ಜಗಳ, ಗಲಭೆ, ಹಿಂಸೆ, ಹಿಂಸಾಚಾರ ಅಥವಾ ಯುದ್ಧ – ಯಾವುದೇ ಸಂದರ್ಭದಲ್ಲಿ ನಡೆಸಲಾಗುವ ಅತ್ಯಂತ ಹೇಯ ಕೃತ್ಯ ಅತ್ಯಾಚಾರ. ಶೋಷಿತರ ದನಿಯನ್ನು ಹತ್ತಿಕ್ಕಲ್ಲು, ವಿರೋಧಿಗಳನ್ನು ಹಿಂಸಿಸಲು, ಬಗ್ಗುಬಡಿಯಲು ಅತ್ಯಾಚಾರ ಎಂಬುದು ಅಸ್ತ್ರವಾಗಿ ಬಳಕೆಯಾಗುತ್ತಿದೆ. ಯುದ್ಧದ ಸಮಯದಲ್ಲಿಯೂ ಎದುರಾಳಿಗಳನ್ನು ಬಂಧಿಸಿ, ಅವರ ಮೇಲೆ ಸೈನಿಕರು ಅತ್ಯಾಚಾರ ಎಸಗಿ ಕೊಲ್ಲುವುದನ್ನು ಸಾಮಾನ್ಯೀಕರಿಸಲಾಗುತ್ತಿದೆ. ರಷ್ಯಾ-ಉಕ್ರೇನ್ ಯುದ್ಧ, ಸುಡಾನ್ ಆಂತರ್ಯುದ್ದಗಳಲ್ಲಿಯೂ ಅತ್ಯಾಚಾರವನ್ನು ಅಸ್ತ್ರದಂತೆ ಸಂತ್ರಸ್ತರ ಮೇಲೆ ಬಳಸಲಾಗಿದೆ. ಅಷ್ಟೇ ಏಕೆ, ಭಾರತದಲ್ಲಿ ಕಳೆದೊಂದು ವರ್ಷದಿಂದ ನಡೆಯುತ್ತಿರುವ ಮಣಿಪುರ ಹಿಂಸಾಚಾರದಲ್ಲಿಯೂ ಶೋಷಿತ, ಬುಡಕಟ್ಟು ಕುಕಿ ಸಮುದಾಯದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿವೆ. ಅತ್ಯಾಚಾರ ಎಂಬುದು ಯುದ್ಧ ಅಥವಾ ಹಿಂಸೆಯ ಅಸ್ತ್ರವಾಗಿಯೇ ಮಾರ್ಪಟ್ಟಿದೆ ಎಂಬುದು ಇಂತಹ ನೂರಾರು ಘಟನೆಗಳು ಉದಾಹರಣೆಗಳಾಗಿವೆ.
ನಾವೀಗ ಹೇಳಹೊರಟಿರುವುದು ಅತ್ಯಾಚಾರವೊಂದು ನಮ್ಮ ಹಕ್ಕು ಎಂದು ಜನರು ಭಾವಿಸಿದಾಗ ಆ ದೇಶ ಅಥವಾ ಸಮಾಜ ಹೇಗೆಲ್ಲ ವರ್ತಿಸುತ್ತದೆ ಎಂಬುದರ ಬಗ್ಗೆ. ಪ್ಯಾಲೆಸ್ತೀನ್‌ನ ಗಾಜಾದ ಮೇಲೆ ಇಸ್ರೇಲ್ ಕಳೆದೊಂದು ವರ್ಷದಿಂದ ನಿರಂತರವಾಗಿ ದಾಳಿ ನಡೆಸುತ್ತಲೇ ಇದೆ. ಸಾವಿರಾರು ಜನರನ್ನು ಕೊಂದಿದೆ. ಹಲವಾರು ಪ್ಯಾಲೆಸ್ತೀನಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದೆ. ಇನ್ನೂ ಸಾವಿರಾರು ಪ್ಯಾಲೆಸ್ತೀನಿಯರನ್ನು ಸೆರೆ ಹಿಡಿದಿದೆ. ಹೀಗೆ, ಸೆರೆಸಿಕ್ಕು ಬಂಧನಕ್ಕೊಳಗಾಗಿರುವವರಲ್ಲಿ ಹಮಾಸ್‌ನ 48 ವರ್ಷದ ಅರಬ್ ಕೂಡ ಒಬ್ಬರು. ಆತನನ್ನು ಇಸ್ರೇಲ್‌ನ ಕುಖ್ಯಾತ Sde Teiman (ಸ್ಡೆ ಟೀಮನ್) ಜೈಲಿನಲ್ಲಿರಿಸಲಾಗಿತ್ತು. ಅಲ್ಲಿ, ಆತನ ಮೇಲೆ ಇಸ್ರೇಲಿ ಸೈನಿಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಒಂಬತ್ತು ಮಂದಿ ಇಸ್ರೇಲಿ ಸೈನಿಕರನ್ನು ಬಂಧಿಸಲಾಗಿದೆ.
