ಯುಎಇಯಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಮುಸ್ಲಿಂ ಸಮುದಾಯದ ಅನಿವಾಸಿಗಳ ಕುಟುಂಬಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಮತ್ತು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ‘ದುಬೈ ಬ್ಯಾರೀಸ್ 24/7’ ಮಹತ್ವದ ಹೆಜ್ಜೆಯಿರಿಸಿದೆ.
ಯುಎಇಯಲ್ಲಿ ಅನಿವಾಸಿ ಭಾರತೀಯರ ಕಲ್ಯಾಣ, ಸಂಕಷ್ಟದಲ್ಲಿರುವವರಿಗೆ ನೆರವು, ವೈದ್ಯಕೀಯ ಸಹಾಯ ಹಾಗೂ ಸಾಮಾಜಿಕ ಸೇವೆಯ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿರುವ ‘ದುಬೈ ಬ್ಯಾರೀಸ್ 24/7’ ಸಂಘಟನೆಯು, ಯುಎಇಯಲ್ಲಿರುವ ಬ್ಯಾರಿ ಸಮುದಾಯದ ಬೇರೆ ಬೇರೆ ಸಂಘ ಸಂಸ್ಥೆಗಳ ನಾಯಕರು, ಮುಖಂಡರು, ಸಾಮಾಜಿಕ ಕಾರ್ಯಕರ್ತರಿಗಾಗಿ ರವಿವಾರ ಉಮ್ಮ್ ಅಲ್ ಖುವೈನ್ನ ರೆಸಾರ್ಟ್ವೊಂದರಲ್ಲಿ ‘ಚಂಙಾಯಿಪಾಡ್’ ಸ್ನೇಹಕೂಟ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ದುಬೈ ಬ್ಯಾರೀಸ್24/7 ನ ಹಿದಾಯತ್ ಅಡ್ಡೂರ್, ‘ತಾಯ್ನಾಡಿನಿಂದ ಉದ್ಯೋಗ ಅರಸಿ ಮರುಭೂಮಿಯ ನಾಡಾದ ಯುಎಇಗೆ ಬಂದು ಕಷ್ಟಪಟ್ಟು ದುಡಿಯುತ್ತಿರುವ ಸಮುದಾಯದ ಸಾವಿರಾರು ಅನಿವಾಸಿಗಳ ಕುಟುಂಬಗಳ ಭವಿಷ್ಯ ಮತ್ತು ಆರ್ಥಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ಅವರ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಮಹತ್ವಾಕಾಂಕ್ಷಿ ಯೋಜನೆಯನ್ನು ದುಬೈ ಬ್ಯಾರೀಸ್24/7 ವತಿಯಿಂದ ರೂಪಿಸಲಾಗಿದೆ. ಈ ಐತಿಹಾಸಿಕ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಿದ್ದೇವೆ” ಎಂದರು.
“ದುಬೈ ಬ್ಯಾರೀಸ್ 24×7 ಕಾರ್ಯಕಾರಿ ಸಮಿತಿಯ ನೇತೃತ್ವದಲ್ಲಿ ಮಂಗಳೂರಿನಲ್ಲಿ ಒಂದು ಟ್ರಸ್ಟ್ ಸ್ಥಾಪಿಸಿ, ಆ ಟ್ರಸ್ಟ್ ಮೂಲಕ ಯುಎಇಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗ ಮುಸ್ಲಿಂ ಸಮುದಾಯದ ಸದಸ್ಯರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವ ಯೋಜನೆಯೊಂದನ್ನು ರೂಪಿಸಲಾಗಿದೆ, ಮುಂದಿನ ಮೂರು ತಿಂಗಳೊಳಗೆ ಯೋಜನೆಯನ್ನು ಅಧಿಕೃತವಾಗಿ ಆರಂಭಿಸಲು ಕಾರ್ಯಪ್ರವೃತ್ತರಾಗಿದ್ದೇವೆ” ಎಂದು ಹಿದಾಯತ್ ತಿಳಿಸಿದರು.
