AI ತರಬೇತಿಗಾಗಿ ಹಳೆಯ ಪುಸ್ತಕಗಳ ಮಾರಣಹೋಮ; ಜ್ಞಾನ ಸಂಪತ್ತಿಗೆ ಕಾದಿದೆಯೇ ಅಪಾಯ?

Date:

AIಗೆ ತರಬೇತಿ ನೀಡಲು ಹಳೆಯ ಪುಸ್ತಕಗಳು ಹೊಸ ಡೇಟಾ ಗಣಿಯಾಗಿವೆ. ಆದರೆ ಆ ಡೇಟಾ ಪಡೆಯುವ ಭರದಲ್ಲಿ ಪುಸ್ತಕಗಳನ್ನೇ ತುಂಡರಿಸಿ ನಾಶಪಡಿಸುವುದು ಎಷ್ಟು ಸರಿ? ಸಾಮಾನ್ಯ ಪುಸ್ತಕಗಳ ವಿಚಾರದಲ್ಲಿ ಸಮಸ್ಯೆಯಿಲ್ಲದಿದ್ದರೂ, ಅಪರೂಪದ ಕೃತಿಗಳ ಕೊನೆಯ ಪ್ರತಿಗಳಿಗೂ ಇದೇ ಗತಿ ಬಂದರೆ?

- Advertisement -

ಕೃತಕ ಬುದ್ಧಿಮತ್ತೆ (AI)ಗೆ ತರಬೇತಿ ನೀಡಲು ಕಂಪನಿಗಳು ದಿನದಿಂದ ದಿನಕ್ಕೆ ಹೊಸ ಹೊಸ ಡೇಟಾ ಮೂಲಗಳನ್ನು ಹುಡುಕಾಡುತ್ತಿವೆ. ಈ ಹುಡುಕಾಟ ಈಗ ಹಳೆಯ ಪುಸ್ತಕಗಳವರೆಗೂ ಬಂದು ನಿಂತಿದೆ. ಮಾಹಿತಿ ಉಳಿಸಿಕೊಂಡು ಆ ಮಾಹಿತಿಯಿಂದ AIನ್ನು ತರಬೇತಿಗೊಳಿಸಲು ಪುಸ್ತಕವನ್ನು ಸ್ಕ್ಯಾನ್‌ ಮಾಡಲಾಗುತ್ತಿದೆ. ಅದೇ ಸ್ಕ್ಯಾನಿಂಗ್‌ಗಾಗಿ ಪುಸ್ತಕವನ್ನೇ ನಾಶ ಮಾಡಲಾಗುತ್ತಿದೆ. ಹಳೆಯ ಪುಸ್ತಕಗಳನ್ನು ಖರೀದಿಸುವ ಕೆಲವು ಎಐ ಕಂಪನಿಗಳು ಅವುಗಳ ಬೈಂಡಿಂಗ್‌ ಕತ್ತರಿಸಿ, ಪುಟಗಳನ್ನು ಬೇರ್ಪಡಿಸಿ, ಒಂದೊಂದೇ ಪುಟವನ್ನು ಯಂತ್ರದ ಮೂಲಕ ಸ್ಕ್ಯಾನ್‌ ಮಾಡುತ್ತಿವೆ. ಹೀಗೆ ಸ್ಕ್ಯಾನ್‌ ಮಾಡಿದ ಬಳಿಕ ಪುಸ್ತಕವನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವುದು ಸಾಧ್ಯವಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಸಾವಿರಾರು ಪ್ರತಿಗಳಿರುವ ಸಾಮಾನ್ಯ ಪುಸ್ತಕಗಳಿಗೆ ಇದರಿಂದ ಅಷ್ಟೇನೂ ತೊಂದರೆಯಾಗದಿರಬಹುದು. ಆದರೆ ಒಂದೆರಡು ಪ್ರತಿಗಳು ಮಾತ್ರ ಉಳಿದಿರುವ ಅಪರೂಪದ ಕೃತಿಗಳಿಗೂ ಇದೇ ವಿಧಾನ ಬಳಕೆಯಾದರೆ, ಸಮಸ್ಯೆ ಗಂಭೀರವಾಗುತ್ತದೆ. ಮುಂದಿನ ಪೀಳಿಗೆಗೆ ಡಿಜಿಟಲ್‌ ಪ್ರತಿ ಮಾತ್ರ ಉಳಿಯುತ್ತದೆ.

