ಪಹಲ್ಗಾಮ್ ದಾಳಿಯ ಉಗ್ರರನ್ನು ಹಾಗೂ ಅವರ ಬೆಂಬಲಿಗರಿಗೆ ಖಂಡಿತಾ ಶಿಕ್ಷೆಯಾಗಬೇಕಿದ್ದು, ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ತಾವು ಬೆಂಬಲಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಫೋನ್ ಮೂಲಕ ಮಾತನಾಡಿದ ವ್ಲಾಡಿಮಿರ್ ಪುಟಿನ್ ಪೆಹಲ್ಗಾಮ್ ಉಗ್ರರ ತೀವ್ರ ದಾಳಿಗೆ ಸಂತಾಪ ವ್ಯಕ್ತಪಡಿಸಿದರು ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಎಲ್ಲ ರೀತಿಯ ಬೆಂಬಲ ವ್ಯಕ್ತಪಡಿಸುವುದಾಗಿ ಪುಟಿನ್ ತಿಳಿಸಿದ್ದಾರೆ ಎನ್ನಲಾಗಿದೆ.
ಈ ನಡುವೆ ಮಾಸ್ಕೋದಲ್ಲಿರುವ ಪಾಕ್ ರಾಯಭಾರಿ ಭಾರತ ಕೈಗೊಳ್ಳುತ್ತಿರುವ ಕಠಿಣ ಕ್ರಮಗಳ ಬಗ್ಗೆ ರಷ್ಯಾಕ್ಕೆ ಮಾಹಿತಿ ನೀಡಿದ್ದು, ತಮ್ಮ ದೇಶಕ್ಕೆ ನೆರವಿನ ಹಸ್ತ ಚಾಚಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನವದೆಹಲಿಯಲ್ಲಿ ಇಂದು ಜಪಾನ್ ರಕ್ಷಣಾ ಸಚಿವ ಜೆನ್ ನಕೇತಿನಿ ಅವರನ್ನು ಭೇಟಿಯಾಗಿ ಭಯೋತ್ಪಾನೆ ವಿರುದ್ಧದ ಹೋರಾಟಕ್ಕೆ ಬೆಂಬಲ ಕೋರಿದರು. ಇದೇ ಸಂದರ್ಭದಲ್ಲಿ ಇಂಡೋ – ಪೆಸಿಫಿಕ್ ಗಡಿಯಲ್ಲಿ ಚೀನಾ ಮಿಲಿಟರಿ ತಾಲೀಮು ನಡೆಸುತ್ತಿರುವುದನ್ನು ಪ್ರಸ್ತಾಪಿಸಿ ಉಭಯ ದೇಶಗಳ ರಕ್ಷಣಾ ಸಂಬಂಧವನ್ನು ಮತ್ತಷ್ಟು ವಿಸ್ತರಿಸುವಂತೆ ಬೇಡಿಕೆಯಿಟ್ಟರು ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸುಹಾಸ್ ಶೆಟ್ಟಿ ಸಾವಿನಲ್ಲಿ ಬಿಜೆಪಿ ಕೆಟ್ಟ ರಾಜಕೀಯ
ಕಾಶ್ಮೀರ ದಾಳಿಯ ನಂತರ ಭಾರತ ಹಾಗೂ ಪಾಕ್ ನಡುವೆ ಉದ್ವಿಗ್ನತೆ ಹೆಚ್ಚಾದ ನಂತರ ಜಪಾನ್ ರಕ್ಷಣಾ ಸಚಿವ ಜೆನ್ ನಕೇತಿನಿ ಭಾರತಕ್ಕೆ ಭೇಟಿ ನೀಡಿದ್ದು, ಭಯೋತ್ಪಾದಕ ದಾಳಿಯಿಂದ ಹತ್ಯೆಯಾದ ಅಮಾಯಕರ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಭಾರತವು ಜಪಾನ್‌ನೊಂದಿಗೆ ವಿಶೇಷ, ಕಾರ್ಯತಂತ್ರದ ಮತ್ತು ಜಾಗತಿಕ ಪಾಲುದಾರಿಕೆಯನ್ನು ಹೊಂದಿದೆ. ದ್ವಿಪಕ್ಷೀಯ ಸಭೆಯಲ್ಲಿ ನಾವು ರಕ್ಷಣಾ ಸಹಕಾರ ಮತ್ತು ಪ್ರಾದೇಶಿಕ ಭದ್ರತೆಯ ಬಗ್ಗೆ ಚರ್ಚಿಸಿದ್ದೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಪಾಕಿಸ್ತಾನ ಇಂದು ಸಹ ಜಮ್ಮು ಕಾಶ್ಮೀರದಾದ್ಯಂತವಿರುವ ನಿಯಂತ್ರಣ ರೇಖೆಯ ಹಲವು ಕಡೆ ಅಪ್ರಚೋದಿತ ದಾಳಿ ನಡೆಸಿದೆ ಎಂದು ಭಾರತೀಯ ಸೇನೆ ತಿಳಿಸಿದೆ .