ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಈ ವಿಷಯದಲ್ಲಿ ಅಮೆರಿಕ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅಮೆರಿಕ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ , ಅಣ್ವಸ್ತ್ರ ಹೊಂದಿರುವ ಎರಡು ರಾಷ್ಟ್ರಗಳನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೂ ಸಂಘರ್ಷ ಉಲ್ಬಣವಾಗದಂತೆ ನೆರೆಹೊರೆಯವರು ಪ್ರಯತ್ನಿಸಬಹುದು. 2 ಪರಮಾಣು ಶಕ್ತಿ ಹೊಂದಿರುವ ರಾಷ್ಟ್ರಗಳ ನಡುವೆ ಸಂಘರ್ಷ ಹೆಚ್ಚಾಗುವ ಅಪಾಯದ ಬಗ್ಗೆ ಅಮೆರಿಕ ಚಿಂತಿಸಿದೆ. ಆದರೆ, ಅವರ ಕ್ರಮಗಳನ್ನು ನಾವು ನಿರ್ದೇಶಿಸಲು ಸಾಧ್ಯವಿಲ್ಲ. ಮೂಲಭೂತವಾಗಿ ಅದು ನಮಗೆ ಸಂಬಂಧಿಸಿದ ವಿಷಯವಲ್ಲ. ಉಭಯ ದೇಶಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ವಾಷಿಂಗ್ಟನ್ ಪ್ರೋತ್ಸಾಹಿಸುತ್ತಿದೆ ಎಂದಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಭಾರತ ಪಾಕಿಸ್ತಾನದೊಂದಿಗೆ ಹಿಡಿತ ಹೊಂದಿದೆ. ಪಾಕಿಸ್ತಾನ ಕೂಡ ಪ್ರತಿಕ್ರಿಯೆ ನೀಡುತ್ತಿದೆ. ನಾವು ಏನು ಮಾಡಬಹುದೆಂದರೆ ಸ್ವಲ್ಪ ಮಟ್ಟಿಗೆ ಸಂಘರ್ಷ ಶಮನಕ್ಕೆ ಪ್ರೋತ್ಸಾಹಿಸಲು ಪ್ರಯತ್ನಿಸಬಹುದು. ಯುದ್ಧದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದು ನಮಗೆ ಸಂಬಂಧಿಸಿದ ಕೆಲಸವಲ್ಲ ಎಂದು ತಿಳಿಸಿದ್ದಾರೆ.
ಅಮೆರಿಕವು ಭಾರತಕ್ಕೆ ಶಸ್ತ್ರಾಸ್ತ ಕೆಳಗಿಳಿಸಿ ಎಂದು ಹೇಳುವುದಿಲ್ಲ. ಪಾಕಿಸ್ತಾನಕ್ಕೂ ಕೂಡ ಶಸ್ತ್ರಗಳನ್ನು ತ್ಯಜಿಸಿ ಎಂದು ಹೇಳುವುದಿಲ್ಲ. ರಾಜತಾಂತ್ರಿಕ ಮಾರ್ಗಗಳ ಮೂಲಕ ನಾವು ಇದನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಈ ಸಂಘರ್ಷ ದೊಡ್ಡ ಯುದ್ಧ ಅಥವಾ ಪರಮಾಣು ಕದನಕ್ಕೆ ತಿರುಗುವುದಿಲ್ಲ ಎಂದು ನಮ್ಮ ಭರವಸೆ ಹಾಗೂ ನಿರೀಕ್ಷೆಗಳಾಗಿವೆ. ಖಚಿತವಾಗಿ ಈ ವಿಷಯದ ಬಗ್ಗೆ ಚಿಂತಿತರಾಗಿದ್ದೇವೆ ಎಂದು ತಿಳಿಸಿದರು.