AIಗೆ ಹಳೆಯ ಪುಸ್ತಕಗಳ ಮೇಲೇ ಇಷ್ಟೊಂದು ಆಸಕ್ತಿ ಯಾಕೆ?

ಈ ಪ್ರಶ್ನೆಗೆ AI ಕ್ಷೇತ್ರದಲ್ಲೇ ಒಂದು ಕಾರಣವಿದೆ. AI ಮಾದರಿಗಳಿಗೆ ತರಬೇತಿ ನೀಡಲು ಇಂಟರ್‌ನೆಟ್‌ನಲ್ಲಿರುವ ಅಪಾರ ಪ್ರಮಾಣದ ಬರಹಗಳನ್ನು ಬಳಸಲಾಗುತ್ತಿದೆ. ಆದರೆ ಈಗ ಇಂಟರ್‌ನೆಟ್‌ನಲ್ಲಿ AI ಬರೆದಿರುವ ಬರಹಗಳ ಪ್ರಮಾಣವೂ ಹೆಚ್ಚಾಗಿದೆ. AI ಈಗಾಗಲೆ ಸೃಷ್ಟಿಸಿದ ಮಾಹಿತಿಯನ್ನೇ ಮತ್ತೆ ಮತ್ತೆ ಹೊಸ AI ಮಾದರಿಗಳ ತರಬೇತಿಗೆ ಬಳಸಿದರೆ, ಮೂಲ ಮಾನವ ಬರಹದ ಗುಣಮಟ್ಟ ಮತ್ತು ವೈವಿಧ್ಯ ಕಡಿಮೆಯಾಗುವ ಸಾಧ್ಯತೆಯಿದೆ. ಇದನ್ನು ‘ಮಾಡೆಲ್‌ ಕೊಲ್ಯಾಪ್ಸ್‌’ ಎನ್ನಲಾಗುತ್ತದೆ. ಅಂದರೆ, ಒಂದು ಮೂಲ ಫೋಟೋದ ಕಾಪಿಯನ್ನೇ ಮತ್ತೆ ಕಾಪಿ ಮಾಡುತ್ತಾ ಹೋದರೆ ಚಿತ್ರ ನಿಧಾನವಾಗಿ ಮಸುಕಾಗುತ್ತದೆ. ಅದೇ ರೀತಿ AI ಸೃಷ್ಟಿಸಿದ ಮಾಹಿತಿಯನ್ನೇ ಮತ್ತೆ ಮತ್ತೆ ಬಳಸಿದರೆ, AI ಮಾದರಿಯೂ ತನ್ನದೇ ಸೃಷ್ಟಿಯ ಪ್ರತಿಧ್ವನಿಯಲ್ಲಿ ಸಿಲುಕಿಕೊಳ್ಳುವ ಅಪಾಯವಿದೆ. ಹೀಗಾಗಿ AI ವ್ಯಾಪಕವಾಗುವ ಮೊದಲೇ ಮನುಷ್ಯರು ಬರೆದ ಪುಸ್ತಕಗಳು ಈಗ ಕಂಪನಿಗಳಿಗೆ ಅಮೂಲ್ಯ ಡೇಟಾ ಸರಕುಗಳಾಗಿವೆ.

ಪುಸ್ತಕವನ್ನು ಕತ್ತರಿಸಿದರೆ ಕೆಲಸ ಸುಲಭವಾಗುತ್ತದೆಯೇ?