ಬಂಧನವು ಸ್ವಾಗತಾರ್ಹವಾದರೂ, ಇಸ್ರೇಲ್‌ನಲ್ಲಿ ಈಗ ನಡೆಯುತ್ತಿರುವುದೇ ಬೇರೆ. ಇಸ್ರೇಲಿನ ಬಲಪಂಥೀಯರು, ಅಂದರೆ, ಯಹೂದಿಗಳು ಆ ಅತ್ಯಾಚಾರದ ಕೃತ್ಯವನ್ನು ಸಮರ್ಥಿಸುತ್ತಿದ್ದಾರೆ. ಮಾತ್ರವಲ್ಲ, ಬಂಧಿತರ ಮೇಲೆ ಅತ್ಯಾಚಾರ ಎಸಗುವುದು ನಮ್ಮ ಸೈನಿಕರ ಹಕ್ಕು ಎಂದು ಪ್ರತಿಪಾದಿಸುತ್ತಿದ್ದಾರೆ. ಇದನ್ನು, ಕೇವಲ ಬಲಪಂಥೀಯ ಕಾರ್ಯಕರ್ತರು ಮಾತ್ರ ಹೇಳುತ್ತಿಲ್ಲ. ಬದಲಾಗಿ, ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಮಗ ಯೈರ್, ಇಸ್ರೇಲ್‌ನ ಆರ್ಥಿಕ ಸಚಿವ ನಿರ್ ಬರ್ಕತ್, ನ್ಯಾಯ ಸಚಿವ ಯಾರಿವ್ ಲೆವಿನ್ ಸೇರಿದಂತೆ ಉನ್ನತ ಸ್ಥಾನದಲ್ಲಿರುವವರು ಹೇಳುತ್ತಿದ್ದಾರೆ. ಪ್ಯಾಲೇಸ್ಟಿನಿಯನ್ ಕೈದಿಗಳ ಮೇಲೆ ಅತ್ಯಾಚಾರ ಮಾಡುವುದು ಸೈನಿಕರ ಹಕ್ಕು – ಅತ್ಯಾಚಾರದ ಆರೋಪಕ್ಕಾಗಿ ಸೈನಿಕರನ್ನು ಬಂಧಿಸಬಾರದು ಎಂದು ಹೇಳುತ್ತಿದ್ದಾರೆ.
Sde Teiman ಜೈಲಿಗೆ ನುಗ್ಗಿರುವ ಹಲವಾರು ಬಲಪಂಥೀಯರು ಇಸ್ರೇಲಿ ಸೈನಿಕರನ್ನು ಬಿಡುಗಡೆ ಮಾಡುವಂತೆ ದಾಂಧಲೆ ನಡೆಸುತ್ತಿದ್ದಾರೆ. ಇಂತಹ ದಾಂಧಲೆಗಳಿಂದ ಪ್ರಚೋದಿತನಾಗಿರುವ ಅತ್ಯಾಚಾರ ಆರೋಪಿ ಸೈನಿಕನೊಬ್ಬ, ‘ಇಸ್ರೇಲ್ ಜನರೇ, ನಮಗಾಗಿ ಬೀದಿಗಿಳಿಯಿರಿ. ನಮ್ಮನ್ನು ಬಂಧಿಸಿ ಅವಮಾನಿಸಲಾಗುತ್ತಿದೆ. ಈ ಅವಮಾನಕ್ಕೆ ನಾನು ಸಿದ್ದನಿಲ್ಲ. ನಾನು ನಿಮಗಾಗಿ, ನನ್ನ ದೇಶಕ್ಕಾಗಿ ಪ್ರಾಣವನ್ನೇ ನೀಡಲು ಸಿದ್ದನಾಗಿದ್ದವನು’ ಎಂದು ಹೇಳಿಕೊಂಡಿದ್ದಾನೆ.