“ಈ ಯೋಜನೆಯು ಯುಎಇಯಲ್ಲಿ ನೆಲೆಸಿರುವ ನಮ್ಮ ಸಮುದಾಯದ ಕುಟುಂಬಗಳಿಗೆ ದೊಡ್ಡ ಮಟ್ಟದ ಆಸರೆಯಾಗಲಿದೆ. ಆದ್ದರಿಂದ, ಈ ಯೋಜನೆಯ ಸದಸ್ಯರಾಗಲು ಆಸಕ್ತಿ ಹೊಂದಿರುವವರು ಸದಸ್ಯತ್ವ ಪಡೆಯುವ ವಿಧಾನ ಹಾಗೂ ಯೋಜನೆಯ ಸಂಪೂರ್ಣ ಕಾರ್ಯಚಟುವಟಿಕೆಗಳ ಕುರಿತು ಮುಂದಿನ ದಿನಗಳಲ್ಲಿ ಶೀಘ್ರದಲ್ಲೇ ವಿವರಗಳನ್ನು ತಿಳಿಸಲಾಗುವುದು” ಎಂದು ದುಬೈ ಬ್ಯಾರೀಸ್ 24/7ನ ಮುಸ್ತಾಕ್ ಕದ್ರಿ ವಿವರಿಸಿದರು.
ಸಂಕಷ್ಟದಲ್ಲಿರುವವರಿಗೆ ಆಶಾಕಿರಣವಾಗಿರುವ ‘ದುಬೈ ಬ್ಯಾರೀಸ್ 24/7’
ಯುಎಇಯಲ್ಲಿ ಸಂಕಷ್ಟಕ್ಕೆ ಸಿಲುಕಿದವರು, ಅಪಘಾತಕ್ಕೀಡಾದವರು, ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಗೂ ವಿವಿಧ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವವರಿಗೆ ‘ದುಬೈ ಬ್ಯಾರೀಸ್ 24/7’ ನೆರವಿನ ಹಸ್ತ ಚಾಚುತ್ತಾ, ಆಪತ್ಬಾಂಧವನಾಗಿ ಕಾರ್ಯನಿರ್ವಹಿಸುತ್ತಿದೆ. ಸಂಕಷ್ಟದ ಸಂದರ್ಭಗಳಲ್ಲಿ ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವ ಮೂಲಕ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ಕಳೆದ ಒಂದು ವರ್ಷದಲ್ಲಿ ಯುಎಇಯಲ್ಲಿ ಮೃತಪಟ್ಟ 60ಕ್ಕೂ ಹೆಚ್ಚು ಅನಿವಾಸಿ ಭಾರತೀಯರ ಮೃತದೇಹಗಳನ್ನು ತಾಯ್ನಾಡಾದ ಭಾರತಕ್ಕೆ ಕಳುಹಿಸುವ ಪ್ರಕ್ರಿಯೆಯಲ್ಲಿ ನೆರವು ಒದಗಿಸುವ ಮೂಲಕ ‘ದುಬೈ ಬ್ಯಾರೀಸ್ 24/7’ ಮಾನವೀಯ ಸೇವೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ವಿದೇಶದಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಗಳಿಗೆ ಮೃತದೇಹವನ್ನು ತಾಯ್ನಾಡಿಗೆ ತಲುಪಿಸುವ ಪ್ರಕ್ರಿಯೆಯಲ್ಲಿ ಅಗತ್ಯ ಸಹಕಾರ ನೀಡುವುದು ಸಂಘಟನೆಯ ಪ್ರಮುಖ ಸೇವಾ ಕಾರ್ಯಗಳಲ್ಲಿ ಒಂದಾಗಿದೆ.

