ಟ್ರಂಪ್ ಅವರ ಮೊದಲ ಅವಧಿಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ವೈಯಕ್ತಿಕ ಮತ್ತು ರಾಜಕೀಯ ಮಟ್ಟದಲ್ಲಿ ನಿಕಟ ಸಂಬಂಧ ಹೊಂದಿದ್ದರು. ಆದರೆ "ಅಮೆರಿಕಾ ಫಸ್ಟ್" H-1B ವೀಸಾ ನೀತಿಯ ಮೇಲೆ ವಿಧಿಸಿದ ನಿರ್ಬಂಧಗಳು ಅಮೆರಿಕದಲ್ಲಿ ಉದ್ಯೋಗವನ್ನು ಬಯಸುವ ಭಾರತೀಯರ ಮೇಲೆ ಹೆಚ್ಚು ಪರಿಣಾಮ ಬೀರಿತ್ತು. ಅದನ್ನು ಈ ಅವಧಿಯಲ್ಲಿ ಮುಂದುವರೆಸಿಕೊಂಡು ಹೋಗುತ್ತಾರಾ ಅಥವಾ ಮತ್ತಷ್ಟು ಕಠಿಣ ನಿಲುವು ತಾಳುತ್ತಾರಾ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಈ ವಾರ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಪರಾಭವಗೊಳಿಸಿದ್ದಾರೆ. ರಿಪಬ್ಲಿಕನ್ ಪಕ್ಷ ಈಗ ಅಧ್ಯಕ್ಷೀಯ ಹುದ್ದೆ ಹಾಗೂ ಶಾಸಕಾಂಗ ಎರಡನ್ನು ನಿಯಂತ್ರಿಸಲಿದೆ. ಟ್ರಂಪ್ರ ಮೊದಲ ಅವಧಿ ಕೋವಿಡ್-19 ಸಾಂಕ್ರಾಮಿಕತೆಯ ಕಳಪೆ ನಿರ್ವಹಣೆ, ಕಡಿಮೆ ಜನಪ್ರಿಯತೆಯಿಂದ ಅತ್ಯಂತ ಕೆಟ್ಟದಾಗಿ ಕೊನೆಗೊಂಡಿತ್ತು. ಜನವರಿ 6ರ ಕ್ಯಾಪಿಟಲ್ ಹಿಲ್ ಮೇಲಿನ ದಾಳಿಯ ಪ್ರಕರಣದಲ್ಲಿ ಟ್ರಂಪ್ ಪಾತ್ರ ಇರುವುದರ ಬಗ್ಗೆ ನ್ಯಾಯಾಲಯ ಇನ್ನೂ ವಿಚಾರಣೆ ನಡೆಸುತ್ತಿದೆ.
ಟ್ರಂಪ್ ಅಧಿಕಾರಾವಧಿ ಬಿಟ್ಟ ನಂತರ ಸುಳ್ಳು ಪ್ರಕರಣಗಳು, ರಹಸ್ಯ ದಾಖಲೆಗಳನ್ನು ತಪ್ಪಾಗಿ ನಿರ್ವಹಿಸುವುದು ಹಾಗೂ ಸರಿಸುಮಾರು 90 ಇತರ ಆರೋಪಗಳನ್ನು ಒಳಗೊಂಡಂತೆ ಅನೇಕ ಕಾನೂನು ಪ್ರಕರಣಗಳನ್ನು ಎದುರಿಸಿದ್ದಾರೆ. 2006ರಲ್ಲಿ ಟ್ರಂಪ್ ಸ್ಟ್ರೋಮಿ ಡೇನಿಯಲ್ಸ್ ಎಂಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದ್ದು, ಈ ಪ್ರಕರಣದಲ್ಲಿ ಡಜನ್ಗಟ್ಟಲೆ ಅಪರಾಧಗಳನ್ನು ಮುಚ್ಚಿಹಾಕಲು ಸುಳ್ಳು ದಾಖಲೆಗಳನ್ನು ಮತ್ತು ಲಂಚದ ಹಣ(ಹುಶ್ ಮನಿ) ನೀಡಿದ್ದಾರೆ. ಇವೆಲ್ಲದರ ಹೊರತಾಗಿಯೂ, ಟ್ರಂಪ್ ಅವರು ತಮ್ಮ ಜೊತೆಗೆ ಕಟ್ಟಾ ಬೆಂಬಲಿಗರ ಗುಂಪನ್ನು ಇಟ್ಟುಕೊಂಡಿದ್ದು, ಇದು ಅವರಿಗೆ ಚುನಾವಣೆಯಲ್ಲಿ ಎರಡನೇ ಬಾರಿ ಗೆಲ್ಲಲು ಸಹಾಯ ಮಾಡಿದೆ.