ಬಲಪಂಥೀಯ ಯಹೂದಿಗಳ ದಾಂಧಲೆಯಿಂದಾಗಿ ಆ ಆರೋಪಿ ಸೈನಿಕರ ಬಂಧನವನ್ನು ರದ್ದುಗೊಳಿಸಲಾಗಿದ್ದು, ಈಗ ವಿಚಾರಣೆಗಷ್ಟೇ ಸೀಮಿತಗೊಳಿಸಲಾಗಿದೆ.
ಅಂದಹಾಗೆ, ‘ಸ್ಡೆ ಟೀಮನ್’ನಲ್ಲಿ ಬಂಧಿಸಲಾಗಿರುವ ಪ್ಯಾಲೆಸ್ತೀನಿ ಬಂಧಿತರ ಮೇಲೆ ಇಸ್ರೇಲಿ ಸೈನಿಕರು ಲೋಹದ ರಾಡ್‌ಗಳು ಮತ್ತು ಅಗ್ನಿಶಾಮಕ ಉಪಕರಣಗಳನ್ನು ಬಳಸಿ ಕ್ರೌರ್ಯ ಎಸಗುತ್ತಿದ್ದಾರೆ. ಅವರ ಗುದನಾಳಗಳಿಗೆ ರಾಡ್‌ಗಳನ್ನು ಹಾಕಿ ಹಿಂಸಿಸುತ್ತಿದ್ದಾರೆ. ಆ ಕಾರಣಕ್ಕಾಗಿಯೇ, ಯುದ್ಧ ಆರಂಭವಾದ ಸಮಯದಲ್ಲಿ ತೆರೆಯಲಾದ ಆ ಜೈಲನ್ನು ಮುಚ್ಚುವಂತೆ ಒತ್ತಡಗಳು ಇವೆ. ಹೀಗಾಗಿಯೇ, ಜುಲೈ 15ರಂದು ಜೈಲನ್ನು ಮುಚ್ಚುವಂತೆ ಆದೇಶಿಸಿದ್ದ ಇಸ್ರೇಲಿ ಹೈಕೋರ್ಟ್, ‘ಕಾನೂನುಬಾಹಿರ ಹೋರಾಟಗಾರರ ಬಂಧನವನ್ನು ನಿಯಂತ್ರಿಸಲು ಕಾನೂನಿನಲ್ಲಿ ಸೂಚಿಸಲಾದ ಷರತ್ತುಗಳಿಗೆ ಅನುಗುಣವಾಗಿ Sde Teiman ಜೈಲಿನಲ್ಲಿ ಯಾಕೆ ಸೌಲಭ್ಯಗಳನ್ನು ಒದಗಿಸಲಾಗಿಲ್ಲ ಮತ್ತು ನಿರ್ವಹಿಸಲಾಗುತ್ತಿಲ್ಲ’ ಎಂದು ಪ್ರಶ್ನಿಸಿದೆ.
ಆದಾಗ್ಯೂ, ಜೈಲನ್ನು ಇನ್ನೂ ಮುಚ್ಚಲಾಗಿಲ್ಲ. ಇಂತಹ ಸಮಯದಲ್ಲಿ ಬಂಧಿತ ಪ್ಯಾಲೆಸ್ತೀನಿ ಹೋರಾಟಗಾರನ ಮೇಲೆ ಸೈನಿಕರು ಅತ್ಯಾಚಾರ ಎಸಗಿದ್ದಾರೆ. ಅದನ್ನು ಸಮರ್ಥಿಸಿಕೊಂಡು ಈಗ ತಮ್ಮದೇ ಸರ್ಕಾರದ ವಿರುದ್ಧ ಬಲಪಂಥೀಯ ಯಹೂದಿಗಳು ಗಲಭೆ ಎಬ್ಬಿಸಿದ್ದಾರೆ.
