ಸೌದಿ ಅರೇಬಿಯಾದ ಅಸೀರ್ ಪ್ರಾಂತ್ಯದ ಬಿಶಾ ಎಂಬಲ್ಲಿ ಕಾಸರಗೋಡು ಮೂಲದ ಟ್ಯಾಕ್ಸಿ ಚಾಲಕರೊಬ್ಬರನ್ನು ಭಾನುವಾರ ಮುಂಜಾನೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಮೃತರನ್ನು ಬಷೀರ್(41) ಎಂದು ಗುರುತಿಸಲಾಗಿದೆ. ಬಷೀರ್ ಅವರು ಪತ್ನಿ, ಇಬ್ಬರು ಮಕ್ಕಳು, ಪೋಷಕರನ್ನು ಅಗಲಿದ್ದಾರೆ.
ಬಷೀರ್ ಅವರು ಕಳೆದ 13 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಟ್ಯಾಕ್ಸಿ ಸ್ವಚ್ಛಗೊಳಿಸುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿದ್ದು, ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಗುಂಡು ಹಾರಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ಸೌದಿ ಅರೇಬಿಯಾ | ರಿಯಾದ್ ಮೆಟ್ರೋದ ಮೊದಲ ಹಂತ ಉದ್ಘಾಟನೆ
ಗುಂಡಿನ ಸದ್ದು ಕೇಳಿ ಸುತ್ತಲಿನ ಜನರು ಹೊರಬಂದು ನೋಡಿದಾಗ ಕಾರಿನೊಳಗೆ ಬಷೀರ್ ರಕ್ತಸಿಕ್ತರಾಗಿ ಬಿದ್ದಿರುವುದು ಕಂಡುಬಂದಿದೆ. ಈಜಿಪ್ಟ್ ನಾಗರಿಕರೊಬ್ಬರು ಬಷೀರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅದಾಗಲೇ ಅವರು ಮೃತಪಟ್ಟಿದ್ದರು.
ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು ಸದ್ಯ ಘಟನೆ ನಡೆದ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲಿಸಲಾಗುತ್ತಿದೆ. ಮೃತದೇಹವನ್ನು ಕರ್ನಾಟಕ-ಕೇರಳದ ಗಡಿ ಜಿಲ್ಲೆ ಕಾಸರಗೋಡಿಗೆ ಕಳುಹಿಸುವ ವ್ಯವಸ್ಥೆ ನಡೆಯುತ್ತಿದೆ ಎನ್ನಲಾಗಿದೆ.
ಬಷೀರ್ ಅವರ ಮೃತದೇಹವನ್ನು ಭಾರತಕ್ಕೆ ಕಳುಹಿಸಲು ಬೇಕಾದ ಅಗತ್ಯ ಕಾನೂನು ಕಾರ್ಯವಿಧಾನಗಳನ್ನು ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್(ಕೆಎಂಸಿಸಿ) ಬಿಶಾ ಘಟಕವು ನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.
