ವಚನ ಕಲ್ಯಾಣ | ಸತ್ಯಶುದ್ಧವಿಲ್ಲದುದು ಕಾಯಕವಲ್ಲ

Date:

ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ;
ಸತ್ಯಶುದ್ಧವಿಲ್ಲದುದು ಕಾಯಕವಲ್ಲ;
ಆಸೆಯೆಂಬುದು ಭವದ ಬೀಜ;
ನಿರಾಸೆಯೆಂಬುದು ನಿತ್ಯಮುಕ್ತಿ.
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ

- Advertisement -

ವಚನ ಚಳವಳಿಯಲ್ಲಿ ಪುರುಷರಷ್ಟೇ ಮಹಿಳೆಯರೂ ಸಾಮಾಜಿಕ ಪರಿವರ್ತನೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸ್ತ್ರೀ ಸಮಾನತೆಗೆ ಹೆಚ್ಚು ಪ್ರಾಶಸ್ತ್ಯ ನೀಡಿದ ಕಾರಣಕ್ಕೆ ತಳವರ್ಗದ ಅನೇಕ ಶರಣೆ-ಶರಣೆಯರು ಅನುಭವ ಮಂಟಪದಲ್ಲಿ ತಮ್ಮ ಚಿಂತನೆಗಳನ್ನು ಮುಕ್ತವಾಗಿ ಅಭಿವ್ಯಕ್ತಗೊಳಿಸಲು ಸಾಧ್ಯವಾಯಿತು. ಜಾತಿ, ವರ್ಗ, ಲಿಂಗ, ವರ್ಣರಹಿತ ಸಮಾಜ ರೂಪಿಸುವುದು ಶರಣರ ಘನ ಉದ್ದೇಶವಾಗಿತ್ತು. ಹಾಗಾಗಿಯೇ ಜಾತಿಯ ಗೋಡೆ ಒಡೆದು ಸಕಲ ಕಾಯಕ ಶರಣರನ್ನು ಒಗ್ಗೂಡಿಸಿದ ವಚನ ಚಳವಳಿ ಚರಿತ್ರೆಯಲ್ಲಿ ವಿಶಿಷ್ಟವಾಗಿ ದಾಖಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

ಅನುಭವ ಮಂಟಪದ ಶರಣ ಪರಂಪರೆಯಲ್ಲಿ ಬಸವಣ್ಣನವರ ಸಮಕಾಲೀನವರಾದ ಶಿವಶರಣೆ ಕಾಳವ್ವೆ ಕೂಡ ಒಬ್ಬರು. ಶರಣ ಉರಿಲಿಂಗಪೆದ್ದಿಗಳ ಧರ್ಮಪತ್ನಿ ಕಾಳವ್ವೆ ಕಾಯಕನಿಷ್ಠೆ, ಸತ್ಯ, ಭಕ್ತಿ ಹಾಗೂ ಮಾನವೀಯ ಮೌಲ್ಯಗಳ ಕುರಿತು ತನ್ನ ವಚನಗಳ ಮೂಲಕ ಲೋಕಹಿತಕ್ಕೆ ಮೌಲ್ಯ ಸಂದೇಶ ನೀಡಿದ್ದಾಳೆ. ಕಳ್ಳತನವನ್ನೇ ಬದುಕಿನ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಗಂಡ ಪೆದ್ದಣ್ಣನನ್ನು ಸತ್ಯಶುದ್ಧ ಕಾಯಕದ ಹಾದಿಗೆ ತಂದ ಕಾಳವ್ವೆಯ ಚಿಂತನೆ ವಿಶೇಷವಾದದ್ದು. ಮನುಷ್ಯನ ಬದುಕಿಗೆ ಕಾಯಕ ಅಗತ್ಯ. ಆದರೆ ಆ ಕಾಯಕ ಸತ್ಯಶುದ್ಧ ಹಾಗೂ ಮಾನವ ಜನಾಂಗಕ್ಕೆ ಒಳಿತಾಗುವಂತಿರಬೇಕೆಂಬುದು ಕಾಳವ್ವೆಯ ಆಶಯ.