1960ರಿಂದಲೂ ಬಿಕ್ಕಟ್ಟಿನಲ್ಲಿರುವ ಅಧ್ಯಕ್ಷೀಯ ಹುದ್ದೆ
ಅಮೆರಿಕದ ಅಧ್ಯಕ್ಷೀಯ ಹುದ್ದೆಯು 60ರ ದಶಕದಿಂದಲೂ ಬಿಕ್ಕಟ್ಟಿನಲ್ಲಿದೆ. ವಿಯೆಟ್ನಾಂ ಯುದ್ಧ, ವಿಭಿನ್ನ ಸಂಸ್ಕೃತಿಯ ಉಗಮ ಮತ್ತು ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿಯವರ ಹತ್ಯೆಯು ಅಮೆರಿಕಾದ ರಾಜಕೀಯದಲ್ಲಿ ಹಲವು ಪ್ರಮುಖ ಬದಲಾವಣೆಗೆ ಕಾರಣವಾಯಿತು. ಎರಡನೆಯ ಮಹಾಯುದ್ಧದ ನಂತರ ಆಶಾವಾದ ವ್ಯವಸ್ಥೆಯು ಕಣ್ಮರೆಯಾಯಿತು. ಹೊಸ ಪೀಳಿಗೆಯು ಯಥಾಸ್ಥಿತಿಗೆ ವಿರುದ್ಧವಾಗಿ ಬದಲಾವಣೆಗಳನ್ನು ಒತ್ತಾಯಿಸಲು ಪ್ರಾರಂಭಿಸಿತು. ಅಧ್ಯಕ್ಷ ಕೆನಡಿಯವರ ಹತ್ಯೆಯ ನಂತರ, ಉಪಾಧ್ಯಕ್ಷ ಲಿಂಡನ್ ಜಾನ್ಸನ್ ಜನಪ್ರಿಯ ನಾಯಕನಾಗಲಿಲ್ಲ. ಅವರು ಪುನಃ ಮರು-ಚುನಾವಣೆಗೆ ಸ್ಪರ್ಧಿಸಿದರೂ ಗೆಲುವು ಸಾಧಿಸಲಿಲ್ಲ.
ನಂತರದ ಅಧ್ಯಕ್ಷರಾದ ರಿಚರ್ಡ್ ನಿಕ್ಸನ್ ಬಲಪಂಥೀಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ನಿಕ್ಸನ್ ಜಾಗತಿಕ ರಕ್ಷಕ ಹಾಗೂ ನಾಗರಿಕ ಸ್ವಾತಂತ್ರ್ಯದಲ್ಲಿ ರಾಷ್ಟ್ರೀಯ ಭದ್ರತೆ ಕುರಿತು ಅಮೆರಿಕದ ಪಾತ್ರವನ್ನು ಒತ್ತಿಹೇಳಿದರು. ಇದರ ಜೊತೆ ಜನಪ್ರಿಯತೆಯನ್ನು ಕಾಪಾಡಿಕೊಳ್ಳಲು, ಅವರು ಪರಿಸರ ಸುಧಾರಣೆಗಳು, ಸಾರ್ವತ್ರಿಕ ಆರೋಗ್ಯ ರಕ್ಷಣೆ, ಸಕಾರಾತ್ಮಕ ಕ್ರಮ ಮತ್ತು ಚೀನಾದೊಂದಿಗೆ ಸಂಬಂಧಗಳನ್ನು ನಿರ್ಮಿಸುವಂತಹ ಪ್ರಗತಿಪರ ನೀತಿಗಳನ್ನು ಕಡಿತಗೊಳಿಸಲು ಪ್ರಯತ್ನಿಸಿದರು. ಇವೆಲ್ಲದರ ಹೊರತಾಗಿಯೂ ವಾಟರ್ಗೇಟ್ ಹಗರಣದಲ್ಲಿ ನಿಕ್ಸನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ ಮೊದಲ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್. ಹೆಚ್ಚುತ್ತಿದ್ದ ವಿಯೆಟ್ನಾಂ ಯುದ್ಧ ವಿರೋಧಿ ಚಳವಳಿಯ ಜೊತೆಗೆ, ಇದು ಅಧ್ಯಕ್ಷ ಸ್ಥಾನದ ಬಗ್ಗೆ ಜನರಲ್ಲಿ ವ್ಯಾಪಕ ಭ್ರಮನಿರಸನಕ್ಕೆ ಕಾರಣವಾಯಿತು. ನಂತರ ಅಧಿಕಾರಕ್ಕೇರಿದ ಜೆರಾಲ್ಡ್ ಫೋರ್ಡ್ ಮತ್ತು ಜಿಮ್ಮಿ ಕಾರ್ಟರ್ ಅವರಂತಹ ಉತ್ತರಾಧಿಕಾರಿಗಳು ಅಮೆರಿಕದ ಜನರಿಂದ ಉತ್ತಮ ಬೆಂಬಲವನ್ನು ಪಡೆಯಲು ವಿಫಲರಾದರು.