ಹೌದು! ಅದಕ್ಕಾಗಿಯೇ ಕಂಪನಿಗಳು ಈ ವಿಧಾನವನ್ನು ಬಳಸುತ್ತಿವೆ. ಪುಸ್ತಕವನ್ನು ಹಾಗೆಯೇ ಸ್ಕ್ಯಾನ್‌ ಮಾಡುವಾಗ ಪುಟಗಳು ಬಾಗುತ್ತವೆ, ಮಧ್ಯಭಾಗದಲ್ಲಿ ನೆರಳು ಬೀಳುತ್ತದೆ. ಇದರಿಂದ ಅಕ್ಷರಗಳನ್ನು ಸರಿಯಾಗಿ ಓದಿಕೊಳ್ಳಲು ಯಂತ್ರಕ್ಕೆ ಕಷ್ಟವಾಗಬಹುದು. ಆದರೆ ಬೈಂಡಿಂಗ್‌ ಕತ್ತರಿಸಿ ಪುಟಗಳನ್ನು ಪ್ರತ್ಯೇಕಿಸಿದರೆ, ಅವುಗಳನ್ನು ಸಮತಟ್ಟಾಗಿ ಯಂತ್ರಕ್ಕೆ ಹಾಕಬಹುದು. ಸ್ಕ್ಯಾನಿಂಗ್‌ ವೇಗವಾಗುತ್ತದೆ, ಅಕ್ಷರಗಳನ್ನು ಡಿಜಿಟಲ್‌ ಪಠ್ಯವಾಗಿ ಪರಿವರ್ತಿಸುವುದು ಸುಲಭವಾಗುತ್ತದೆ. ವೆಚ್ಚವೂ ಕಡಿಮೆಯಾಗುತ್ತದೆ. ಕೆಲವು ಅಂದಾಜುಗಳ ಪ್ರಕಾರ, ಈ ರೀತಿಯ ‘ಡಿಸ್ಟ್ರಕ್ಟಿವ್‌ ಸ್ಕ್ಯಾನಿಂಗ್‌’ ಸಾಮಾನ್ಯ ವಿಧಾನಕ್ಕಿಂತ ಪ್ರತಿ ಪುಟಕ್ಕೆ 50ರಿಂದ 75%ವರೆಗೆ ಅಗ್ಗವಾಗಬಹುದು. ಅಂದರೆ ಕಂಪನಿಯ ಲೆಕ್ಕದಲ್ಲಿ ಇದು ವೇಗವಾದ, ಅಗ್ಗದ ಮತ್ತು ಪರಿಣಾಮಕಾರಿ ವಿಧಾನ. ಆದರೆ ಪುಸ್ತಕದ ಲೆಕ್ಕದಲ್ಲಿ ಇದು ಒಮ್ಮೆ ಮಾತ್ರ ಮಾಡಬಹುದಾದ ಕೆಲಸ.

ಅಮೆರಿಕದ Bartz v. Anthropic ಪ್ರಕರಣದಲ್ಲಿ ಎಐ ತರಬೇತಿಗಾಗಿ ಪುಸ್ತಕಗಳ ಬಳಕೆಯ ಬಗ್ಗೆ ನ್ಯಾಯಾಲಯದಲ್ಲಿ ಚರ್ಚೆ ನಡೆದಿದೆ. Anthropic ಅನುಮತಿಯಿಲ್ಲದೆ LibGen‌ನಿಂದ ಪುಸ್ತಕಗಳನ್ನು ಡೌನ್‌ಲೋಡ್‌ ಮಾಡಿದ್ದನ್ನು ನ್ಯಾಯಾಲಯ ಕಾನೂನುಬಾಹಿರ ಎಂದು ಹೇಳಿತ್ತು. ಆದರೆ ಕಾನೂನುಬದ್ಧವಾಗಿ ಖರೀದಿಸಿದ ಪುಸ್ತಕವನ್ನು ಕತ್ತರಿಸಿ ಸ್ಕ್ಯಾನ್‌ ಮಾಡಿ, ಆ ಡಿಜಿಟಲ್‌ ಮಾಹಿತಿಯನ್ನು ಎಐ ತರಬೇತಿಗೆ ಬಳಸುವುದನ್ನು ನ್ಯಾಯಾಲಯ ಬೇರೆ ರೀತಿಯಲ್ಲಿ ಪರಿಗಣಿಸಿತು. ಎಐ ತರಬೇತಿಗಾಗಿ ಈ ರೀತಿಯ ಬಳಕೆ ‘ಟ್ರಾನ್ಸ್‌ಫಾರ್ಮೇಟಿವ್‌’ ಆಗಿರಬಹುದು ಮತ್ತು ಫೇರ್‌ ಯೂಸ್‌ನ ವ್ಯಾಪ್ತಿಗೆ ಬರಬಹುದು ಎಂಬ ನಿಲುವು ವ್ಯಕ್ತವಾಗಿದೆ. ಆದರೆ, ಕಾನೂನುಬದ್ಧವಾಗಿ ಮಾಡಬಹುದಾದ ಕೆಲಸವೊಂದು, ಇತಿಹಾಸದ ದೃಷ್ಟಿಯಿಂದಲೂ ಮಾಡಲೇಬೇಕಾದ ಕೆಲಸ ಎಂದೇನಿಲ್ಲ.