ಮೋಸ, ವಂಚನೆ, ಸುಲಿಗೆ, ಕಳ್ಳತನ ಮುಂತಾದವುಗಳಿಂದ ಗಳಿಸಿದ ಸಂಪತ್ತು ಕಾಯಕ ಎನಿಸಿಕೊಳ್ಳುವುದಿಲ್ಲ. ಒಬ್ಬ ಕಳ್ಳನು ತನ್ನ ಕಳ್ಳತನದ ಕಾರ್ಯ ಯಶಸ್ವಿಯಾಗಲೆಂದು ದೇವರಲ್ಲಿ ಪ್ರಾರ್ಥಿಸಿದರೂ, ಆ ಕಾರ್ಯ ಸತ್ಯಶುದ್ಧವಲ್ಲ, ಅದು ಮಾನವ ಹಿತ ಕೆಲಸವಾಗುವುದಿಲ್ಲ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುವಾಗ ನನಗೆ ಯಾರೂ ನೋಡುತ್ತಿಲ್ಲ ಎಂದೇ ತಿಳಿಯಬಹುದು. ಆದರೆ, ಕೊನೆಗೆ ಸಿಕ್ಕಿಬಿದ್ದು ತನ್ನ ಕಳ್ಳಾಟ ಬಯಲಾಗಿ ಪೆಟ್ಟು ಬಿದ್ದ ಬಳಿಕ ತನ್ನ ಮೋಸದಾಟದ ಬಗ್ಗೆ ಅರಿವು ಆಗುವುದು. ಮತ್ತೊಬ್ಬರನ್ನು ವಂಚಿಸಿ ಹಣ ಗಳಿಸುವುದು ಕಾಯಕವಲ್ಲ, ಅದು ದ್ರೋಹ, ಅನ್ಯಾಯ, ಸಮಾಜಘಾತುಕ ಕೆಲಸಕ್ಕೆ ಸಮವಾಗುತ್ತದೆ.

ಕಾಯಕದ ಶ್ರೇಷ್ಠತೆ ವೃತ್ತಿಯಲಿಲ್ಲ, ಅದನ್ನು ಮಾಡುವ ಉದ್ದೇಶ, ಪ್ರಾಮಾಣಿಕತೆ ಮತ್ತು ಸಮಾಜಕ್ಕೆ ಅದರ ಫಲದಲ್ಲಿ ಇದೆ. ಈ ಮೇಲಿನ ವಚನದಲ್ಲಿ ಕಾಳವ್ವೆ ಭೌತಿಕ ಪ್ರಪಂಚದ ಕಾಯಕಪ್ರಜ್ಞೆಯನ್ನು ತಾತ್ವಿಕತೆಗೆ ಕೊಂಡೊಯ್ಯುತ್ತಾಳೆ. ಕಾಯಕ ಮಾಡದೇ ಗುರು-ಲಿಂಗ-ಜಂಗಮ ದಾಸೋಹಕ್ಕಾಗಿ, ಸ್ವಾಲಂಬನೆ ಬದುಕು ನಡೆಸುವವರು ಭಕ್ತರಾಗುವುದಿಲ್ಲ. ಕಾಯಕ ಸತ್ಯವಿರಬೇಕು. ಶುದ್ಧವಾಗಿರಬೇಕು. ಬೆವರಿನ ಶ್ರಮದಿಂದ ಬಂದ ಆದಾಯ ತನ್ನ ಬದುಕಿನ ಘನತೆ, ಸ್ವಾಭಿಮಾನದ ಜೊತೆಗೆ ಸಮಾಜದ ಒಳಿತು ಬಯಸುತ್ತದೆ ಎಂಬ ಚಿಂತನೆ ಕಾಳವ್ವೆ ತಿಳಿಸುತ್ತಾಳೆ.

