ಜೈಲಿನಲ್ಲಿದ್ದಾಗಲೇ 2021ರ ಜುಲೈ 5ರಂದು ಸಾವನ್ನಪ್ಪಿದ ಮಾನವ ಹಕ್ಕುಗಳ ಹೋರಾಟಗಾರ ಫಾದರ್ ಸ್ಟ್ಯಾನ್ ಸ್ವಾಮಿ ಅವರ ಬಂಧನ, ಸೆರೆವಾಸ ಮತ್ತು ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂದು ಭಾರತವನ್ನು ಅಮೆರಿಕ ಒತ್ತಾಯಿಸಿದೆ. ಈ ಬಗ್ಗೆ ಅಮೆರಿಕ ಸಂಸತ್‌ನಲ್ಲಿ ಅಲ್ಲಿನ ಮೂವರು ಸಂಸದರು ನಿರ್ಣಯ ಮಂಡಿಸಿದ್ದಾರೆ.
ಅಮೆರಿಕ ಸಂಸದ ಜಿಮ್ ಮೆಕ್‌ಗವರ್ನ್, ಆಂಡ್ರೆ ಕಾರ್ಸನ್ ಹಾಗೂ ಜುವಾನ್ ವರ್ಗಾಸ್ ಅವರು ನಿರ್ಣಯ ಮಂಡಿಸಿದ್ದು, ಮಾನವ ಹಕ್ಕು ಹೋರಾಟಗಾರರು ಮತ್ತು ರಾಜಕೀಯ ವಿರೋಧಗಳ ವಿರುದ್ಧ ಭಯೋತ್ಪಾದನಾ-ವಿರೋಧಿ ಕಾನೂನುಗಳ (ಯುಎಪಿಎ) ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ವಸಾಹತುಶಾಹಿ ಕಾಲದ ಯುಎಪಿಯ ಕಾನೂನನ್ನು ಶಾಶ್ವತವಾಗಿ ಅಮಾನತುಗೊಳಿಸುವಂತೆ ಭಾರತೀಯ ಸಂಸತ್ತಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವುದನ್ನು ಶ್ಲಾಘಿಸಿದೆ.
“ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ 19ನೇ ವಿಧಿಯಲ್ಲಿ ಬರೆಯಲ್ಪಟ್ಟಂತೆ ಮತ್ತು 1948ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂಗೀಕರಿಸಿದಂತೆ ಭಾರತ ಸರ್ಕಾರ ಮತ್ತು ಎಲ್ಲ ದೇಶಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಮೂಲಭೂತ ಮಾನವ ಹಕ್ಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದು ಎಲ್ಲ ಮಾನವರ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಪ್ರತಿಷ್ಠಾಪಿಸುತ್ತದೆ” ಎಂದು ನಿರ್ಣಯದಲ್ಲಿ ಹೇಳಲಾಗಿದೆ.
“ಫಾದರ್ ಸ್ಟ್ಯಾನ್ ಸ್ವಾಮಿ ಅವರು ಧ್ವನಿಯಿಲ್ಲದವರಿಗೆ ಧ್ವನಿ ನೀಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರು ಸ್ಥಳೀಯ ಆದಿವಾಸಿ ಜನರ ಹಕ್ಕುಗಳಿಗಾಗಿ ದಣಿವರಿಯದೆ ಹೋರಾಡುತ್ತಿದ್ದ ವಕೀಲರಾಗಿದ್ದರು. ಯುವ ಸಮುದಾಯಕ್ಕೆ ತರಬೇತಿ ನೀಡಿದ್ದರು. ಭಾರತದಲ್ಲಿ ಅನೇಕ ಸಮುದಾಯಗಳಿಗೆ ನ್ಯಾಯಕ್ಕಾಗಿ ಕೆಲಸ ಮಾಡಿದ್ದರು” ಎಂದು ಅಮೆರಿಕಾ ಸಂಸತ್‌ನಲ್ಲಿ ವರ್ಗಾಸ್ ಹೇಳಿದ್ದಾರೆ.
