ಭಾರತ ಹಾಗೂ ಮಾಲ್ಡೀವ್ಸ್ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾದ ನಂತರ ಚೀನಾ ಕಡೆ ಮುಖ ಮಾಡಿರುವ ದ್ವೀಪ ರಾಷ್ಟ್ರ ಹೆಚ್ಚಿನ ಪ್ರವಾಸಿಗರನ್ನು ಕಳುಹಿಸಲು ನೆರೆಯ ದೇಶಕ್ಕೆ ಮನವಿ ಮಾಡಿದೆ.
ಚೀನಾಕ್ಕೆ ತನ್ನ ಐದು ದಿನಗಳ ರಾಜ್ಯ ಭೇಟಿಯ ಎರಡನೇ ದಿನದಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು, ಮಂಗಳವಾರ ಫುಜಿಯಾನ್ ಪ್ರಾಂತ್ಯದಲ್ಲಿ ಮಾಡಿದ ಭಾಷಣದಲ್ಲಿ ಚೀನಾವನ್ನು ದ್ವೀಪ ರಾಷ್ಟ್ರದ ‘ಹತ್ತಿರದ’ ಮಿತ್ರ ಎಂದು ಕರೆದರು.
ಚೀನಾ ನಮ್ಮ ನಿಕಟ ಮಿತ್ರರಾಷ್ಟ್ರಗಳಲ್ಲಿ ಒಂದಾಗಿದೆ ಮತ್ತು ಅಭಿವೃದ್ಧಿ ಪಾಲುದಾರರಲ್ಲಿ ಒಂದಾಗಿದೆ’ ಎಂದು ಅವರು ಹೇಳಿದರು.
2014 ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪ್ರಾರಂಭಿಸಿದ ಬಿಆರ್‌ಐ ಯೋಜನೆಗಳನ್ನು ಮೊಹಮ್ಮದ್ ಮುಯಿಝು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಮಾಲ್ಡೀವ್ಸ್‌ಗೆ ತನ್ನ ಪ್ರವಾಸಿಗರ ಹರಿವನ್ನು ಹೆಚ್ಚಿಸಲು ಅವರು ಚೀನಾವನ್ನು ಮೊಹಮ್ಮದ್ ಮುಯಿಝು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಡುದ್ವೇಷದ ಕತ್ತಲ ಯುಗದಲ್ಲಿ ಬೆಳ್ಳಂಬೆಳಕಿನ ತೀರ್ಪು
ಅಲ್ಲದೆ, ಹಿಂದೂ ಮಹಾಸಾಗರದ ದ್ವೀಪದಲ್ಲಿ ಸಮಗ್ರ ಪ್ರವಾಸೋದ್ಯಮ ವಲಯವನ್ನು ಅಭಿವೃದ್ಧಿಪಡಿಸಲು ಉಭಯ ದೇಶಗಳು 50 ಮಿಲಿಯನ್ ಡಾಲರ್ ಯೋಜನೆಗೆ ಸಹಿ ಹಾಕಿವೆ ಎಂದು ಮಾಲ್ಡೀವಿಯನ್ ಮಾಧ್ಯಮ ವರದಿ ಮಾಡಿದೆ.
ಪ್ರಧಾನಿ ಮೋದಿಯವರ ಇತ್ತೀಚಿನ ಲಕ್ಷದ್ವೀಪ ಭೇಟಿಯ ಸಂದರ್ಭದಲ್ಲಿ ಮಾಲ್ಡೀವ್ಸ್‌ನ ಕೆಲವು ಮಂತ್ರಿಗಳು ವಿವಾದಾತ್ಮಕ ಪೋಸ್ಟ್ ಮಾಡಿದ ನಂತರ ರಾಜತಾಂತ್ರಿಕ ಬಿಕ್ಕಟ್ಟು ಶುರುವಾಯಿತು. ಈ ನಡುವೆಯೆ ಹೆಚ್ಚಿನ ಚೀನೀ ಪ್ರವಾಸಿಗರಿಗೆ ಮುಯಿಝು ಮನವಿ ಮಾಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ತನ್ನ ಸರ್ಕಾರದ ಮೂವರು ಉಪ ಮಂತ್ರಿಗಳನ್ನು ಅಮಾನತುಗೊಳಿಸಿದೆ.
2023 ರಲ್ಲಿ, ಮಾಲ್ಡೀವ್ಸ್‌ಗೆ ಭಾರತದಿಂದ 209,198 ಪ್ರವಾಸಿಗರು ಆಗಮಿಸಿ ಹೆಚ್ಚು ಭೇಟಿ ನೀಡಿದ ಮೊದಲ ರಾಷ್ಟ್ರವಾಗಿದೆ. 206,146 ಪ್ರವಾಸಿಗರೊಂದಿಗೆ ರಷ್ಯಾ ಎರಡನೇ ಸ್ಥಾನದಲ್ಲಿದ್ದರೆ, 187,118 ಕ್ಕೂ ಹೆಚ್ಚು ಪ್ರವಾಸಿಗರ ಆಗಮನದೊಂದಿಗೆ ಬ್ರಿಟನ್ ಮೂರನೇ ಸ್ಥಾನದಲ್ಲಿದೆ.
ಕೋವಿಡ್‌ಗಿಂತ ಮೊದಲು, ಮಾಲ್ಡೀವ್ಸ್‌ಗೆ ಚೀನಾದಿಂದ 2.80 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿದ್ದರು. ಆದರೆ ಸುಮಾರು ನಾಲ್ಕು ವರ್ಷಗಳ ಲಾಕ್‌ಡೌನ್ ನೀತಿ ಮತ್ತು ನಿಧಾನಗತಿಯ ಆರ್ಥಿಕತೆಯಿಂದ ತನ್ನ ದೇಶೀಯ ಮತ್ತು ವಿದೇಶಿ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಲು ನೆರೆಯ ದೇಶ ಹೆಣಗಾಡುತ್ತಿದೆ.