ಲಾಂಛನಗಳು ಮಾತ್ರ ಭಕ್ತಿಯ ಲಕ್ಷಣಗಳಲ್ಲ. ಅಂತರಂಗದಲ್ಲಿ ಶುದ್ಧತೆ, ನಡೆ-ನುಡಿಯಲ್ಲಿ ಪ್ರಾಮಾಣಿಕತೆ, ಬದುಕಿನಲ್ಲಿ ಸದಾಚಾರ ಮತ್ತು ಕಾಯಕದಲ್ಲಿ ನಿಷ್ಠೆ ಇರುವುದೇ ನಿಜವಾದ ಭಕ್ತಿ . ಡಾಂಭಿಕ ಭಕ್ತಿಗಿಂತ ನಿಷ್ಠೆಯ ಕಾಯಕವೇ ಶ್ರೇಷ್ಠ. ಸರಳತೆ, ಸದ್ವಿಚಾರ, ಸದ್ಬುದ್ಧಿ ಹಾಗೂ ಮಾನವೀಯತೆ ಹೊಂದಿದ ವ್ಯಕ್ತಿಯ ಬದುಕೇ ನೈಜ ಭಕ್ತಿಯ ಬದುಕು. ಅಂತರಂಗ ಒಂದು, ಬಹಿರಂಗ ಮತ್ತೊಂದು ಆಗಿರುವ ಜೀವನದಲ್ಲಿ ಭಕ್ತಿಯ ಸಾರ್ಥಕತೆ ಕಾಣಲು ಸಾಧ್ಯವಿಲ್ಲ ಎಂಬುದು ಕಾಳವ್ವೆಯ ಸಾಮಾಜಿಕ ಕಾಳಜಿ.

ಆಸೆ ಮನುಷ್ಯನ ನೆಮ್ಮದಿ ಕೆಡಿಸುವುದು ಸಹಜ. ಅಗತ್ಯಕ್ಕಿಂತ ಹೆಚ್ಚು ಸಂಪತ್ತು ಗಳಿಸುವುದು, ಅಧಿಕಾರ, ಪ್ರತಿಷ್ಠೆ ಗಳಿಸಬೇಕೆಂಬ ಹಪಾಹಪಿ ಮನುಷ್ಯನನ್ನು ಅಡ್ಡದಾರಿಗೆ ಕೊಂಡೊಯ್ಯಬಹುದು. ಕಾಳವ್ವೆ ʼಆಸೆಯೆಂಬುದು ಭವದ ಬೀಜ, ನಿರಾಸೆಯೆಂಬುದು ನಿತ್ಯಮುಕ್ತಿʼ ಎಂದು ಹೇಳುತ್ತಾಳೆ. ಆಸೆ ಭವ ಬಂಧನಕ್ಕೆ ಕಾರಣವಾದರೆ, ನಿರಾಸಕ್ತಿ ಮುಕ್ತಿಯ ದಾರಿ ತೋರಿ ಸಾರ್ಥಕ ಬದುಕಿಗೆ ಕಾರಣವಾಗುತ್ತದೆ. ಅಲ್ಲಮಪ್ರಭು ʼಮನದ ಮುಂದಣ ಆಸೆಯೇ ಮಾಯೆ ಕಾಣಾʼ ಎಂದು ಹೇಳುತ್ತಾರೆ. ಆಯ್ದಕ್ಕಿ ಲಕ್ಕಮ್ಮ ʼಆಸೆ ಎಂಬುದು ಅರಸಿಂಗಲ್ಲದೆ ಶಿವಭಕ್ತರಿಗುಂಟೆ ಅಯ್ಯಾ?ʼ ಎಂದು ಪ್ರಶ್ನಿಸುತ್ತಾಳೆ. ಐಹಿಕ ಜಗತ್ತಿನ ಸಕಲ ಸಂಪತ್ತು, ವಸ್ತುಗಳೆಲ್ಲವು ತನಗೆ ಬೇಕೆಂಬುದನ್ನು ನಿಯಂತ್ರಿಸಿಕೊಂಡು ಸತ್ಯಶುದ್ಧ ಕಾಯಕದಲ್ಲಿ ಜೀವಿಸುವುದೇ ಶರಣರ ಜೀವನದ ಪ್ರಮುಖ ತತ್ವ.

“ವ್ರತ ಹೋದಾಗಳೆ ಇಷ್ಟಲಿಂಗದ ಕಳೆ ನಷ್ಟವವ್ವಾ. ಅವರು ಲಿಂಗವಿದ್ದೂ ಭವಿಗಳು. ಅದು ಹೇಗೆಂದಡೆ: ಪ್ರಾಣವಿಲ್ಲದ ದೇಹದಂತೆ.
ಉರಿಲಿಂಗಪೆದ್ದಿಗಳರಸ ಬಲ್ಲನೊಲ್ಲನವ್ವಾ” ಎಂಬ ಮತ್ತೊಂದು ವಚನದಲ್ಲಿ ಕಾಳವ್ವೆ ಲಿಂಗಾಂಗ ಸಾಮರಸ್ಯ ಕುರಿತು ವಿಶ್ಲೇಷಿಸುತ್ತಾರೆ.