ರೇಗನ್, ಕ್ಲಿಂಟನ್, ಬುಷ್ ಅಧಿಕಾರಾವಧಿ
1980ರ ದಶಕದಲ್ಲಿ ಅಧ್ಯಕ್ಷರಾದ ಹಾಲಿವುಡ್ ನಟ ರೊನಾಲ್ಡ್ ರೇಗನ್ ಸಂಪ್ರದಾಯವಾದಿಗಳಿಗೆ ಜನಪ್ರಿಯ ವ್ಯಕ್ತಿಯಾದರು. ಮಾಧ್ಯಮಗಳು ಹಾಗೂ ಚರ್ಚೆಗಳಲ್ಲಿ ನಿರ್ವಹಿಸಿದ ವಾಕ್ಚಾತುರ್ಯ ಅವರನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಯಿತು. ಅಂದಿನ ಮಾಧ್ಯಮಗಳು ರೇಗನ್ ಅವರನ್ನು ವೈಭವೀಕರಿಸಿದವು. ಇದರ ಜೊತೆಗೆ ಲ್ಯಾಟಿನ್ ಅಮೆರಿಕದಲ್ಲಿ ಕೈಗೊಂಡ ಆಕ್ರಮಣಕಾರಿ ಕ್ರಮಗಳು ಹಾಗೂ ಸೋವಿಯತ್ ಒಕ್ಕೂಟದ ವಿರುದ್ಧ ಮಿಲಿಟರಿ ಶಕ್ತಿಯನ್ನು ಹೆಚ್ಚಿಸಿದ ಕಾರಣದಿಂದ ಅಮೆರಿಕದ ಜನರ ನೆಚ್ಚಿನ ಅಧ್ಯಕ್ಷರಾದರು. ರೇಗನ್ ಅವರ ಮೊದಲ ಅವಧಿ ಉತ್ತಮವಾಗಿತ್ತು. ಆದರೆ ಎರಡನೇ ಅವಧಿಯು ಆರ್ಥಿಕತೆಯ ಹೊಡೆತ ಮತ್ತು ಸೋವಿಯತ್ ಒಕ್ಕೂಟ ಕುಸಿತದಿಂದ ಅಮೆರಿಕದ ಜನರಿಗೆ ದೂರವಾದರು. ನಂತರ ಉಪಾಧ್ಯಕ್ಷರಾದ ಮೊದಲನೇ ಜಾರ್ಜ್ ಬುಷ್ ಅಧಿಕಾರ ವಹಿಸಿಕೊಂಡರೂ ಜನಪ್ರಿಯ ನಾಯಕನಾಗಲಿಲ್ಲ. ತನ್ನ ವ್ಯಕ್ತಿತ್ವ ಹೆಚ್ಚಿಸಿಕೊಳ್ಳಲು ಇರಾಕ್ – ಕುವೈತ್ ಯುದ್ಧಕ್ಕೆ ಬೆಂಬಲ ನೀಡಿದರು. ಆದರೆ ಮುಂದಿನ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಬಿಲ್ ಕ್ಲಿಂಟನ್ ವಿರುದ್ಧ ಪರಾಭವಗೊಂಡರು.
ಕ್ಲಿಂಟನ್ ಎಡ ಮತ್ತು ಬಲ ಪಂಥ ಎರಡೂ ಸಮುದಾಯಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಆದರೆ ಆಫ್ರಿಕನ್ ಅಮೆರಿಕನ್ ಸಮುದಾಯಗಳಿಗೆ ನೋವುಂಟು ಮಾಡುವ ಕಾನೂನುಗಳಿಗೆ ಬೆಂಬಲ, ದೊಡ್ಡ ಮಟ್ಟದ ವ್ಯವಹಾರಗಳಿಗೆ ಸಹಾಯ ಮಾಡುವ ಕಾನೂನು, ಉತ್ತರ ಅಮೆರಿಕದ ಮುಕ್ತ ವ್ಯಾಪಾರ ಒಪ್ಪಂದ ಅಂಗೀಕಾರ, ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಜನರಿಗೆ ಬೇಸರ ತರಿಸಿದವು. ಇದರಿಂದ ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷಗಳ ನಡುವೆ ಹಲವು ವ್ಯತ್ಯಾಸಗಳಿವೆ ಎಂದು ಅಮೆರಿಕನ್ನರು ಭಾವಿಸಿದರು.
ಈ ಸುದ್ದಿ ಓದಿದ್ದೀರಾ? ಡೊನಾಲ್ಡ್ ಟ್ರಂಪ್ ಪುನರಾಗಮನ; ಜಾಗತಿಕ ನಾಯಕರಿಗೆ ಶುರುವಾಯಿತೆ ಆತಂಕ?
2000ರ ದಶಕದಲ್ಲಿ 2ನೇ ಜಾರ್ಜ್ ಬುಷ್ ಅಧ್ಯಕ್ಷ ಸ್ಥಾನಕ್ಕೇರಿದ್ದು ವಿವಾದಾತ್ಮಕವಾಗಿದೆ. ಡೆಮಾಕ್ರಟಿಕ್ ಸ್ಪರ್ಧಿ ಮಾಜಿ ಉಪಾಧ್ಯಕ್ಷ ಅಲ್ ಗೋರ್ ಚುನಾವಣೆಯಲ್ಲಿ ಹೆಚ್ಚು ಮತ ಗಳಿಸಿದ್ದರೂ ಕೆಲವು ತಾಂತ್ರಿಕ ಕಾರಣದಿಂದ ಸುಪ್ರೀಂ ಕೋರ್ಟ್ ಜಾರ್ಜ್ ಡಬ್ಲ್ಯೂ ಬುಷ್ ಅವರನ್ನು ವಿಜೇತ ಎಂದು ಘೋಷಿಸಿತು. 2ನೇ ಬುಷ್ ಅವಧಿಯಲ್ಲಿ ಅಮೆರಿಕದಲ್ಲಿ ಕೆಲವು ಮಹತ್ವದ ಘಟನೆಗಳು ನಡೆದವು. 9/11 ದಾಳಿಯ ನಂತರ ಬುಷ್ ತನ್ನ ಎದುರಾಳಿಗಳ ಮೇಲೆ ಬಲಪ್ರಯೋಗ ಮಾಡಬೇಕಾಯಿತು. ಮುಂದಿನ 2 ದಶಕಗಳ ಕಾಲ ಅಮೆರಿಕ ಯುದ್ಧಗಳಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಒದಗಿಬಂತು. ಇದರ ಜೊತೆ 2008ರ ಆರ್ಥಿಕ ಬಿಕ್ಕಟ್ಟಿನಿಂದ ಅಮೆರಿಕದಲ್ಲಿ ನಿರುದ್ಯೋಗ ಸೇರಿ ಹಲವು ಸಮಸ್ಯೆಗಳು ಉದ್ಭವಿಸಿದವು.
