ಎಚ್ಐವಿ ತಡೆಗಟ್ಟಲು ಅಮೆರಿಕದ ಮೆಸ್ಸಾಚ್ಯೂಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ವಿಜ್ಞಾನಿಗಳು 2 ಡೋಸ್ ಲಸಿಕೆ ಅಭಿವೃದ್ಧಿ ಪಡಿಸಿದ್ದು, ಇದು ರೋಗಿಗಳ ಪ್ರತಿಕಾಯಗಳನ್ನು ವೃದ್ಧಿಸುತ್ತದೆ ಎಂದು ಎಂಐಟಿ ಸಂಸ್ಥೆ ಹೇಳಿದೆ. ಎಚ್ಐವಿಗೆ ಲಸಿಕೆ ಅಭಿವೃದ್ಧಿಪಡಿಸುವುದಕ್ಕೆ ಸಂಬಂಧಿಸಿದಂತೆ ಸಾಕಷ್ಟು ವರ್ಷಗಳಿಂದ ಶ್ರಮಿಸುತ್ತಿರುವ ಎಂಐಟಿ ಇದೀಗ 2 ಡೋಸ್‌ನ ಲಸಿಕೆ ತಯಾರಿ ಮಾಡಿರುವ ಮಾಹಿತಿ ನೀಡಿದೆ. 1 ವಾರದ ಅಂತರದಲ್ಲಿ ಈ 2 ಡೋಸ್‌ಗಳನ್ನು ನೀಡಲಾಗುತ್ತದೆ.
ಮೊದಲ ಡೋಸ್‌ನಲ್ಲಿ ಶೇ.20ರಷ್ಟು ಲಸಿಕೆ ನೀಡಿದರೆ, 2ನೇ ಡೋಸ್‌ನಲ್ಲಿ ಶೇ.80ರಷ್ಟು ಲಸಿಕೆ ನೀಡಲಾಗುತ್ತದೆ. ಇದು ಸೋಂಕಿತನ ದೇಹದಲ್ಲಿ ರೋಗದ ವಿರುದ್ಧ ಹೋರಾಡಲು ಬೇಕಾದ ಪ್ರತಿಕಾಯಗಳನ್ನು ವೃದ್ಧಿಸುತ್ತದೆ ಎಂದು ಎಂಐಟಿಯ ತಜ್ಞರು ತಿಳಿಸಿದ್ದಾರೆ.
ಪ್ರಸ್ತುತ, ಈ ಲಸಿಕೆಯ ಮೊದಲ ಡೋಸ್ ಆವೃತ್ತಿಯನ್ನು ಕ್ಲಿನಿಕಲ್ ಪ್ರಯೋಗಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಇದರ ನಡುವೆ ಸಂಶೋಧಕರು ಎರಡು ಡೋಸ್ ಆವೃತ್ತಿಯನ್ನು ಪರೀಕ್ಷಿಸಲು ಪ್ರಯೋಗಗಳನ್ನು ನಡೆಸುವುದಕ್ಕೆ ಕೆಲಸ ಮಾಡುತ್ತಿದ್ದಾರೆ. ಈ ವಿಧಾನವು ಇತರ ಲಸಿಕೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದು ಯೋಜನೆಯ ಪ್ರಮುಖ ಸಂಶೋಧಕ ಪ್ರೊಫೆಸರ್ ಅರೂಪ್ ಚಕ್ರವರ್ತಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಡಿನೋಟಿಫಿಕೇಷನ್ ಹಗರಣ: ಲೋಕಾಯುಕ್ತ ತನಿಖೆ ತೆವಳುತ್ತಿರುವುದೇಕೆ?
ಮೊದಲ ಡೋಸ್ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದರೆ, ಎರಡನೇ ಡೋಸ್ ಹೆಚ್ಚು ಪ್ರತಿರಕ್ಷಣಾ ವ್ಯವಸ್ಥೆಯ ಪ್ರತಿಕ್ರಿಯೆಯನ್ನು ಮತ್ತಷ್ಟು ಸಕ್ರಿಯಗೊಳಿಸುತ್ತದೆ. ಈ ಹೊಸ ವಿಧಾನವನ್ನು ಕಂಪ್ಯೂಟೇಶನಲ್ ಮಾಡೆಲಿಂಗ್ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಇವುಗಳನ್ನು ಮೊದಲು ಇಲಿಗಳಲ್ಲಿ ಪರೀಕ್ಷಿಸಲಾಗಿದೆ.
ಪ್ರತಿ ವರ್ಷ ಸುಮಾರು 10 ಲಕ್ಷ ಮಂದಿ ಎಚ್ಐವಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಲಸಿಕೆ ಇಲ್ಲದಿರುವುದು ಸಹ ಇದಕ್ಕೆ ಪ್ರಮುಖ ಕಾರಣ. ಈಗ ಲಸಿಕೆ ಅಭಿವೃದ್ಧಿಪಡಿಸುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
