ವಿರೋಧಿಗಳನ್ನು ಎದುರಿಸಲು ಇರಾನ್ ಸಿದ್ಧವಾಗುತ್ತಿದೆ. ತನ್ನ ಮೇಲೆ ದಾಳಿಯಾದರೆ ಪರ್ಷಿಯನ್ ಕೊಲ್ಲಿ ಮೂಲಕ ಹಾದುಹೋಗುವ ಪ್ರಪಂಚದ 33% ಕಚ್ಚಾ ತೈಲದ ಸರಬರಾಜನ್ನು ನಿಲ್ಲಿಸಿ ಜಾಗತಿಕ ಆರ್ಥಿಕತೆಗೆ ತೊಡಕುಂಟುಮಾಡುತ್ತೇವೆ ಎಂದು ಘೋಷಿಸಿದೆ.
ಇರಾನ್ ವಿರುದ್ಧ ಅಮೆರಿಕ ಸೈನ್ಯ ತಯಾರಿ ಮಾಡುತ್ತಿದೆ. ಹಿಂದು ಮಹಾಸಾಗರದಲ್ಲಿರುವ ಡಿಯಾಗೋ ಗಾರ್ಸಿಯಾ (ಅಮೆರಿಕ-ಬ್ರಿಟನ್ ಸೇನಾ ತಾಣ) ದ್ವೀಪದಲ್ಲಿ ಯುದ್ಧ ವಿಮಾನಗಳು ಮತ್ತು ವಿಮಾನವಾಹಕಗಳನ್ನು ಜಮಾಯಿಸಲಾಗುತ್ತಿದೆ. ಇರಾನಿನಿಂದ 2,400 ಮೈಲಿ ದೂರದಲ್ಲಿರುವ ಈ ದ್ವೀಪದಲ್ಲಿ ಕನಿಷ್ಠ ಆರು B-2 ಬಾಂಬರ್‌ಗಳನ್ನು ನಿಯೋಜಿಸಲಾಗಿದೆ. ಈ ಬಾಂಬರ್ ಯುದ್ಧ ವಿಮಾನಗಳು 30,000 ಪೌಂಡ್ ಬಂಕರ್ ಬಸ್ಟರ್ ಬಾಂಬ್ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಸಾಗಿಸಬಲ್ಲ ಸಾಮರ್ಥ್ಯ ಹೊಂದಿವೆ.
ಇದಲ್ಲದೆ, ಅಮೆರಿಕವು ಈ ಪ್ರದೇಶದಲ್ಲಿ 19ಕ್ಕೂ ಹೆಚ್ಚು ಸೇನಾ ನೆಲೆಗಳನ್ನು (ಮಿಲಿಟರಿ ಬೇಸ್) ಹೊಂದಿದೆ. ಇವುಗಳಲ್ಲಿ ಕತಾರ್‌ನಲ್ಲಿರುವ ‘ಅಲ್ ಉದೈದ್’ ಸೇನಾ ನೆಲೆಯೂ ಒಂದು. ಇತ್ತೀಚಿಗೆ, ಜರ್ಮನಿಯ ರಾಮ್‌ಸ್ಟೀನ್ ಮತ್ತು ಅಲ್ ಉದೈದ್ ನಡುವೆ ಗಮನಾರ್ಹ ಸೇನಾ ವಿಮಾನ ಚಲನವಲನಗಳನ್ನು ದಾಖಲಿಸಲಾಗಿದೆ. ಈ ನೆಲೆಗಳನ್ನು ಪ್ರಸ್ತುತ ಯೆಮೆನ್ ಮೇಲೆ ದಾಳಿ ನಡೆಸಲು ಬಳಸಲಾಗುತ್ತಿದೆ. ಭವಿಷ್ಯದಲ್ಲಿ ಇರಾನ್ ವಿರುದ್ಧವೂ ಬಳಸಬಹುದು ಎಂದು ಹೇಳಲಾಗುತ್ತಿದೆ.