ವಿಫಲವಾದ ಒಬಾಮಾ ಭರವಸೆಗಳು
ಜಾರ್ಜ್ ಡಬ್ಲ್ಯೂ ಬುಷ್ ನಂತರ ಅತ್ಯಂತ ಜನಪ್ರಿಯ ನಾಯಕ ಎಂದೇ ಹೆಸರಾದ ಬರಾಕ್ ಒಬಾಮಾ ಅಧ್ಯಕ್ಷರಾದರು. ಒಬಾಮಾ ಪ್ರಬಲ ಭಾಷಣಕಾರರಾಗಿದ್ದರು. ಮೊದಲ ಕಪ್ಪು ಬಣ್ಣದ ಅಧ್ಯಕ್ಷರಾಗಿದ್ದ ಅವರು ಜನಾಂಗೀಯ ಸಂಘರ್ಷ, ಆರ್ಥಿಕ ಅಸಮಾನತೆ ಹಾಗೂ ಯುದ್ಧಗಳನ್ನು ಹೋಗಲಾಡಿಸುತ್ತಾರೆ ಎಂದು ಎಲ್ಲರೂ ನಂಬಿದ್ದರು. ಆದರೆ ಒಬಾಮಾ ಆಡಳಿತಾವಧಿಯಲ್ಲಿ ಜನಾಂಗೀಯ ಸಂಘರ್ಷ ಹೆಚ್ಚಾಯಿತು ಹಾಗೂ ಯುದ್ಧವನ್ನು 7 ದೇಶಗಳಿಗೆ ಅಮೆರಿಕವು ವಿಸ್ತರಿಸಿತು. ಇವರ ಎರಡನೇ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ಒಬಾಮಾ ವಿದೇಶಿ ಪ್ರಜೆ ಸೇರಿದಂತೆ ಹಲವು ಸುಳ್ಳು ಪಿತೂರಿಗಳನ್ನು ಹರಡಿದ ಕಾರಣ ರಿಪಬ್ಲಿಕನ್ ಕಾರ್ಯಕರ್ತರಲ್ಲಿ ಒಬಾಮಾ ವಿರುದ್ಧ ದ್ವೇಷ ಹೆಚ್ಚಾಯಿತು.
ಟ್ರಂಪ್ ನಿರ್ಗಮನ, ಬೈಡನ್ ಆಗಮನ
ಒಬಾಮಾ ನಂತರ ಶ್ರೀಮಂತ ಕುಟುಂಬದ ಹಾಗೂ ಪ್ರಸಿದ್ಧ ಉದ್ಯಮಿ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು. ಅಧ್ಯಕ್ಷರಾಗುವುದಕ್ಕೂ ಮುನ್ನ ಹಲವು ಪಕ್ಷಗಳನ್ನು ಸುತ್ತಿ ಬಂದ ಟ್ರಂಪ್ ರಿಪಬ್ಲಿಕನ್ ಪಕ್ಷವನ್ನು ಪುನಃ ಸೇರಿದ್ದು 2012ರಲ್ಲಿ. ಅವರು ರಾಜಕೀಯಕ್ಕೆ ಬರಲು ವೇದಿಕೆ ಒದಗಿಸಿಕೊಟ್ಟಿದ್ದು ‘ದಿ ಅಪ್ರೆಂಟಿಸ್’ ಎಂಬ ರಿಯಾಲಿಟಿ ಶೋ. ಆ ಕಾರ್ಯಕ್ರಮದಲ್ಲಿ ನಿರೂಪಕರಾಗಿ ಹೆಚ್ಚು ಜನಪ್ರಿಯತೆ ಗಳಿಸಿದ್ದರು. ರಾಜಕೀಯದಲ್ಲಿ ಉನ್ನತ ಹಂತಕ್ಕೇರಲು ಎದುರಾಳಿ ರಾಜಕಾರಣಿಗಳನ್ನು ತಮ್ಮದೇ ಶೈಲಿಯಲ್ಲಿ ಹರಿಹಾಯ್ದರು. ಸಾಮಾಜಿಕ ಮಾಧ್ಯಮಗಳಲ್ಲೂ ದೊಡ್ಡ ಮಟ್ಟದ ಅನುಯಾಯಿಗಳನ್ನು ಸಂಪಾದಿಸಿದರು. ಕಾರ್ಯಕರ್ತರೊಂದಿಗೆ ನೇರವಾದ ಸಂಪರ್ಕವಿಟ್ಟುಕೊಂಡರು. ವರ್ಣಭೇದ ನೀತಿಯ ಮೃದುಧೋರಣೆ ಜೊತೆ ಮೆಕ್ಸಿಕೋದ ವಲಸಿಗರನ್ನು ಅತ್ಯಾಚಾರಿಗಳು ಮತ್ತು ಕಳ್ಳರು ಎಂದು ಸಂಭೋದಿಸಿದರು. ಒಬಾಮಾ ಸರ್ಕಾರದ ವಿರುದ್ಧ ಇಲ್ಲಸಲ್ಲದ ಟೀಕೆಗಳನ್ನು ಮಾಡುತ್ತಿದ್ದರು.
