ಅಮೆರಿಕದಲ್ಲಿ ಅಕ್ರಮ ವಲಸಿಗರನ್ನು ಗಡಿಪಾರು ಕಾರ್ಯಾಚರಣೆ ಮಾಡುತ್ತಿರುವಂತೆ ಇಂಗ್ಲೆಂಡ್‌ನ ಲೇಬರ್ ಸರ್ಕಾರ ತನ್ನ ದೇಶದಲ್ಲಿ ಅಕ್ರಮವಾಗಿ ನೆಲಸಿರುವ ವಲಸಿಗರನ್ನು ಗಡಿಪಾರು ಮಾಡಲು ಮುಂದಾಗಿದೆ.
ಭಾರತೀಯರಿಗೆ ಸಂಬಂಧಿಸಿದಂತೆ ಮುಖ್ಯವಾಗಿ ಭಾರತೀಯ ರಸ್ಟೋರೆಂಟ್‌ಗಳು, ಹೋಟೆಲ್‌ಗಳು, ಮಳಿಗೆಗಳು, ಕಾರು ಸ್ವಚ್ಛಗೊಳಿಸುವ ಕೇಂದ್ರಗಳು ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ವಲಸಿಗ ಭಾರತೀಯರನ್ನು ಗಡಿಪಾರು ಮಾಡಲಾಗುತ್ತಿದೆ.
ಇಂಗ್ಲೆಂಡ್‌ನ ಗೃಹ ಕಾರ್ಯದರ್ಶಿ ಯವಟ್ಟೆ ಕೂಪರ್ ಅವರು ಈ ಕಾರ್ಯವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಜನವರಿಯಲ್ಲಿ 828 ಸ್ಥಳಗಳಲ್ಲಿ ಪರಿಶೀಲನೆ ನಡೆಸಿ 609 ಮಂದಿಯನ್ನು ಬಂಧಿಸಲಾಗಿದೆ. ಕಳೆದ ವರ್ಷಕ್ಕಿಂತ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ವಲಸೆ ನಿಯಮವನ್ನು ಕಡ್ಡಾಯವಾಗಿ ಗೌರವಿಸಬೇಕಾಗಿದೆ ಹಾಗೂ ಜಾರಿಗೊಳಿಸಬೇಕಾಗಿದೆ. ಉದ್ಯೋಗದಾತರು ದೀರ್ಘಕಾಲದಿಂದ ಅಕ್ರಮ ವಲಸಿಗರನ್ನು ತಮ್ಮ ಸಂಸ್ಥೆಗಳಲ್ಲಿ ನೇಮಿಸಿಕೊಂಡಿದ್ದಾರೆ. ಆದರೆ ಇಲ್ಲಿಯವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. ವಲಸಿಗರು ಸಣ್ಣ ದೋಣಿಗಳಲ್ಲಿ ಆಪಾಯಕಾರಿ ಕಾಲುವೆಗಳ ಮೂಲಕ ಗಡಿಯನ್ನು ದಾಟಿ ಬರುವುದು ಮಾತ್ರ ಅಪಾಯಕಾರಿಯಾಗಿರದೆ ವಲಸೆ ವ್ಯವಸ್ಥೆ ಹಾಗೂ ನಮ್ಮ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿದೆ” ಎಂದು ಗೃಹ ಕಾರ್ಯದರ್ಶಿ ಯವಟ್ಟೆ ಕೂಪರ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕರ್ನಾಟಕ ಮಾನವೀಯ ಮಾದರಿಯ ತಿರಸ್ಕರಿಸಿ ನೆತ್ತರು ಹರಿಸಿದ ಅಮಿತ್ ಶಾ
ಇಂಗ್ಲೆಂಡ್‌ನಲ್ಲಿ ನೂತನ ಸರ್ಕಾರ ರಚನೆಯಾದ ಮೇಲೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರಿಗೆ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವ ಒತ್ತಡ ಹೆಚ್ಚಾಗಿದೆ. ವಲಸಿಗರನ್ನು ಗಡಿಪಾರು ಮಾಡಲು 800 ಜನರನ್ನು ಹೊತ್ತೊಯ್ಯುವ ದೊಡ್ಡ ವಿಮಾನಗಳನ್ನು ಬಳಸಲಾಗುತ್ತಿದೆ. ಹೊಸ ಸರ್ಕಾರವು ಅಧಿಕಾರ ವಹಿಸಿಕೊಂಡ ನಂತರ 19 ಸಾವಿರ ವಿದೇಶಿ ಅಪರಾಧಿಗಳು ಹಾಗೂ ಅಕ್ರಮ ವಲಸಿಗರನ್ನು ಗಡಿಪಾರು ಮಾಡಿರುವುದಾಗಿ ವಿಡಿಯೋ ಬಿಡುಗಡೆ ಮಾಡಿದೆ. 2018 ರಿಂದ 2024ರ ಜುಲೈವರೆಗೂ 16,500 ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿತ್ತು.
ಕಳೆದ ಒಂದು ವರ್ಷದಿಂದ ಅಕ್ರಮ ವಲಸಿಗರನ್ನು ಕೆಲಸಕ್ಕೆ ನೇಮಿಸಿಕೊಂಡ ಉದ್ಯೋಗದಾತರಿಗೆ 1090 ದಂಡ ವಿಧಿಸುವ ನೋಟಿಸ್ ನೀಡಲಾಗಿದೆ. ಒಂದು ವೇಳೆ ಉದ್ಯೋಗದಾತರು ಅಕ್ರಮ ವಲಸಿಗರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರೆ ಪ್ರತಿ ಉದ್ಯೋಗಿಯ ಆಧಾರದ ಮೇಲೆ 60 ಸಾವಿರ ಪೌಂಡ್ ದಂಡ ವಿಧಿಸಲಾಗುತ್ತದೆ.