ಸ್ನೇಹಕೂಟದ ಕಾರ್ಯಕ್ರಮ ಉದ್ಘಾಟನಾ ಭಾಷಣ ಮಾಡಿದ ಅಶ್ರಫ್ ಶಾ ಮಾಂತೂರು, “ಯುಎಇಯಲ್ಲಿ ಬ್ಯಾರಿ ಸಮುದಾಯದ ಯುವಕರು ‘ದುಬೈ ಬ್ಯಾರೀಸ್ 24/7’ ಮೂಲಕ ಕೈಗೊಳ್ಳುತ್ತಿರುವ ಮಾನವೀಯ ಸೇವಾ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವ ಮೂಲಕ ಸಂಘಟನೆ ಮಾನವೀಯತೆ ಹಾಗೂ ಸಾಮಾಜಿಕ ಹೊಣೆಗಾರಿಕೆಗೆ ಉತ್ತಮ ಉದಾಹರಣೆಯಾಗಿದೆ” ಎಂದು ಶ್ಲಾಘಿಸಿದರು.
ಶೇಖ್ ಮುಝಫರ್ ಮಾತನಾಡಿ, “ದುಬೈನಲ್ಲಿರುವ ಭಾರತೀಯ ಕಾನ್ಸುಲೇಟ್ನಲ್ಲಿ ಯಾವುದೇ ಅಗತ್ಯ ಕಾರ್ಯಗಳಿದ್ದರೂ ‘ದುಬೈ ಬ್ಯಾರೀಸ್ 24/7’ ತಂಡ ಸದಾ ಸಹಕಾರ ಮತ್ತು ಸೇವೆ ಒದಗಿಸುತ್ತಿರುವುದು ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ‘ದುಬೈ ಬ್ಯಾರೀಸ್ 24/7’ ಕುರಿತು ಸವಿವರವಾಗಿ ಮಾತನಾಡಿದ ಸಮದ್ ಬಿರಾಲಿ, “ಇಲ್ಲಿ ಸಂಕಷ್ಟ, ಇನ್ನಿತರ ಯಾವುದೇ ರೀತಿಯ ಸಮಸ್ಯೆಗಳಿಗೆ ಸಿಲುಕಿದವರು ಯಾರೇ ಆಗಿರಲಿ, ಅವರ ನೆರವಿಗೆ ಧಾವಿಸಿ ಸಾಧ್ಯವಾದಷ್ಟು ಸಹಾಯಹಸ್ತ ಚಾಚುವುದರೊಂದಿಗೆ ಸಂಘಟನೆಯು ಮಾನವೀಯ ನೆಲೆಗಟ್ಟಿನಲ್ಲಿ ಸೇವೆಯನ್ನು ನೀಡುತ್ತಿದೆ. ಇಂತಹ ಸೇವಾ ಕಾರ್ಯಗಳು ಸಮುದಾಯದಲ್ಲಿ ಪರಸ್ಪರ ಸಹಕಾರ, ಸಹಬಾಳ್ವೆ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಮನೋಭಾವವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಆಪ್ ಬಗ್ಗೆ ಸಹೀರ್ ಮುಲ್ಕಿ, ಉದ್ಯೋಗಾವಕಾಶಗಳ ಬಗ್ಗೆ ನವಾಝ್ ಗೋಲ್ತಮಜಲ್, ಇರ್ಷಾದ್ ಬಜ್ಪೆ ಹಾಗು ಲತೀಫ್ ತಿಂಗಳಾಡಿ, ರಿಯಲ್ ಎಸ್ಟೇಟ್ ಬಗ್ಗೆ ಮೊಹಮ್ಮದ್ ಶೋಹೆಬ್, ಬ್ಯಾರಿ ರನ್ ಬಗ್ಗೆ ಶಂಶುದ್ದೀನ್ ಪಿಲಿಗೊಡು, ಹೆಲ್ತ್ ಇನ್ಸೂರೆನ್ಸ್ ಕುರಿತಾಗಿ ಇರ್ಷಾದ್ ಸುರತ್ಕಲ್ ಹಾಗೂ ಲತೀಫ್ ಮುಕ್ಕ ಮಾಹಿತಿ ನೀಡಿದರು.