ಆದರೆ ನಾವು ರಾಜತಾಂತ್ರಿಕ ಕ್ರಮಗಳ ಬಗ್ಗೆ ಯೋಚಿಸುತ್ತಿದ್ದೇವೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಪರಮಾಣು ಯುದ್ಧವಾಗದಂತೆ ನೋಡಿಕೊಳ್ಳುವುದು ಸಮಾನ ಮನಸ್ಕರ ಕರ್ತವ್ಯವಾಗಿದೆ. ಇದು ಸಂಭವಿಸಿದರೆ ಭಾರಿ ದುರಂತವಾಗುತ್ತದೆ. ಸದ್ಯ ಅದು ಸಂಭವಿಸುತ್ತದೆ ಎಂದು ನಾವು ಭಾವಿಸುವುದಿಲ್ಲ ಎಂದು ವ್ಯಾನ್ಸ್ ಹೇಳಿದರು.
ಇದನ್ನು ಓದಿದ್ದೀರಾ? ಭಾರತದಿಂದ ಮತ್ತೆ ದಾಳಿ; ಲಾಹೋರ್‌ನ ರಕ್ಷಣಾ ವ್ಯವಸ್ಥೆ ಧ್ವಂಸ
ವ್ಯಾನ್ಸ್ ಅವರು ತಮ್ಮ ಪತ್ನಿ ಉಷಾ ಅವರ ಜೊತೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು 26 ಮಂದಿಯನ್ನು ಹತ್ಯೆ ಮಾಡಿದ್ದರು
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರ ಮಾತನ್ನು ವ್ಯಾನ್ಸ್ ಪುನರುಚ್ಚರಿಸಿದ್ದಾರೆ. ʻನಾವು ಸಂಘರ್ಷವನ್ನು ತಡೆಯಲು ಆಶಿಸುತ್ತೇವೆ. ಆದರೆ, ಯಾವುದೇ ದೇಶವನ್ನು ನಿರಾಯುಧೀಕರಣ ಮಾಡಲು ಸಾಧ್ಯವಿಲ್ಲʼ ಎಂದು ಹೇಳಿದ್ದಾರೆ. ಪ್ರಾದೇಶಿಕ ಸಂಘರ್ಷ ಅಥವಾ ಪರಮಾಣು ಯುದ್ಧದ ಸಾಧ್ಯತೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ. ಆದರೆ, ರಾಜತಾಂತ್ರಿಕ ಪ್ರಯತ್ನಗಳು ಮತ್ತು ಎರಡೂ ಕಡೆಯವರ ಸಂಯಮದಿಂದ ಶಾಂತಿ ನೆಲೆಸುವ ಭರವಸೆ ವ್ಯಕ್ತಪಡಿಸಿದ್ದಾರೆ.
ಕಾರ್ಯದರ್ಶಿ ರುಬಿಯೊ ಎರಡೂ ದೇಶಗಳ ನಾಯಕರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದಾರೆ. ತಕ್ಷಣವೇ ಉದ್ವಿಗ್ನತೆ ಕಡಿಮೆ ಮಾಡುವಂತೆ ಒತ್ತಾಯಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ಹೋರಾಡಲು ಅಮೆರಿಕ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಉಭಯ ದೇಶಗಳು ಶಾಂತಿ ಕಾಪಾಡಿಕೊಳ್ಳಬೇಕು. ಮಾತುಕತೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಅಮೆರಿಕ ಈ ವಿಷಯದಲ್ಲಿ ತಟಸ್ಥವಾಗಿರಲು ನಿರ್ಧರಿಸಿದೆ. ಆದರೆ, ಶಾಂತಿ ಸ್ಥಾಪನೆಗೆ ತನ್ನ ಬೆಂಬಲವನ್ನು ನೀಡುತ್ತದೆ. ಉಭಯ ದೇಶಗಳು ಸಂಯಮದಿಂದ ವರ್ತಿಸಬೇಕೆಂದು ಅಮೆರಿಕ ಕೋರಿದೆ. ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವುದನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.
ಗುರುವಾರ ರಾತ್ರಿ ಜಮ್ಮುವಿನ ಮೇಲೆ ಪಾಕ್ ಕ್ಷಿಪಣಿಗಳಿಂದ ದಾಳಿ ಬಳಿಕ ಭಾರತ ತನ್ನ ದಾಳಿಯನ್ನು ತೀವ್ರಗೊಳಿಸಿದೆ.