ವಿಶ್ವದ ಪ್ರಮುಖ ಜಲಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಗೆ ತಮ್ಮ ಹೆಸರಿಡಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಚಿತ್ರ ಪ್ರಸ್ತಾಪ ಇಟ್ಟಿದ್ದಾರೆ. ಮತ್ತೊಮ್ಮೆ ವಿಚಿತ್ರ ಹೇಳಿಕೆಯೊಂದಿಗೆ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ.
ತಮ್ಮ ‘ಟ್ರುತ್’ ಸೋಷಿಯಲ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಟ್ರಂಪ್, “ಹಾರ್ಮುಜ್ ಜಲಸಂಧಿಯನ್ನು ‘Trump Strait’ (ಟ್ರಂಪ್ ಜಲಸಂಧಿ) ಎಂದು ಮರುನಾಮಕರಣ ಮಾಡಬೇಕು” ಎಂದು ಹೇಳಿದ್ದಾರೆ. ಯಾವುದೇ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದಿದ್ದರೂ, ಕನಿಷ್ಠ ಅದರ ಹೆಸರನ್ನಾದರೂ ಬದಲಾಯಿಸಬಹುದು ಎಂಬ ಅರ್ಥದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಇರಾನ್ನೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿಯ ನಡುವೆ ಟ್ರಂಪ್ ಈ ಹೇಳಿಕೆ ನೀಡಿರುವುದು ಗಮನ ಸೆಳೆದಿದೆ.
ತಮ್ಮ ಹೆಸರಿನಲ್ಲಿ ಪ್ರಮುಖ ಭೌಗೋಳಿಕ ಸ್ಥಳಗಳನ್ನು ಗುರುತಿಸಬೇಕೆಂಬ ಟ್ರಂಪ್ ಅವರ ಪ್ರಯತ್ನ ಇದೇ ಮೊದಲಲ್ಲ. 2025ರಲ್ಲಿ ಅಮೆರಿಕದ ಆಡಳಿತವು ‘ಗಲ್ಫ್ ಆಫ್ ಮೆಕ್ಸಿಕೋ’ ಪ್ರದೇಶವನ್ನು ‘ಗಲ್ಫ್ ಆಫ್ ಅಮೆರಿಕ’ ಎಂದು ಕರೆಯುವ ಆದೇಶ ಹೊರಡಿಸಿತ್ತು. ಈ ಕ್ರಮವು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಇದೇ ರೀತಿ ಕೆನಡಾದೊಂದಿಗಿನ ರಾಜತಾಂತ್ರಿಕ ಅಸಮಾಧಾನದ ಸಂದರ್ಭದಲ್ಲಿ ‘ಲೇಕ್ ಒಂಟಾರಿಯೊ’ ಹೆಸರನ್ನು ಬದಲಾಯಿಸುವ ಪ್ರಸ್ತಾಪವನ್ನೂ ಟ್ರಂಪ್ ಮುಂದಿಟ್ಟಿದ್ದರು.
ಹಾರ್ಮುಜ್ ಜಲಸಂಧಿ ಒಮಾನ್ ಮತ್ತು ಇರಾನ್ ನಡುವಿನ ಕಿರಿದಾದ ಜಲಮಾರ್ಗವಾಗಿದ್ದು, ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯನ್ನು ಸಂಪರ್ಕಿಸುತ್ತದೆ. ವಿಶ್ವದ ತೈಲ ಸಾಗಣೆಯ ಸುಮಾರು 20%ಗೂ ಹೆಚ್ಚು ತೈಲವು ಮಾರ್ಗದ ಮೂಲಕ ನಡೆಯುವುದರಿಂದ, ಇದರ ಭದ್ರತೆ ಮತ್ತು ಸ್ಥಿರತೆ ಜಾಗತಿಕ ಆರ್ಥಿಕತೆಗೆ ಪ್ರಮುಖವಾಗಿದೆ.