ಈ ಗಲಭೆಯು ಹೃದಯವಿಲ್ಲದ ಆತ್ಮದಂತೆ ಕಾಣಿಸತೊಡಗಿದೆ. ಒಂದು ದೇಶ ಅಥವಾ ಸಮಾಜ ತನ್ನಿಂದ ಶೋಷಣೆಗೆ ಒಳಗಾಗುವ ಅಥವಾ ತಾನು ಶೋಷಿಸುತ್ತಿರುವ ಸಮುದಾಯದ ಮೇಲೆ ಏನೇ ಮಾಡಿದರೂ ಸರಿ ಎಂಬ ಹೀನ ಮತ್ತು ಹೇಯ ಮನಸ್ಥಿತಿಯನ್ನು ಬೆಳೆಸಿಕೊಂಡರೆ, ಅತ್ಯಾಚಾರವಾಗಲೀ, ಕೊಲೆಯಾಗಲೀ, ಮಾನಸಿಕ ಹಿಂಸೆಯಾಗಲೀ ಕ್ರೌರ್ಯ-ದೌರ್ಜನ್ಯಗಳನ್ನು ಎಸಗುವುದು ತಮ್ಮ ಹಕ್ಕು ಎಂದು ಭಾವಿಸಿಬಿಡುತ್ತವೆ. ಅದರಂತೆ ಕ್ರೂರವಾಗಿ ನಡೆದುಕೊಳ್ಳುತ್ತವೆ. ಇದು, ಮಾನವ ಹಕ್ಕುಗಳ ಬಗ್ಗೆ ಮಾತನಾಡುವ, ಮಾನವೀಯತೆ ಬಗ್ಗೆ ಹೇಳುವ ಕತ್ತು ಹಿಸುಕಿ ಹಾಕುತ್ತದೆ.
ಇಸ್ರೇಲ್‌ನಲ್ಲಿ ಯಹೂದಿಗಳು ಈಗ ವಿಷಜಂತುಗಳಾಗಿ ಬದಲಾಗಿದ್ದಾರೆ. ಜನರನ್ನು ಕಾನೂನು-ಸುವ್ಯವಸ್ಥೆಯಡಿ ನಿಯಂತ್ರಿಸಬೇಕಾದ ಆಳುವವರೇ ಜನರಲ್ಲಿ ವಿಷವನ್ನು ತುಂಬುತ್ತಿದ್ದಾರೆ. ಸೈನಿಕರ ಕೃತ್ಯ-ಕ್ರೌರ್ಯವನ್ನು ಸಮರ್ಥಿಸುತ್ತಿದ್ದಾರೆ. ಇಸ್ರೇಲ್ ಮಾನಸಿಕ ಅಧಃಪತನಕ್ಕೆ ಸಿಲುಕಿಕೊಂಡಿದೆ. ಮಾನವೀಯ ಮೌಲ್ಯಗಳು ಮರೆಯಾಗಿವೆ. ಅತ್ಯಾಚಾರವನ್ನು ಸಂಭ್ರಮಿಸುತ್ತಿವೆ. ಕೊಲೆಯನ್ನು ಆನಂದಿಸುತ್ತಿವೆ. ಯಹೂದಿಗಳಲ್ಲಿನ ವಿಷ ಬೀಜ ಈಗ ಹೆಮ್ಮರವಾಗಿ ಬೆಳೆದುನಿಂತಿದೆ. ಈ ವಿಷದ ಮರಕ್ಕೆ ಪ್ರಧಾನಿಯ ಮಗ ಆದಿಯಾಗಿ ಆಳುವ ಎಲ್ಲರೂ ನೀರೆರೆಯುತ್ತಿದ್ದಾರೆ.
