ್ ಅವರು ಪ್ಯಾಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ‘ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸಿದ್ದಾರೆ’ ಎಂದು ಆರೋಪಿಸಿ, ಅವರ ವೀಸಾವನ್ನು ಮಾರ್ಚ್ 5ರಂದು ಅಮೆರಿಕ ರದ್ದುಗೊಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ್ದ ಯುಎಸ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ, “ರಂಜನಿ ಶ್ರೀನಿವಾಸನ್ ಅವರು ಭಯೋತ್ಪಾದಕ ಸಂಘಟನೆಯಾದ ‘ಹಮಾಸ್’ಅನ್ನು ಬೆಂಬಲಿಸುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. 2025ರ ಮಾರ್ಚ್ 5ರಂದು, ವಿದೇಶಾಂಗ ಇಲಾಖೆ ಅವರ ವೀಸಾವನ್ನು ರದ್ದುಗೊಳಿಸಿದೆ. ರಂಜನಿ ಅವರು ಮಾರ್ಚ್ 11ರಂದು ಸ್ವಯಂ ಗಡಿಪಾರಿಗಾಗಿ ‘ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್’ (CPB) ಏಜೆನ್ಸಿಯ ಅಪ್ಲಿಕೇಶನ್ಅನ್ನು ಬಳಸುತ್ತಿರುವ ವೀಡಿಯೊ ತುಣುಕನ್ನು ಗೃಹ ಭದ್ರತಾ ಇಲಾಖೆ ವಶಕ್ಕೆ ಪಡೆದಿದೆ” ಎಂದು ಹೇಳಿದೆ.
“ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವಾಸಿಸಲು ಮತ್ತು ಅಧ್ಯಯನ ಮಾಡಲು ವೀಸಾ ಪಡೆಯುವುದು, ಅಮೆರಿಕ ಒದಗಿಸುವ ಒಂದು ಸವಲತ್ತು. ನೀವು ಹಿಂಸೆ ಮತ್ತು ಭಯೋತ್ಪಾದನೆಯನ್ನು ಪ್ರತಿಪಾದಿಸುವಾಗ, ಆ ಸವಲತ್ತನ್ನು ರದ್ದುಗೊಳಿಸಲಾಗುತ್ತದೆ. ನೀವು ಈ ದೇಶದಲ್ಲಿ ಇರಬಾರದು. ಕೊಲಂಬಿಯಾ ವಿಶ್ವವಿದ್ಯಾಲಯದ ಭಯೋತ್ಪಾದಕ ಸಹಾನುಭೂತಿ ಹೊಂದಿದ್ದವರಲ್ಲಿ ಒಬ್ಬರು ಸ್ವಯಂ ಗಡಿಪಾರು ಮಾಡಿಕೊಳ್ಳಲು CBP ಅಪ್ಲಿಕೇಶನ್ಅನ್ನು ಬಳಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ” ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಕ್ರಿಸ್ಟಿ ನೋಯೆಮ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ರಂಜನಿ ಅವರು ವಿಮಾನ ನಿಲ್ದಾಣದಲ್ಲಿ ನಡೆದು ಹೋಗುತ್ತಿರುವ ವಿಡಿಯೋವನ್ನೂ ಅವರು ಹಂಚಿಕೊಂಡಿದ್ದಾರೆ.
ರಂಜನಿ ಶ್ರೀನಿವಾಸನ್ ಯಾರು?
ಕೊಲಂಬಿಯಾ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ರಂಜನಿ ಶ್ರೀನಿವಾಸನ್ ಅವರು ತಮ್ಮನ್ನು ಲಿಂಗ-ತಟಸ್ಥ (ಜೆಂಡರ್ ನ್ಯೂಟ್ರಲ್) ‘ಅವರು’ ಎಂದು ಕರೆಯಬಹುದಾದ ಸರ್ವನಾಮದೊಂದಿಗೆ ಗುರುತಿಸಿಕೊಂಡಿದ್ದಾರೆ.