ಇವೆಲ್ಲದರ ಪರಿಣಾಮ 2016ರ ಚುನಾವಣೆಯಲ್ಲಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಇವರ ಮೊದಲ ಅವಧಿ ಹಲವು ಸಮಸ್ಯೆಗಳಿಂದ ಕೂಡಿತ್ತು. ಯುದ್ಧಗಳು ಹಾಗೂ ದೇಶ ವಿರೋಧಿ ಒಪ್ಪಂದಗಳನ್ನು ನಿಲ್ಲಿಸುವುದಾಗಿ ಹೇಳಿದ್ದರು. ಆದರೆ ಅದ್ಯಾವುದನ್ನು ಸಮರ್ಪಕವಾಗಿ ಪೂರೈಸಲಿಲ್ಲ. ಟ್ರಂಪ್ ಕೈಗೊಂಡ ನೀತಿಗಳು ಯುದ್ಧ ವಿರೋಧಿ ಜನತೆಗೆ ಹಾಗೂ ಕಾರ್ಮಿಕರಿಗೆ ಪರವಾದ ಯಾವುದೇ ಅನುಕೂಲವನ್ನು ನೀಡಲು ಸಾಧ್ಯವಾಗಲಿಲ್ಲ. ಅವರ ನೀತಿಗಳು ಆರ್ಥಿಕ ಅಸಮಾನತೆಯನ್ನು ಮತ್ತಷ್ಟು ಹದಗೆಡಿಸಿತು. ಕೋವಿಡ್ ಸಾಂಕ್ರಾಮಿಕ ಪಿಡುಗನ್ನು ಅತ್ಯಂತ ಕಳಪೆಯಾಗಿ ನಿರ್ವಹಿಸಿದ್ದು, ಜನಾಕ್ರೋಶಕ್ಕೆ ಕಾರಣವಾಯಿತು.
ಟ್ರಂಪ್ ಮೊದಲ ಅವಧಿಯ ಸರ್ಕಾರದ ಕಳಪೆ ನಿರ್ಧಾರಗಳನ್ನು ಸಾರ್ವಜನಿಕರ ಮುಂದೆ ಕೊಂಡೊಯ್ದ ಪರಿಣಾಮ ಡೆಮಾಕ್ರಟಿಕ್ ಪಕ್ಷದ ಬೈಡನ್ 2020ರಲ್ಲಿ ಅಧ್ಯಕ್ಷ ಗಾದಿಗೆ ಏರಿದರು. ಬೈಡನ್ ಅವರು ಅಮೆರಿಕ ಜನರ ಆಲೋಚನೆಗಳನ್ನು ಸಮತೋಲನಗೊಳಿಸಬಲ್ಲ ವ್ಯಕ್ತಿಯಾಗಿ ಕಾಣಿಸಿಕೊಂಡರು. ಕೋವಿಡ್ ಸಾಂಕ್ರಾಮಿಕ ರೋಗದ ಅಂತ್ಯ, ಸ್ಥಿರ ಆರ್ಥಿಕತೆ ಮತ್ತು ಯುದ್ಧಗಳಿಂದ ಹಿಂದೆ ಸರಿಯುವುದರೊಂದಿಗೆ ಬೈಡನ್ ಆರಂಭದಲ್ಲಿ ಜನಪ್ರಿಯರಾಗಿದ್ದರು. ಆದರೆ ಕ್ರಮೇಣ ದೇಶದಲ್ಲಿ ಹಣದುಬ್ಬರ ಬೆಳೆದಂತೆ ಆರ್ಥಿಕತೆಯು ದುರ್ಬಲಗೊಂಡಿತು. ಕಾರ್ಮಿಕ ವರ್ಗದ ಜನರು ಉದ್ಯೋಗಗಳು ಮತ್ತು ಏರುತ್ತಿರುವ ಬೆಲೆಗಳ ಬಗ್ಗೆ ಚಿಂತಿತರಾಗಿದ್ದರು. ಇವೆಲ್ಲವುಗಳಿಂದ ಬೈಡೆನ್ ಅವರ ಜನಪ್ರಿಯತೆ ಕುಸಿಯಿತು. ಮಹಿಳೆಯರು, ಕಪ್ಪು ವರ್ಣೀಯ ಜನರು ಮತ್ತು ವಲಸಿಗರು ಬೈಡನ್ 2ನೇ ಅವಧಿಯ ಬಗ್ಗೆ ಉತ್ಸಾಹ ತೋರಲಿಲ್ಲ. ಚುನಾವಣೆಯ ಸಮಯದಲ್ಲಿ ಬೈಡನ್ ಕೆಳಗಿಳಿದು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು.
