ಕಳೆದ ವರ್ಷ ಅಮೆರಿಕದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂ ವಿರುದ್ಧ ಕೊಲೆ ಸಂಚು ರೂಪಿಸಿದ ಆರೋಪದ ಮೇಲೆ ‘ರಾ’ ದ ಭಾರತೀಯ ಮಾಜಿ ಅಧಿಕಾರಿ ವಿಕಾಸ್ ಯಾದವ್ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆಯು ಆರೋಪಪಟ್ಟಿ ದಾಖಲಿಸಿದೆ. ಕೆನಡಾ ಮಾಡಿರುವ ಇತ್ತೀಚಿನ ಆರೋಪಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಭಾರತ ಮತ್ತು ಅಮೆರಿಕ ನಡುವೆ ಉದ್ವಿಗ್ನತೆ ಹೆಚ್ಚಿಸುವ ಸಾಧ್ಯತೆಯಿದೆ. ಸಿಖ್ ಪ್ರತ್ಯೇಕತಾವಾದಿ ಹತ್ಯೆಗೆ ಸಂಚು ರೂಪಿಸಿದ ಆರೋಪವನ್ನು ಭಾರತ ಸ್ಪಷ್ಟವಾಗಿ ನಿರಾಕರಿಸಿದೆ ಮತ್ತು ಆರೋಪಗಳನ್ನು ದೃಢೀಕರಿಸಲು ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸಲಾಗಿಲ್ಲ ಎಂದು ಹೇಳಿದೆ.
ಕೆಲವೇ ಗಂಟೆಗಳ ಮುನ್ನ, ವಿಕಾಸ್ ಮತ್ತು ಅಮಾನತ್ ಎಂದು ಕರೆಯಲ್ಪಡುವ 39 ವರ್ಷದ ಯಾದವ್ ವಿರುದ್ಧ ಕೊಲೆಗೆ ಸಂಚು ರೂಪಿಸಿದ ಮತ್ತು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಆರೋಪ ಸಲ್ಲಿಸಿರುವುದಾಗಿ ಅಮೆರಿಕದ ನ್ಯಾಯಾಂಗ ಇಲಾಖೆ ಘೋಷಿಸಿದೆ.
ಈ ಸುದ್ದಿ ಓದಿದ್ದೀರಾ? ತೈವಾನ್ ವಿಚಾರದಲ್ಲಿ ಹಸ್ತಕ್ಷೇಪ ನಿಲ್ಲಿಸಿ: ಭಾರತಕ್ಕೆ ಚೀನಾ ಆಗ್ರಹ
ಯಾದವ್ ಅವರು ಭಾರತೀಯ ವಿದೇಶಾಂಗ ಸೇವೆ ಮತ್ತು ‘ರಾ’ ವಿಭಾಗದಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ ಎಂದು ಅಮೆರಿಕ ಹೇಳಿದೆ. ಅಲ್ಲದೆ ಈ ಹಿಂದೆ ಸಿಆರ್‌ಪಿಎಫ್‌ನಲ್ಲಿ ಫೀಲ್ಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವುದಾಗಿ ಯಾದವ್ ಹೇಳಿಕೊಂಡಿದ್ದಾರೆ ಎಂದು ಹೇಳಿದೆ. ಯಾದವ್‌ಗೆ ಭಾರತದ ನಿರ್ದೇಶನವಿದೆ ಎಂದು ಆರೋಪಿಸಿದೆ.
ನ್ಯೂಯಾರ್ಕ್‌ನ ಸದರ್ನ್ ಡಿಸ್ಟ್ರಿಕ್ಟ್‌ನ ಜಿಲ್ಲಾ ನ್ಯಾಯಾಲಯದಲ್ಲಿ ದೋಷಾರೋಪಣೆ ಸಲ್ಲಿಸಲಾಗಿದ್ದು, ಯಾದವ್, 53 ವರ್ಷದ ನಿಖಿಲ್ ಗುಪ್ತಾ ಅವರ ಸಹ-ಸಂಚುಕೋರ ಎಂದು ಅಮೆರಿಕ ನ್ಯಾಯಾಂಗ ಇಲಾಖೆ ಆರೋಪಿಸಿದೆ. ಕಳೆದ ವರ್ಷ ನಿಖಿಲ್ ಗುಪ್ತಾ ಅವರ ವಿರುದ್ಧ ಆರೋಪ ಹೊರಿಸಿ ಅಮೆರಿಕ ಸರ್ಕಾರಕ್ಕೆ ಹಸ್ತಾಂತರಿಸಲಾಗಿತ್ತು.
“ನ್ಯಾಯಾಂಗ ಇಲಾಖೆಯು ಅಮೆರಿಕದ ನಾಗರಿಕರಿಗೆ ಹಾನಿ ಮಾಡಲು ಯತ್ನಿಸುವ ಯಾವುದೇ ವ್ಯಕ್ತಿಯನ್ನು ಅವರ ಸ್ಥಾನ ಅಥವಾ ಅಧಿಕಾರವನ್ನು ಲೆಕ್ಕಿಸದೆ ಹೊಣೆಗಾರರನ್ನಾಗಿ ಮಾಡುತ್ತದೆ ” ಎಂದು ಅಟಾರ್ನಿ ಜನರಲ್ ಮೆರಿಕ್ ಬಿ ಗಾರ್ಲ್ಯಾಂಡ್ ಅವರು ಹೇಳಿದ್ದಾರೆ.