ಇಂತಹ ಕ್ರೌರ್ಯ ಬರೀ ಇಸ್ರೇಲ್‌ನಲ್ಲಿ ಮಾತ್ರ ಕಾಣಿಸುತ್ತಿಲ್ಲ. ಈ ಹೀನ ಮನಸ್ಥಿತಿ ಭಾರತಕ್ಕೆ ಕಾಲಿಟ್ಟು ಹತ್ತಾರು ವರ್ಷಗಳು ಕಳೆದುಹೋಗಿವೆ. 2002ರಲ್ಲಿ ಗುಜರಾತ್‌ನ ಗೋಧ್ರಾದಲ್ಲಿ ನಡೆದ ಹತ್ಯಾಕಾಂಡದಲ್ಲಿ ಹಲವಾರು ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಆ ಅತ್ಯಾಚಾರವನ್ನು ಸಂಭ್ರಮಿಸಲಾಗಿತ್ತು. ಹತ್ಯಾಕಾಂಡದಲ್ಲಿ ಗರ್ಭಿಣಿ ಬಿಲ್ಕೀಸ್ ಬಾನೋ ಮೇಲೆ ಹಿಂದುತ್ವವಾದಿಗಳು ಅತ್ಯಾಚಾರ ಎಸಗಿದ್ದರು. ಆ ಪ್ರಕರಣದ ಆರೋಪಿಗಳನ್ನು ಸನ್ನಡತೆಯ ಆಧಾರ ಮೇಲೆ ಗುಜರಾತ್‌ನ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿತ್ತು. ಆಗ ಆ ಕಾಮುಕರಿಗೆ ಹಾರ-ತುರಾಯಿ ಹಾಕಿ ಸನ್ಮಾನಿಸಿ ಜೈಲಿನಿಂದ ಹೊರಕರೆತರಲಾಗಿತ್ತು.
ಅಷ್ಟೇ ಏಕೆ, ಜಮ್ಮು-ಕಾಶ್ಮೀರದ ಕಥುವಾದಲ್ಲಿ 8 ವರ್ಷದ ಬಾಲಕಿಯ ಮೇಲೆ ದೇವಸ್ಥಾನದಲ್ಲಿ ಅತ್ಯಾಚಾರ ಎಸಗಿದ್ದ ಆರೋಪಿಯ ಪರವಾಗಿ ಬಿಜೆಪಿ ಶಾಸಕರು, ಕಾರ್ಯಕರ್ತರು ಪ್ರತಿಭಟನಾ ರ್‍ಯಾಲಿಗಳನ್ನು ನಡೆಸಿದ್ದರು. ಮಹಿಳಾ ಕುಸ್ತಿಪಟುಗಳ ಮೇಲೆ ಬಿಜೆಪಿ ಸಂಸದ, ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದಾಗಲೂ, ಮೋದಿ ಸರ್ಕಾರ ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಮಣಿಪುರದಲ್ಲಿ ಇಬ್ಬರು ಕುಕಿ ಬುಡಕಟ್ಟು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ, ಸಾಮೂಹಿಕ ಅತ್ಯಾಚಾರ ಎಸಗಿದ್ದು, ಆ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದರೂ ಪ್ರಧಾನಿ ಮೋದಿ ಕೃತ್ಯವನ್ನು ಖಂಡಿಸಲಿಲ್ಲ. ತುಟಿ ಬಿಚ್ಚಲಿಲ್ಲ. ಅಷ್ಟೇ ಯಾಕೆ, ದಲಿತ, ಅಲ್ಪಸಂಖ್ಯಾತರೂ ಸೇರಿದಂತೆ ದೇಶಾದ್ಯಂತ ದಿನನಿತ್ಯ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಲೇ ಇವೆ. ಅದನ್ನು ತಡೆಯುವ, ಖಂಡಿಸುವ ಕೆಲಸ ಆಳುವವರಿಂದ ಆಗುತ್ತಿಲ್ಲ.
ಇದು, ಆಳುವ ವರ್ಗ, ಶೋಷಕ ವರ್ಗ, ಪ್ರಬಲ ವರ್ಗಗಳು ತಮ್ಮ ವಿರೋಧಿಗಳ ವಿರುದ್ಧ, ತಳ ಸಮುದಾಯಗಳ ವಿರುದ್ಧದ ಶೋಷಣೆಗೆ ಅತ್ಯಾಚಾರವನ್ನು ಅಸ್ತ್ರವಾಗಿ ಬಳಸುತ್ತಿವೆ. ಇಂತಹ ಕ್ರೌರ್ಯ ಮುಂದುವರೆದರೆ, ಅದು ಭಾರತವಾಗಲೀ, ಇಸ್ರೇಲ್ ಆಗಲೀ ಆ ಸಮಾಜ ಉಳಿಯುವುದಿಲ್ಲ. ಅದು ಅರಾಜಕತೆಯನ್ನು ಸೃಷ್ಟಿಸುತ್ತದೆ. ಇಡೀ ಸಮಾಜವೇ ನಾಶವಾಗುತ್ತದೆ.