ಅಮೆರಿಕದ ಹೊರಗೆ ನಿರ್ಮಾಣವಾಗುವ ಎಲ್ಲ ಚಿತ್ರಗಳ ಮೇಲೂ ಶೇ. 100 ರಷ್ಟು ಸುಂಕವನ್ನು ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಟ್ರೂತ್ ಸೋಷಿಯಲ್‌ನಲ್ಲಿ ಘೋಷಿಸಿದ್ದಾರೆ.
ಅಮೆರಿಕದ ಚಲನಚಿತ್ರ ಉದ್ಯಮವನ್ನು ಇತರ ರಾಷ್ಟ್ರಗಳು ಕಸಿದುಕೊಂಡಿವೆ ಎಂದು ಟ್ರಂಪ್ ಆರೋಪಿಸಿದರು. ನಮ್ಮ ಸಿನಿಮಾ ತಯಾರಿಕಾ ವ್ಯವಹಾರವನ್ನು ಬೇರೆ ರಾಷ್ಟ್ರಗಳು ಕದ್ದುಕೊಂಡಿವೆ. ಇದು ಮಗುವಿನಿಂದ ಕ್ಯಾಂಡಿ ಕಸಿದುಕೊಳ್ಳುವಂತಹದ್ದಾಗಿದೆ, ಎಂದು ಅವರು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಮೇ ತಿಂಗಳಲ್ಲಿ ಟ್ರಂಪ್ ವಾಣಿಜ್ಯ ಇಲಾಖೆ ಹಾಗೂ ಅಮೆರಿಕ ವಾಣಿಜ್ಯ ಪ್ರತಿನಿಧಿಗಳಿಗೆ (USTR) ಈ ದಂಡ ಸುಂಕದ ಪ್ರಕ್ರಿಯೆಯನ್ನು ಆರಂಭಿಸಲು ಸೂಚಿಸಿದ್ದರು. ಆ ವೇಳೆಗೆ ಅವರು, “ಅಮೆರಿಕದ ಸಿನಿಮಾ ಉದ್ಯಮ ಅತ್ಯಂತ ವೇಗವಾಗಿ ಸಾಯುತ್ತಿದೆ” ಎಂದು ಎಚ್ಚರಿಕೆ ನೀಡಿದ್ದರು.
ಇದು ಕೇವಲ ಆರ್ಥಿಕ ವಿಚಾರವಲ್ಲ, ರಾಷ್ಟ್ರೀಯ ಭದ್ರತೆಗೂ ಸಂಬಂಧಿಸಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಇದು ಸಂದೇಶ ಹಾಗೂ ಪ್ರಚಾರದ ವಿಷಯವೂ ಆಗಿದೆ. ನಾವು ಮತ್ತೆ ಸಿನಿಮಾಗಳನ್ನು ಅಮೆರಿಕದಲ್ಲೇ ನಿರ್ಮಿಸಬೇಕಾಗಿದೆ ಎಂದು ಒತ್ತಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಹಿಂದುಳಿದ ವರ್ಗಗಳ ಹಿತಕ್ಕೆ ಕೊಳ್ಳಿ ಇಡಲು ಹೊರಟ ಬಿಜೆಪಿ
ಆದರೆ ತಜ್ಞರ ಅಭಿಪ್ರಾಯದಲ್ಲಿ ಈ ನೀತಿ ಹಾಲಿವುಡ್‌ಗೆ ತೊಂದರೆಯನ್ನು ಉಂಟುಮಾಡುವ ಸಾಧ್ಯತೆ ಇದೆ. ಡಿಸ್ನಿ, ಪ್ಯಾರಮೌಂಟ್, ವಾರ್ನರ್ ಬ್ರದರ್ಸ್ ಮುಂತಾದ ಅಮೆರಿಕ ಸ್ಟುಡಿಯೋಗಳು ಖರ್ಚು ಕಡಿಮೆ ಮಾಡಲು ಅನೇಕ ಬಾರಿ ವಿದೇಶಗಳಲ್ಲಿ ಚಿತ್ರೀಕರಣ ಮಾಡುತ್ತವೆ. ಈಗಾಗಲೇ ಕೋವಿಡ್ ನಂತರ ಚೇತರಿಸಿಕೊಳ್ಳುತ್ತಿರುವ ಈ ಕಂಪನಿಗಳಿಗೆ ಹೆಚ್ಚುವರಿ ಹೊರೆ ಬೀಳಬಹುದು ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಚೀನಾದೊಂದಿಗೆ ಹೆಚ್ಚುತ್ತಿರುವ ವ್ಯಾಪಾರ ಗದ್ದಲದ ನಡುವೆ ಈ ನಿರ್ಧಾರ ಹೊರಬಿದ್ದಿದ್ದು ಗಮನಾರ್ಹ. ಚೀನಾ ಜಗತ್ತಿನ ದ್ವಿತೀಯ ಅತಿದೊಡ್ಡ ಚಿತ್ರ ಮಾರುಕಟ್ಟೆಯಾಗಿದ್ದು, ಇದರ ಪರಿಣಾಮ ವ್ಯಾಪಕವಾಗಬಹುದೆಂದು ತಜ್ಞರು ಸೂಚಿಸಿದ್ದಾರೆ.
ಸೋಮವಾರದ ಘೋಷಣೆಯ ನಂತರ ನೆಟ್‌ಫ್ಲಿಕ್ಸ್, ವಾರ್ನರ್ ಬ್ರದರ್ಸ್, ಡಿಸ್ಕವರಿ ಮುಂತಾದ ಮನರಂಜನಾ ಕಂಪನಿಗಳ ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಇಳಿಕೆಯಾಗಿದ್ದವು.
