ಇರಾನ್‌ನಿಂದ ತೈಲ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳ ಖರೀದಿಯ ಆರೋಪದ ಮೇಲೆ ಭಾರತದ ಆರು ಕಂಪನಿಗಳು ಸೇರಿದಂತೆ ವಿಶ್ವಾದ್ಯಂತ 20 ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧಗಳನ್ನು ವಿಧಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇರಾನ್ ಮೇಲೆ ವಿಧಿಸಲಾಗಿರುವ ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸಿ ಈ ಕಂಪನಿಗಳು ಪೆಟ್ರೋಲಿಯಂ ಉತ್ಪನ್ನಗಳ ಖರೀದಿ ಮತ್ತು ವಹಿವಾಟು ನಡೆಸಿವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಆರೋಪಿಸಿದೆ.
ನಿರ್ಬಂಧಕ್ಕೊಳಗಾದ ಭಾರತೀಯ ಕಂಪನಿಗಳೆಂದರೆ ಆಲ್ಕೆಮಿಕಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಗ್ಲೋಬಲ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ಲಿಮಿಟೆಡ್, ಜುಪಿಟರ್ ಡೈ ಕೆಮ್ ಪ್ರೈವೇಟ್ ಲಿಮಿಟೆಡ್, ರಾಮ್ನಿಕ್ಲಾಲ್ ಎಸ್ ಗೊಸಾಲಿಯಾ, ಪರ್ಸಿಸ್ಟೆಂಟ್ ಪೆಟ್ರೋಕೆಮ್ ಪ್ರೈವೇಟ್ ಲಿಮಿಟೆಡ್ ಮತ್ತು ಕಾಂಚನ್ ಪಾಲಿಮರ್ಸ್.
ಆಲ್ಕೆಮಿಕಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ 2024ರ ಜನವರಿಯಿಂದ ಡಿಸೆಂಬರ್‌ವರೆಗೆ 84 ಮಿಲಿಯನ್ ಡಾಲರ್‌ಗಿಂತಲೂ ( 736 ಕೋಟಿ ರೂ.) ಹೆಚ್ಚು ಮೌಲ್ಯದ ಇರಾನ್‌ನ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ ಎಂದು ಆರೋಪಿಸಲಾಗಿದೆ. ಗ್ಲೋಬಲ್ ಇಂಡಸ್ಟ್ರಿಯಲ್ ಕೆಮಿಕಲ್ಸ್ ಲಿಮಿಟೆಡ್ 2024-2025ರ ಅವಧಿಯಲ್ಲಿ 51 ಮಿಲಿಯನ್ ಡಾಲರ್ (446 ಕೋಟಿ ರೂ.) ಮೌಲ್ಯದ ಮೆಥನಾಲ್ ಸೇರಿದಂತೆ ಇರಾನ್‌ನ ಉತ್ಪನ್ನಗಳನ್ನು ಖರೀದಿಸಿದೆ. ಜುಪಿಟರ್ ಡೈ ಕೆಮ್ ಪ್ರೈವೇಟ್ ಲಿಮಿಟೆಡ್ 49 ಮಿಲಿಯನ್ ಡಾಲರ್ (429 ಕೋಟಿ ರೂ.) ಮೌಲ್ಯದ ಟೊಲ್ಯೂನ್ ಸೇರಿದಂತೆ ಇರಾನಿನ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಾನವೀಯತೆಯ ಪಸೆ ಉಳಿದಿದೆಯೇ ತುಸುವಾದರೂ?
ರಾಮ್ನಿಕ್ಲಾಲ್ ಎಸ್ ಗೊಸಾಲಿಯಾ 22 ಮಿಲಿಯನ್ ಡಾಲರ್ ( 192 ಕೋಟಿ ರೂ.) ಮೌಲ್ಯದ ಮೆಥನಾಲ್ ಮತ್ತು ಟೊಲ್ಯೂನ್ ಖರೀದಿಸಿದೆ. ಪರ್ಸಿಸ್ಟೆಂಟ್ ಪೆಟ್ರೋಕೆಮ್ ಪ್ರೈವೇಟ್ ಲಿಮಿಟೆಡ್ 2024ರ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ 14 ಮಿಲಿಯನ್ ಡಾಲರ್ ( 122 ಕೋಟಿ ರೂ.) ಮೌಲ್ಯದ ಮೆಥನಾಲ್ ಆಮದು ಮಾಡಿಕೊಂಡಿದೆ. ಕಾಂಚನ್ ಪಾಲಿಮರ್ಸ್ 1.3 ಮಿಲಿಯನ್ ಡಾಲರ್ (11 ಕೋಟಿ ರೂ.) ಮೌಲ್ಯದ ಇರಾನಿನ ಪಾಲಿಥಿಲೀನ್ ಉತ್ಪನ್ನಗಳನ್ನು ಖರೀದಿಸಿದೆ ಎಂದು ಆರೋಪಿಸಲಾಗಿದೆ.
ಭಾರತವು ಇರಾನ್‌ನೊಂದಿಗೆ ದೀರ್ಘಕಾಲೀನ ವ್ಯಾಪಾರ ಸಂಬಂಧವನ್ನು ಹೊಂದಿದೆ. ಆದರೆ, 2019ರಿಂದ ಅಮೆರಿಕದ ನಿರ್ಬಂಧಗಳಿಂದಾಗಿ ಇರಾನ್‌ನಿಂದ ತೈಲ ಆಮದು ಗಣನೀಯವಾಗಿ ಕಡಿಮೆಯಾಗಿದೆ. ಮೇ 2025ರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನಿಂದ ತೈಲ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳ ಖರೀದಿಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರು. ಈ ನಿರ್ಬಂಧಗಳನ್ನು ಉಲ್ಲಂಘಿಸುವ ದೇಶಗಳು ಅಥವಾ ಕಂಪನಿಗಳ ಮೇಲೆ ಕಠಿಣ ಕ್ರಮಕ್ಕೆ ಎಚ್ಚರಿಕೆ ನೀಡಲಾಗಿತ್ತು.
ಭಾರತದ ಜೊತೆಗೆ ಟರ್ಕಿ, ಯುಎಇ, ಚೀನಾ ಮತ್ತು ಇಂಡೋನೇಷ್ಯಾದ ಕಂಪನಿಗಳ ಮೇಲೂ ಅಮೆರಿಕ ನಿರ್ಬಂಧ ವಿಧಿಸಿದೆ. ಇರಾನ್‌ನ ಆರ್ಥಿಕ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುವ ಅಮೆರಿಕದ ಒತ್ತಡದ ಭಾಗವಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ನಿರ್ಬಂಧಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.