ವಿದೇಶಗಳಲ್ಲಿ ನಿರ್ಮಾಣವಾಗುವ ಚಲನಚಿತ್ರಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಶೇಕಡ 100ರಷ್ಟು ಸುಂಕವನ್ನು ಘೋಷಿಸಿದ್ದಾರೆ. “ಅಮೆರಿಕದಲ್ಲಿನ ಚಲನಚಿತ್ರೋದ್ಯಮವು ಅತ್ಯಂತ ವೇಗವಾಗಿ ನಾಶವಾಗುತ್ತಿದೆ” ಎಂದು ಟ್ರಂಪ್ ಹೇಳಿದ್ದಾರೆ.
“ಇತರ ದೇಶಗಳು ನಮ್ಮ ಚಲನಚಿತ್ರ ನಿರ್ಮಾಪಕರು ಮತ್ತು ಸ್ಟುಡಿಯೋಗಳನ್ನು ಅಮೆರಿಕದಿಂದ ದೂರ ಸೆಳೆಯಲು ಎಲ್ಲಾ ರೀತಿಯ ಪ್ರೋತ್ಸಾಹಗಳನ್ನು ನೀಡುತ್ತಿವೆ. ಹಾಲಿವುಡ್ ಮತ್ತು ಅಮೆರಿಕದಲ್ಲಿನ ಇತರ ಹಲವು ಪ್ರದೇಶಗಳು ಧ್ವಂಸಗೊಳ್ಳುತ್ತಿವೆ. ಇದು ಇತರ ರಾಷ್ಟ್ರಗಳ ಸಂಘಟಿತ ಪ್ರಯತ್ನ. ಅದರಿಂದಾಗಿ ರಾಷ್ಟ್ರೀಯ ಭದ್ರತಾ ಬೆದರಿಕೆಯಿದೆ” ಎಂಬ ಟ್ರಂಪ್ ಹೇಳಿರುವುದಾಗಿ ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ.
ಇದನ್ನು ಓದಿದ್ದೀರಾ? ಟ್ರಂಪ್ ಒತ್ತಡಕ್ಕೆ ಬಗ್ಗಿ ‘ಸ್ಟಾರ್‌ಲಿಂಕ್’ ಪರವಾನಗಿ ನೀಡಿದರೆ ಮೋದಿ?
“ಹಾಲಿವುಡ್ ನಾಶವಾಗುತ್ತಿದೆ. ವಿದೇಶದಲ್ಲಿ ನಿರ್ಮಾಣವಾಗುವ ನಮ್ಮ ದೇಶಕ್ಕೆ ಬರುವ ಯಾವುದೇ ಮತ್ತು ಎಲ್ಲಾ ಚಲನಚಿತ್ರಗಳ ಮೇಲೆ ಶೇಕಡ 100ರಷ್ಟು ಸುಂಕವನ್ನು ವಿಧಿಸುವ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಲು ನಾನು ವಾಣಿಜ್ಯ ಇಲಾಖೆ ಮತ್ತು ಅಮೆರಿಕದ ವ್ಯಾಪಾರ ಪ್ರತಿನಿಧಿಗೆ ಅಧಿಕಾರ ನೀಡುತ್ತಿದ್ದೇನೆ. ನಾವು ಮತ್ತೆ ಅಮೆರಿಕದಲ್ಲಿ ನಿರ್ಮಿಸುವ ಚಲನಚಿತ್ರಗಳನ್ನು ಬಯಸುತ್ತೇವೆ” ಎಂದು ಟ್ರಂಪ್ ಹೇಳಿದರು.
ಯುಎಸ್ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿದೇಶಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸುವ, ವಿದೇಶಿ ಅಥವಾ ಅಮೆರಿಕದ ನಿರ್ಮಾಣ ಕಂಪನಿಗಳನ್ನು ಗುರಿಯಾಗಿಸಿಕೊಂಡು ಸುಂಕ ವಿಧಿಸಲಾಗುತ್ತದೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ಏಪ್ರಿಲ್ 10ರಂದು ಟ್ರಂಪ್ ಚೀನೀ ಸರಕುಗಳ ಮೇಲಿನ ಸುಂಕವನ್ನು ಶೇಕಡ 125ಕ್ಕೆ ಹೆಚ್ಚಿಸಲಾಗಿದೆ. ಇದಾದ ನಂತರ ಚೀನಾದ ಚಲನಚಿತ್ರ ಆಡಳಿತ ಹೇಳಿಕೆ ನೀಡಿದೆ. “ಚೀನಾ ಮೇಲೆ ಯುಎಸ್ ಸರ್ಕಾರ ವಿವೇಚನಾರಹಿತವಾಗಿ ಸುಂಕವನ್ನು ವಿಧಿಸುವ ತಪ್ಪು ಕ್ರಮವು ಅಮೆರಿಕ ಚಲನಚಿತ್ರಗಳ ಮೇಲೆ ಚೀನಾದ ಪ್ರೇಕ್ಷಕರ ಉತ್ತಮ ಅಭಿಪ್ರಾಯವನ್ನು ಕಡಿಮೆ ಮಾಡುತ್ತದೆ” ಎಂದು ಹೇಳಿದೆ.
ಜನವರಿಯಲ್ಲಿ ಮೂರನೇ ಬಾರಿಗೆ ಅಮೆರಿಕದ ಅಧ್ಯಕ್ಷರಾದ ಟ್ರಂಪ್ ಚೀನಾದೊಂದಿಗೆ ವ್ಯಾಪಾರ ಯುದ್ಧವನ್ನು ಪ್ರಾರಂಭಿಸಿದ್ದಾರೆ. ಹಾಗೆಯೇ ಜಾಗತಿಕವಾಗಿ ಸುಂಕವನ್ನು ವಿಧಿಸಿದ್ದಾರೆ. ಚೀನಾ ಮಾತ್ರವಲ್ಲದೇ ಭಾರತದ ವಸ್ತುಗಳ ಮೇಲೆಯೂ ಸುಂಕವನ್ನು ಹೆಚ್ಚಿಸಿದ್ದಾರೆ.
