ತಾವು ಶಾಂತಿ ಪ್ರಿಯರಾಗಿದ್ದರೂ, ತಮಗೆ ‘ನೊಬೆಲ್ ಶಾಂತಿ ಪ್ರಶಸ್ತಿ’ ನೀಡುತ್ತಿಲ್ಲವೆಂದು ನೊಬೆಲ್ ಸಮಿತಿಯನ್ನು ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂಷಿಸಿದ್ದರು. ಇದಾದ ಒಂದೇ ದಿನದಲ್ಲಿ, ಇರಾನ್‌ನ ಪರಮಾಣು ಮೂಲಸೌಕರ್ಯಗಳಾದ ಫೋರ್ಡೋ, ನಟಾಂಜ್ ಹಾಗೂ ಇಸ್ಫಹಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದಾರೆ. ತಾವು ಶಾಂತಿಪ್ರಿಯನೆಂದು ಹೇಳಿಕೊಳ್ಳುತ್ತಿದ್ದ ಟ್ರಂಪ್ ಅವರ ದೀರ್ಘಕಾಲದ ಇಮೇಜ್ ಈಗ ಛಿದ್ರಗೊಂಡಿದೆ. ಇಸ್ರೇಲ್-ಇರಾನ್ ಸಂಘರ್ಷವೂ ಉಲ್ಬಣಗೊಂಡಿದ್ದು, ಯುದ್ಧದ ಆತಂಕ ಮತ್ತಷ್ಟು ಎದುರಾಗಿದೆ
2015ರಲ್ಲಿ ಬರಾಕ್ ಒಬಾಮಾ ಮತ್ತು ಐದು ಜಾಗತಿಕ ಶಕ್ತಿಗಳ ಮಧ್ಯಸ್ಥಿಕೆಯಲ್ಲಿ ನಡೆದಿದ್ದ ಇರಾನ್ ಪರಮಾಣು ಒಪ್ಪಂದದಿಂದ (ಜೆಸಿಪಿಒಎ) ಅಮೆರಿಕವನ್ನು 2018ರಲ್ಲಿ, ಟ್ರಂಪ್ ಅವರು ಏಕಪಕ್ಷೀಯವಾಗಿ ಹಿಂತೆಗೆದುಕೊಂಡರು. ಈ ಒಪ್ಪಂದವು ಇರಾನ್‌ನ ಪರಮಾಣು ಚಟುವಟಿಕೆಗಳನ್ನು ನಿಗ್ರಹಿಸಿತ್ತು. ಆದರೆ, 2018ರಲ್ಲಿ ಒಪ್ಪಂದದಿಂದ ಅಮೆರಿಕ ಹೊರಗುಳಿದ ನಂತರ, ಇರಾನ್ ತನ್ನ ಯುರೇನಿಯಂ ಪುಷ್ಟೀಕರಣವನ್ನು ಹೆಚ್ಚಿಸಿತು. ಒಪ್ಪಂದವನ್ನು ಕುಸಿತದತ್ತ ದೂಡಿತು. 2020ರ ಜನವರಿಯಲ್ಲಿ ಟ್ರಂಪ್ ಇರಾನಿನ ಜನರಲ್ ಖಾಸೆಮ್ ಸೊಲೈಮಾನಿಯನ್ನು ಕೊಲ್ಲಲು ಮತ್ತು ಇರಾನ್‌ನ ಸಾಂಸ್ಕೃತಿಕ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವಂತೆ ಬೆದರಿಕೆ ಹಾಕಿದರು. ಇದು, ಅಮೆರಿಕ ಮತ್ತು ಇರಾನ್ ನಡುವಿನ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿತು.
ಈ ಲೇಖನ ಓದಿದ್ದೀರಾ?: ಇರಾನ್-ಇಸ್ರೇಲ್ ಸಂಘರ್ಷದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಪಾತ್ರವೇನು?
