ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುರೋಪಿಯನ್ ಒಕ್ಕೂಟಕ್ಕೆ ಭಾರತ ಮತ್ತು ಚೀನಾ ಮೇಲೆ ಶೇ.100ರಷ್ಟು ಸುಂಕ ವಿಧಿಸಲು ಒತ್ತಾಯಿಸಿದ್ದಾರೆ ಎನ್ನುವ ವರದಿಯಾಗಿದೆ. ರಷ್ಯಾದಿಂದ ಭಾರತ ತೈಲ ಖರೀದಿ ತಡೆಯುವುದು ಟ್ರಂಪ್ ಗುರಿಯಾಗಿದೆ.
ಈ ಮೂಲಕ ಡೊನಾಲ್ಡ್ ಟ್ರಂಪ್ ಅವರು ಚೀನಾ ಮತ್ತು ಭಾರತಕ್ಕೆ ಮತ್ತೊಂದು ಹೊಡೆತ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ. ಅಮೆರಿಕದ ಅಧಿಕಾರಿಗಳು ಮತ್ತು ಯುರೋಪಿಯನ್ ಒಕ್ಕೂಟದ (ಇಯು) ರಾಜತಾಂತ್ರಿಕರ ಪ್ರಕಾರ, ಚೀನಾ ಮತ್ತು ಭಾರತದ ಮೇಲೆ ಶೇ.100 ರಷ್ಟು ಸುಂಕ ವಿಧಿಸುವಂತೆ ಟ್ರಂಪ್ ಯುರೋಪಿಯನ್ ಒಕ್ಕೂಟಕ್ಕೆ ಮನವಿ ಮಾಡಿದ್ದಾರೆ. ಇದರಿಂದ ರಷ್ಯಾದ ಮೇಲೆ ಒತ್ತಡ ಹೆಚ್ಚಾಗುತ್ತದೆ ಮತ್ತು ಆ ಮೂಲಕ ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳುತ್ತದೆ ಎಂದು ಟ್ರಂಪ್ ಯುರೋಪಿಯನ್ ಒಕ್ಕೂಟದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಟ್ರಂಪ್ ಅವರ ಹೊಸ ಆಟದ ಯೋಜನೆಯ ಉದ್ದೇಶ ರಷ್ಯಾದ ತೈಲವನ್ನು ಖರೀದಿಸುವ ಮೂಲಕ ರಷ್ಯಾದ ಆರ್ಥಿಕತೆಯನ್ನು ಬೆಂಬಲಿಸುತ್ತಿರುವ ದೇಶಗಳನ್ನು ಗುರಿಯಾಗಿಸುವುದು ಎನ್ನಲಾಗಿದೆ.
ಯುರೋಪಿಯನ್ ಒಕ್ಕೂಟದ ನಿರ್ಬಂಧಗಳ ರಾಯಭಾರಿ ಡೇವಿಡ್ ಒ’ಸುಲ್ಲಿವಾನ್ ಮತ್ತು ಇತರ ಅಧಿಕಾರಿಗಳೊಂದಿಗೆ ನಡೆದ ಸಮ್ಮೇಳನ ಕರೆಯ ಸಂದರ್ಭದಲ್ಲಿ ಟ್ರಂಪ್ ಈ ಬೇಡಿಕೆಯನ್ನು ಮಂಡಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿ ಮತ್ತು ಯುರೋಪಿಯನ್ ರಾಜತಾಂತ್ರಿಕರೊಬ್ಬರು ಹೇಳಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್ ಉಲ್ಲೇಖಿಸಿದೆ.
ಯುರೋಪಿಯನ್ ಒಕ್ಕೂಟವು ರಷ್ಯಾವನ್ನು ಪ್ರತ್ಯೇಕಿಸಲು ಆರ್ಥಿಕ ನಿರ್ಬಂಧಗಳ ಮೇಲೆ ಹೆಚ್ಚು ಗಮನಹರಿಸುತ್ತಿದೆ. ಆದರೆ ಟ್ರಂಪ್ ಅವರ ಈ ಹೊಸ ಪ್ರಸ್ತಾಪ ಸುಂಕ ಆಧಾರಿತ ತಂತ್ರವನ್ನು ಅಳವಡಿಸಿಕೊಳ್ಳಲು ಒತ್ತಾಯಿಸಬಹುದು. ಹಣಕಾಸು ಪತ್ರಿಕೆ ಫೈನಾನ್ಷಿಯಲ್ ಟೈಮ್ಸ್ ಪ್ರಕಾರ, ಟ್ರಂಪ್ ಭಾರತ ಮತ್ತು ಚೀನಾದ ಮೇಲೆ ಸುಂಕಗಳನ್ನು ಹೆಚ್ಚಿಸುವುದಾಗಿ ಈ ಹಿಂದೆ ಹಲವು ಬಾರಿ ಬೆದರಿಕೆ ಹಾಕಿದ್ದರು.
ಟ್ರಂಪ್ ಮೊದಲು ಭಾರತೀಯ ಉತ್ಪನ್ನಗಳ ಮೇಲೆ ಶೇ.25 ವರೆಗೆ ಸುಂಕಗಳನ್ನು ವಿಧಿಸಿದರು ಮತ್ತು ನಂತರ ರಷ್ಯಾದಿಂದ ತೈಲವನ್ನು ಖರೀದಿಸುವುದನ್ನು ಮುಂದುವರಿಸಲು ಶೇ.25 ಹೆಚ್ಚುವರಿ ಸುಂಕಗಳನ್ನು ವಿಧಿಸಿದರು. ನಂತರ ಭಾರತೀಯ ಉತ್ಪನ್ನಗಳ ಮೇಲಿನ ಅಮೆರಿಕ ಸುಂಕವು ಶೇ.50ಕ್ಕೆ ಏರಿದೆ.
ಈ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತ್ತು ಅಮೆರಿಕ ನಡುವಿನ ಸ್ನೇಹವನ್ನು ಹಿಂದಿನಂತೆ ಮುಂದುವರಿಸುವ ಬಗ್ಗೆ ಇಬ್ಬರು ನಾಯಕರು ಪರಸ್ಪರ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದನ್ನು ಗಮನಿಸಬಹುದು.
“ಭಾರತ ಮತ್ತು ಅಮೆರಿಕ ದೇಶಗಳು ವ್ಯಾಪಾರ ಮಾತುಕತೆ ಕುರಿತು ಶೀಘ್ರವಾಗಿ ಅಂತಿಮ ತೀರ್ಮಾನಕ್ಕೆ ಬರಲಿವೆ. ಮುಂಬರುವ ವಾರಗಳಲ್ಲಿ ಉತ್ತಮ ಸ್ನೇಹಿತರಾಗಿರುವ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಲು ಎದುರು ನೋಡುತ್ತಿದ್ದೇನೆ” ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಹೇಳಿಕೆ ಉಲ್ಲೇಖಿಸಿ ಪ್ರಧಾನಿ ಮೋದಿ ಸಹ ಟ್ವೀಟ್ ಮಾಡಿ, “ಭಾರತ-ಅಮೇರಿಕಾ ಆಪ್ತ ಸ್ನೇಹಿತರು ಮತ್ತು ನೈಸರ್ಗಿಕ ಪಾಲುದಾರರು. ನಿಮ್ಮೊಂದಿಗೆ ಮಾತನಾಡಲು ನಾನೂ ಉತ್ಸುಕನಾಗಿದ್ದೇನೆ” ಎಂದಿದ್ದಾರೆ.