ಇಂಗ್ಲಿಷ್ ಮಾತನಾಡದ ಭಾರತೀಯರನ್ನು ಗಡಿಪಾರು ಮಾಡಿ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿಯೊಬ್ಬರು ಹಾಕಿರುವ ಪೋಸ್ಟಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಲೂಸಿ ವೈಟ್ ಎಂಬ ಕೇಂಬ್ರಿಡ್ಜ್ ವಿವಿಯ ಹಳೆಯ ವಿದ್ಯಾರ್ಥಿನಿ ಎಕ್ಸ್‌ನಲ್ಲಿ ಪ್ರಕಟಿಸಿರುವ ತಮ್ಮ ಪೋಸ್ಟ್‌ನಲ್ಲಿ, “ಲಂಡನ್ ನಗರದ ಹೀಥ್ರೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಾರೊಬ್ಬರಿಗೂ ಸರಿಯಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ. ವಿಮಾನ ನಿಲ್ದಾಣದಲ್ಲಿ ಕೆಲಸ ನಿರ್ವಹಿಸುವ ಹೆಚ್ಚಿನವರು ಭಾರತೀಯರು ಅಥವಾ ಏಷ್ಯಾ ಮೂಲದವರು. ಇವರು ಇಂಗ್ಲಿಷ್ ಮಾತನಾಡುವುದಿಲ್ಲ, ಇವರನ್ನೆಲ್ಲಾ ಗಡಿಪಾರು ಮಾಡಬೇಕು” ಎಂದು ಬರೆದುಕೊಂಡಿದ್ದಾರೆ. ಲೂಸಿ ವೈಟ್ ಹಾಕಿರುವ ಜನಾಂಗೀಯ ನಿಂದನೆಯ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಾನು ಲಂಡನ್ ನಗರದ ಹೀಥ್ರೂ ವಿಮಾನ ನಿಲ್ದಾಣಕ್ಕೆ ಬಂದಿಳಿದೆ. ಇಲ್ಲಿ ಕೆಲಸ ನಿರ್ವಹಿಸುವ ಹೆಚ್ಚಿನವರು ಒಂದೋ ಭಾರತೀಯರು ಇಲ್ಲವೇ ಏಷ್ಯಾ ಮೂಲದವರು. ಅವರು ಇಂಗ್ಲಿಷ್‌ನಲ್ಲಿ ಮಾತನಾಡುವುದಿಲ್ಲ. ನಾನು ಅವರ ಬಳಿ ಇಂಗ್ಲಿಷ್ ನಲ್ಲಿ ಮಾತನಾಡುವಂತೆ ತಾಕೀತು ಮಾಡಿದೆ. ಅದಕ್ಕೆ ನೀವು ದೊಡ್ಡ ಜನಾಂಗೀಯವಾದಿ ಎಂದು ಹೇಳಿದರು” ಎಂದು ಈ ಮಹಿಳೆಯ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿಶ್ವಾಸಾರ್ಹತೆ ಕಳೆದುಕೊಂಡ ಚುನಾವಣಾ ಆಯೋಗದ ಅವಶ್ಯಕತೆ ಇದೆಯೇ?
“ಅವರ ಮಾತಿಗೆ ನಾನು ಸರಿ ಎಂದು ಹೇಳಿದ್ದೇನೆ, ಜನಾಂಗೀಯ ಕಾರ್ಡ್ ಅನ್ನು ಅವರು ಬಳಸುತ್ತಿದ್ದಾರೆ. ಬ್ರಿಟನ್ ಹೀಥ್ರೂ ನಿಲ್ದಾಣದ ಪ್ರಮುಖ ದ್ವಾರದಲ್ಲಿ ಇವರು ಯಾಕೆ ಕೆಲಸ ಮಾಡುತ್ತಿದ್ದಾರೆ, ಇವರನ್ನು ಗಡೀಪಾರು ಮಾಡಿ” ಎಂದಿದ್ದಾರೆ.
“ಹೀಥ್ರೂ ವಿಮಾನ ನಿಲ್ದಾಣದ ಬಗ್ಗೆ ನನಗೆ ಚೆನ್ನಾಗಿ ಅನುಭವವಿದೆ, ಈ ಮಹಿಳೆ ಸುಮ್ಮನೆ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಅಲ್ಲಿ ಎಂತಹ ಕಟ್ಟುನಿಟ್ಟಿನ ತಪಾಸಣೆ ಇರಲಿದೆ ಎನ್ನುವುದು ನನಗೆ ತಿಳಿದಿದೆ. ಎಲ್ಲ ಪ್ರಯಾಣಿಕರಿಗೆ ಉತ್ತಮ ಸೌಕರ್ಯವನ್ನು ಕೊಡಲು ಸಾಧ್ಯವಾದ ಎಲ್ಲ ಪ್ರಯತ್ನವನ್ನು ಅವರು ಮಾಡುತ್ತಾರೆ” ಎಂದು ಈಕೆಯ ಪೋಸ್ಟಿಗೆ, ವ್ಯಕ್ತಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಲೂಸಿ ವೈಟ್ ಎಕ್ಸ್ ಪೋಸ್ಟಿಗೆ ಪರ ಹಾಗೂ ವಿರೋಧವಾಗಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿವೆ.
Just landed in London Heathrow. Majority of staff are Indian/ Asian & are not speaking a word of English.
— Lucy White (@LucyJayneWhite1) July 6, 2025
I said to them, “Speak English”
Their reply, “You’re being racist”
They know I’m right, so they have to use the race card.
Deport them all. Why are they working at the…