ಈಗ, ಟ್ರಂಪ್ 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿದ್ದಾರೆ. ಅವರು ಅಧ್ಯಕ್ಷರಾದ ಬಳಿಕ, ಇರಾನ್ ಮೇಲೆ ಇಸ್ರೇಲ್ ದಾಳಿ ಆರಂಭಿಸಿದೆ. ಈ ದಾಳಿಯ ಹಿಂದೆ, ಅಮೆರಿಕದ ಕುಮ್ಮಕ್ಕು ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪುಷ್ಠಿನೀಡುವಂತೆ ಭಾನುವಾರ ಇರಾನ್ ಮೇಲೆ ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ಆದಾಗ್ಯೂ, ಇದು ಇಸ್ರೇಲ್-ಇರಾನ್ ನಡುವೆ ಶಾಂತಿ ನೆಲೆಸಲು ಮತ್ತು ಕದನ ವಿರಾಮ ಘೋಷಿಸಲು ಕಾರಣವಾಗುತ್ತದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ, ಇಸ್ರೇಲ್ ಮೇಲೆ ಮತ್ತೆ ದಾಳಿ ಮಾಡಿರುವ ಇರಾನ್, ಅಮೆರಿಕದ ದಾಳಿಗೆ ಬಗ್ಗುವುದಿಲ್ಲ ಎಂಬ ಸಂದೇಶ ರವಾನಿಸಿದೆ.
ಟ್ರಂಪ್ ಯುದ್ಧ ವಿರೋಧಿ ಕಾಮೆಂಟ್‌ಗಳು – ಟೈಮ್‌ಲೈನ್
- 2016ರ ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲಿ, ಡೊನಾಲ್ಡ್ ಟ್ರಂಪ್ ಅವರು ಯುದ್ಧಗಳಲ್ಲಿ ಅಮೆರಿಕ ಪಾಲ್ಗೊಳ್ಳುವಿಕೆಯ ವಿರುದ್ಧ ‘ಅಂತ್ಯವಿಲ್ಲದ, ಶಾಶ್ವತ ಯುದ್ಧಗಳು’ ಎಂಬ ಘೋಷಣೆಯಡಿ ಟೀಕಿಸಿದರು. ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿನ ಸಂಘರ್ಷಗಳು, ಸಿರಿಯಾ ಮತ್ತು ಲಿಬಿಯಾದಲ್ಲಿನ ಬಿಕ್ಕಟ್ಟುಗಳನ್ನು ಉಲ್ಲೇಖಿಸಿ ಯುದ್ಧದ ವಿರುದ್ಧ ಮಾತನಾಡಿದ್ದರು.
- 2019ರ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ, ಟ್ರಂಪ್ ‘ಪ್ರಬಲ ರಾಷ್ಟ್ರಗಳು ಅಂತ್ಯವಿಲ್ಲದ ಯುದ್ಧಗಳಲ್ಲಿ ಹೋರಾಡುವುದಿಲ್ಲ’ ಎಂದು ಘೋಷಿಸಿದರು.
- 2020ರ ಚುನಾವಣೆಗೆ ತಯಾರಿ ನಡೆಸುತ್ತಿದ್ದ ಟ್ರಂಪ್, ‘ಯುದ್ಧವನ್ನು ಪ್ರಾರಂಭಿಸದ ತಲೆಮಾರುಗಳಲ್ಲಿ ನಾನು ಏಕೈಕ ಅಧ್ಯಕ್ಷ’ ಎಂದು ಮತದಾರರ ಎದುರು ಹೇಳಿಕೊಂಡರು.
- 2020ರ ಪ್ರಚಾರ ಮತ್ತು ‘ಅಜೆಂಡಾ 47’ ಎಂಬ ವೀಡಿಯೊಗಳಲ್ಲಿ, ‘ಟ್ರಂಪ್ ಯುದ್ಧಪ್ರೇಮಿಯಲ್ಲ. ಒಪ್ಪಂದಗಳನ್ನು ಮಾಡಿಸುವ ಮಧ್ಯಸ್ಥಗಾರ’ ಎಂಬ ಇಮೇಜ್ ಕಟ್ಟಿಕೊಳ್ಳಲು ಪ್ರಯತ್ನಿಸಿದ್ದರು. ‘ನಮ್ಮ ಗೆಲುವು ಯುದ್ಧದಿಂದಲ್ಲ, ಯುದ್ಧಗಳನ್ನು ಕೊನೆಗೊಳಿಸುವುದರಿಂದಲೂ ಗೆಲ್ಲುತ್ತೇವೆ. ಬಹುಶಃ, ನಾವು ಎಂದಿಗೂ ಭಾಗಿಯಾಗದ ಯುದ್ಧಗಳಿಂದಲೂ ನಮ್ಮ ಯಶಸ್ಸನ್ನು ಅಳೆಯುತ್ತೇವೆ’ ಎಂದಿದ್ದರು.