“ಫಾದರ್ ಸ್ಟ್ಯಾನ್ ಸ್ವಾಮಿ ಅವರು ಕಸ್ಟಡಿಯಲ್ಲಿದ್ದಾಗ ನಿರಂತರ ನಿಂದನೆಯನ್ನು ಎದುರಿಸಿದ್ದರು. ಅವರಿಗೆ ವೈದ್ಯಕೀಯ ಅಗತ್ಯಗಳು ಮತ್ತು ಆರೈಕೆಯನ್ನು ನಿರಾಕರಿಸಿದ್ದನ್ನು ಕೇಳಿ ಎಂದು ನಾನು ಗಾಬರಿಗೊಂಡಿದ್ದೇನೆ. ಹೆಚ್ಚಿನ ಒಳಿತಿಗಾಗಿ ಅವರ ಆಜೀವ ಬದ್ಧತೆಯನ್ನು ಎಂದಿಗೂ ಮರೆಯಲಾಗುವುದಿಲ್ಲ. ಅದಕ್ಕಾಗಿಯೇ ನಾನು ಈ ನಿರ್ಣಯವನ್ನು ಮಂಡಿಸುತ್ತಿದ್ದೇನೆ” ಎಂದು ಅವರು ತಿಳಿಸಿದ್ದಾರೆ.
ಫಾದರ್ ಸ್ಟ್ಯಾನ್ ಸ್ವಾಮಿ ಎಂದು ಕರೆಯಲ್ಪಡುವ ಫಾದರ್ ಸ್ಟಾನಿಸ್ಲಾಸ್ ಲೂರ್ದುಸ್ವಾಮಿ ಅವರು 1937ರ ಏಪ್ರಿಲ್ 26ರಂದು ತಮಿಳುನಾಡಿನ ತಿರುಚಿರಾಪಲ್ಲಿ ಜಿಲ್ಲೆಯ ವೀರಗಳೂರು ಎಂಬ ಗ್ರಾಮದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೂ ಜೆಸ್ಯೂಟ್ ಪಾದ್ರಿಗಳ ಕೆಲಸದಿಂದ ಪ್ರೇರಿತರಾಗಿ ಧರ್ಮಶಾಸ್ತ್ರವನ್ನು ಅಧ್ಯಯನ ಮಾಡಿದ್ದರು.
ಸಮಕಾಲೀನ ಭಾರತದಲ್ಲಿ ಅತ್ಯಂತ ಮಹತ್ವದ ಆದಿವಾಸಿ ಚಳುವಳಿಗಳಲ್ಲಿ ಒಂದಾದ ಪಾತಾಳಗಡಿ ಚಳುವಳಿಯಲ್ಲಿ ಫಾದರ್ ಸ್ಟ್ಯಾನ್ ಸ್ವಾಮಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆ ಚಳುವಳಿಯು ಆದಿವಾಸಿ ಸಮುದಾಯಗಳಿಗೆ ಭಾರತೀಯ ಸಂವಿಧಾನದಲ್ಲಿ ನೀಡಲಾಗಿರುವ ಹಕ್ಕುಗಳನ್ನು ಜಾರಿಗೊಳಿಸುವ ಮತ್ತು ಸಮುದಾಯಗಳಿಗೆ ಜಾಗೃತಿ ಮೂಡಿಸುವಲ್ಲಿ ಮಹತ್ವದ ಕೆಲಸ ಮಾಡಿತ್ತು.
ಅವರನ್ನು 2018ರ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯೆಂದು ಗುರುತಿಸಿ 2020ರ ಅಕ್ಟೋಬರ್ 8ರಂದು ಬಂಧಿಸಲಾಗಿತ್ತು. ಅವರ ವಿರುದ್ಧ ಯುಎಪಿಎ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅವರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು. ವೈದ್ಯಕೀಯ ಚಿಕಿತ್ಸೆಗಾಗಿ ಅವರು ಜಾಮೀನಿಗಾಗಿ ಹಲವು ಭಾರಿ ಪ್ರಯತ್ನಿಸಿದ್ದರು. ಆದರೆ, ಅವರಿಗೆ ಜಾಮೀನು ನಿರಾಕರಿಸಲಾಗಿತ್ತು. ಜೈಲಿನಲ್ಲಿಯೂ ವೈದ್ಯಕೀಯ ಅಗತ್ಯಗಳನ್ನು ಪೂರೈಸಲಾಗಿರಲಿಲ್ಲ. ಪರಿಣಾಮ, ಅವರ ಆರೋಗ್ಯ ಹದಗೆಟ್ಟಿತ್ತು. ಅವರು 2021ರ ಜುಲೈ 5ರಂದು ಜೈಲಿನಲ್ಲಿಯೇ ಸಾವನ್ನಪ್ಪಿದರು.