ರಂಜನಿ ಅವರು ಕೊಲಂಬಿಯಾ ವಿಶ್ವವಿದ್ಯಾಲಯದ ‘ಗ್ರಾಜುಯೇಟ್ ಸ್ಕೂಲ್ ಆಫ್ ಆರ್ಕಿಟೆಕ್ಚರ್, ಪ್ಲಾನಿಂಗ್ ಅಂಡ್ ಪ್ರಿಸರ್ವೇಶನ್’ (GSAPP) ವಿಭಾಗದಲ್ಲಿ ಡಾಕ್ಟರೇಟ್ ವಿದ್ಯಾರ್ಥಿನಿಯಾಗಿದ್ದಾರೆ. ವಿಶ್ವವಿದ್ಯಾಲಯದ ವೆಬ್‌ಸೈಟ್ ಪ್ರಕಾರ, ರಂಜನಿ ಅವರು ‘ಭಾರತದ ಶಾಸನಬದ್ದ ನಗರ ಪ್ರದೇಶಗಳಲ್ಲಿ ಭೂ-ಕಾರ್ಮಿಕ ಸಂಬಂಧಗಳ ವಿಕಸನ ಸ್ವರೂಪ’ವನ್ನು ಕೇಂದ್ರೀಕರಿಸಿ ಸಂಶೋಧನೆ ನಡೆಸುತ್ತಿದ್ದರು. ತಮ್ಮ ಸಂಶೋಧನೆಗೆ ‘ಲಕ್ಷ್ಮಿ ಮಿತ್ತಲ್ ಸೌತ್ ಏಷ್ಯಾ ಇನ್ಸ್‌ಟಿಟ್ಯೂಟ್’ನಿಂದ ನೆರವು ಪಡೆಯುತ್ತಿದ್ದರು.
ಈ ವರದಿ ಓದಿದ್ದೀರಾ?: ರಷ್ಯಾದ ಶಸ್ತ್ರಾಸ್ತ್ರ ಖರೀದಿಸದಂತೆ ಭಾರತಕ್ಕೆ ಅಮೆರಿಕ ಒತ್ತಡ: ಏನಿದರ ಮರ್ಮ?
ರಂಜನಿ ಅವರು ಅಹಮದಾಬಾದ್‌ನ CEPT (ಪರಿಸರ ಯೋಜನೆ ಮತ್ತು ತಂತ್ರಜ್ಞಾನ ಕೇಂದ್ರ) ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಾಷಿಂಗ್ಟನ್‌ನಲ್ಲಿ ‘ಹವಾಮಾನ ಬದಲಾವಣೆಯಿಂದ ಅಪಾಯದಲ್ಲಿರುವ ತಳ ಸಮುದಾಯಗಳು’ ಕುರಿತು ಪರಿಸರವಾದಿ ಎನ್‌ಜಿಒದ ‘ಮ್ಯಾಸಚೂಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವೆಸ್ಟ್ ಫಿಲಡೆಲ್ಫಿಯಾ ಲ್ಯಾಂಡ್‌ಸ್ಕೇಪ್ ಪ್ರಾಜೆಕ್ಟ್’ (WPLP)ಗಾಗಿ ಸಂಶೋಧಕರಾಗಿ ಕೆಲಸ ಮಾಡಿದ್ದಾರೆ.
ಭಾರತೀಯ ನಗರೀಕರಣ, ರಾಜಕೀಯ ಆರ್ಥಿಕತೆ, ಬಂಡವಾಳಶಾಹಿ ಮತ್ತು ಜಾತಿ ಅಸಮಾನತೆಗಳ ಅಧ್ಯಯನಗಳಲ್ಲಿ ರಂಜನಿ ಆಸಕ್ತಿ ಹೊಂದಿದ್ದಾರೆ ಎಂದು ಕೊಲಂಬಿಯಾ ವಿವಿ ವೆಬ್‌ಸೈಟ್ ಹೇಳಿದೆ.