ಬಾಹ್ಯ ಆಚರಣೆಗಿಂತ ಆಂತರಿಕ ನಿಷ್ಠೆಯೇ ಮುಖ್ಯವಾಗಿದೆ. ಲಿಂಗಾಧಾರಣೆ ಒಂದು ಆಧ್ಯಾತ್ಮಿಕ ಸಂಕೇತ ಹೌದು. ಆದರೆ ಅದರ ತತ್ವವನ್ನು ವ್ರತದಂತೆ ಆಚರಿಸದವರು ಲಿಂಗವಿದ್ದೂ ಭವಿಗಳೇ ಎಂದು ಹೇಳುತ್ತಾಳೆ. ಧಾರ್ಮಿಕ ಸಂಕೇತ, ತೋರಿಕೆಯ ಭಕ್ತಿಗಿಂತ ಸತ್ಯನಿಷ್ಠ ಜೀವನ, ಸದಾಚಾರ, ಕಾಯಕ ಮತ್ತು ಮಾನವೀಯತೆ ಪ್ರಮುಖವಾಗಿದೆ. ಮೇಲ್ನೋಟಕ್ಕೆ ವಿಭೂತಿ, ಲಿಂಗ ಧರಿಸಿ ತತ್ವದ ಆಚರಣೆ ಇಲ್ಲದಿದ್ದರೆ ʼಪ್ರಾಣವಿಲ್ಲದ ದೇಹದಂತೆʼ ಆಗುವುದು. ಲಿಂಗ ಧರಿಸುವುದಷ್ಟೇ ಭಕ್ತಿ ಅಲ್ಲ, ಲಿಂಗತತ್ವ ಅನುಸರಿಸಿ ಬದುಕುವುದೇ ನಿಷ್ಠೆಯ ಭಕ್ತಿ ಎಂದು ಕಾಳವ್ವೆ ಸ್ಪಷ್ಟಪಡಿಸುತ್ತಾಳೆ.

ಕುರಿ ಕೋಳಿ ಕಿರಿಮೀನು ತಿಂಬವರಿಗೆಲ್ಲ
ಕುಲಜ ಕುಲಜರೆಂದೆಂಬರು.
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ
ಮಾದಿಗ ಕೀಳುಜಾತಿಯೆಂಬರು.
ಅವರೆಂತು ಕೀಳುಜಾತಿಯಾದರು?
ಜಾತಿಗಳು ನೀವೇಕೆ ಕೀಳಾಗಿರೊ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ
ನಾಯಿ ನೆಕ್ಕಿ ಹೋಯಿತು.
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ
ಶೋಭಿತವಾಯಿತು.
ಅದೆಂತೆಂದಡೆ:
ಸಿದ್ದಲಿಕೆಯಾಯಿತು, ಸಗ್ಗಳೆಯಾಯಿತು.
ಸಿದ್ದಲಿಕೆಯ ತುಪ್ಪವನು, ಸಗ್ಗಳೆಯ ನೀರನು
ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ
ನಾಯಕನರಕ ತಪ್ಪದಯ್ಯಾ.
ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ.

ಅಸಮಾನತೆ ಸಮಾಜ, ರಾಜ್ಯಶಾಹಿ ವ್ಯವಸ್ಥೆಯಿಂದಾಗಿ ಶೋಷಣೆಗೆ ಒಳಪಟ್ಟ ಕಾಯಕಜೀವಿಗಳೆಲ್ಲರೂ ವಚನ ಚಳವಳಿ ತರುವಾಯ ಶೋಷಣೆಯಿಂದ ವಿಮೋಚನೆಗೊಂಡರು. ಜಾತಿ, ಮತ, ಕುಲ ಭೇದಗಳಿಂದ ಮುಕ್ತರಾಗಿ ಸರ್ವಸಮಾನತೆ ತತ್ವ ರೂಪಿಸಿದರು. ಕಾಳವ್ವೆ ದಲಿತ ಸಮುದಾಯದ ವಚನಕಾರ್ತಿ, ಒಬ್ಬ ಸಾಮಾನ್ಯ ಹೆಣ್ಣು ಮಗಳು ಅಂದಿನ ಜಾತಿವ್ಯವಸ್ಥೆ ವಿರುದ್ಧ ಬಂಡಾಯದ ಧ್ವನಿಯಾಗಿ ಸಮಾಜವನ್ನು ಎಚ್ಚರಗೊಳಿಸಿದ್ದನ್ನು ಈ ಮೇಲಿನ ವಚನದಲ್ಲಿ ನೋಡಿದಾಗ ಆಕೆಯ ದಿಟ್ಟತನಕ್ಕೆ ಜೀವಂತ ಸಾಕ್ಷಿಯಾಗಿದೆ.

