- ಉತ್ತರ ಆಸ್ಟ್ರೇಲಿಯಾದ ಡಾರ್ವಿನ್ ಎಂಬಲ್ಲಿರುವ ಟಿವಿ ದ್ವೀಪದಲ್ಲಿ ಘಟನೆ
- ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಆಸ್ಟೇಲಿಯಾ ಸೇನೆಯ ಅಧಿಕಾರಿಗಳು
ಉತ್ತರ ಆಸ್ಟ್ರೇಲಿಯಾದ ಗಡಿ ಭಾಗದಲ್ಲಿ ತರಬೇತಿ ಕೈಗೊಂಡಿದ್ದ ವೇಳೆ ಅಮೆರಿಕ ಸೇನೆಯ ವಿಮಾನವೊಂದು ಪತನಗೊಂಡಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ಒಬ್ಬ ಸಿಬ್ಬಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಇನ್ನಿಬ್ಬರು ಗಾಯಗೊಂಡಿರುವುದಾಗಿ ಆಸ್ಟ್ರೇಲಿಯಾದ ಸುದ್ದಿ ಮಾಧ್ಯಮ ಎಬಿಸಿ ನ್ಯೂಸ್ ವರದಿ ಮಾಡಿದೆ.
ಉತ್ತರ ಆಸ್ಟ್ರೇಲಿಯಾದ ಗಡಿ ಭಾಗದಲ್ಲಿ ಸೇನಾ ತರಬೇತಿ ಕೈಗೊಂಡಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ವಿಮಾನದಲ್ಲಿ 23 ಮಂದಿ ಇದ್ದರು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ಡಾರ್ವಿನ್‌ನ ರೋಯಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಉತ್ತರ ಆಸ್ಟ್ರೇಲಿಯಾದ ಡಾರ್ವಿನ್ ಎಂಬಲ್ಲಿರುವ ತಿವಿ ದ್ವೀಪದಲ್ಲಿ ಘಟನೆ ನಡೆದಿದ್ದು, ಹಲವರನ್ನು ರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.
”ಘಟನೆಯ ಬೆಳಗ್ಗೆ 9ರ ಸುಮಾರಿಗೆ ನಡೆದಿದೆ. ಈ ಬಗ್ಗೆ ಮಾಹಿತಿ ಪಡೆದ ಕೂಡಲೇ ಎನ್ ಟಿ ಪೊಲೀಸರು ಮತ್ತು ತುರ್ತು ರಕ್ಷಣಾ ಘಟಕದ ಸಿಬ್ಬಂದಿಗಳು ಈಗಾಗಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ವಿಮಾನದಲ್ಲಿದ್ದವರನ್ನು ಎಲ್ಲ ರೀತಿಯ ಪ್ರಯತ್ನಗಳ ಮೂಲಕ ರಕ್ಷಣೆ ಮಾಡಲಾಗುವುದು. ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತೇವೆ” ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಹಾಗೂ ಅಮೆರಿಕ ಸೇನೆಗಳು ಜಂಟಿಯಾಗಿ ಸರಣಿ ಯುದ್ಧಾಭ್ಯಾಸ ನಡೆಸುತ್ತಿವೆ. ಈ ಪೈಕಿ ಯುದ್ಧ ವಿಮಾನಗಳನ್ನು ಬಳಸಿಕೊಂಡು ಪ್ರಿಡೇಟರ್ಸ್ ರನ್ ಚಟುವಟಿಕೆ ನಡೆಯುತ್ತಿತ್ತು. ಇದಕ್ಕಾಗಿ ಅಮೆರಿಕ ಸೇನೆಯ ಪ್ರತಿಷ್ಠಿತ ಓಸ್‌ಪ್ರೇ ಯುದ್ಧ ವಿಮಾನ ಬಳಕೆಯಾಗಿತ್ತು.