ಒಂದು ಅಪರೂಪದ ಕೃತಿಯ ಡಿಜಿಟಲ್‌ ಪ್ರತಿ ಉಳಿದರೆ ಸಾಕೇ? ಎಂದರೆ, ಇದಕ್ಕೂ ಇಲ್ಲ ಎನ್ನಬೇಕಾಗುತ್ತದೆ. AI ಕಂಪನಿಯೊಂದು ಪುಸ್ತಕವನ್ನು ಸ್ಕ್ಯಾನ್‌ ಮಾಡಿ ಡಿಜಿಟಲ್‌ ರೂಪದಲ್ಲಿ ಉಳಿಸಿಕೊಂಡರೂ, ಆ ಫೈಲ್‌ ಸಾರ್ವಜನಿಕರಿಗೆ ಸಿಗುತ್ತದೆ ಎಂಬ ಖಾತರಿ ಇಲ್ಲ. ಅದು ಕಂಪನಿಯ ಖಾಸಗಿ ಡೇಟಾ ಸಂಗ್ರಹದಲ್ಲೇ ಉಳಿದುಹೋಗಬಹುದು. ಹೀಗಾಗಿ ಪುಸ್ತಕದ ಜ್ಞಾನ ಒಂದು ರೀತಿಯಲ್ಲಿ ಉಳಿದಿದ್ದರೂ, ಜನರಿಂದ ದೂರವಾಗಬಹುದು. ಇದೇ ಸಮಸ್ಯೆ ಈಗಾಗಲೇ ಡಿಜಿಟಲ್‌ ಪುಸ್ತಕ ಸಂಗ್ರಹಗಳಲ್ಲೂ ಕಾಣಿಸುತ್ತಿದೆ. ಕೃತಿಯ ಹಕ್ಕುಸ್ವಾಮ್ಯ, ಪ್ರಕಟಣೆಯ ದೇಶ ಮತ್ತು ಸ್ಥಳೀಯ ಕಾನೂನುಗಳ ಕಾರಣದಿಂದ ಸಾರ್ವಜನಿಕ ಹಕ್ಕಿನ ವ್ಯಾಪ್ತಿಯಲ್ಲಿರುವ ಕೆಲವು ಹಳೆಯ ಪುಸ್ತಕಗಳನ್ನು ಎಲ್ಲ ದೇಶಗಳ ಓದುಗರು ಸಂಪೂರ್ಣವಾಗಿ ಓದಲು ಸಾಧ್ಯವಾಗುತ್ತಿಲ್ಲ.