ಟ್ರಂಪ್ 2.0 ಮತ್ತು ಸವಾಲುಗಳು
ಭಾರತೀಯ ಮೂಲದ, ಕಪ್ಪು ವರ್ಣೀಯ ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದಲ್ಲಿ ಬೈಡನ್ಗೆ ಸಮಾನವಾದ ಪಾತ್ರವನ್ನು ವಹಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಪ್ರಚಾರದ ಆರಂಭದಲ್ಲಿ ಮುನ್ನಡೆ ಸಾಧಿಸಿದರೂ ಚುನಾವಣೆ ಹತ್ತಿರವಾಗುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಮೇಲುಗೈ ಪಡೆದರು. ಕಮಲಾ ಹ್ಯಾರಿಸ್ ಸೋಲಲು ಮುಖ್ಯವಾದ ವಿಷಯವೆಂದರೆ ಗಾಜಾ ಯುದ್ಧದ ಬಗ್ಗೆ ಡೆಮಾಕ್ರಟಿಕ್ ಪಕ್ಷ ತೆಗೆದುಕೊಂಡ ನಿಲುವು ಒಂದು ಸಮುದಾಯದ ಮತದಾರರ ಮೇಲೆ ಗಂಭೀರ ಪರಿಣಾಮ ಬೀರಿತು. ಡೊನಾಲ್ಡ್ ಟ್ರಂಪ್ ವಿರೋಧಿ ಭಾವನೆ ಕೂಡ ಪ್ರಯೋಜನಕ್ಕೆ ಬರಲಿಲ್ಲ. ಅದಲ್ಲದೆ ಪ್ರಮುಖ ಸ್ವಿಂಗ್ ರಾಜ್ಯಗಳಲ್ಲಿ ಅನೇಕ ಡೆಮಾಕ್ರಟಿಕ್ ಬೆಂಬಲಿಗರು ಮತದಾನ ಮಾಡದಿರಲು ನಿರ್ಧರಿಸಿದ ಕಾರಣ ಟ್ರಂಪ್ 2ನೇ ಬಾರಿ ಗೆಲುವು ದಾಖಲಿಸಿದ್ದಾರೆ.
ಟ್ರಂಪ್ ತಮ್ಮ ಮೊದಲ 100 ದಿನಗಳಲ್ಲಿ, ಫೆಡರಲ್ ಸರ್ಕಾರವನ್ನು ಬದಲಾಯಿಸಲು ಕಾರ್ಯನಿರ್ವಾಹಕ ಆದೇಶಗಳನ್ನು ಹೊರಡಿಸಲು ಯೋಜಿಸಿದ್ದಾರೆ. ನಾಗರಿಕ ಅಧಿಕಾರಿಗಳಿಗೆ ಹೆಚ್ಚು ಅಧಿಕಾರ ನೀಡುವ ‘ಶೆಡ್ಯೂಲ್ ಎಫ್ ಆರ್ಡರ್’ ಕಾಯ್ದೆಯನ್ನು ಮರುಪರಿಚಯಿಸುವುದು ಟ್ರಂಪ್ ಯೋಜನೆಯ ಪ್ರಮುಖ ಯೋಜನೆಯಾಗಿದೆ. ತೆರಿಗೆ ಕಡಿತವನ್ನು ವಿಸ್ತರಿಸುವುದು ಮತ್ತು ಇಂಧನ ಕಾನೂನುಗಳನ್ನು ಪರಿಷ್ಕರಿಸುವಂತಹ ನೀತಿಗಳು ಮುಂದುವರಿಯುವ ನಿರೀಕ್ಷೆಯಿದೆ. ಅಮೆರಿಕ – ಮೆಕ್ಸಿಕೋ ಗಡಿಯನ್ನು ಮುಚ್ಚುವುದು ಮತ್ತು ದೊಡ್ಡ ಪ್ರಮಾಣದ ಗಡಿಪಾರುಗಳನ್ನು ಪ್ರಾರಂಭಿಸುವುದು ಸೇರಿದಂತೆ ವಲಸೆ ನೀತಿಗಳು ಕಠಿಣವಾಗುವ ಸಾಧ್ಯತೆಯಿದೆ. ಹಿಂದಿನ ಟ್ರಂಪ್ ಆಡಳಿತದಲ್ಲಿ ಗಡಿಪಾರು ನಿರ್ಬಂಧ ಯೋಜನೆಗಳು ಬಹಳ ಅಸ್ತವ್ಯಸ್ತವಾಗಿತ್ತು. ಟ್ರಂಪ್ ವಲಸೆ ಹಾಗೂ ಗಡಿಪಾರು ನೀತಿ ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧದ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಬಹುದು.