- 2024ರ ಚುನಾವಣೆಯ ಸಮಯದಲ್ಲಿ ಟ್ರಂಪ್ ಮತ್ತೆ ತಮ್ಮ ಯುದ್ಧ ವಿರೋಧಿ ನಿಲುವನ್ನು ಪ್ರಸ್ತಾಪಿಸಿದರು. “ಎಂದಿಗೂ ಮುಗಿಯದ ಯುದ್ಧಗಳ ಈ ಮೂರ್ಖ ದಿನಗಳ ಪುಟಗಳನ್ನು ಶಾಶ್ವತವಾಗಿ ಮುಚ್ಚೋಣ. ಯುದ್ಧಗಳು ಎಂದಿಗೂ ಕೊನೆಗೊಂಡಿಲ್ಲ. ಎಲ್ಲ ಕಡೆ ಜನರನ್ನು ಕೊಲ್ಲೋಣ ಎಂಬುದು ಯುದ್ಧಪ್ರೇಮಿ ಮನಸ್ಥಿತಿ’ ಎಂದು ಹೇಳಿದ್ದರು.
- ಈ ವರ್ಷದ ಮೇ ತಿಂಗಳಿನಲ್ಲಿ, ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆ ಮಾತನಾಡಿದ್ದ ಟ್ರಂಪ್, ‘ಇದು ನಮ್ಮ ಉದ್ಧವಲ್ಲ. ನಾವು ಯುದ್ಧವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತೇವೆ. ಆದರೆ, ನಮಗೆ ಕೊನೆಗೊಳಿಸಲು ಸಾಧ್ಯವಾಗದೇ ಹೋಗಬಹುದು. ಆದರೆ, ಅದು ನಮ್ಮ ಯುದ್ಧವಲ್ಲ’ ಎಂದಿದ್ದರು.
ಆದರೆ, ಈಗ ಜೂನ್ 21ರಂದು ಟ್ರಂಪ್ ಇರಾನ್‌ನ ಪರಮಾಣು ತಾಣಗಳ ಮೇಲೆ ವೈಮಾನಿಕ ದಾಳಿ ಮಾಡಿಸಿದ್ದಾರೆ. ಈ ದಾಳಿಯು ಸಂಘರ್ಷದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಟ್ರಂಪ್ ಚಿತ್ರಣವನ್ನು ಹೊಡೆದುಹಾಕಿತು. ದಾಳಿಯ ಬಳಿಕ ಓವಲ್ ಕಚೇರಿಯಲ್ಲಿ ಮಾತನಾಡಿದ ಟ್ರಂಪ್,”ಆದಷ್ಟು ಬೇಗ ಶಾಂತಿಸ್ಥಾಪನೆ ಆಗದಿದ್ದರೆ, ನಾವು ಇರಾನ್‌ನ ಇತರ ಪರಮಾಣು ನೆಲೆಗಳ ಮೇಲೆ ನಿಖರತೆ, ವೇಗ ಮತ್ತು ಕೌಶಲ್ಯದಿಂದ ಹೊಡೆಯುತ್ತೇವೆ. ಅವುಗಳಲ್ಲಿ ಹೆಚ್ಚಿನವುಗಳನ್ನು ಕೆಲವೇ ನಿಮಿಷಗಳಲ್ಲಿ ಹೊಡೆದುರುಳಿಸಬಹುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಅದೇ ಭಾಷಣದಲ್ಲಿ, “ಇರಾನ್ 40 ವರ್ಷಗಳಿಂದ ‘ಅಮೆರಿಕಕ್ಕೆ ಸಾವು, ಇಸ್ರೇಲ್‌ಗೆ ಸಾವು’ ಎಂದು ಹೇಳುತ್ತಿದೆ. ಆದರೆ, ಅದು ಸಾಧ್ಯವಿಲ್ಲ. ಇಂದು ರಾತ್ರಿ ನಡೆದ ದಾಳಿ ಅತ್ಯಂತ ಕಷ್ಟಕರವಾಗಿತ್ತು” ಎಂದು ಹೇಳಿಕೊಂಡಿದ್ದಾರೆ.