ಭಾರತದಲ್ಲಿ ನಡೆದ ಮೂರು ದೊಡ್ಡ ದಾಳಿಗಳ ಹಿಂದಿನ ‘ಮಾಸ್ಟರ್‌ಮೈಂಡ್’ ಲಷ್ಕರ್-ಎ-ತೈಬಾ (ಎಲ್‌ಇಟಿ) ಪ್ರಮುಖ ಉಗ್ರ ರಜಾವುಲ್ಲಾ ನಿಜಾಮಾನಿ ಅಲಿಯಾಸ್ ಅಬು ಸಯುಲ್ಲಾನ ಹತ್ಯೆಯಾಗಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಆತನ ಕೊಲೆ ಮಾಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಉಗ್ರ ನಿಜಾಮಾನಿಯು ಇಂದು ಮಧ್ಯಾಹ್ನ ಸಿಂಧ್‌ನ ಮಟ್ಲಿಯಲ್ಲಿರುವ ತನ್ನ ನಿವಾಸಿದಿಂದ ಹೊರಬರುವಾಗ ಕ್ರಾಸಿಂಗ್ ಬಳಿ ಅಪರಿಚಿತ ದಾಳಿಕೋರರು ಮಾರಣಾಂತಿಕವಾಗಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ನಿಜಾಮಾನಿ ಪಾಕಿಸ್ತಾನದ ಸರ್ಕಾರ ಒದಗಿಸಿದ ಭದ್ರತೆಯನ್ನು ಪಡೆದಿದ್ದ.
ಇದನ್ನು ಓದಿದ್ದೀರಾ? ಪಾಕಿಸ್ತಾನಿ ಸೇನೆಯ ಪ್ರಧಾನ ಕಚೇರಿವರೆಗೂ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮುಟ್ಟಿದೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಭಾರತದಲ್ಲಿ ಮೂರು ಪ್ರಮುಖ ದಾಳಿಗಳನ್ನು ನಡೆಸುವ ಹಿಂದಿನ ಮಾಸ್ಟರ್ ಮೈಂಡ್ ಅಬು ಸಯುಲ್ಲಾ ಆಗಿದ್ದ ಎನ್ನಲಾಗಿದೆ. 2001ರಲ್ಲಿ ರಾಮಪುರದಲ್ಲಿ ಸಿಆರ್‌ಪಿಎಫ್ ಶಿಬಿರದ ಮೇಲೆ ದಾಳಿ, 2005ರಲ್ಲಿ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಕಾಂಗ್ರೆಸ್ ಮೇಲೆ ದಾಳಿ ಮತ್ತು 2006ರಲ್ಲಿ ನಾಗ್ಪುರದಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಚೇರಿಯ ಮೇಲೆ ದಾಳಿಯ ಹಿಂದಿನ ಈತ ಪ್ರಮುಖ ಪಾತ್ರ ವಹಿಸಿದ್ದ ಎನ್ನಲಾಗಿದೆ.
ಏಪ್ರಿಲ್ 22ರಂದು ಪಾಕಿಸ್ತಾನದ ಉಗ್ರ ಸಂಘಟನೆಯು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದನಾ ದಾಳಿ ನಡೆಸಿ 26 ಪ್ರವಾಸಿಗರನ್ನು ಕೊಂದಿದೆ. ಈ ದಾಳಿ ಹೊಣೆಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಒಂದು ಶಾಖೆಯಾದ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಹೊತ್ತುಕೊಂಡಿದೆ.
ಈ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಆಪರೇಷನ್ ಸಿಂಧೂರ ಹೆಸರಲ್ಲಿ ದಾಳಿ ನಡೆಸಿವೆ. ನೂರಕ್ಕೂ ಅಧಿಕ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಭಾರತ ಹೇಳಿದೆ. ಅದಾದ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಅಧಿಕೃತವಾಗಿ ಯುದ್ಧ ಆರಂಭಿಸುವುದಕ್ಕೂ ಮುನ್ನವೇ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದೀಗ ಅಪರಿಚಿತ ಬಂದೂಕುಧಾರಿಗಳು ಭಾರತಕ್ಕೆ ಬೇಕಾಗಿದ್ದ ಉಗ್ರ ಅಬು ಸಯುಲ್ಲಾ ಹತ್ಯೆ ಮಾಡಿದ್ದಾರೆ.