ಭಾರತದ 19ನೇ ಮತ್ತು 20ನೇ ಶತಮಾನದ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಪುಸ್ತಕಗಳಷ್ಟೇ ಅಲ್ಲ, ಹಳೆಯ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಬಹಳ ಮುಖ್ಯ. ಆ ಕಾಲದ ರಾಜಕೀಯ, ಸಾಮಾಜಿಕ ಸುಧಾರಣಾ ಚಳವಳಿಗಳು, ಸಾಹಿತ್ಯ, ಶಿಕ್ಷಣ, ಜನರ ಬದುಕು.. ಇವೆಲ್ಲದರ ದಾಖಲೆಗಳು ಅವುಗಳಲ್ಲಿ ಸಿಗುತ್ತವೆ. ಆದರೆ ಇಂತಹ ಹಳೆಯ ಸಂಗ್ರಹಗಳ ಸಂರಕ್ಷಣೆ ಸುಲಭವಾಗಿರಲಿಲ್ಲ. ಅನೇಕ ಗ್ರಂಥಾಲಯಗಳಲ್ಲಿ ಹಣ, ಸಿಬ್ಬಂದಿ ಮತ್ತು ಸೂಕ್ತ ಸಂರಕ್ಷಣಾ ವ್ಯವಸ್ಥೆಯ ಕೊರತೆಯಿಂದ ಹಳೆಯ ಪತ್ರಿಕೆಗಳ ಸಂಗ್ರಹಗಳು ಹಾಳಾಗಿವೆ. ಕೆಲವು ಪ್ರಕಟಣೆಗಳ ಕೊನೆಯ ಪ್ರತಿಗಳು ಈಗ ವಿದೇಶಗಳ ಗ್ರಂಥಾಲಯಗಳು, ಖಾಸಗಿ ಸಂಗ್ರಹಗಳು ಅಥವಾ ಪುರಾತನ ಪುಸ್ತಕ ವ್ಯಾಪಾರಿಗಳ ಬಳಿ ಇರಬಹುದು. ಇಂತಹ ಸಂದರ್ಭದಲ್ಲಿ ಎಐ ಕಂಪನಿಗಳು ಜಗತ್ತಿನಾದ್ಯಂತ ಒಂದೇ ರೀತಿಯ ದೊಡ್ಡ ಪ್ರಮಾಣದ ಖರೀದಿ ನಡೆಸಿದರೆ, ಅವರಿಗೆ ‘ಅಪರೂಪದ ಪುಸ್ತಕ’ ಎಂಬುದು ಗೊತ್ತಾಗದಿರುವುದೇ ದೊಡ್ಡ ಅಪಾಯ. ಯಂತ್ರಕ್ಕೆ ಒಂದು ಪುಸ್ತಕ ಎಂದರೆ ಸಾವಿರಾರು ಪುಟಗಳ ಡೇಟಾ. ಆದರೆ ಇತಿಹಾಸಕಾರನಿಗೆ ಅದೇ ಪುಸ್ತಕ ಒಂದು ಕಾಲಘಟ್ಟದ ಏಕೈಕ ದಾಖಲೆ.

ಇಂದು ಪುಸ್ತಕ ಮುದ್ರಿಸಲು ಬೇಕಾದ ಕಾಗದವನ್ನು ಕಾರ್ಖಾನೆಗಳಲ್ಲಿ ಏಕಕಾಲಕ್ಕೆ ದೊಡ್ಡ ಪ್ರಮಾಣದಲ್ಲಿ ತಯಾರಿಸಬಹುದು. 19ನೇ ಶತಮಾನದ ಆರಂಭದವರೆಗೂ ಕಾಗದ ತಯಾರಿಸಲು ಮುಖ್ಯವಾಗಿ ಹಳೆಯ ಹತ್ತಿ, ಲೆನಿನ್‌ ಬಟ್ಟೆಗಳ ಚಿಂದಿಗಳಿಂದ ನಾರು ತೆಗೆದು ಹಾಳೆ ಮಾಡಲಾಗುತ್ತಿತ್ತು. ಈ ಕೆಲಸಕ್ಕೆ ಸಾಕಷ್ಟು ಸಮಯ ಮತ್ತು ಶ್ರಮ ಬೇಕಾಗುತ್ತಿತ್ತು. ನಂತರ ಮರದ ತಿರುಳಿನಿಂದ ಕಾಗದ ತಯಾರಿಸುವ ತಂತ್ರಜ್ಞಾನ ಬಂತು. ಈ ತಂತ್ರಜ್ಞಾನಕ್ಕಾಗಿ ಜೀವತೆತ್ತ ಮರಗಳೆಷ್ಟೋ! ಕ್ರಮೇಣ ಕಾಗದದ ಉತ್ಪಾದನೆ ಹೆಚ್ಚಾಗಿ, ಬೆಲೆಯೂ ಕಡಿಮೆಯಾಯಿತು. ಅದಕ್ಕೂ ಮೊದಲು ಒಂದು ಪುಸ್ತಕ ತಯಾರಿಸುವುದೇ ದೊಡ್ಡ ಶ್ರಮದ ಕೆಲಸವಾಗಿತ್ತು.

