ಬಾಲ್ಯ ವಿವಾಹ ಮತ್ತು ಬಲವಂತದ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಮಹತ್ವದ ಹೆಜ್ಜೆಯಿಟ್ಟಿದ್ದು, ನವೆಂಬರ್ 27 ಅನ್ನು ‘ಬಾಲ್ಯ ವಿವಾಹ, ಬಾಲ್ಯದಲ್ಲಿನ ಮತ್ತು ಬಲವಂತದ ವಿವಾಹಗಳ ನಿರ್ಮೂಲನಾ ಅಂತಾರಾಷ್ಟ್ರೀಯ ದಿನ’ವನ್ನಾಗಿ ಅಧಿಕೃತವಾಗಿ ಘೋಷಿಸಿದೆ. 2030ರ ವೇಳೆಗೆ ಈ ಅನಿಷ್ಟ ಪದ್ಧತಿಯನ್ನು ಸಂಪೂರ್ಣವಾಗಿ ಕೊನೆಗೊಳಿಸುವ ಜಾಗತಿಕ ಪ್ರಯತ್ನಗಳಿಗೆ ಇದು ಹೊಸ ಆಯಾಮ ಒದಗಿಸಿದೆ.
ಆಫ್ರಿಕಾದ ಸಿಯೆರಾ ಲಿಯೋನ್ ದೇಶವು ಮಂಡಿಸಿದ ಈ ನಿರ್ಣಯಕ್ಕೆ ಭಾರತವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. 2024ರ ನವೆಂಬರ್ 27ರಂದೇ ಭಾರತ ಸರ್ಕಾರವು ‘ಬಾಲ್ಯ ವಿವಾಹ ಮುಕ್ತ ಭಾರತ’ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಿದ್ದರಿಂದ, ಈ ದಿನಾಂಕವು ಭಾರತದ ಮಟ್ಟಿಗೆ ಅತ್ಯಂತ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.
ಭಾರತದಲ್ಲಿ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ, ಈ ಪದ್ಧತಿ ಇನ್ನೂ ವ್ಯಾಪಕವಾಗಿರುವುದು ಅಧಿಕೃತ ಅಂಕಿ-ಅಂಶಗಳಿಂದ ತಿಳಿದುಬಂದಿದೆ. 2019 ರಿಂದ 2021ರ ನಡುವೆ ನಡೆಸಲಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (NFHS-5) ರ ಪ್ರಕಾರ, 20-24 ವರ್ಷ ವಯಸ್ಸಿನ ಶೇ 23.3ರಷ್ಟು ಮಹಿಳೆಯರು 18 ವರ್ಷ ತುಂಬುವ ಮುನ್ನವೇ ವಿವಾಹವಾಗಿದ್ದರು. ಆದರೆ, 2023-24ರ NFHS-6 ಸಮೀಕ್ಷೆಯಲ್ಲಿ ಈ ಪ್ರಮಾಣವು ಶೇ 20.1ಕ್ಕೆ ಇಳಿಕೆಯಾಗಿದೆ. 2030ರ ವೇಳೆಗೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDG) ಸಾಧಿಸುವ ಜಾಗತಿಕ ಪ್ರಯತ್ನಗಳ ಭಾಗವಾಗಿ ವಿಶ್ವಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.
’ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್’ ಸಂಸ್ಥೆಯ ಸ್ಥಾಪಕ ಭುವನ್ ರಿಭು ಅವರು ವಿಶ್ವಸಂಸ್ಥೆಯ ಈ ನಿರ್ಣಯವನ್ನು ಸ್ವಾಗತಿಸಿದ್ದಾರೆ. “ಭಾರತವು ಇಂದು ಮಕ್ಕಳ ರಕ್ಷಣೆಯ ವಿಚಾರದಲ್ಲಿ ವಿಶ್ವಗುರುವಾಗಿದೆ. 2024ರ ನವೆಂಬರ್ 27ರಂದು 25 ಕೋಟಿಗೂ ಹೆಚ್ಚು ಜನರು ಒಗ್ಗೂಡಿ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಆರಂಭವಾದ ಭಾರತದ ಅಭಿಯಾನವನ್ನು ಇಂದು ಇಡೀ ಜಗತ್ತೇ ಒಪ್ಪಿಕೊಂಡಿದೆ,” ಎಂದು ವಿಶ್ವಸಂಸ್ಥೆಯ ಕಲಾಪದಲ್ಲಿ ನಾಗರಿಕ ಸಮಾಜದ ಪ್ರತಿನಿಧಿಯಾಗಿ ಭಾಗವಹಿಸಿದ್ದ ರಿಭು ಹರ್ಷ ವ್ಯಕ್ತಪಡಿಸಿದರು.
”ಪ್ರತಿಯೊಂದು ಮಗುವಿನ ಶಿಕ್ಷಣ, ರಕ್ಷಣೆ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸಲು ಹಾಗೂ 2030ರ ವೇಳೆಗೆ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ಕೊನೆಗೊಳಿಸಲು ಸರ್ಕಾರಗಳು ನಿರ್ಣಾಯಕ ನಾಯಕತ್ವವನ್ನು ವಹಿಸುವ ಸೂಕ್ತ ಸಮಯ ಇದಾಗಿದೆ. ಈ ನಿರ್ಣಯಕ್ಕೆ ಕಾರಣರಾದ ಸಿಯೆರಾ ಲಿಯೋನ್‌ನ ಪ್ರಥಮ ಮಹಿಳೆ ಹಾಗೂ ನಿರ್ಣಯವನ್ನು ಬೆಂಬಲಿಸಿದ ರಾಷ್ಟ್ರಗಳಿಗೆ ಕೃತಜ್ಞತೆಗಳು” ಎಂದು ರಿಭು ತಿಳಿಸಿದ್ದಾರೆ.
ಜಾಗತಿಕವಾಗಿ 2030ರ ಒಳಗೆ ಬಾಲ್ಯ ವಿವಾಹವನ್ನು ನಿರ್ಮೂಲನೆ ಮಾಡುವ ಈ ಗುರಿಯು, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ-5ರ (ಲಿಂಗ ಸಮಾನತೆ) ‘ಟಾರ್ಗೆಟ್ 5.3’ರೊಂದಿಗೆ ನೇರ ಹೊಂದಾಣಿಕೆಯಾಗುತ್ತದೆ. ಇದು ಬಾಲ್ಯ ವಿವಾಹ ಮತ್ತು ಬಲವಂತದ ವಿವಾಹದಂತಹ ಎಲ್ಲಾ ಹಾನಿಕಾರಕ ಆಚರಣೆಗಳನ್ನು ತೊಡೆದುಹಾಕುವಂತೆ ಜಗತ್ತಿಗೆ ಕರೆ ನೀಡುತ್ತದೆ.