ಬಳಿಕ ಖಾಸಿಂ ಅಹ್ಮದ್, ಫಾರೂಕ್ ಡೆಡ್ಕೊ, ಪ್ರೊ. ಸೂಫಿ ಅನ್ವರ್ ಕೋಡಿಜಾಲ್, ಹಂಝ ದೆಂಜಿಪಾಡಿ, ಹಬೀಬ್ ಅಡ್ಡೂರು, ಹಂಝದ್ ಉದ್ಯಾವರ, ಅಬ್ದುಲ್ ಸಲಾಂ ದೇರ್ಲಕಟ್ಟೆ, ರೌಫ್ ಹಾಜಿ, ಲತೀಫ್ ಹಾಜಿ ಮದರ್ ಇಂಡಿಯಾ, ಫಾರೂಕ್ ಮೂರ್ಜೆ ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಂಡರು.
ಮೊಹಮ್ಮದ್ ಆಶಿಕ್ ಕಿರಾತ್ ಪಠಿಸಿದರು. ಲತೀಫ್ ತಿಂಗಳಾಡಿ ದುವಾ ನೆರವೇರಿಸಿದರು. ಮೊಹಮ್ಮದ್ ಸಲೀಂ ಮೂಡಬಿದ್ರೆ ಸ್ವಾಗತಿಸಿದರು. ಅಝರ್ ಹಂಡೇಲು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ನವಾಝ್ ಕೋಟೆಕಾರ್ ವಂದಿಸಿದರು. ಮೊಹಮ್ಮದ್ ಇಕ್ರಂ ಮೂಳೂರು, ಇಸ್ಮಾಯಿಲ್ ಬಹರುನ್ನೂರ್ ಸಹಕರಿಸಿದರು.
ಸ್ನೇಹಕೂಟಕ್ಕೆ ಮೆರುಗು ನೀಡಿದ ಮನರಂಜನಾ ಕ್ರೀಡೆಗಳು
ಇದಕ್ಕೂ ಮೊದಲು ಕಾರ್ಯಕ್ರಮದ ಅಂಗವಾಗಿ ಹಗ್ಗಜಗ್ಗಾಟ, ಬಲೂನ್ ಓಟ ಸೇರಿದಂತೆ ವಿವಿಧ ಮನರಂಜನಾ ಕ್ರೀಡೆಗಳು ಹಾಗೂ ಗುಂಪು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ಭಾಗವಹಿಸಿದವರು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ಪರಸ್ಪರ ಸಂಭ್ರಮ ಹಂಚಿಕೊಂಡರು. ವಿವಿಧ ಸ್ಪರ್ಧೆಗಳು ಸ್ನೇಹ, ಸೌಹಾರ್ದ ಹಾಗೂ ಒಗ್ಗಟ್ಟಿನ ವಾತಾವರಣವನ್ನು ಮೂಡಿಸುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು.
ಕ್ರೀಡಾಕೂಟಕ್ಕೆ ನವಾಝ್ ಕೋಟೆಕಾರ್, ರಫೀಕ್ ಮುಲ್ಕಿ, ಅಕ್ಬರ್, ನವಾಝ್ ಬಾಜರ್, ಆಸಿಫ್ ಕಣ್ಣಂಗಾರ್, ಸಲೀಂ ಸೂಫಿಕಾನ್, ಶಫಿ ಕಾಪು, ನಝೀರ್ ವಾಮಂಜೂರು, ಮಕ್ಬೂಲ್, ಯೂಸುಫ್ ಶೇಖ್, ಅಹ್ಮದ್ ಬಾವಾ ಉಪ್ಪಿನಂಗಡಿ, ತನ್ವಿರ್ ಬೆಂಗರೆ, ಸಿರಾಜ್ ಚಿಕ್ಕಮಗಳೂರು, ಮೂಸಾ ಪೆರ್ವಾಯಿ ಮತ್ತಿತರರು ಸಹಕಾರ ನೀಡಿದರು.