ಪ್ರಿಂಟಿಂಗ್‌ ವಿಷಯವೂ ಹಾಗೆಯೇ. ಒಂದು ಪುಸ್ತಕ ಅಂದರೆ ಆಗ ಇಂದಿನಂತೆ ಪ್ರಿಂಟ್‌ ಕೊಟ್ಟು ಸಾವಿರಾರು ಪ್ರತಿಗಳನ್ನು ತಕ್ಷಣ ಹೊರತರುವ ಕೆಲಸವಾಗಿರಲಿಲ್ಲ. ಮುದ್ರಣ ತಂತ್ರಜ್ಞಾನ ಭಾರತದಲ್ಲಿ ವ್ಯಾಪಕವಾಗುವ ಮೊದಲು ಪುಸ್ತಕಗಳನ್ನು ಕೈಯಿಂದಲೇ ಬರೆಯಬೇಕಾಗುತ್ತಿತ್ತು. ಪ್ರತಿ ಪ್ರತಿಯನ್ನೂ ಬರಹಗಾರರು ಅಥವಾ ನಕಲುಗಾರರು ಕುಳಿತು ಕೈಯಾರೆ ಸಿದ್ಧಪಡಿಸುತ್ತಿದ್ದರು. ಹೀಗಾಗಿ ಒಂದು ಪುಸ್ತಕದ ಹಲವು ಪ್ರತಿಗಳನ್ನು ತಯಾರಿಸಲು ಸಾಕಷ್ಟು ಸಮಯ, ಶ್ರಮ ಮತ್ತು ಹಣ ಬೇಕಾಗುತ್ತಿತ್ತು. ಮುದ್ರಣಾಲಯಗಳು ಬಂದ ನಂತರವೂ ಪುಸ್ತಕ ತಯಾರಿಕೆಯ ವೆಚ್ಚದಲ್ಲಿ ಕಾಗದವೇ ದೊಡ್ಡ ಪಾಲು ಹೊಂದಿತ್ತು. 19ನೇ ಶತಮಾನದ ಮಧ್ಯಭಾಗದವರೆಗೂ ಪುಸ್ತಕದ ಒಟ್ಟು ಉತ್ಪಾದನಾ ವೆಚ್ಚದಲ್ಲಿ ಕಾಗದದ ಪಾಲು ಅರ್ಧಕ್ಕಿಂತಲೂ ಹೆಚ್ಚಿರುತ್ತಿತ್ತು ಎನ್ನುವ ದಾಖಲೆಗಳಿವೆ.