ವ್ರತಾಚರಣೆ ಮಹತ್ವ, ಕಾಯಕನಿಷ್ಠೆ, ಪ್ರಸಾದ ಕುರಿತು ಕಾಳವ್ವೆಗೆ ಇರುವ ಕಾಳಜಿ ಆಕೆಯ ವಚನಗಳಲ್ಲಿ ಕಾಣುತ್ತೇವೆ. ಅಲ್ಲದೆ ಅಂದಿನ ಕಾಲದಲ್ಲಿನ ಜಾತಿವ್ಯವಸ್ಥೆ, ಅಸ್ಪ್ರಶ್ಯತೆ, ಮೇಲು-ಕೀಳು ಎಂಬ ಭೇದ-ಭಾವವನ್ನು ಕಣ್ಣಾರೆ ಕಂಡು ಅನುಭವಿಸಿದ ಕಾಳವ್ವೆ ಜಾತಿ ವ್ಯವಸ್ಥೆಯ ದ್ವಂದ್ವ ನೀತಿಯನ್ನು ಅತ್ಯಂತ ತೀಕ್ಷ್ಣವಾಗಿ ಪ್ರಶ್ನಿಸುತ್ತಾಳೆ. ಕಾಳವ್ವೆ ʼಉರಿಲಿಂಗಪೆದ್ದಿಗಳರಸʼ ಅಂಕಿತದಲ್ಲಿ ರಚಿಸಿದ ಒಟ್ಟು 12 ವಚನಗಳು ಲಭ್ಯವಾಗಿವೆ. ಅದರಲ್ಲಿ ಜಾತಿವ್ಯವಸ್ಥೆಯನ್ನು ಕಠೋರವಾಗಿ ಪ್ರಶ್ನಿಸಿದ್ದು ಕಾಣುತ್ತೇವೆ.

ಉಚ್ಛ ಕುಲದವರು ಎಂದು ಹೇಳಿಕೊಳ್ಳುವವರು ದೇವರಿಗೆ ಪಂಚಾಮೃತಕ್ಕಾಗಿ ಹಾಲು ನೀಡುವ ಪಶುವನ್ನು ಸಾಕುವ ಸಮುದಾಯವನ್ನೇ ಕೀಳುಜಾತಿ ಎಂದು ಕರೆಯುವುದು ಯಾವ ನ್ಯಾಯ? ಶ್ರೇಷ್ಠ-ಕನಿಷ್ಠ ಎಂಬ ತಾರತಮ್ಯ ಕುರಿತು ಕಾಳವ್ವೆ ಪ್ರಶ್ನಿಸುತ್ತಾಳೆ. ಶುದ್ಧ-ಅಶುದ್ಧದ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವ ಮನೋಭಾವವನ್ನು ಕಾಳವ್ವೆ ವಿಡಂಬಿಸುತ್ತಾಳೆ. ಶರಣತತ್ವದಲ್ಲಿ ಮೇಲು-ಕೀಳು, ಶುದ್ಧ-ಅಶುದ್ಧ, ಕರಿಯ-ಬಿಳಿಯ, ಹೆಣ್ಣು-ಗಂಡು ಎಂಬಿತ್ಯಾದ ಭೇದಗಳಿಲ್ಲ. ಜಾತಿರಹಿತ, ವರ್ಗರಹಿತ, ವರ್ಣರಹಿತ, ಲಿಂಗಭೇದ ರಹಿತ ಸರ್ವಸಮಾನತೆ ಸಮಾಜ ನಿರ್ಮಿಸುವ ಮನುಷ್ಯತ್ವದ ಕಾಳಜಿ ಶರಣರದಾಗಿತ್ತು.