ಇವೆಲ್ಲದರ ಜೊತೆ ತೈಲ, ಅನಿಲ ಮತ್ತು ಕಲ್ಲಿದ್ದಲು ಕ್ಷೇತ್ರಗಳಲ್ಲಿ ಮತ್ತು ಪಳೆಯುಳಿಕೆ ಇಂಧನ ಉತ್ಪಾದಕರಿಗೆ ತೆರಿಗೆ ವಿನಾಯಿತಿಗಳನ್ನು ನೀಡುವ ಭರವಸೆ ನೀಡಿದ್ದಾರೆ. ಅಧಿಕಾರ ವಹಿಸಿಕೊಂಡ ಒಂದು ವರ್ಷದೊಳಗೆ ಇಂಧನ ಬೆಲೆಗಳನ್ನು ಶೇ. 50 ರಷ್ಟು ಕಡಿತಗೊಳಿಸುವುದು ಅವರ ಗುರಿಯಾಗಿದೆ. ಹವಾಮಾನ ಬದಲಾವಣೆ, ದೇಶದ ಆರ್ಥಿಕ ಉತ್ತೇಜನ ಯೋಜನೆಗಳು, ನಿರುದ್ಯೋಗ ಸಮಸ್ಯೆ ನಿವಾರಣೆಯ ಬಗ್ಗೆ ಹೆಚ್ಚು ಗಮನ ನೀಡಬೇಕಾಗಿದೆ.
ಅಮೆರಿಕ ಮತ್ತು ವಿಶ್ವದ ಸಂಬಂಧ
ಟ್ರಂಪ್ ತನ್ನ ಮೊದಲ ಅವಧಿಯಲ್ಲಿ ಪ್ಯಾಲೆಸ್ತೀನ್ ವಿರುದ್ಧವಾಗಿ ಇಸ್ರೇಲ್ ಪರವಾಗಿ ನಿಂತಿದ್ದರು. ಅಮೆರಿಕದ ರಾಯಭಾರ ಕಚೇರಿಯನ್ನು ಜೆರುಸಲೆಮ್ಗೆ ಸ್ಥಳಾಂತರಿಸಿದ್ದರು. ತಾವು ಆಯ್ಕೆಯಾದರೆ ಗಾಜಾ ಯುದ್ಧವನ್ನು ತಕ್ಷಣ ನಿಲ್ಲಿಸುವುದಾಗಿ ಚುನಾವಣಾ ಪ್ರಚಾರದಲ್ಲಿ ತಿಳಿಸಿದ್ದಾರೆ. ಇರಾನ್ನಲ್ಲಿ, ಪರಮಾಣು ಒಪ್ಪಂದದಿಂದ ಹಿಂದೆ ಸರಿಯುವುದು, ಭಾರೀ ನಿರ್ಬಂಧಗಳನ್ನು ವಿಧಿಸುವುದು ಮತ್ತು ಇರಾನ್ ಜನರಲ್ ಖಾಸೆಮ್ ಸುಲೈಮಾನಿ ಹತ್ಯೆಯನ್ನು ಅನುಮೋದಿಸುವುದು ಟ್ರಂಪ್ರ ಹಿಂದಿನ ಕಾರ್ಯತಂತ್ರವಾಗಿತ್ತು. ತನ್ನ ಈ ನಿಲುವುಗಳ ಬಗ್ಗೆ ಅಂದುಕೊಂಡಂತೆ ನಡೆದುಕೊಳ್ಳುತ್ತಾರಾ ಎಂಬುದು ವಿಶ್ವದ ಕಣ್ಣು ನೆಟ್ಟಿದೆ.
ಚೀನಾ ಸಂಬಂಧವು ಅಮೆರಿಕದ ಇತರ ನಾಯಕರಿಗಿಂತ ಡೊನಾಲ್ಡ್ ಟ್ರಂಪ್ ಹೆಚ್ಚು ಆಕ್ರಮಣಕಾರಿಯಾಗಿ ನಡೆದುಕೊಂಡಿದ್ದಾರೆ. ಚೀನಾದ ಕಡೆಗೆ ಟ್ರಂಪ್ರ ನೀತಿಗಳು ಪೈಪೋಟಿಯಂದ ಕೂಡಿದ್ದವು. ಮೊದಲ ಅವಧಿಯಲ್ಲಿ ಅವರು ಚೀನಾದೊಂದಿಗೆ ವ್ಯಾಪಾರ ಸಂಘರ್ಷವನ್ನು ನಡೆಸಿ ಹೆಚ್ಚು ಸುಂಕಗಳನ್ನು ವಿಧಿಸಿದರು. ಚೀನಾದ ತಂತ್ರಜ್ಞಾನವನ್ನು ನಿರ್ಬಂಧಿಸಿದರು. ಅಮೆರಿಕ ಮಾತ್ರವಲ್ಲದೆ ಇತರ ದೇಶಗಳ ಹಿತಾಸಕ್ತಿಗಳೊಂದಿಗೆ ತಲೆಹಾಕುತ್ತಿದೆ ಎಂದು ಎಚ್ಚರಿಕೆಯನ್ನು ನೀಡಿದ್ದರು. ಟ್ರಂಪ್ರ ಆಫ್ರಿಕಾ ನೀತಿಯು ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳ ಮೇಲೆ ಒತ್ತು ನೀಡುವುದರೊಂದಿಗೆ ಚೀನಾದ ಪ್ರಭಾವವನ್ನು ಎದುರಿಸುವುದರ ಮೇಲೆ ಕೇಂದ್ರೀಕರಿಸಿದೆ. ಆಫ್ರಿಕಾದ ಜನಾಂಗೀಯ ನೀತಿಯ ಬಗ್ಗೆ ಯಾವ ಧೋರಣೆ ತೆಗೆದುಕೊಳ್ಳುತ್ತಾರೆ ಎಂಬುದು ಕೂಡ ಪ್ರಮುಖವಾಗಿದೆ.