ಭಾರತದಲ್ಲಿ 19ನೇ ಶತಮಾನದಲ್ಲಿ ಲಿಥೋಗ್ರಫಿ ಬಂದ ಬಳಿಕ ಪುಸ್ತಕ ಮುದ್ರಣದ ಚಿತ್ರವೇ ಬದಲಾಯಿತು. ಕಲ್ಲಿನ ಫಲಕದ ಮೇಲೆ ಬರಹವನ್ನು ಮೂಡಿಸಿ, ಅದಕ್ಕೆ ಮಸಿ ಹಚ್ಚಿ ಕಾಗದದ ಮೇಲೆ ಒತ್ತುವ ಈ ವಿಧಾನದಲ್ಲಿ ಒಂದೇ ಬರಹದಿಂದ ಹಲವು ಪ್ರತಿಗಳನ್ನು ತಯಾರಿಸಬಹುದಾಗಿತ್ತು. ವಿಶೇಷವಾಗಿ ಭಾರತೀಯ ಭಾಷೆಗಳ ಪುಸ್ತಕಗಳಿಗೆ ಇದು ಅನುಕೂಲವಾಗಿತ್ತು; ಕೈಬರಹದ ಶೈಲಿಯನ್ನೇ ಬಹುತೇಕ ಹಾಗೆಯೇ ಮುದ್ರಣದಲ್ಲಿ ತರಬಹುದಾಗಿತ್ತು. 1820ರ ದಶಕದಿಂದ ಭಾರತದಲ್ಲಿ ಲಿಥೋಗ್ರಫಿ ಹರಡತೊಡಗಿ, ನಂತರ ನೂರಾರು ಮುದ್ರಣಾಲಯಗಳು ಬೆಳೆಯುವಂತಾಯಿತು. 19ನೇ ಶತಮಾನದ ಉತ್ತರಾರ್ಧಕ್ಕೆ ಪುಸ್ತಕಗಳು ಮತ್ತು ಪತ್ರಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ಮುದ್ರಿಸುವ ವ್ಯವಸ್ಥೆ ರೂಪುಗೊಂಡಿತ್ತು.

ಇದನ್ನೂ ಓದಿ: ಮಹಿಳಾ ಹೋರಾಟಕ್ಕೆ ಹೊಸ ದಿಕ್ಕು ಕೊಟ್ಟ ಈ ಸ್ತ್ರೀವಾದಿಗೆ CIA ಸಂಪರ್ಕವಿತ್ತು!

ಹೀಗಾಗಿ ಹಳೆಯ ಪುಸ್ತಕವೊಂದನ್ನು ಕೇವಲ ಅದರಲ್ಲಿರುವ ಮಾಹಿತಿಯ ಪ್ರಮಾಣದಿಂದ ಅಳೆಯಲು ಸಾಧ್ಯವಿಲ್ಲ. ಅದರ ಕಾಗದ, ಮುದ್ರಣ ತಂತ್ರಜ್ಞಾನ, ಬಳಸಿದ ಶಾಯಿ, ಬೈಂಡಿಂಗ್ ಎಲ್ಲವೂ ಆ ಕಾಲದ ತಂತ್ರಜ್ಞಾನ ಮತ್ತು ಸಮಾಜದ ಇತಿಹಾಸದ ಭಾಗ. ಅದರಲ್ಲೂ ಅಪರೂಪದ ಪುಸ್ತಕವಾಗಿದ್ದರೆ, ಅದನ್ನು ತಯಾರಿಸಿದ ಕಾಲದ ಭೌತಿಕ ಸಾಕ್ಷ್ಯವನ್ನು ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ.

ವಾಸ್ತವವಾಗಿ ಹಳೆಯ ಪುಸ್ತಕಗಳನ್ನು ಡಿಜಿಟಲೀಕರಣ ಮಾಡುವುದು ಅವುಗಳನ್ನು ಉಳಿಸಲು ಅತ್ಯಂತ ಉಪಯುಕ್ತ ಮಾರ್ಗ. ಬೆಂಕಿ, ಪ್ರವಾಹ, ಯುದ್ಧ, ಕಳ್ಳತನ, ಹಾಳಾಗುವಿಕೆ ಅಥವಾ ಸಂಸ್ಥೆಗಳ ನಿರ್ಲಕ್ಷ್ಯದಿಂದ ಮೂಲ ಪ್ರತಿ ನಾಶವಾದರೂ, ಅದರ ಡಿಜಿಟಲ್‌ ರೂಪ ಉಳಿಯಬಹುದು. ಇದರ ಜತೆಗೆ ದೂರದ ದೇಶದಲ್ಲಿರುವ ಅಪರೂಪದ ಪುಸ್ತಕವನ್ನೂ ಇತರೆ ಸಂಶೋಧಕರು ಮತ್ತು ಓದುಗರು ನೋಡಲು ಅವಕಾಶ ಸಿಗುತ್ತದೆ. ಸಮಸ್ಯೆ ಡಿಜಿಟಲೀಕರಣದಲ್ಲಲ್ಲ, ಡಿಜಿಟಲೀಕರಣಕ್ಕಾಗಿ ಮೂಲ ಪ್ರತಿಯನ್ನೇ ನಾಶ ಮಾಡುವುದರಲ್ಲಿ.

