ತನ್ನ ಕುಟುಂಬದ ಸದಸ್ಯರು ಮನೆಯಲ್ಲಿದ್ದಾಗಲೇ ಮುಸುಕುಧಾರಿ ದರೋಡೆಕೋರರು ಮನೆಗೆ ನುಗ್ಗಿ ಅಪಾರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ತಿಳಿಸಿದ್ದಾರೆ.
ಕುಟುಂಬಕ್ಕೆ ಯಾವುದೇ ದೈಹಿಕ ಹಾನಿಯಾಗಿಲ್ಲ. ಆದರೆ ಹಲವಾರು ಭಾವನಾತ್ಮಕ ವಸ್ತುಗಳನ್ನು ದರೋಡೆ ಮಾಡಲಾಗಿದೆ ಎಂದು 33 ವರ್ಷದ ಕ್ರಿಕೆಟಿಗ ಹೇಳಿದ್ದಾರೆ. ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್ ಪಂದ್ಯದ ವೇಳೆ ನಡೆದ ಈ ದರೋಡೆಯಲ್ಲಿ ಪತ್ನಿ ಕ್ಲೇರಿ ಮತ್ತು ಮಕ್ಕಳಾದ ಲಿಟನ್ ಹಾಗೂ ಲಿಬ್ಬಿ ಮನೆಯಲ್ಲಿದ್ದರು.
“ಅಕ್ಟೋಬರ್ 17ರಂದು ಗುರುವಾರ ಸಂಜೆ ಹಲವು ಮಂದಿ ಮುಸುಕುಧಾರಿಗಳು ಕ್ಯಾಸಲ್ ಈಡನ್ ನಲ್ಲಿರುವ ನಮ್ಮ ಮನೆಗೆ ನುಗ್ಗಿ ದರೋಡೆ ಮಾಡಿದ್ದಾರೆ. ಒಡವೆಗಳೊಂದಿಗೆ ಕೆಲವು ವೈಯಕ್ತಿಯ ವಸ್ತುಗಳನ್ನು ಕದ್ದಿದ್ದಾರೆ. ಕಳವಾದ ಬಹುತೇಕ ವಸ್ತುಗಳು ನನಗೆ ಹಾಗೂ ನನ್ನ ಕುಟುಂಬಕ್ಕೆ ಬಹು ಮುಖ್ಯವಾಗಿದ್ದವು. ಕೆಟ್ಟ ಸಂಗತಿ ಏನಂದರೆ ನನ್ನ ಪತ್ನಿ ಹಾಗೂ ನನ್ನ ಇಬ್ಬರು ಮಕ್ಕಳು ಮನೆಯಲ್ಲಿದ್ದಾಗಲೆ ಕಳ್ಳತನವಾಗಿದೆ. ಸಂತಸದ ವಿಷಯವೆಂದರೆ ನನ್ನ ಪತ್ನಿ ಮತ್ತು ಮಕ್ಕಳಿಗೆ ಯಾವುದೇ ದೈಹಿಕ ಹಾನಿಯಾಗಿಲ್ಲ. ಕಳುವಾದ ನನ್ನ ವಸ್ತುಗಳ ಫೋಟೋಗಳನ್ನು ಹಂಚಿಕೊಂಡಿದ್ದು, ಇದರಿಂದ ಕಳ್ಳರನ್ನು ಹಿಡಿಯಲು ಅನುಕೂಲವಾಗಲಿದೆ. ಮತ್ತು ಅವರನ್ನು ಹಿಡಿಯಬೇಕೆಂಬ ಒತ್ತಾಸೆಯಿದೆ. ನಾನು ಪಾಕಿಸ್ತಾನದಲ್ಲಿದ್ದರೂ ನನ್ನ ಕುಟುಂಬಕ್ಕೆ ಸಾಂತ್ವಾನ ನೀಡಿ ಪ್ರಕರಣದ ಬಗ್ಗೆ ಕಾರ್ಯಚರಣೆ ನಡೆಸುತ್ತಿರುವ ಪೊಲೀಸರಿಗೆ ಧನ್ಯವಾದಗಳು” ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬೆನ್ ಸ್ಟೋಕ್ಸ್ ವಿವರಿಸಿದ್ದಾರೆ.