ಭಾನುವಾರ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇರಾನ್ ವಿರುದ್ಧ ‘ಎಂದೂ ಕಾಣದಂಥ ಬಾಂಬ್ ದಾಳಿ’ ಮತ್ತು ಹೊಸ ನಿರ್ಬಂಧಗಳನ್ನು ಘೋಷಿಸಿದರು. ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಈ ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್ ರಾಷ್ಟ್ರಪತಿ ಪೆಜೆಶ್ಕಿಯನ್ ಅವರು, ‘ಇರಾನ್ ಮಾತುಕತೆಗಳನ್ನು ಎಂದಿಗೂ ತಪ್ಪಿಸಿಲ್ಲ’ ಎಂದು ಅಮೆರಿಕಕ್ಕೆ ಓಮಾನ್ ಮೂಲಕ ಪ್ರತ್ಯುತ್ತರ ನೀಡಲಾಗಿದೆ ಎಂದು ತಿಳಿಸಿದ್ದಾರೆ. ‘ಪರಮಾಣು ಅಸ್ತ್ರಗಳು ನಮ್ಮ ಯೋಜನೆಯಲ್ಲಿಲ್ಲ. ಆದರೆ ನಮ್ಮ ಮೇಲೆ ದಾಳಿಯಾದರೆ ಅವುಗಳನ್ನು ಪಡೆಯುವುದು ನಮಗೆ ಅನಿವಾರ್ಯವಾಗುತ್ತದೆ’ ಎಂದು ಇರಾನಿನ ಪರಮೋಚ್ಚ ಧಾರ್ಮಿಕ ಗುರು ಖಮೇನಿಯ ಸಲಹೆಗಾರ ಅಲಿ ಲಾರಿಜಾನಿ ರಾಷ್ಟೀಯ ಟಿವಿಯಲ್ಲಿ ಹೇಳಿದ್ದಾರೆ.
2015ರಲ್ಲಿ ಇರಾನ್ JCPOA (ಜಂಟಿ ಸಮಗ್ರ ಕ್ರಿಯಾ ಯೋಜನೆ) ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ, 2018ರಲ್ಲಿ ಟ್ರಂಪ್ ಈ ಒಪ್ಪಂದದಿಂದ ಏಕಪಕ್ಷೀಯವಾಗಿ ಹಿಂದೆ ಸರಿದಿದ್ದರು. ಇದರಿಂದ ಇರಾನ್ ಅಮೆರಿಕದ ಮೇಲೆ ಅಪನಂಬಿಕೆ ಬೆಳೆಸಿಕೊಂಡಿತು. ಇರಾನ್ ಮೇಲೆ ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ದಾಳಿ ಮಾಡಬಹುದು ಎಂಬ ಎಚ್ಚರಿಕೆ ಇತ್ತೀಚಿನ ಅಮೆರಿಕದ ವರದಿಯಲ್ಲಿ ಕಂಡುಬಂದಿದೆ. ಇದು ಪ್ರಾದೇಶಿಕ ಯುದ್ಧಕ್ಕೆ ದಾರಿ ಮಾಡಿಕೊಡಬಹುದು. ಜೊತೆಗೆ, ಮಧ್ಯ ಪ್ರಾಚ್ಯ ಏಷ್ಯಾದಲ್ಲಿ ಇನ್ನಷ್ಟು ಬಿಕಟ್ಟನ್ನು ಸೃಷ್ಟಿಸಬಹುದು.
ಈ ವರದಿ ಓದಿದ್ದೀರಾ?: ಸಾಮ್ರಾಜ್ಯಶಾಹಿ ಕ್ರೌರ್ಯ ಮತ್ತು ಮಾನಸಿಕ ಯುದ್ಧ ತಂತ್ರಗಳು
ಇರಾನ್ ವಿರುದ್ಧ ಅಮೆರಿಕ ಯುದ್ಧ ಸಾರಿದರೆ, ಅಮೆರಿಕಗೆ ಅರಬ್ ರಾಷ್ಟ್ರಗಳು ಸಹಾಯ ಮಾಡಿದರೆ ಪ್ರತ್ತ್ಯುತ್ತರವಾಗಿ ಅಮೆರಿಕ ಸೇನೆಗೆ ಅನುವು ಮಾಡಿಕೊಡುವ ರಾಷ್ಟ್ರಗಳನ್ನು ಶುತ್ರು ರಾಷ್ಟ್ರವಾಗಿ ಪರಿಗಣಿಸಲಾಗುತ್ತಿದೆ ಎಂದು ಇರಾನ್ ಎಚ್ಚರಿಸಿದೆ. ಹಾಗಾಗಿ ಎಲ್ಲ ಅರಬ್ ರಾಷ್ಟ್ರಗಳು ಮುಖ್ಯವಾಗಿ ಸೌದಿ ಅರೇಬಿಯಾ, ಕತಾರ್, ಕುವೈತ್ ರಾಷ್ಟ್ರಗಳು ತಮ್ಮ ದೇಶದಲ್ಲಿರುವ ಅಮೆರಿಕ ಸೇನಾ ನೆಲೆಗಳಿಂದ ಇರಾನ್ ಮೇಲೆ ದಾಳಿ ಮಾಡಲು ಬಿಡುವುದಿಲ್ಲ ಎಂದು ಘೋಷಿಸಿವೆ.
