ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು, ಕನಿಷ್ಠ 13 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. 24 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಶನಿವಾರ ಮುಂಜಾನೆ ಉತ್ತರ ವಜೀರಿಸ್ತಾನ್ ಜಿಲ್ಲೆಯ ಖಡ್ಡಿ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ಘಟಕಕ್ಕೆ ಸೇರಿದ ಮೈನ್-ರೆಸಿಸ್ಟೆಂಟ್ ಆಂಬುಶ್ ಪ್ರೊಟೆಕ್ಟೆಡ್(ಎಂಆರ್‌ಎಪಿ) ವಾಹನಕ್ಕೆ ಆತ್ಮಾಹುತಿ ಬಾಂಬರ್ ಸ್ಫೋಟಕಗಳಿಂದ ತುಂಬಿದ ವಾಹನವನ್ನು ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಪಾಕಿಸ್ತಾನ | ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟ; ಯೋಧರು ಸೇರಿ ಕನಿಷ್ಠ 25 ಮಂದಿ ಸಾವು
ಗಾಯಗೊಂಡ 24 ಮಂದಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 14 ನಾಗರಿಕರು ಸೇರಿದ್ದಾರೆ. ಈ ಪೈಕಿ ಹಲವು ಮಂದಿಯ ಸ್ಥಿತಿ ಗಂಭೀರವಾಗಿದೆ. ಸದ್ಯ ಸೇನಾ ಚಲನವಲನಗಳು ನಡೆಯುತ್ತಿರುವ ಕಾರಣ ಘಟನೆಯ ಸಮಯದಲ್ಲಿ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಲಾಗಿತ್ತು ಎಂದು ವರದಿ ಉಲ್ಲೇಖಿಸಿದೆ.
ಸ್ಫೋಟದ ನಂತರ ಭದ್ರತಾ ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಹಫೀಜ್ ಗುಲ್ ಬಹದ್ದೂರ್ ಗುಂಪಿನ ಉಗ್ರಗಾಮಿ ಗುಂಪು ಉಸುದ್ ಅಲ್-ಹರ್ಬ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