ಹೀಗಾಗಿ ಅಪರೂಪದ ಪುಸ್ತಕಗಳನ್ನು ಕತ್ತರಿಸುವ ಮೊದಲು ಕೆಲವು ನಿಯಮಗಳನ್ನು ಪಾಲಿಸುವ ಅಗತ್ಯವಿದೆ. ಆ ಪುಸ್ತಕದ ಬೇರೆ ಪ್ರತಿಗಳು ಎಲ್ಲಿವೆ? ಎಷ್ಟು ಇವೆ? ಎಂಬುದನ್ನು ಪರಿಶೀಲಿಸಬೇಕು. ಅಗತ್ಯವಿದ್ದರೆ ಗ್ರಂಥಪಾಲಕರು, ಇತಿಹಾಸಕಾರರು ಮತ್ತು ಸಂಶೋಧಕರ ಸಲಹೆ ಪಡೆಯಬೇಕು. ಎಐಗೆ ಡೇಟಾ ಬೇಕು ಎಂಬುದು ಸರಿ. ಆದರೆ ಆ ಡೇಟಾಕ್ಕಾಗಿ ಅಪರೂಪದ ಪುಸ್ತಕಗಳನ್ನೇ ಕಳೆದುಕೊಳ್ಳುವಂತಾಗಬಾರದು. ತಂತ್ರಜ್ಞಾನ ಜ್ಞಾನವನ್ನು ಉಳಿಸಬೇಕು. ಅದರ ಮೂಲವನ್ನೇ ಅಳಿಸಬಾರದು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾತ್ರೋರಾತ್ರಿ ತುರ್ತು ವಿಚಾರಣೆ ಕೋರಿ ದೆಹಲಿ ಹೈಕೋರ್ಟ್ ಮೊರೆಹೋದ ಸಿಜೆಪಿ ನಾಯಕರು

ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ)...

ಹೊರದೇಶಗಳ ದೊಂಬಿಯನ್ನು ಭಾರತದ ಯುವ ಹೋರಾಟಕ್ಕೆ ಸಮೀಕರಿಸುತ್ತಿರುವ ʼಮಡಿಲ ಮಾಧ್ಯಮʼಗಳು; ಇದೇನಾ ಪತ್ರಿಕೋದ್ಯಮ?

ಹೊರದೇಶಗಳ ಬೀದಿಗಳಲ್ಲಿ ನಡೆಯುವ ದೊಂಬಿ, ಲೂಟಿಗೂ, ಭಾರತದ ಯುವಕರು ಸಂವಿಧಾನದತ್ತ ಹಕ್ಕಿಗಾಗಿ...

ಪ್ರಧಾನಿ ಮೋದಿ ಜೊತೆ ನಾಳೆ ಖರ್ಗೆ ಸಭೆ: ಎಸ್‌ಐಆರ್, ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಕ್ಷೇತ್ರ ಮರುವಿಂಗಡಣೆ ಮತ್ತು...

ಏಷ್ಯನ್ ಪ್ಯಾರಾ ಗೇಮ್ಸ್: ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಸಿಮ್ರಾನ್‌ಗೆ ಚಿನ್ನ, ತೇಜಲ್‌ಬೆನ್‌ಗೆ ಕಂಚು

ಮಂಗಳವಾರ ಜಪಾನಿನ ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200...