ಈಗಾಗಲೇ ಇರಾಕ್, ಆಫ್ಘಾನಿಸ್ತಾನ, ಲಿಬಿಯಾ, ಸಿರಿಯಾ, ಲೆಬನಾನ್, ಯೆಮೆನ್ ಮೇಲಿನ ದಾಳಿಯಲ್ಲಿ ಅಮೆರಿಕಗೆ ನೇರ ಹಾಗೂ ಪರೋಕ್ಷವಾಗಿ ಸಹಕರಿಸಿದ್ದ ಅರಬ್ ರಾಷ್ಟ್ರಗಳು ಈಗ ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಕ್ರೌರ್ಯವನ್ನು ತಡೆಯಲು ಕಿಂಚಿತ್ತೂ ಪ್ರಯತ್ನಿಸಿಲ್ಲ. ಇರಾನ್ ತನ್ನ ರಕ್ಷಣೆಗೆ ಅತ್ಯಾಧುನಿಕ ಕ್ಷಿಪಣಿಗಳನ್ನು ನಿಯೋಜಿಸಿದೆ. ಒಂದು ವೇಳೆ, ತನ್ನ ಮೇಲೆ ದಾಳಿ ಆದರೆ ಪರ್ಷಿಯನ್ ಕೊಲ್ಲಿ ಮೂಲಕ ಹಾದುಹೋಗುವ ಪ್ರಪಂಚದ 33% ಕಚ್ಚಾ ತೈಲದ ಸರಬರಾಜನ್ನು ನಿಲ್ಲಿಸಿ ಜಾಗತಿಕ ಆರ್ಥಿಕತೆಯನ್ನು ನಿಲ್ಲಿಸುತ್ತೇವೆ ಎಂದು ಘೋಷಿಸಿದೆ.
ಹೀಗಾಗಿ, ಇರಾನ್ ಮತ್ತು ಅಮೆರಿಕದ ನಡುವಿನ ಬಿಕ್ಕಟ್ಟು ದಿನೇ ದಿನೇ ತೀವ್ರವಾಗಿ ಹೆಚ್ಚುತ್ತಿದೆ. ಇಸ್ರೇಲ್ ತನಗೆ ಬೇಕಾಗಿರುವ ಇರಾನಿನ ಮೇಲಿನ ಯುದ್ಧವನ್ನು ಅಮೆರಿಕ ಮೂಲಕ ಮಾಡಿಸುತ್ತಿದೆ. ಈಗಾಗಲೇ ತನ್ನ ಯುದ್ಧಕೋರ ನೀತಿಗಳಿಂದ ದೇಶದೇಶಗಳನ್ನೇ ಭಸ್ಮ ಮಾಡಿರುವ ಅಮೆರಿಕ ಮತ್ತು ಇಸ್ರೇಲ್ ಈಗ ಮಧ್ಯ ಪ್ರಾಚ್ಯ ಏಷ್ಯಾದಲ್ಲಿ ತನ್ನ ಸಾರ್ವಬೌಮತ್ವವನ್ನು ಉಳಿಸಿಕೊಂಡಿರುವ ಇರಾನ್ ಮೇಲೆ ದಾಳಿ ಮಾಡಲು ಮತ್ತು ಪ್ರಪಂಚವನ್ನು ಇನ್ನಷ್ಟು ಅಸ್ಥಿರಗೊಳಿಸಲು ಸಜ್ಜಾಗುತ್ತಿವೆ.