ಶರಣರು ʼಇವನಾರವʼ ಸಂಸ್ಕೃತಿ ಅಲ್ಲಗಳೆದು ʼಇವನಮ್ಮವʼ ಎಂಬ ಸಂಸ್ಕೃತಿ ಜಾರಿಗೆ ತಂದರು. ಅದಕ್ಕೆ ವಚನ ಚಳವಳಿಯನ್ನು ಸಕಲ ಜೀವಾತ್ಮರಿಗೆ ಲೇಸು ಬಯಸುವ ಮಾನವೀಯ ಮೌಲ್ಯಗಳ ಸಾಮಾಜಿಕ ಪರಿವರ್ತನೆಯ ಕಾಲ ಎಂದೇ ಹೇಳಬಹುದು. ಕಾಯಕದಲ್ಲಿ ಸತ್ಯ-ಶುದ್ಧ ಹಾಗೂ ಪ್ರಾಮಾಣಿಕತೆ ಬಯಸುವರು ಜಾತಿವ್ಯವಸ್ಥೆಯ ಪರದೆ ದಾಟಿ ಹೊರಬರಬೇಕಿದೆ. ಕಾಯಕದಲ್ಲಿಯೂ ಜಾತಿ ತಾರತಮ್ಯ, ಮೇಲು-ಕೀಳೆಂಬ ಭಾವ ಒಳಹೊಕ್ಕರೆ ಅದು ಸತ್ಯಶುದ್ಧ ಕಾಯಕ ಎನಿಸುವುದಿಲ್ಲ ಎಂಬುದು ಶರಣರ ನಿಲುವು.

ಇದನ್ನೂ ಓದಿ : ವಚನ ಕಲ್ಯಾಣ | ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ?

ಪ್ರಸ್ತುತ ಸಮಾಜದಲ್ಲಿ ಇಂದಿಗೂ ಜೀವಂತವಾಗಿರುವ ಡಾಂಭೀಕತೆ, ಜಾತಿವ್ಯವಸ್ಥೆ, ಮೇಲು-ಕೀಳೆಂಬ ಭೇದ-ಭಾವ ತೊಡೆದುಹಾಕಲು ಕಾಳವ್ವೆಯ ವಚನಗಳು ಬೆಳಕಿನಂತಿವೆ. ಸತ್ಯಶುದ್ಧ ಕಾಯಕ, ಸರಳ ಬದುಕು, ಸಮಾನತೆಯ ದೃಷ್ಟಿ ಮತ್ತು ಆಸೆರಹಿತ ಮನಸ್ಸು ಸರಳವಲ್ಲ. ಸೈದ್ಧಾಂತಿಕ ಸ್ಪಷ್ಟತೆ ಇಲ್ಲದ ವ್ಯಕ್ತಿ ದ್ವಂದ ನೀತಿಯಲ್ಲೇ ಕಾಲಕಳೆಯುತ್ತಾನೆ. ಬದುಕು ನಿತ್ಯಮುಕ್ತಿ ಆಗಬೇಕಾದರೆ ಶರಣ ಮಾರ್ಗದಲ್ಲಿ ಸಾಗಬೇಕು ಎಂಬುದು ವಚನಕಾರರ ಸದಾಶಯ.

(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಸರಣಿ ಲೇಖನ ʼಈದಿನ ಡಾಟ್ ಕಾಮ್‌ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ: ಸಾಕ್ಷ್ಯ ಸಂಗ್ರಹಕ್ಕೆ ಸುಪ್ರೀಂ ಕೋರ್ಟ್ ಸಮಿತಿಯಿಂದ ವಿಶೇಷ ಪೋರ್ಟಲ್

ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈ ತಿಂಗಳಲ್ಲಿ ನಡೆದ ಪ್ರತಿಭಟನೆ ವೇಳೆ ಪೆಲೆಟ್...

ಬೀದರ್‌ | ಖಾಸಗಿ ಬಸ್‌ಗಳ ದುಬಾರಿ ಟಿಕೆಟ್ ದರಕ್ಕೆ ಕಡಿವಾಣ ಹಾಕಿ

ದಸರಾ ಹಾಗೂ ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರಿಂದ ದುಬಾರಿ ಟಿಕೆಟ್ ದರ...