ಪೂರ್ವ ರಷ್ಯಾದ ಕಮ್ಚಟ್ಕಾ ಕರಾವಳಿ ಪ್ರದೇಶದಲ್ಲಿ ಸಂಭವಿಸಿದ 8.8 ತೀವ್ರತೆಯ ಭಾರೀ ಭೂಕಂಪನದಿಂದಾಗಿ ಹವಾಯಿ ಕರಾವಳಿಯಲ್ಲಿ ಹತ್ತು ಅಡಿಗೂ ಎತ್ತರದ ಸುನಾಮಿ ಅಲೆಗಳು ಬಂದಪ್ಪಳಿಸಲಿದೆ ಎಂದು ವರದಿ ತಿಳಿಸಿದೆ.
ರಷ್ಯಾದ ಕಮ್ಚಟ್ಕಾ ದ್ವೀಪದಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ಜಪಾನ್, ಅಮೆರಿಕ, ಹವಾಯಿ ಸೇರಿದಂತೆ ವಿವಿಧ ದೇಶಗಳಲ್ಲಿ ಅಧಿಕಾರಿಗಳು ಸುನಾಮಿ ಎಚ್ಚರಿಕೆಯನ್ನು ಘೋಷಿಸಿದ್ದಾರೆ.
ಈಗಾಗಲೇ ಕ್ಯಾಲಿಫೋರ್ನಿಯಾ, ಅಲಾಸ್ಕಾ ಕರಾವಳಿ ಪ್ರದೇಶದಲ್ಲಿ ಸುನಾಮಿ ಅಲೆಗಳು ಅಪ್ಪಳಿಸಿರುವುದಾಗಿ ವರದಿ ವಿವರಿಸಿದೆ. ಕರಾವಳಿ ಪ್ರದೇಶದಲ್ಲಿ ಈಗಾಗಲೇ ಸುನಾಮಿ ಅಲೆಗಳು ಅಬ್ಬರಿಸತೊಡಗಿರುವುದಾಗಿ ದಿ ಪೆಸಿಫಿಕ್ ಸುನಾಮಿ ವಾರ್ನಿಂಗ್ ಸೆಂಟರ್ ಖಚಿತಪಡಿಸಿದೆ.
ಹವಾಯಿ, ಅಲಾಸ್ಕಾ, ಕ್ಯಾಲಿಫೋರ್ನಿಯಾದಲ್ಲಿ ಅಧಿಕಾರಿಗಳು ರಾಷ್ಟ್ರೀಯ ಹವಾಮಾನ ಇಲಾಖೆ ಮತ್ತು ಸ್ಥಳೀಯ ಏಜೆನ್ಸಿಗಳ ನಿಕಟ ಸಂಪರ್ಕದೊಂದಿಗೆ ಸೂಕ್ಷ್ಮವಾಗಿ ಪರಿಶೀಲಿಸುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ರೈತರು ಮಣ್ಣು ತಿನ್ನುವುದು, ಮನುಷ್ಯರು ವಿಷ ಉಣ್ಣುವುದು ನಿಲ್ಲುವುದೆಂದು?
ಸುನಾಮಿಯಿಂದ ಇಲ್ಲಿಯವರೆಗೂ ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಆದರೆ ಭಾರೀ ಗಾತ್ರದ ಅಲೆಗಳು ಹಾಗೂ ಸಂಭಾವ್ಯ ಪ್ರವಾಹ ಸ್ಥಿತಿ ಮುಂದುವರಿಯುವ ಸಾಧ್ಯತೆ ನಿಟ್ಟಿನಲ್ಲಿ ಕರಾವಳಿ ಪ್ರದೇಶದಲ್ಲಿರುವ ಜನರನ್ನು ಸ್ಥಳಾಂತರಿಸುವ ಕಾರ್ಯ ಮುಂದುವರಿಯುತ್ತಿದೆ ಎಂದು ಹವಾಯಿ ಗವರ್ನರ್ ಜೋಶ್ ಗ್ರೀನ್ ತಿಳಿಸಿದ್ದಾರೆ.
ಪ್ರವಾಸಿಗರು ಮತ್ತು ನಿವಾಸಿಗಳು ಬೀಚ್, ಹಾರ್ಬರ್ ಹಾಗೂ ಕರಾವಳಿಯ ತಗ್ಗು ಪ್ರದೇಶಗಳಿಗೆ ಭೇಟಿ ನೀಡದಂತೆ ಎಚ್ಚರಿಕೆ ನೀಡಿರುವುದಾಗಿ ಗವರ್ನರ್ ಗ್ರೀನ್ ತಿಳಿಸಿರುವುದಾಗಿ ವರದಿಯಾಗಿದೆ.
ಜಪಾನ್ನಲ್ಲಿ ಈಗಾಗಲೇ ಕರಾವಳಿ ಪ್ರದೇಶದಲ್ಲಿದ್ದ ಸುಮಾರು 2 ಮಿಲಿಯನ್ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿ ತಿಳಿಸಿದೆ.