ಇದನ್ನು ಓದಿದ್ದೀರಾ?: ಕೆಟ್ಟ ಪ್ರಚಾರವೂ ಅತ್ಯಂತ ಸಶಕ್ತ ಪ್ರಚಾರವೇ ಎಂದ ಜಗತ್ತಿನ ಮೊದಲ ರಾಜಕಾರಣಿ ಟ್ರಂಪ್
ರಷ್ಯಾದೊಂದಿಗೆ, ಟ್ರಂಪ್ ಕೆಲವೊಮ್ಮೆ ಉತ್ತಮ ಸಂಬಂಧಗಳ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಉಕ್ರೇನ್ನಲ್ಲಿ ರಷ್ಯಾ ಕೈಗೊಂಡ ಯುದ್ಧಕ್ರಮಗಳಿಗೆ ರಾಜತಾಂತ್ರಿಕ ಪರಿಹಾರಗಳ ಅಗತ್ಯವಿದೆ ಎಂದು ಅವರು ಸಮರ್ಥಿಸಿಕೊಂಡಿದ್ದರು. ಅಲ್ಲದೆ ಎರಡೂ ಕಡೆಯ ನಾಯಕರೊಂದಿಗೆ ಮಾತುಕತೆ ನಡೆಸುವ ಮೂಲಕ ರಷ್ಯಾ-ಉಕ್ರೇನ್ ಸಂಘರ್ಷವನ್ನು ತ್ವರಿತವಾಗಿ ಪರಿಹರಿಸಬಹುದು ಎಂದು ಹೇಳಿ ರಷ್ಯಾ ಯುದ್ಧವನ್ನು ಪರೋಕ್ಷವಾಗಿ ಬೆಂಬಲಿಸಿದ್ದರು.

ಭಾರತದೊಂದಿಗಿನ ಸಂಬಂಧ
ಭಾರತ-ಅಮೆರಿಕದ ಬಾಂಧವ್ಯದ ನೀತಿಗಳು ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳೊಂದಿಗೆ ಬಹುತೇಕ ಸಮನಾಗಿವೆ. ಟ್ರಂಪ್ ಅವರ ಮೊದಲ ಅವಧಿಯಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ವೈಯಕ್ತಿಕ ಮತ್ತು ರಾಜಕೀಯ ಮಟ್ಟದಲ್ಲಿ ನಿಕಟ ಸಂಬಂಧ ಹೊಂದಿದ್ದರು. ಅಮೆರಿಕದ ಹೂಸ್ಟನ್ನಲ್ಲಿ “ಹೌಡಿ, ಮೋದಿ” ಮತ್ತು ಭಾರತದಲ್ಲಿ “ನಮಸ್ತೆ ಟ್ರಂಪ್”ನಂತಹ ದೊಡ್ಡ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು. ಅಮೆರಿಕದಿಂದ ಭಾರತ ಹೆಚ್ಚಿಸುತ್ತಿರುವ ರಕ್ಷಣಾ ಖರೀದಿಗಳು ಟ್ರಂಪ್ ಅವರ 2ನೇ ಆಡಳಿತದಲ್ಲಿ ಸಂಬಂಧಗಳು ಮತ್ತಷ್ಟು ಸುಧಾರಣೆಗೊಳ್ಳಬಹುದು.
ಆದರೆ ಕೆಲವೊಂದು ವಿಷಯಗಳಲ್ಲಿ ಸಂಘರ್ಷದ ಹಾದಿಯನ್ನು ತೋರಿವೆ. ಟ್ರಂಪ್ರ “ಅಮೆರಿಕಾ ಫಸ್ಟ್” H-1B ವೀಸಾ ನೀತಿಯ ಮೇಲೆ ವಿಧಿಸಿದ ನಿರ್ಬಂಧಗಳು ಅಮೆರಿಕದಲ್ಲಿ ಉದ್ಯೋಗವನ್ನು ಬಯಸುವ ಭಾರತೀಯರ ಮೇಲೆ ಹೆಚ್ಚು ಪರಿಣಾಮ ಬೀರಿತ್ತು. ಬೈಡನ್ ಈ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿದ್ದರು. ಟ್ರಂಪ್ ಅದನ್ನು ಮುಂದುವರೆಸಿಕೊಂಡು ಹೋಗುತ್ತಾರಾ ಅಥವಾ ಮತ್ತಷ್ಟು ಕಠಿಣ ನಿಲುವು ತಾಳುತ್ತಾರಾ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಹಾಗೆಯೇ ಚೀನಾ ವಿಷಯದಲ್ಲಿ ತಾಳುವ ಭಾರತದ ನಿಲುವುಗಳಿಗೆ ಅಮೆರಿಕ ಬೆಂಬಲ ಮುಂದುವರೆಸಲಿದೆ.
- ಲೇಖನ: ಕಿಶೋರ್ ಗೋವಿಂದ
- ಅನುವಾದ: ಕೆ ಚೇತನ್ ಕುಮಾರ್
