ರಷ್ಯಾ ಮತ್ತು ಉಕ್ರೇನ್ ನಡುವೆ ಸುಮಾರು 3 ವರ್ಷಗಳಿಂದ ಯುದ್ಧ ನಡೆಯುತ್ತಿದೆ. ಉಕ್ರೇನ್ ಮೇಲೆ ರಷ್ಯಾ ನಿರಂತರ ದಾಳಿ ನಡೆಸುತ್ತಿದೆ. ಈ ನಡುವೆ, ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮದ ಚರ್ಚೆಗಳು ಆರಂಭವಾಗಿವೆ. ಅಮೆರಿಕಕ್ಕೆ ಭೇಟಿ ನೀಡಿದ್ದ ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಇದೇ ವಿಚಾರವಾಗಿ ವಾಗ್ವಾದ ನಡೆದಿದೆ. ಟ್ರಂಪ್ ಮಾತಿಗೆ ಮಣೆ ಹಾಕದ ಝೆಲೆನ್ಸ್ಕಿ ಶ್ವೇತಭವನದಿಂದ ಹೊರ ನಡೆದಿದ್ದಾರೆ.
ಶ್ವೇತಭವನದಲ್ಲಿ ಟ್ರಂಪ್ ಮತ್ತು ಝೆಲೆನ್ಸ್ಕಿ ನಡುವೆ ಮಾತುಗಡೆ ನಡೆದಿದೆ. “ನಮ್ಮ ಆಡಳಿತವು ಮೂರು ವರ್ಷಗಳ ಯುದ್ಧವನ್ನು ಕೊನೆಗೊಳಿಸಲು, ರಷ್ಯಾ ಜೊತೆ ಉತ್ತಮ ಸಂಬಂಧ ನಿರ್ಮಿಸಲು ಬಯಸಿದೆ. ರಷ್ಯಾ-ಉಕ್ರೇನ್ ನಡುವೆ ಶಾಂತಿ ನೆಲೆಸಬೇಕೆಂದರೆ ರಾಷ್ಯಾ ಜೊತೆ ಉಕ್ರೇನ್ ನಾನಾ ರೀತಿಯಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ” ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ.
ಈ ಹಿಂದೆ, ಬೈಡನ್ ಆಡಳಿತದಲ್ಲಿ ಅಮೆರಿಕವು ರಷ್ಯಾ ವಿರುದ್ಧದ ಹೋರಾಟಕ್ಕೆ ಉಕ್ರೇನ್‌ಗೆ ಶತಕೋಟಿ ಡಾಲರ್ ಮೌಲ್ಯದ ಅಮೆರಿಕನ್ ಶಸ್ತ್ರಾಸ್ತ್ರಗಳು, ಲಾಜಿಸ್ಟಿಕ್ಸ್ ಸೇರಿದಂತೆ ನಾನಾ ರೀತಿಯ ಬೆಂಬಲ ನೀಡಿತ್ತು. ಆದರೆ, ಟ್ರಂಪ್ ಆಡಳಿತದಲ್ಲಿ ಅಮೆರಿಕ ಉಕ್ರೇನ್‌ಅನ್ನು ಮೌನಗೊಳಿಸಿ, ರಷ್ಯಾ ಜೊತೆ ವ್ಯವಹಾರ ಬೆಳೆಸಲು ಮುಂದಾಗಿದೆ ಎಂದು ಆರೋಪಿಸಲಾಗಿದೆ.
ಟ್ರಂಪ್ ಮಾತಿಗೆ ಬಗ್ಗದ ಝೆಲೆನ್ಸ್ಕಿ ಅವರು ಟ್ರಂಪ್ ಜೊತೆ ವಾಗ್ವಾದ ನಡೆಸಿದ್ದಾರೆ. “ರಷ್ಯಾದೊಂದಿಗೆ ಯಾವುದೇ ಕದನ ವಿರಾಮವನ್ನು ಒಪ್ಪಿಕೊಳ್ಳುವುದಿಲ್ಲ. ಕಳೆದ 3 ವರ್ಷಗಳಲ್ಲಿ ರಷ್ಯಾ 25 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ರಷ್ಯಾ ಜೊತೆ ಅಮೆರಿಕ ಯಾವುದೇ ಒಪ್ಪಂದ ಮಾಡಿಕೊಳ್ಳಬಾರದು” ಎಂದು ಝೆಲೆನ್ಸ್ಕಿ ಒತ್ತಾಯಿಸಿದ್ದಾರೆ.
“ಅಮೆರಿಕದ ಸಹಾಯಕ್ಕೆ ಝೆಲೆನ್ಸ್ಕಿ ಕೃತಜ್ಞರಾಗಿಲ್ಲ. ಅಮೆರಿಕದಿಂದಾಗಿಯೇ ನೀವು ಸುರಕ್ಷಿತರಾಗಿದ್ದೀರಿ. ಲಕ್ಷಾಂತರ ಜೀವಗಳ ಜೊತೆ ಆಟ ಆಡುತ್ತಿದ್ದೀರಿ. ನಿಮ್ಮ ದೇಶ ಅಪಾಯದಲ್ಲಿದೆ. ನೀವು ಅಂತಿಮವಾಗಿ ರಷ್ಯಾ ಜೊತೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ” ಎಂದು ಝೆಲೆನ್ಸ್ಕಿಗೆ ಟ್ರಂಪ್ ಹೇಳಿದ್ದಾರೆ.
ಅಮೆರಿಕವನ್ನು ಝೆಲೆನ್ಸ್ಕಿ ಅವಮಾನಿಸಿದ್ದಾರೆ. ಅವರು ಶಾಂತಿ ಒಪ್ಪಂದಕ್ಕೆ ಸಿದ್ದವಿದ್ದರೆ ಮಾತ್ರವೇ ಅಮೆರಿಕಗೆ ಬರಲಿ ಎಂದೂ ಟ್ರಂಪ್ ಹೇಳಿದ್ದಾರೆ.