ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ದಾಳಿ ಮಾಡಿ ಭದ್ರತಾ ಪಡೆಗಳಿಂದ ಹತ್ಯೆಗೊಳಗಾದ 20 ವರ್ಷದ ಪೆನ್ಸಿಲ್ವೇನಿಯಾದ ಥಾಮಸ್ ಮ್ಯಾಥ್ಯೂ ಕ್ರುಕ್ಸ್ ಹಿನ್ನೆಲೆಯ ಬಗ್ಗೆ ಎಫ್‌ಬಿಐ ಹಾಗೂ ಆರೋಪಿಯ ಸಹಪಾಠಿಗಳು ಮಾಹಿತಿ ನೀಡಿದ್ದಾರೆ.
ಕ್ರುಕ್ಸ್ 2022ರಲ್ಲಿ ಬೇತಲ್ ಪಾರ್ಕ್ ಹೈಸ್ಕೂಲ್‌ನಲ್ಲಿ ಪದವಿ ಪೂರ್ಣಗೊಳಿಸಿ ರಾಷ್ಟ್ರೀಯ ವಿಜ್ಞಾನ ಹಾಗೂ ಗಣಿತ ಸ್ಪರ್ಧೆಯಲ್ಲಿ 500 ಡಾಲರ್‌ಗಳ ಸ್ಟಾರ್ ಅವಾರ್ಡ್ ಪುರಸ್ಕಾರವನ್ನು ಪಡೆದಿದ್ದ. ಶಾಲೆಯಲ್ಲಿ ಸದಾ ಮೌನಿ ಹಾಗೂ ಏಕಾಂಗಿಯಾಗಿರುತ್ತಿದ್ದ.
ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸಲು ರಿಪಬ್ಲಿಕನ್ ಆಗಿ ಮೊದಲ ಬಾರಿ ನೋಂದಾಯಿಸಿದ್ದ ಎಂದು ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಮಾಹಿತಿ ನೀಡಿದೆ. ಆತನಿಗೆ ಯಾವುದೇ ಅಪರಾಧ ಹಿನ್ನೆಲೆ ಇರಲಿಲ್ಲ.
ಕ್ರುಕ್ಸ್‌ನನ್ನು ಆತನ ಸಹಪಾಠಿಗಳು ಸಾಮಾಜಿಕವಾಗಿ ಅಂತರ ಕಾಯ್ದುಕೊಳ್ಳುವವನು ಎಂದು ರೇಗಿಸುತ್ತಿದ್ದರು.ರಾಜಕೀಯದ ಬಗ್ಗೆ ಅಥವಾ ಟ್ರಂಪ್ ಬಗ್ಗೆ ಶಾಲೆಯಲ್ಲಿ ಹೆಚ್ಚು ಮಾತನಾಡಿದ ನೆನಪು ಆತನ ಸಹಪಾಠಿಗಳಿಗಿಲ್ಲ. ಆತ ಹೆಚ್ಚು ಹೆದರಿಕೊಳ್ಳುತ್ತಿದ್ದ. ವಿದ್ಯಾರ್ಥಿಗಳು ಕೂಡ ಈತನನ್ನು ಬೆದರಿಸುತ್ತಿದ್ದರು ಎಂದು ಸಹಪಾಠಿಗಳು ತಿಳಿಸಿದ್ದಾರೆ.
ಪದವಿ ಪೂರೈಸಿದ ನಂತರ ಒಂದು ನರ್ಸಿಂಗ್ ಹೋಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ. ದಾಳಿಯ ನಂತರ ಆತನ ಕಾರಿನಲ್ಲಿ ಅನುಮಾಸ್ಪದ ಸಾಧನವೊಂದು ದೊರಕಿದೆ. ಈ ಸಾಧನವು ಬಾಂಬ್ ತಂತ್ರಜ್ಞರು ಪರಿಶೀಲಿಸುವ ಸಾಧನವಾಗಿದೆ. ಅಧಿಕಾರಿಗಳು ಈತನ ಫೋನ್‌ನಲ್ಲಿ ಮತ್ತಷ್ಟು ಪರಿಶೋಧಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ನೇಪಾಳದಲ್ಲಿ ಭೂಕುಸಿತದಿಂದ ನದಿಗೆ ಉರುಳಿದ ಬಸ್: 65 ಮಂದಿ ನಾಪತ್ತೆ, 7 ಭಾರತೀಯರು ಸಾವು
ಕ್ರುಕ್ಸ್ ಕುಟುಂಬವು ಶ್ರೀಮಂತ ಹಿನ್ನೆಲೆಯನ್ನು ಹೊಂದಿರದಿದ್ದರೂ ಅನುಕೂಲಸ್ಥರಾಗಿದ್ದರು. ಆತನ ನಡವಳಿಕೆಯ ಬಗ್ಗೆ ನಿತ್ಯ ಗಮನಿಸುತ್ತಿದ್ದ ನರ್ಸಿಂಗ್ ಸಂಸ್ಥೆ ಕೂಡ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದೆ. ಕೃತ್ಯಕ್ಕೆ ಬಳಸಿದ ಗನ್ ಆತನ ತಂದೆ ಖರೀದಿಸಿದ್ದರು ಎಂದು ಎಫ್‌ಬಿಐ ತಿಳಿಸಿದೆ.
ಭಾನುವಾರ ಸಂಜೆ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ನಡೆಯುತ್ತಿದ್ದ ಚುನಾವಣಾ ಪ್ರಚಾರದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ಅಧ್ಯಕ್ಷ ಸ್ಥಾನದ ‘ರಿಪಬ್ಲಿಕನ್’ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (78) ಅವರ ಮೇಲೆ ಶನಿವಾರ ಗುಂಡಿನ ದಾಳಿ ನಡೆದು ಅವರು ಕೂದಲೆಳೆ ಅಂತರದಿಂದ ಪಾರಾಗಿದ್ದರು.
ಗುಂಡು ಹಾರಿಸಿದ್ದರಿಂದ 50 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇಬ್ಬರಿಗೆ ತೀವ್ರ ಗಾಯಗಳಾಗಿವೆ. ಅಮೆರಿಕದ ಸೀಕ್ರೆಟ್ ಸರ್ವೀಸ್‌ನ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ ಥಾಮಸ್ ಮ್ಯಾಥ್ಯೂ ಕ್ರುಕ್ಸ್ ಎಂಬಾತನನ್ನು ಹತ್ಯೆ ಮಾಡಿದ್ದರು.
ಈ ವೇಳೆ ಟ್ರಂಪ್ ಅವರ ಬಲ ಕಿವಿಯ ಭಾಗಕ್ಕೆ ಗುಂಡೇಟು ತಗುಲಿತು. ಕೂಡಲೇ ಅವರು ವೇದಿಕೆಯ ಕೆಳಗಡೆ ಕುಳಿತುಕೊಳ್ಳುವ ಮೂಲಕ, ಮತ್ತಷ್ಟು ದಾಳಿಯಿಂದ ಪಾರಾದರು. ತಕ್ಷಣವೇ ಭದ್ರತಾ ಸಿಬ್ಬಂದಿಯು ಗಾಯಗೊಂಡ ಟ್ರಂಪ್ ಅವರನ್ನು ಸುತ್ತುವರಿದು, ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದರು.